ಶಿವಾಜಿ ಮಹಾರಾಜರ ಗುರುಕಾಣಿಕೆ

೧೭ನೇ ಶತಮಾನದಲ್ಲಿ, ಶಿವಾಜಿ ಮಹಾರಾಜರೆಂಬ ರಾಜರೊಬ್ಬರು ರಾಜ್ಯಭಾರ ಮಾಡುತ್ತಿದ್ದರು. ಅವರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ, ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು.

 ಒಂದು ದಿನ ಶಿವಾಜಿ ಮಹಾರಾಜರು ರಾಜಸಭೆಯಲ್ಲಿ ಕಾರ್ಯಭಾರ ಮಾಡುವಾಗ ಯಾರೋ ಭಿಕ್ಷೆ ಬೇಡುವುದು ಕೇಳಿಸಿತು. ಅದು ತನ್ನ ಗುರು ರಾಮದಾಸ ಸ್ವಾಮಿಗಳ ಧ್ವನಿ ಎಂದು ಅರಿತು ಕೂಡಲೆ ಅವನು ಓಡಿ ಹೋಗಿ ಅವರನ್ನು ಆದರದಿಂದ ಒಳಗೆ ಕರೆದುಕೊಂಡು ಬಂದನು. ಗುರುಗಳಿಗೆ ಪೂಜೆಯನ್ನು ಮಾಡಿ ಅವರು ಅನ್ನ ಗ್ರಹಣ ಮಾಡಿದ ನಂತರ ಶಿವಾಜಿಯು ಒಂದು ಚೀಟಿಯಲ್ಲಿ ಏನೋ ಬರೆದು ಗುರುಗಳಿಗೆ ನೀಡಿದರು.

 ಗುರುಗಳೊಂದಿಗೆ ಇದ್ದ ಇತರ ಜನರಿಗೆ ಆಶ್ಚರ್ಯವಾಯಿತು. ಶಿವಾಜಿಯು ಗುರುಗಳಿಗೆ ರಾಜಭೋಜನ ನೀಡಬಹುದು, ಅರ್ಪಣೆ ನೀಡಬಹುದು ಎಂದು ವಿಚಾರ ಮಾಡುತ್ತಿದ್ದರು. ಆದರೆ ಶಿವಾಜಿ ಮಹಾರಾಜರು ಒಂದು ಸಣ್ಣ ಚೀಟಿಯಲ್ಲಿ ಏನು ಬರೆದಿರಬಹುದು ಅನಿಸಿತು. ಏನು ಬರೆದಿರುವನೆಂದು ಅರಿತಿದ್ದ ಗುರುಗಳು ಜನರ ವಿಚಾರಗಳಿಗೆ ಉತ್ತರ ನೀಡಲು ಅವರಲ್ಲೊಬ್ಬನಿಗೆ ಚೀಟಿಯಲ್ಲಿ ಏನಿದೆ ಎಂದು ಜೋರಾಗಿ ಓದಿ ಹೇಳಲು ಹೇಳಿದರು. ಚೀಟಿಯಲ್ಲಿ ಶಿವಾಜಿಯು ತನ್ನ ಸಂಪೂರ್ಣ ರಾಜ್ಯವನ್ನು ಗುರುಗಳ ಚರಣಗಳಿಗೆ ಸಮರ್ಪಿಸಿದ್ದನು.

ಗುರುಗಳು ಕೇಳಿದರು, “ಎಲ್ಲವನ್ನು ಅರ್ಪಿಸಿಬಿಟ್ಟರೆ ನೀನೇನು ಮಾಡುವೆ?” ಆಗ ರಾಜನು ಉತ್ತರಿಸಿದನು, “ನಾನು ನಿಮ್ಮ ಸೇವೆ ಮಾಡಿಕೊಂಡಿರುವೆನು“.

ಆಗ ಗುರುಗಳು ಹೇಳಿದರು, “ಸರಿ ನಡಿ ಹಾಗಿದ್ದರೆ ನಾವು ಮನೆ ಮನೆಗೆ ಹೊಗಿ ಭಿಕ್ಷೆ ಬೇಡೋಣ“.

ಕೂಡಲೇ ರಾಜನು ಒಳಗೆ ಹೋಗಿ ಸಾಧಾರಣ ಉಡುಪುಗಳನ್ನು ಧರಿಸಿ ಬಂದನು. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿದ ನಂತರ ಎಲ್ಲರೂ ವಿಶ್ರಾಂತಿಗಾಗಿ ಮರದಡಿ ಕೂತರು. ಶಿವಾಜಿಯ ಗುರುಸೇವೆಯ ತಳಮಳವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು.

ಗುರುಗಳು ಹೇಳಿದರು, “ನನಗೆ ರಾಜ್ಯದಿಂದೇನು ಲಾಭ? ಹಾಗಾಗಿ ನನಗೆ ನೀನು ನೀಡಿರುವ ರಾಜ್ಯವನ್ನು ನಾನು ಇಟ್ಟುಕೊಳ್ಳುವುದಿಲ್ಲ. ಇಂದಿನಿಂದ ನಾನು ನಿನ್ನನ್ನು ನನ್ನ ರಾಜ್ಯವನ್ನು ನೋಡಿಕೊಳ್ಳಲು ನೇಮಿಸುತ್ತೇನೆ“.

ನಮ್ರತೆಯಿಂದ ಶಿವಾಜಿಯು ಗುರುಗಳ ಅರಮನೆಗೆ ಹಿಂತಿರುಗಿದನು ಮತ್ತು ಅವರ ರಾಜ್ಯಭಾರವನ್ನು ಮಾಡಿದನು.

ಮೇಲಿನ ಕಥೆಯಿಂದ ಶಿವಾಜಿಯು ತನ್ನ ಗುರು ಮತ್ತು ದೇವರನ್ನು ಎಷ್ಟು ಪ್ರೀತಿಸುತ್ತಿದ್ದನೆಂದು ತಿಳಿಯುತ್ತದೆ. ಹಾಗಾಗಿಯೇ ಅವನು ತನ್ನ ಇಡೀ ರಾಜ್ಯವನ್ನು ಗುರುಗಳಿಗೆ ಅರ್ಪಿಸಿದನು. ರಾಜನಾದವನು ತನ್ನ ರಾಜ್ಯವನ್ನು ದೇವರ ರಾಜ್ಯವೆಂದು ಆಳಬೇಕೆಂದು ಇದರಿಂದ ತಿಳಿಯುತ್ತದೆ. ನಮ್ಮ ಬಳಿ ಶಿವಾಜಿ ಮಹಾರಾಜರಷ್ಟು ಆಸ್ತಿ ಇಲ್ಲ. ಆದರೂ ಸಹ ನಾವು ದೇವರಿಗೆ ನಮ್ಮ ಬುದ್ಧಿ, ಮನಸ್ಸು ಅರ್ಪಿಸಬಹುದು. 

Leave a Comment