ಆಯುಧ ಪೂಜೆ

ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಭಾರತದಾದ್ಯಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಸಂಭ್ರಮದಿಂದ ಬನಶಂಕರಿ, ಚಾಮುಂಡೇಶ್ವರಿ, ದುರ್ಗೆ, ಸರಸ್ವತಿ ಮುಂತಾದ ತಮ್ಮ ಇಷ್ಟದೇವತೆಗಳನ್ನು ಭಕ್ತಾದಿಗಳು ಭಕ್ತಿಭಾವದಿಂದ ಪೂಜಿಸುತ್ತಾರೆ. ಒಂಬತ್ತು ದಿನಗಳಂದು ಒಂಬತ್ತು ವಿವಿಧ ದೇವದೇವತೆಗಳ್ನು ಸ್ತುತಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ. ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆಗಾಗಿ ಬಳಸಲಾಗುವ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಆಯುಧ ಪೂಜೆಯಂದು ಪೂಜಿಸಲಾಗುತ್ತದೆ.

ದೇವಾನುದೇವತೆಗಳಿಗೆ ವಿಪರೀತವಾಗಿ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ಚಾಮುಂಡೇಶ್ವರಿ, ದುರ್ಗೆ, ಬನಶಂಕರಿ ಎಂದು ಮೊದಲಾದ ನಾಮಾವಳಿಗಳಿಂದ ಸ್ತುತಿಸಲಾಗುವ ದೇವಿ ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ.

ಆಯುಧ ಪೂಜೆಯ ಹಿಂದಿನ ಕಾರಣ ಇಂತಿದೆ. ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ.