ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬೆಂಗಳೂರಿನ ಚಂದಾಪುರದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ ಸಂಪನ್ನ !
ಬೆಂಗಳೂರು : ‘ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ವಿರಾಜಮಾನರಾಗುತ್ತಿದ್ದಾರೆ. ಈ ಪವಿತ್ರ ಭೂಮಿಯು ಪ್ರಭು ಶ್ರೀರಾಮರ ‘ರಾಮರಾಜ್ಯ’ವನ್ನು ನೋಡಿತು, ಪಾಂಡವರ ‘ಧರ್ಮರಾಜ್ಯ’ವನ್ನು ನೋಡಿತು, ಚಂದ್ರಗುಪ್ತ ಮೌರ್ಯನ ವಿಶಾಲವಾದ ‘ಮೌರ್ಯಶಾಸನ’ವನ್ನು ನೋಡಿತು, ರಾಜಾಕೃಷ್ಣದೇವರಾಯರ ‘ವಿಜಯನಗರ ಸಾಮ್ರಾಜ್ಯ’ವನ್ನು ನೋಡಿತು, ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ‘ಹಿಂದವೀ ಸ್ವರಾಜ್ಯ’ವನ್ನು ಅನುಭವಿಸಿದೆ. ಇಂದು ಅದೇ ಭೂಮಿಯಲ್ಲಿ ಪುನಃ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಧ್ವನಿಯನ್ನು ಮೊಳಗಿಸಲು ಸಂಕಲ್ಪ ಮಾಡೋಣ’ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಚಂದಾಪುರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ನಾರಾಯಣ ಘಟ್ಟದ ಶ್ರೀ ಚೌಡೇಶ್ವರಿ ದೇವಸ್ಥಾನದ ಕಾರ್ಯದಶಿ ಶ್ರೀ. ಸೋಮೇಶ್ ರೆಡ್ಡಿ ಹಾಗೂ ಶ್ರೀ. ಮೋಹನ್ ಗೌಡ ಇವರು ದೀಪ ಪ್ರಜ್ವಲನೆ ಮೂಲಕ ಸಭೆಯನ್ನು ಉದ್ಘಾಟಿಸಿದರು, ೧೫೦ ಕ್ಕೂ ಹೆಚ್ಚು ಹಿಂದೂ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಶ್ರೀ. ಮೋಹನ್ ಗೌಡ ಇವರು ಮುಂದೆ ಮಾತನಾಡುತ್ತಾ, ‘ಇಂದು ಹಿಂದೂ ರಾಷ್ಟ್ರದ ಬೇಡಿಕೆಯನ್ನು ಸಶಕ್ತವಾಗಿ ಮಾಡುವ ಅವಶ್ಯಕತೆಯಿದೆ, ಇದರ ಕಾರಣ ಈ ದೇಶದ ಪ್ರಾಣವಾಗಿರುವ ಸನಾತನ ಧರ್ಮದ ಮೂಲವನ್ನು ಕಿತ್ತೆಸೆಯಲು ಅನೇಕ ಜನರು ಶ್ರಮಿಸುತ್ತಿದ್ದಾರೆ. ನಿಜವಾಗಿ ನೋಡಿದರೆ ಸನಾತನ ಧರ್ಮ ವಿಶ್ವಕಲ್ಯಾಣದ ಬೋಧನೆ ನೀಡುತ್ತಿದೆ, ಎಂಬುದನ್ನು ಸನಾತನ ಧರ್ಮ ದ್ವೇಷಿಗಳು ಗಮನದಲ್ಲಿಡಬೇಕು. ಅದೇ ರೀತಿ ನಮ್ಮ ಮುಂದೆ ಇಸ್ಲಾಮೀ ರಾಷ್ಟ್ರವೋ ಅಥವಾ ಜಾತ್ಯಾತೀತ ರಾಷ್ಟ್ರ’ ಎಂಬ ಪ್ರಶ್ನೆಯಿದೆ. ಕಾರಣವೆಂದರೆ, ನಮ್ಮ ದೇಶದಲ್ಲಿ ಬಹಿರಂಗವಾಗಿ ಭಯೋತ್ಪಾದನೆಯನ್ನು ಸಮರ್ಥಿಸಲಾಗುತ್ತದೆ. ಕೆಲವೆ ದಿನಗಳ ಹಿಂದೆ ಹಮಾಸ ಭಯೋತ್ಪಾದಕ ಸಂಘಟನೆಯು ಇಸ್ರೈಲ್‌ನ ಮೇಲೆ ಆಕ್ರಮಣ ಮಾಡಿತು. ೧೨೦೦ ಕ್ಕಿಂತಲೂ ಹೆಚ್ಚು ಜ್ಯೂ ನಾಗರಿಕರನ್ನು ಹತ್ಯೆ ಮಾಡಿತು. ಮಹಿಳೆಯರನ್ನು ಅತ್ಯಾಚಾರ ಮಾಡಿತು. ಭಾರತ ಈ ಘಟನೆಯನ್ನು ನಿಷೇಧಿಸಿ ಇಸ್ರೈಲ್ ಅನ್ನು ಸಮರ್ಥಿಸುವ ಹಾಗೂ ಜಿಹಾದಿ ಭಯೋತ್ಪಾದನೆಯ ವಿರುದ್ಧ ನಿಲುವನ್ನು ತೋರಿದರೂ ಅಲಿಗಡ ಮುಸ್ಲಿಮ್ ವಿದ್ಯಾಪೀಠದ ವಿದ್ಯಾರ್ಥಿಗಳು ಮಾತ್ರ ಹಮಾಸದ ಭಯೋತ್ಪಾದಕರನ್ನು ಬೆಂಬಲಿಸುತ್ತಾ ಮೆರವಣಿಗೆ ತೆಗೆದರು, ಪೆಲೆಸ್ಟಾಯಿನ್‌ನ ಬೆಂಬಲಕ್ಕಾಗಿ ಘೋಷಣೆ ನೀಡಿದರು. ‘ದೇಶ ಅಥವಾ ಧರ್ಮ’, ‘ಮಾನವತೆ ಅಥವಾ ಕ್ರೌರ್ಯ’ ಈ ಪರ್ಯಾಯದ ಪೈಕಿ ಅವರ ಪ್ರಾಧಾನ್ಯತೆ ಯಾವುದಕ್ಕೆ, ಎಂಬುದನ್ನು ಅವರು ತೋರಿಸಿಕೊಟ್ಟರು. ಆದ್ದರಿಂದ ಈ ಭಯೋತ್ಪಾದನೆಯ ಸಮರ್ಥಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಮನವಿ ಮಾಡಬೇಕು. ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆಯ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನಮಗೆ ಆಶ್ವಾಸನೆ ಬೇಡ, ದಿಶೆ ಬೇಕಾಗಿದೆ. ಹಿಂದೂ ರಾಷ್ಟ್ರದ ದಿಶೆ ಬೇಕಾಗಿದೆ ! ‘ನಮಗೆ ಫ್ರೀ ವಿದ್ಯುತ್ ಬೇಡ, ಸಾಲ ಮನ್ನಾ ಬೇಡ, ನಮಗೆ ಕೇವಲ ಎಲ್ಲರ ಉದ್ಧಾರ ಮಾಡುವ ಹಿಂದೂ ರಾಷ್ಟ್ರ ಬೇಕು.’ ‘ಭಾರತವನ್ನು ಸಂವಿಧಾನಾತ್ಮಕ ದೃಷ್ಟಿಯಲ್ಲಿ ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಿ’, ದೇಶದಾದ್ಯಂತ ಗೋಹತ್ಯಾ ನಿರ್ಬಂಧ ಅನ್ವಯಗೊಳಿಸಿರಿ’, ‘ಲವ್ ಜಿಹಾದ್ ವಿರೋಧಿ ಕಾನೂನು ಮಾಡಿರಿ’, ‘ಮತಾಂತರ ನಿರ್ಬಂಧ ಕಾನೂನು ಮಾಡಿರಿ’, ‘ಸರಕಾರ ವಶಪಡಿಸಿಕೊಂಡಿರುವ ಮಂದಿರಗಳನ್ನು ಭಕ್ತರಿಗೆ ಒಪ್ಪಿಸಿರಿ’, ಇದು ಹಿಂದೂಗಳ ಬೇಡಿಕೆಯಾಗಿದ್ದು ಅದಕ್ಕಾಗಿ ಯಾರು ಕಾರ್ಯ ಮಾಡುವರೊ, ಅವರಿಗೆ ಹಿಂದೂಗಳ ಬೆಂಬಲ ಸಿಗಬಹುದು, ಎಂಬ ನಿಲುವನ್ನು ತೋರಿಸಬೇಕಿದೆ. ನಮ್ಮ ಪ್ರವಾಸವೂ ಕೇವಲ ರಾಮ ಮಂದಿರದ ವರೆಗೆ ಅಲ್ಲ, ರಾಮರಾಜ್ಯದ ವರೆಗಿನದ್ದಾಗಿದೆ. ಧರ್ಮದ್ರೋಹಿಗಳು ಎಷ್ಟು ಚಡಪಡಿಸಿದರೂ ರಾಮರಾಜ್ಯರೂಪಿ ಹಿಂದೂ ರಾಷ್ಟ್ರದ ಸೂರ್ಯೋದಯ ಆಗಲಿಕ್ಕಿದೆ. ಅದಕ್ಕಾಗಿ ನಿರಂತರ ಕಾರ್ಯನಿರತರಾಗಿರುವ ಸಂಕಲ್ಪ ಮಾಡೋಣ. ಎಂದು ಕರೆ ನೀಡಿದ್ದಾರೆ.
ಹಿಂದೂಗಳು ನಮ್ಮ ಧರ್ಮ ರಕ್ಷಣೆಯ ಸಂಕಲ್ಪ ಮಾಡಬೇಕಿದೆ ! – ಶ್ರೀ. ಸೋಮೇಶ್ ರೆಡ್ಡಿ, ಕಾರ್ಯದರ್ಶಿಗಳು, ಶ್ರೀ ಚೌಡೇಶ್ವರಿ ದೇವಸ್ಥಾನ, ನಾರಾಯಣ ಘಟ್ಟ.
ಇಂದು ಬಹುಸಂಖ್ಯಾತರೇ ಹಿಂದೂ ಧರ್ಮಕ್ಕಾಗಿ ಹೋರಾಡುವ ಪರಿಸ್ಥಿತಿ ವಿಪರ್ಯಾಸವಾಗಿದೆ. ಹಿಂದೂ ಧರ್ಮದಲ್ಲಿ ನಮ್ಮ ಪೂರ್ವಜರು ಕೆಲವರನ್ನು ದೂರ ಇಡುತ್ತಿದ್ದರು, ಈ ರೀತಿ ದೂರ ಇಡುವ ವ್ಯವಸ್ಥೆಯನ್ನು ನಾವು ದೂರ ಮಾಡಬೇಕಿದೆ. ಹಿಂದೂಗಳು ಯಾರೂ ಸಹ ಅಸ್ಪೃಶ್ಯರಲ್ಲ, ಯಾರು ಬೇಕಾದರೂ ದೇವಸ್ಥಾನಕ್ಕೆ ಬರಬಹುದು, ನಾವು ಅವರನ್ನು ದೂರ ಇಟ್ಟರೆ ಅವರು ಧರ್ಮದಿಂದ ದೂರ ಉಳಿಯುತ್ತಾರೆ, ಇದನ್ನು ನಾವೆಲ್ಲರೂ ಮನದಟ್ಟುಮಾಡಿಕೊಳ್ಳಬೇಕಿದೆ. ನಮ್ಮ ಧರ್ಮ ಉಳಿದರೆ ದೇವಸ್ಥಾನಗಳು ಉಳಿಯುವುದು, ಇದಕ್ಕಾಗಿ ಹಿಂದೂ ಧರ್ಮದ ರಕ್ಷಣೆಗಾಗಿ ನಾವೆಲ್ಲರೂ ಸಂಘಟಿತರಾಗಬೇಕಿದೆ‘ ಎಂದರು.