ಕನ್ನಡವೇ ನಿತ್ಯ, ಕನ್ನಡವೇ ಸತ್ಯ.. ಮತ್ಯೇಕೆ ಕನ್ನಡಿಗರೇ ನಿಮಗೆ ಆಂಗ್ಲದ ದಾಸ್ಯ?

ಇಂದು ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು, ಓದುವುದು, ಚಲನಚಿತ್ರ ನೋಡುವುದು ಮತ್ತು ಆಂಗ್ಲ ಸಂಸ್ಕೃತಿಗನುಸಾರ ವರ್ತಿಸುವುದು ಇವುಗಳು ಅಲ್ಲಲ್ಲಿ ಮೊಳಕೆಯೊಡೆಯುತ್ತಿದೆ. ನನ್ನ ಮಗ ಅಥವಾ ಮಗಳು ಆಂಗ್ಲದಲ್ಲಿ ನಿರರ್ಗಳವಾಗಿ ಮಾತನಾಡಬೇಕು, ನಾಲ್ಕು ಜನರ ಮುಂದೆ ಎದ್ದು ಕಾಣಬೇಕು, ಎಂಬ ಕಲ್ಪನೆಗಳನ್ನು ಇಟ್ಟುಕೊಂಡು ಆಂಗ್ಲ ಮಾಧ್ಯಮದ ವೈಭವೋಪೇತ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಕಲಿಸುವುದರಲ್ಲಿ ಶ್ರೇಷ್ಠವೆಂದು ತಿಳಿಯುತ್ತಿದ್ದಾರೆ. ಎಲ್ಲೆಡೆ ಆಂಗ್ಲ ಮಾಧ್ಯಮದಿಂದ ಪಾಶ್ಚಾತ್ಯದ ಭೂಮಿಯ ವೈಭವೋಪೇತ ಶಾಲೆಗಳ ರೆಂಬೆಟೊಂಗೆ ಹಬ್ಬಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಶಾಲೆಗಳೂ ಆಂಗ್ಲ ಮಾಧ್ಯಮಗಳ ಶಾಲೆಗಳನ್ನು ಆರಂಭಿಸುತ್ತಿವೆ. ರಾಜಕಾರಣಿಗಳೂ ಅದರಲ್ಲೇನು ಕಡಿಮೆಯಿಲ್ಲ. ಒಟ್ಟಾರೆ ನೋಡಿದಾಗ ಆಂಗ್ಲ ಭಾಷೆಯ ಈ ಅತಿರೇಕ ಮತ್ತು ಭ್ರಮೆಯ ಪ್ರೀತಿಯಿಂದ ಕನ್ನಡ ಭಾಷೆಯು ಇಲ್ಲದಂತಾಗುವುದು ಅಥವಾ ಅದರ ಮಹತ್ವ ನಾಶವಾಗುತ್ತದೆಯೋ ಏನೋ, ಎಂಬ ಹೆದರಿಕೆ ನಿರ್ಮಾಣವಾಗಿದೆ. ಕನ್ನಡ ಭಾಷೆಯ ವೈಶಿಷ್ಟ್ಯಗಳು, ಆಂಗ್ಲ ಭಾಷೆಯಲ್ಲಿರುವ ನ್ಯೂನತೆ, ಆಂಗ್ಲ ಭಾಷೆಯಿಂದಾಗುವ ಸಂಸ್ಕೃತಿಯ ಹಾನಿ ಮತ್ತು ಅದರ ಮೇಲಿನ ಉಪಾಯಗಳ ಬಗ್ಗೆ ವಿಮರ್ಷೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ. ಈ ಲೇಖನವನ್ನು ಬರೆಯುವುದರ ಹಿಂದಿನ ಉದ್ದೇಶವು ಆಂಗ್ಲ ಭಾಷೆಯನ್ನು ಅವಮಾನಿಸುವುದಲ್ಲ, ಸ್ವಭಾಷೆಯ ಬಗ್ಗೆ ಮತ್ತು ಪರಿಣಾಮವಾಗಿ ಸ್ವಧರ್ಮದ ಬಗ್ಗೆ ಹಾಗೂ ರಾಷ್ಟ್ರದ ಬಗ್ಗೆ ಅಭಿಮಾನ ಹೆಚ್ಚಿಸುವುದಾಗಿದೆ.

ಆಂಗ್ಲ ಭಾಷೆಯ ಅಪೂರ್ಣತೆ ಮತ್ತು ಕನ್ನಡ ಭಾಷೆಯ ಪರಿಪೂರ್ಣತೆ

ಭಾಷಾ ಶಾಸ್ತ್ರದಂತೆ ಸಂಸ್ಕೃತ ಭಾಷೆಯನ್ನು ದೇವಭಾಷೆ ಎಂದು ಸಂಬೋಧಿಸಲಾಗುತ್ತದೆ. ಅದೇ ರೀತಿ ಕನ್ನಡ ಭಾಷೆಗೂ ಐತಿಹಾಸಿಕ ಮಹತ್ವವಿದೆ. ಕನ್ನಡದ ಪರಿಪೂರ್ಣತೆಯ ದೃಷ್ಟಿಯಿಂದ ಆಂಗ್ಲ ಭಾಷೆಯು ಹೇಗೆ ಪರಿಪೂರ್ಣವಾಗಿಲ್ಲ, ಎಂಬುದನ್ನು ನೋಡೋಣ. ಶಬ್ದಗಳ ರಚನೆಗೆ ಯಾವುದೇ ನಿಯಮವಿಲ್ಲದಿರುವುದರಿಂದ ಶಬ್ದ ರಚನೆಯನ್ನು ಕಂಠಪಾಠ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಒಳ್ಳೆಯ ಉದಾಹರಣೆಯೆಂದರೆ; Do ಉಚ್ಚಾರ ‘ಡು’ ಎಂದಾದರೆ Go ಉಚ್ಚಾರ ‘ಗೋ’ ಹಾಗೂ Put ಉಚ್ಚಾರ ‘ಪುಟ್’ ಎಂದಾದರೆ But ಎಂಬುದರ ಉಚ್ಚಾರ ‘ಬಟ್’ ಇವೆಲ್ಲ ತರ್ಕವಿಸಂಗತವಾಗಿದೆ. ಹೀಗೆ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಇದರಂತೆ ಯಾವ ಶಬ್ದದ ಉಚ್ಚಾರ ಹೇಗೆ ಯಾವಾಗ ಮಾಡಬೇಕು, ಎಂಬುದರ ಬಗ್ಗೆ ಯಾವುದೇ ಶಾಸ್ತ್ರವಿಲ್ಲ.

ಉದಾ: ‘C’ ಈ ಶಬ್ದದ ಉಚ್ಚಾರವು ಕೆಲವೊಮ್ಮೆ ‘ಸ’ ಎಂದಾಗುತ್ತದೆ, ಕೆಲವೊಮ್ಮೆ ‘ಕ’ ಎಂದಾಗುತ್ತದೆ. ಇದರ ಉದಾಹರಣೆ ಕೊಡುವುದಿದ್ದರೆ Ice ಈ ಶಬ್ದದಲ್ಲಿ ‘ಸ’ ಮತ್ತು Cream ಈ ಶಬ್ದದಲ್ಲಿ ‘ಕ’ ಎಂದಾಗುತ್ತದೆ. ಇದರ ಬಗ್ಗೆಯೂ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಯಾವಾಗ ಯಾವ ಶಬ್ದದ ಉಚ್ಚಾರ ಸ್ಪಷ್ಟ ಮಾಡಬೇಕು, ಯಾವಾಗ ಅಸ್ಪಷ್ಟ ಎಂಬುದರ ಬಗ್ಗೆ ಯಾವುದೇ ಶಾಸ್ತ್ರವಿಲ್ಲ. ಉದಾ. Watchman ಈ ಶಬ್ದದಲ್ಲಿ ‘t’ ಇದರ ಉಚ್ಚಾರ ಮಾಡಲಿಕ್ಕಿಲ್ಲ, Action ಈ ಶಬ್ದದಲ್ಲಿ ‘ಶ’ ಎಂದು ಮಾಡಬೇಕು ಮತ್ತು Cat ಈ ಶಬ್ದದಲ್ಲಿ ಮಾತ್ರ ‘ಟ’ ಎಂದು ಮಾಡಬೇಕು. ಹೀಗೆ ಶಾಸ್ತ್ರವಿಸಂಗತ ಮತ್ತು ತರ್ಕವಿಸಂಗತ ಭಾಷೆಯ ಬಗ್ಗೆ ಏಕೆ ಅಭಿಮಾನವಿಡಬೇಕು, ಎಂಬುದು ಬುದ್ಧಿಗೋಚರದಂತಾಗಿದೆ.

ಆದರೆ ನಮ್ಮ ಕನ್ನಡದಲ್ಲಿ, ನಾವು ಹೇಗೆ ಬರೆಯುತ್ತೇವೆಯೋ, ಉಚ್ಚಾರವೂ ಅದೇ ರೀತಿಯಿರುತ್ತದೆ. ಹಾಗಾಗಿ ಬೆಳೆಯುವ ಮಕ್ಕಳಿಗಿರಲಿ, ಹೊಸದಾಗಿ ಕನ್ನಡವನ್ನು ಕಲಿಯುವವರಿಗಿರಲಿ ಭಾಷೆ ಕಲಿಯುವಾಗ ಯಾವುದೇ ಅಡಚಣೆ ಬರುವುದಿಲ್ಲ.

ಗೌರವಾಸ್ಪದವಿಲ್ಲದಿರುವುದು

ಯಾವುದೇ ವ್ಯಕ್ತಿಗೆ ಅವರು ಎಷ್ಟೇ ಗೌರವಾನ್ವಿತರಾದರೂ ಏಕವಚನದಿಂದ ಸಂಬೋಧಿಸಲಾಗುತ್ತದೆ. ಉದಾಹರಣಾರ್ಥ; ದೇವರಿದ್ದರೂ ‘He’ ಪ್ರಾಣಿಯಿದ್ದರೂ ‘He’ಗೆ, ಭಿಕ್ಷುಕನಾಗಿದ್ದರೂ ‘He’ ಮತ್ತು ರಾಜನಿದ್ದರೂ ‘He’ ನೇ. ಈ ನ್ಯೂನತೆಯಿಂದಾಗಿ ಮಾತನಾಡುವಾಗ ಯೋಗ್ಯ ಭಾವ ವ್ಯಕ್ತವಾಗುವುದಿಲ್ಲ. ಭಾಷೆಯಲ್ಲಿ ಸ್ಥಿತಿಸ್ಥಾಪಕತ್ವ (flexibility) ಇಲ್ಲದಿರುವುದರಿಂದ ಭಾಷೆಯಲ್ಲಿ ರುಚಿ ಇರುವುದಿಲ್ಲ. ಕ್ರಿಯಾಪದದ ಲಿಂಗವು ಕರ್ತೃವಿನಂತೆ ಬದಲಾಗದಿರುವುದರಿಂದ ಕರ್ತೃ ವಿಷಯದ ಭಾವವು ವ್ಯಕ್ತವಾಗುವುದಿಲ್ಲ ಹಾಗೂ ಕರ್ತೃವಿನ ಲಿಂಗ ಯಾವುದು ಎಂದು ಹೊಸ ವ್ಯಕ್ತಿಗಳಿಗೆ ತಿಳಿಯುವುದಿಲ್ಲ. ಉದಾ. ಕನ್ನಡದಲ್ಲಿ ಸೀತಾ ನಡೆಯುತ್ತಾಳೆ ಮತ್ತು ರಾಮ ನಡೆಯುತ್ತಾನೆ ಆದರೆ ಆಂಗ್ಲದಲ್ಲಿ ಮಾತ್ರ Sita walks, Ram also walks! ಹೊಸ ವ್ಯಕ್ತಿಗೆ ರಾಮ ಪುರುಷನೋ ಸ್ತ್ರೀಯೋ ಎಂಬುದು ತಿಳಿಯುವುದಿಲ್ಲ.

ಜೋಡಿ ಅಕ್ಷರಗಳ ಬಗ್ಗೆ ಯಾವುದೇ ನಿಯಮವಿಲ್ಲದಿರುವುದು : ಕನ್ನಡ ಭಾಷೆಯ ನಿಯಮದಂತೆ ಜೋಡಿ ಅಕ್ಷರವೆಂದರೆ ಒಂದು ಅಕ್ಷರ ಪೂರ್ಣ ಮತ್ತು ಮತ್ತೊಂದು ಅಕ್ಷರ ಅರ್ಧವಿರುತ್ತದೆ. ಆಂಗ್ಲದಲ್ಲಿ ಮಾತ್ರ ಹಾಗಿಲ್ಲ. ಆಂಗ್ಲದಲ್ಲಿ ಜೋಡಿ ಅಕ್ಷರಗಳಲ್ಲಿನ ಎರಡೂ ಅಕ್ಷರಗಳು ಪೂರ್ಣವಿರುತ್ತವೆ. ಉದಾ: Deccan, Friction ನಂತಹ ಶಬ್ದಗಳಂತೆ ಎಷ್ಟೋ ನ್ಯೂನತೆಗಳನ್ನು ತೋರಿಸಬಹುದು. ಇಲ್ಲ್ಲಿ ಸ್ಥಳದ ಅಭಾವದಿಂದ ಇಲ್ಲಿ ಹೇಳಲು ಸಾಧ್ಯವಿಲ್ಲ. ತದ್ವಿರುದ್ಧ ಕನ್ನಡ ಭಾಷೆಯಲ್ಲಿ ಒಂದು ರೀತಿಯಲ್ಲಿ ಲಯಬದ್ಧತೆ ಇದೆ, ಗೌರವಸೂಚಿಸುವ ಕ್ಷಮತೆಯಿದೆ, ಶಾಸ್ತ್ರಶುದ್ಧತೆಯಿದೆ, ಕಡಿಮೆ ಶಬ್ದಗಳಲ್ಲಿ ಭಾವನೆಯನ್ನು ವ್ಯಕ್ತ ಪಡಿಸುವ ಕ್ಷಮತೆಯಿದೆ. ಆದುದರಿಂದ ಕನ್ನಡ ಭಾಷೆಯಲ್ಲಿ ಆಂಗ್ಲ ಭಾಷೆಗಿಂತ ಹೆಚ್ಚು ಚೈತನ್ಯವಿದೆ.

ಆಂಗ್ಲ ಭಾಷೆಯ ಬಗ್ಗೆ ಸಮಾಜದಲ್ಲಿರುವ ತಪ್ಪು ತಿಳುವಳಿಕೆ ಮತ್ತು ಅಜ್ಞಾನ

ಆಂಗ್ಲದಲ್ಲಿ ಮಾತನಾಡಲು ಬರುವುದೆಂದರೆ ಘನತೆಯ ಲಕ್ಷಣ ಮತ್ತು ಆಂಗ್ಲ ಬರುವುದಿಲ್ಲ ಎಂದರೆ ಹಿಂದುಳಿಯುವಿಕೆ ಎಂದು ಆಂಗ್ಲಭಾಷಾಪ್ರೇಮಿಗಳಿಗೆ ಅನಿಸುತ್ತದೆ. ಆಂಗ್ಲ ದಿನಪತ್ರಿಕೆ, ಮಾಸಿಕ ಮತ್ತು ಕಾದಂಬರಿಗಳನ್ನು ಓದುವುದು ಎಂದರೆ ಒಂದು ಪ್ರತಿಷ್ಠೆಯೆಂದು ಅನಿಸುತ್ತದೆ. ಆಂಗ್ಲ ಭಾಷೆ ಕಲಿಯದಿದ್ದರೆ ಪ್ರಗತಿಯಾಗುವುದಿಲ್ಲ, ಎಂದು ಬಹಳಷ್ಟು ಜನರಿಗೆ ತಪ್ಪುಕಲ್ಪನೆಯಿದೆ. ಆಂಗ್ಲ ಭಾಷೆ ಓದಲು ಬಾರದಿದ್ದರೆ ಆಂತಾರಾಷ್ಟ್ರೀಯ ವ್ಯವಹಾರದಲ್ಲಿ ಹಿಂದೆ ಬೀಳುತ್ತೇವೆ ಎಂದು ಹೆದರಿಕೆ ಬಹಳಷ್ಟು ಜನರ ಮನಸ್ಸಿನಲ್ಲಿ ಇರುತ್ತದೆ. ನಿಜವಾಗಿ ನೋಡಿದರೆ ವ್ಯಾಪಾರಕ್ಷೇತ್ರದಲ್ಲಿ ಕೇವಲ ಗುಣವಂತರಿಗೆ ಪ್ರಾಧಾನ್ಯತೆಯಿರುತ್ತದೆ. ಆದರೆ ಇಂದಿನ ಕೃತಕ ಮಾರಾಟವ್ಯವಸ್ಥಾಪನೆಯ (ಮಾರ್ಕೆಟಿಂಗ್) ಯುಗದಲ್ಲಿ ಮಾತ್ರ ಯಾರಿಗೆ ಆಂಗ್ಲ ಭಾಷೆ ಬರುತ್ತದೆಯೋ, ಅವರು ತಮ್ಮ ಸಾಧಾರಣ ದರ್ಜೆಯ ವಸ್ತುಗಳನ್ನು ಕೇವಲ ಆಂಗ್ಲ ಭಾಷೆಯಿಂದ ಮಾರಬಹುದು, ಎಂಬುದು ಕಟುಸತ್ಯ. ಇದಕ್ಕೆ ಕಾರಣವೆಂದರೆ ಆಂಗ್ಲ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವವನು ಎಂದರೆ ಯಾರೋ ಮಹಾನ ಎಂದು ಗುಲಾಮಗಿರಿಯ ಮಾನಸಿಕತೆ ನಮ್ಮ ಸಮಾಜದಲ್ಲಿದೆ. ಈ ಕೀಳರಿಮೆಯಿಂದ ಇಂದು ಕನ್ನಡಿಗನು ಇಂತಹ ಮಾರಾಟ ಪ್ರತಿನಿಧಿಗಳಿಗೆ ಮೋಸ ಹೋಗುತ್ತಾನೆ. ಇಂತಹ ವಸ್ತುಸ್ಥಿತಿಯಿಂದ ಬುದ್ಧಿ ಸಾಧಾರಣವಿದ್ದವರು ಕೂಡ ಕೇವಲ ಆಂಗ್ಲ ಭಾಷೆ ಬರುತ್ತದೆ ಎಂದರೆ ನೌಕರಿ ದೊರಕುತ್ತದೆ ಎಂದು ಖಚಿತವಾಗಿರುವುದರಿಂದ ಸಮಾಜವು ಆಂಗ್ಲ ಭಾಷೆಯೆಡೆಗೆ ತಿರುಗುತ್ತಿದೆ, ಎಂದು ಅನಿಸುತ್ತದೆ. ಇದರಿಂದ ನಿಜವಾದ ವಿದ್ವತ್ತು ಕೇವಲ ಆಂಗ್ಲ ಬರುವುದಿಲ್ಲವೆಂದು ಅವಕಾಶ ದೊರಕುವುದಿಲ್ಲ. ಇಂದು ಇಂತಹದ್ದೇ ವಿಕ್ರಿ ಪ್ರತಿನಿಧಿಗಳು ಎಲ್ಲೆಡೆ ಹರಡಿದ್ದಾರೆ. ಇಂತಹ ಸಮಯದಲ್ಲಿ ಆಂಗ್ಲ ಭಾಷೆ ಬರುವುದು ಆವಶ್ಯಕವೆನಿಸುತ್ತಿದ್ದರೂ ಅದರ ಮೇಲೆ ಅವಲಂಬಿಸಿರುವುದು ಮತ್ತು ಅದನ್ನು ಅನಾವಶ್ಯಕ ಉಪಯೋಗಿಸುವುದು ಮಾನಸಿಕ ಗುಲಾಮಗಿರಿಯಲ್ಲವೇ?

ಆಂಗ್ಲ ಭಾಷೆಯಿಂದ ಆಗುವ ಸಾಂಸ್ಕೃತಿಕ ಹಾನಿ

ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆಯುವಾಗ ಯಾವ ವಾಙ್ಮಯವನ್ನು ಆಧಾರಕ್ಕಾಗಿ ಉಪಯೋಗಿಸಿದ್ದಾರೆಯೋ, ಅದು ಪಾಶ್ಚಾತ್ಯ ಸಂಸ್ಕೃತಿಯೊಂದಿಗೆ ಸಂಬಂಧಿತವಿರುವುದರಿಂದ ಸಹಜವಾಗಿ ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಪರಿಚಯವಾಗುವುದಿಲ್ಲ. ಇಂದು ವಿಭಕ್ತ ಕುಟುಂಬ ಪದ್ಧತಿಯಿಂದ ಮನೆಯಲ್ಲಿಯೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಲು ಯಾರು ಇರುವುದಿಲ್ಲ. ಪ್ರಸಾರಮಾಧ್ಯಮದಿಂದ ಮತ್ತು ಸಮಾಜದಿಂದಲೂ ಇಂತಹ ವಾಙ್ಮಯದ ಪ್ರಚಾರವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಆಕರ್ಷಣೆಯು ಹೆಚ್ಚಾಗುತ್ತದೆ. (ಉದಾ: ಹ್ಯಾರಿ ಪಾಟರ, ದೂರಚಿತ್ರವಾಹಿನಿಯಲ್ಲಿ ವ್ಯಂಗಚಿತ್ರ ಮಾಲಿಕೆ ಇತ್ಯಾದಿ) ಆದುದರಿಂದಲೇ ಭಾರತೀಯ ಇತಿಹಾಸದ ರಾಷ್ಟ್ರಪುರುಷರು, ಸಂತರು, ಧರ್ಮಗ್ರಂಥ ಇತ್ಯಾದಿಗಳಿಂದ ಯುವಪೀಳಿಗೆ ದೂರರಾಗುತ್ತಾರೆ. ಸ್ವಧರ್ಮ ಮತ್ತು ಸ್ವಭಾಷೆಯ ಬಗ್ಗೆ ಪ್ರೀತಿ ನಿರ್ಮಾಣವಾಗದಿರುವುದರಿಂದ ಹಿಂದೂ ಸಂಸ್ಕೃತಿಯ ಮೇಲಿನ ಶ್ರದ್ಧೆ ಮತ್ತು ಅಭಿಮಾನ ಹೆಚ್ಚಾಗುವುದಿಲ್ಲ. ಆಂಗ್ಲ ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟ ಹಿಂಸಾತ್ಮಕ ಮತ್ತು ವಿಕೃತ ಲೈಂಗಿಕತೆಯಿರುವ ಕಾದಂಬರಿಗಳನ್ನು ಓದುವ ಯುವಪೀಳಿಗೆಯ ಮೇಲೆ ದುಷ್ಪರಿಣಾಮವಾಗುತ್ತದೆ. ಇವೆಲ್ಲವುಗಳಿಂದ ಯುವಪೀಳಿಗೆ ಹಾಗೂ ಸಂಪೂರ್ಣ ಸಮಾಜದ ಆಚಾರ ಮತ್ತು ವಿಚಾರಗಳಲ್ಲಾದ ಆಘಾತಕಾರಿ ಬದಲಾವಣೆಗಳನ್ನು ನಾವು ಎಲ್ಲೆಡೆ ನೋಡುತ್ತಿದ್ದೇವೆ.

ವರ್ಷದಲ್ಲಿ ಕೇವಲ ಒಂದೇ ದಿನ (Mother’s Day) ತಾಯಿಯ ಬಗ್ಗೆ ಕೃತಜ್ಞತೆ ವ್ಯಕ್ತ ಪಡಿಸುವ ಪೀಳಿಗೆ ಇಂದಿನ ತಂದೆ-ತಾಯಿಯರಿಗೆ ಇಷ್ಟವಾಗುತ್ತದೆ. ಪಾಶ್ಚಾತ್ಯ ಹಬ್ಬ, ಉಡುಗೆ-ತೊಡುಗೆ, ಸಭ್ಯತೆ ಇವುಗಳ ಬಗ್ಗೆ ಆಕರ್ಷಣೆಯು ಸಮಾಜದಲ್ಲಿ ಹೆಚ್ಚಾಗಿ ಭಾರತೀಯ ಸಂಸ್ಕೃತಿಯು ಹಿಂದುಳಿಯುತ್ತಿದೆ. ಇವುಗಳ ಪರಿಣಾಮವಾಗಿ ಎಲ್ಲೆಡೆ ಭೋಗವಾದ ಮತ್ತು ಹಣದ ವ್ಯಾಮೋಹ ಕಾಣಸಿಗುತ್ತ್ತಿದೆ.

ಆಂಗ್ಲ ಭಾಷೆಯ ಮೇಲಿನ ಅತಿಶಯ ಪ್ರೀತಿಯಿಂದ
ಸಮಾಜದ ಮೇಲಾಗುವ ಪರಿಣಾಮ ಸಮಾಜದ ವಿಭಜನೆ

ಸಮಾಜವನ್ನು ಒಂದೆಡೆ ಸೇರಿಸುವ ಪ್ರಭಾವೀ ಮಾಧ್ಯಮ ಭಾಷೆಯೇವಾಗಿದೆ. ಭಾಷೆಯಿಂದಲೇ ಆತ್ಮೀಯತೆ ಬೆಳೆಯಲು ಸಹಾಯವಾಗುತ್ತದೆ. ಆಂಗ್ಲ ಭಾಷೆ ಮಾತನಾಡುವ ಉಚ್ಚ ವರ್ಗ ಮತ್ತು ಇತರ ಸಾಮಾನ್ಯ ಜನರ ವರ್ಗವೆಂದು ವಿಭಾಗಿಸಲ್ಪಟ್ಟಿರುವುದರಿಂದ ಸಮಾಜದಲ್ಲಿ ಆಳ ಕಂದರ ನಿರ್ಮಾಣವಾಗುತ್ತಿದೆ. ಒಂದೇ ವರ್ಗದವರ ಆರ್ಥಿಕ ಪ್ರಗತಿಯಾಗುತ್ತದೆ ಮತ್ತು ಇತರ ಸಮಾಜ ಹಿಂದುಳಿಯುತ್ತದೆ ಮತ್ತು ಕೀಳರಿಮೆಯ ಭಾವನೆ ನಿರ್ಮಾಣವಾಗುತ್ತದೆ.

ಇಚ್ಛೆಯಿಲ್ಲದಿದ್ದರೂ ಸಮಾಜದಲ್ಲಿನ ಇನ್ನೊಂದು ವರ್ಗ ಸೆಳೆಯಲ್ಪಡುವುದು

ಇದರಿಂದ ಉಚ್ಚ ವರ್ಗದ ಸಮಾಜವು ಇನ್ನೊಂದು ವರ್ಗದ ಜನರನ್ನು ತುಚ್ಛರೆಂದು ಪರಿಗಣಿಸುತ್ತದೆ. ಇದರ ಪರಿಣಾಮವೆಂದು ಕೇವಲ ಸ್ಪರ್ಧೆಯಲ್ಲಿ ಉಳಿಯಲು ಉಪಾಯವಿಲ್ಲದೇ ಮತ್ತು ಆಕರ್ಷಣೆಯೆಂದು ಈ ಮತ್ತೊಂದು ವರ್ಗವು ಕೂಡ ಈ ಸ್ಪರ್ಧೆಯಲ್ಲಿ ಸೆಳೆಯಲ್ಪಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮೊರೆಹೋಗುತ್ತಿದೆ. ಸಮಾಜದಲ್ಲಿ ಇಂದು ಇಂತಹ ಜನರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಸಮಾಜದಲ್ಲಿನ ಸಂಪೂರ್ಣ ಮಧ್ಯಮವರ್ಗ ಮತ್ತು ಉಚ್ಚ ಮಧ್ಯಮವರ್ಗವು ಇಂದು ಇದಕ್ಕೆ ಬಲಿಯಾಗುತ್ತಿದೆ.

ಸಾಮಾನ್ಯ ವರ್ಗದ ಸಮಾಜಕ್ಕೆ ದೈನಂದಿನ ಜೀವನದಲ್ಲಿ ಬರಲಿರುವ ಅಡಚಣೆಗಳು

ಯಾರಿಗೆ ಇದೆಲ್ಲ ಮಾಡಲು ಸಾಧ್ಯವಿಲ್ಲವೋ ಅವರಲ್ಲಿ ಕೀಳರಿಮೆ ನಿರ್ಮಾಣವಾಗುತ್ತ್ತದೆ. ಏಕೆಂದರೆ ಆಂಗ್ಲ ಭಾಷೆ ಬರುವುದು ಪ್ರಗತಿಯ ಅಳತೆಗೋಲಾಗಿದೆ. ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ (ಸರಕಾರಿ ಕಾರ್ಯಾಲಯ, ನ್ಯಾಯಾಲಯಗಳು, ಶೈಕ್ಷಣಿಕ ಕ್ಷೇತ್ರಗಳು, ಖಾಸಗೀ ವ್ಯಾಪಾರದ ಕ್ಷೇತ್ರಗಳು ಇತ್ಯಾದಿ) ಆಂಗ್ಲ ಭಾಷೆಯನ್ನು ಅವಿರತವಾಗಿ ಉಪಯೋಗಿಸುವುದು ಕಂಡು ಬರುತ್ತಿದೆ. ಅದರಿಂದ ಈ ವರ್ಗದ ಜನರಿಗೆ ದೈನಂದಿನ ಜೀವನದಲ್ಲಿ ವ್ಯವಹರಿಸುವಾಗ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ.

ಆಂಗ್ಲ ಭಾಷೆಗೆ ಬಲಿಯಾಗದೇ ಭೌತಿಕ ಮತ್ತು ಸಾಂಸ್ಕೃತಿಕ ಪ್ರಗತಿ ಸಾಧಿಸುವ ರಾಷ್ಟ್ರ

ಜಪಾನಿನ ಉದಾಹರಣೆ ನೋಡೋಣ. ಜಪಾನಿನ ರಾಜಕಾರಣಿಗಳು ಎಂದಿಗೂ ಆಂಗ್ಲ ಭಾಷೆಯ ಮೇಲೆ ಅವಲಂಬಿಸಿರಲಿಲ್ಲ. ಬದಲಾಗಿ ಅವರು ಪಾಶ್ಚಾತ್ಯ ದೇಶಗಳ ಎಲ್ಲ ಜ್ಞಾನವನ್ನು ಜಪಾನಿ ಭಾಷೆಯಲ್ಲಿ ಅನುವಾದ ಮಾಡಿಸಿಕೊಂಡಿದ್ದಾರೆ. ದೇಶದಲ್ಲಿನ ಎಲ್ಲ ಶಿಕ್ಷಣ ಮಾತೃಭಾಷೆಯಲ್ಲಿ ನೀಡುತ್ತಿದ್ದಾರೆ, ಹೀಗಿದ್ದೂ ಇಂದು ಜಪಾನ ಎಲ್ಲ ಕ್ಷೇತ್ರಗಳಲ್ಲಿ ಒಂದು ಪ್ರಗತ ರಾಷ್ಟ್ರವಾಗಿದೆ. ಅದರ ಹೊರತಾಗಿ ಜಗತ್ತಿನ ಎಲ್ಲ ವ್ಯವಹಾರಗಳನ್ನು ಮಾತೃಭಾಷೆಯಲ್ಲಿಯೇ ನಡೆಸುತ್ತಾರೆ. ಅವರ ಪ್ರಗತಿಯಲ್ಲಿ ಎಲ್ಲಿಯೂ ಯಾವುದೇ ಅಡಚಣೆ ಬಂದದ್ದು ಕಾಣಿಸುವುದಿಲ್ಲ. ಆಂತಾರಾಷ್ಟ್ರೀಯ ವ್ಯವಹಾರದಲ್ಲಿಯೂ ಯಾರೂ ಹಿಂದಿರುವುದು ಕಾಣಲು ದೊರಕುವುದಿಲ್ಲ. ಬದಲಾಗಿ ಜಪಾನ, ಕೋರಿಯಾ, ಜರ್ಮನ್ ಮುಂತಾದ ರಾಷ್ಟ್ರಗಳ ವ್ಯಾಪಾರ ಹೆಚ್ಚಾಗುತ್ತಿದೆ.
ಉಪಾಯ: ರಾಜಕಾರಣಿಗಳು ಮತ್ತು ಆಡಳಿತದ ಭೂಮಿಕೆ ಮಾತೃಭಾಷೆಯಿಂದಲೇ ವ್ಯವಹರಿಸುವುದು ರಾಜಕಾರಣಿಗಳ ಇಚ್ಛಾಶಕ್ತಿಯ ಮೇಲಾಧಾರಿತವಿದೆ.
ಹಿಂದಿನಿಂದಲೂ ಶಿಕ್ಷಣಮಂತ್ರಿಗಳು ಆಂಗ್ಲಭಾಷೆಯ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಇದು ಎಷ್ಟು ಆವಶ್ಯಕವಾಗಿದೆ ಎಂಬುದನ್ನು ಪರಿಶೀಲಿಸಿ ನೋಡಬೇಕು. ಇಂದು ರಾಜಕಾರಣಿಗಳ ಹೆಸರಿನಲ್ಲಿಯೇ ಆಂಗ್ಲ ಭಾಷೆಯ ಮಾಧ್ಯಮದ ಶಾಲೆಗಳು ನಡೆಯುತ್ತಿವೆ. ಇದರಿಂದ ರಾಜಕಾರಣಿಗಳು ಇದರ ಬಗ್ಗೆ ಎಷ್ಟು ಉದಾಸೀನರಾಗಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಸಂಸ್ಕೃತ ಭಾಷೆಗೆ (ಸ್ವಕೀಯ) ರಾಜಾಶ್ರಯ ನೀಡಿದ್ದರು ಮತ್ತು ಪರಕೀಯ ಭಾಷೆಗೆ ಕಡಿಮೆ ಮಹತ್ವ ಕೊಟ್ಟಿದ್ದರು. ಮೈಸೂರೀನ ರಾಜರೂ ಕೂಡ ಕನ್ನಡ ಭಾಷೆ ಮತ್ತು ಕಲೆಯನ್ನು ಪೋಷಿಸಿದವರು. ಸ್ವತಃ ಕವಿಗಳು, ಕಲಾಸಕ್ತರು ಆದ ಅನೇಕ ರಾಜರು ಕನ್ನಡ ಭಾಷೆಯ ದೇಗುಲದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.

ಸಮಾಜದ ಕರ್ತವ್ಯ

ಇತರರಿಗೆ ತಿಳಿಯದ ಭಾಷೆಯಲ್ಲಿ ಮಾತನಾಡುವುದನ್ನು ವಿದೇಶದಲ್ಲಿ ಅಶಿಷ್ಟಾಚಾರ ಎಂದು ತಿಳಿಯಲಾಗುತ್ತಿದೆ. ಅದಕ್ಕಾಗಿ ಎಲ್ಲಿ ಆವಶ್ಯಕವಿದೆಯೋ ಅಲ್ಲಿ ಅನಿವಾರ್ಯವಾಗಿ ಆಂಗ್ಲ ಭಾಷೆಯನ್ನು ಉಪಯೋಗಿಸುವುದು ಯೋಗ್ಯವಾಗಿದೆ. ಕೇವಲ ತಮ್ಮ ವಿದ್ವತ್ತನ್ನು ತೋರಿಸಲು ಆಂಗ್ಲ ಭಾಷೆಯನ್ನು ಉಪಯೋಗಿಸುವುದನ್ನು ತಡೆಯಬೇಕು. ಕೇವಲ ಆಂಗ್ಲ ಭಾಷೆಯಲ್ಲಿ ಮಾತನಾಡಲು ಬರಬೇಕೆಂದು ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗೆ ಕಳುಹಿಸುತ್ತಿದ್ದರೆ, ಅದು ಅಯೋಗ್ಯವಾಗಿದೆ. ಆಂಗ್ಲದಲ್ಲಿ ಮಾತನಾಡಿದರೆ ಆಗುವ ಲಾಭದೊಂದಿಗೆ ಅದರಿಂದಾಗುವ ಸಾಂಸ್ಕೃತಿಕ ಹಾನಿಯನ್ನು ಕೂಡ ವಿಚಾರ ಮಾಡಬೇಕು. ಆಂಗ್ಲದಲ್ಲಿ ಮಾತನಾಡುವ ಕಲೆಯನ್ನು ಇತರ ಪ್ರಕಾರದಿಂದಲೂ ಸಾಧಿಸಬಹುದು, ಎಂಬುದನ್ನು ಗಮನದಲ್ಲಿಡಬೇಕು. ಇತರ ಭಾಷೆ ಕಲಿಯುತ್ತಿರುವಾಗಲೂ (ಉದಾ: ಜರ್ಮನ್, ಫ್ರೆಂಚ್ ಇತ್ಯಾದಿ) ನಾವು ಇದೇ ದೃಷ್ಟಿಕೋನವಿಡುತ್ತೇವೆ. ನಮ್ಮ ಮಕ್ಕಳು ಇಂದು ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಿದ್ದರೆ, ಅವರ ಮೇಲೆ ನಮ್ಮ ಸಂಸ್ಕ ತಿಯ ಸಂಸ್ಕಾರವನ್ನು ಇತರ ಮಾಧ್ಯಮಗಳಿಂದ ಹೇಗೆ ಮಾಡಬಹುದು, ಎಂಬುದರ ಕಡೆಗೆ ಗಮನ ನೀಡುವುದು ಆವಶ್ಯಕವಾಗಿದೆ. ತಮ್ಮ ಭಾಷೆಯ ಬಗ್ಗೆ ಅಭಿಮಾನವಿಡುವುದು ಎಂದರೆ ನಮ್ಮ ರಾಷ್ಟ್ರದ ಬಗ್ಗೆ ಮತ್ತು ಸ್ವಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನವಿಡುವುದಾಗಿದೆ!

ನಾಡಗೀತೆಯನ್ನು ಕೇಳಿ, ಕಲಿಯಿರಿ!