‘ಸಂಸ್ಕಾರ’ವೆಂದರೇನು?

ಸಂಸ್ಕಾರ – ಸಮ್ ಜ್ ಸಮ್ಯಕ್ ಜ್ (ಒಳ್ಳೆಯ) + ಕಾರ ಜ್ (ಕಾರ್ಯ, ಕೃತಿ)

ಪ್ರತಿಯೊಂದು ಕಾರ್ಯವೂ ಸಂಸ್ಕಾರಯುತವಾಗಿರಬೇಕು, ಉದಾಹರಣೆಗೆ : ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ, ಇದೊಂದು ಕೃತಿ ಆಯಿತು. ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಕಸದ ಬುಟ್ಟಿಯಲ್ಲಿ ಹಾಕುವುದು (ಒಳ್ಳೆಯ) ಪ್ರಕೃತಿ. ಆದರೆ ಆ ಸಿಪ್ಪೆಯನ್ನು ಹಾದಿಯಲ್ಲಿ ಬಿಸಾಡುವುದು ವಿಕೃತಿ ಆಗುತ್ತದೆ. ಅದೇ, ಬೇರೆಯವರು ಬಾಳೆ ಹಣ್ಣಿನ ಸಿಪ್ಪೆಯನ್ನು ರಸ್ತೆಯ ಮೇಲೆ ಬಿಸಾಡಿದ್ದಾರೆ ಅದನ್ನು ಕಸದ ಬುಟ್ಟಿಯಲ್ಲಿ ಹಾಕುವುದು ಸಂಸ್ಕೃತಿ ಎನಿಸಿಕೊಳ್ಳುತ್ತದೆ.

ಹೊಟ್ಟೆ ಹಸಿದಾಗ ತಿನ್ನುವುದು ಪ್ರಕೃತಿ. ಬೇರೆಯವರ ತಟ್ಟೆಯಿಂದ ಅನ್ನ ಕಸಿದು ತಿನ್ನುವುದು ವಿಕೃತಿ! ಆದರೆ ಅತಿಥಿಗಳ, ಮನೆಯ ಸದಸ್ಯರ (ಹಿರಿಯರು, ಕೆಲಸದವರು ಇವರೆಲ್ಲರ) ಊಟ ಆಗಿದೆಯೇ ಎಂದು ನೋಡಿ, ಮತ್ತೆ ಸ್ವತಃ ದೇವರಿಗೆ ನೈವೇದ್ಯ ಅರ್ಪಿಸಿ ಅನ್ನವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವುದೇ ಸಂಸ್ಕೃತಿ.

ಮನನ (ಆಳವಾದ ಚಿಂತನೆ) ಮಾಡಿ, ಸಮಗ್ರವಾಗಿ ವಿಚಾರ ಮಾಡಿ, ಕೃತಿ ಮಾಡುವವನೇ ಮಾನವ. ವಿಚಾರ ಮತ್ತು ಕೃತಿಯು ಒಳ್ಳೆಯದಾಗಿರಲು ಸಂಸ್ಕಾರವೂ ಒಳ್ಳೆಯದಾಗಿರಬೇಕು, ಪ್ರತಿಯೊಂದು ಕೃತಿ ಕೂಡ ಸಂಸ್ಕಾರಯುತವಾಗಿರಬೇಕು.

ಸಂಸ್ಕಾರವೆಂದರೆ ಗುಣಗಳ 'ಗುಣಾಕಾರ' ಮತ್ತು ದೋಷಗಳ 'ಭಾಗಾಕಾರ'. 'ಸಂಸ್ಕಾರ ಬೆಳೆಸುವುದು' ಅಂದರೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ಕೆಟ್ಟ ಅಭ್ಯಾಸಗಳನ್ನು ತೆಗೆದುಹಾಕುವುದು ಎಂದರ್ಥ. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಬೆಳೆಸುವುದೆಂದರೆ ಅವರಿಗೆ 'ತಂದೆ-ತಾಯಿಗೆ ನಮಸ್ಕಾರ ಮಾಡು', 'ಬೇರೆಯವರನ್ನು ನಿಂದಿಸಬೇಡ' ಇತ್ಯಾದಿ ಒಳ್ಳೆಯ ಅಭ್ಯಾಸಗಳನ್ನು ಕಲಿಸುವುದು. ಇದನ್ನು ಹೇಗೆ ಮಾಡಬೇಕು? ತತ್ವಜ್ಞಾನದಿಂದ ಅವರ ಮನಸ್ಸಿನ ಸ್ಥರದಲ್ಲಿ ಹೇಳಿ ಅಲ್ಲ ಅಥವಾ ಕಥೆಗಳ ಮುಖಾಂತರ ಅಲ್ಲ ಅಥವಾ ಅವರಿಗೆ ಚಾಕಲೇಟ್ ಐಸ್ ಕ್ರೀಂನ ಲಂಚ ಕೊಟ್ಟೂ ಅಲ್ಲ! ನಮ್ಮ ಕೃತಿಗಳ ಮುಖಾಂತರ ಅವರಿಗೆ ಕಲಿಸಬೇಕು! ೮ ವರ್ಷದ ಮಕ್ಕಳಿಗೆ ದೊಡ್ಡವರಿಗೆ ನಮಸ್ಕಾರ ಮಾಡುವಂತೆ ಆಜ್ಞೆಯನ್ನು ಮಾಡಿದರೆ ೪ ದಿನ ಮಾಡಬಹುದು, ೫ನೇ ದಿನ 'ನಾನು ಮಾಡುವುದಿಲ್ಲ' ಎಂದು ಹೇಳುತ್ತಾರೆ! ಅವರಿಗೆ ನಮಸ್ಕಾರ ಮಾಡುವ ಲಾಭದ ತತ್ವವನ್ನು ಹೇಳಿದರೂ ಫಲ ಸಿಗದು. ನಿಮ್ಮ ಮಕ್ಕಳು ಹಿರಿಯರಿಗೆ ನಮಸ್ಕಾರ ಮಾಡಬೇಕು ಎಂದು ನಿಮಗೆ ಅನಿಸುತ್ತಿದ್ದಲ್ಲಿ ಅದಕ್ಕೆ ಒಂದೇ ಉಪಾಯವಿದೆ, ಇವತ್ತನಿಂದಲೇ ನೀವೂ ಕೂಡ ಹಿರಿಯರಿಗೆ ನಮಸ್ಕಾರ ಮಾಡಲು ಪ್ರಾರಂಭಿಸಿ. ಮಕ್ಕಳಿಗೆ ನಮಸ್ಕಾರ ಮಾಡಲು ಹೇಳಬೇಡಿ. ೪ ದಿನಗಳಲ್ಲಿ ನಿಮ್ಮ ಮಕ್ಕಳು ನಿಮ್ಮ ಹಿಂದೆ ಬಂದು ಮನೆಯ ಹಿರಿಯರಿಗೆ ನಮಸ್ಕಾರ ಮಾಡಲು ಪ್ರಾರಂಭಿಸುವರು. 'ನನ್ನ ತಂದೆ ತಾಯಿ ಅಜ್ಜ-ಆಜ್ಜಿಗೆ ನಮಸ್ಕಾರ ಮಾಡುತ್ತಾರೆ, ನಾನು ಮಾತ್ರ ನಿರ್ಲಜ್ಜನಾಗಿ ಹಿಂದೆ ನಿಂತಿರುತ್ತೇನೆ' ಎಂದು ಅವರಿಗೆ ನಾಚಿಕೆ ಆಗಿ ತಾವೇ ಮುಂದೆ ಬಂದು ನಮಸ್ಕರಿಸುತ್ತಾರೆ. ಸಂಸ್ಕಾರ ನಿರ್ಮಿಸುವುದಕ್ಕೆ ಒಂದೇ ಉಪಾಯ 'ಮಾತು ನಿಲ್ಲಿಸಿ, ಕೃತಿಯಲ್ಲಿ ತೋರಿಸಿ!'