ದೇವಸ್ಥಾನ ರಕ್ಷಣೆಗೆ ಸಂಘಟಿತ ಕಾರವಾರದ ಹಿಂದೂ ಬಾಂಧವರು!
ವ್ಯಾಸಪೀಠದಲ್ಲಿ ಉಪಸ್ಥಿತರಿರುವ ಸನಾತನ ಸಂಸ್ಥೆ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ದುರ್ಗಾದೇವಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ. ಲಿಂಗರಾಜ್ ಕಲ್ಲುಟ್ಕರ್ ಮತ್ತು ಅಧ್ಯಕ್ಷರಾದ ಶ್ರೀ. ಅನಿಲ್ ಕಲ್ಲುಟ್ಕರ್, ಕೊನೆಯಲ್ಲಿ ಡಾ. ಪ್ರಣವ್ ಮಲ್ಯ
ಸದಾಶಿವಗಡ (ಕಾರವಾರ ತಾ.) : ದೇವಸ್ಥಾನಗಳು ಸನಾತನ ಧರ್ಮದ ಕೇಂದ್ರಬಿಂದುಗಳಾಗಿದ್ದು ಪ್ರತಿಯೊಬ್ಬ ಹಿಂದೂವಿನ ಆಧಾರ ಸ್ಥಂಭವಾಗಿದೆ. ಹಿಂದೆ ದೇವಸ್ಥಾನಗಳಿಂದಲೇ ಸಂಪೂರ್ಣ ಸಮಾಜಕ್ಕೆ ಧರ್ಮಶಿಕ್ಷಣ ಸಿಗುತ್ತಿತ್ತು. ಆದ್ದರಿಂದ ಜನರು ಸಾತ್ತ್ವಿಕ ಜೀವನ ನಡೆಸುತ್ತಿದ್ದರು ಮತ್ತು ಧರ್ಮಾಚರಣಿಗಳಾಗಿದ್ದರು. ಇಂದು ಧರ್ಮಶಿಕ್ಷಣದ ಅಭಾವದಿಂದಾಗಿ ಜನರ ಆಚಾರ-ವಿಚಾರಗಳು ನೀತಿಹೀನವಾಗಿವೆ. ಅನೇಕರು ದೇವಸ್ಥಾನಕ್ಕೆ ಹೋಗುವಾಗ ತುಂಡು ಬಟ್ಟೆ ಧರಿಸಿ ಹೋಗುತ್ತಾರೆ. ದೇವಸ್ಥಾನದಲ್ಲಿ ದೇವರಿಗೆ ಕೈ ಮುಗಿಯುವ ಯೋಗ್ಯ ಪದ್ಧತಿ ತಿಳಿದಿಲ್ಲ. ದೇವರ ದರ್ಶನ ಪಡೆಯುವುದು ಮತ್ತು ಪ್ರದಕ್ಷಿಣೆ ಹಾಕುವ ಪದ್ಧತಿ ತಿಳಿದಿರದ ಕಾರಣ ಸಮಾಜವು ದೇವಸ್ಥಾನಗಳ ಪೂರ್ಣ ಲಾಭ ಪಡೆಯುವಲ್ಲಿ ವಂಚಿತವಾಗುತ್ತಿದೆ. ಆದ್ದರಿಂದ ಹಿಂದಿನಂತೆ ಈಗಲೂ ನಮ್ಮ ದೇವಸ್ಥಾನಗಳು ಗುರುಕುಲಗಳಾಗಬೇಕು ಮತ್ತು ಅವುಗಳ ಮಾಧ್ಯಮದಿಂದ ಜನರಿಗೆ ಧರ್ಮಶಿಕ್ಷಣ ಪ್ರಾರಂಭವಾಗಬೇಕಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಕರೆ ನೀಡಿದರು. ಅವರು ‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಕಾರವಾರ ತಾಲ್ಲೂಕಿನ ಸದಾಶಿವಗಡದ ಶ್ರೀ ದುರ್ಗಾ ದೇವಿ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಿದ್ದ ದೇವಸ್ಥಾನ ವಿಶ್ವಸ್ಥರ ಸಭೆಯಲ್ಲಿ ಮಾತನಾಡುತ್ತಿದ್ದರು. ಮುಂದೆ ಅವರು ಈಗ ಎಲ್ಲ ನ್ಯಾಯಾಲಯ, ಪೊಲೀಸ್ ಠಾಣೆ, ಆಸ್ಪತ್ರೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅದರದ್ದೇ ಆದ ಡ್ರೆಸ್ ಕೋಡ್ ಇದೆ, ಹೀಗಿರುವಾಗ ದೇವಸ್ಥಾನಗಳಿಗೆ ಬರುವಾಗಲೂ ಜನರು ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಮತ್ತು ಈ ದೃಷ್ಟಿಕೋನದಿಂದ ಎಲ್ಲ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂದು ತಿಳಿಸಿದರು.
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಡಾ. ಪ್ರಣವ್ ಮಲ್ಯ ಮಾತನಾಡಿ, ರಾಜ್ಯದಲ್ಲಿ 1 ವರೆ ಲಕ್ಷಕ್ಕೂ ಅಧಿಕ ದೇವಸ್ಥಾನಗಳಿವೆ, ಅದರಲ್ಲಿ 34,000 ದೇವಸ್ಥಾನಗಳು ಸರಕಾರದ ಕೈಯಲ್ಲಿದೆ, ಸರಕಾರದ ಕೈಯಲ್ಲಿರುವ ಈ ದೇವಸ್ಥಾನಗಳ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಸರಕಾರವು ಈ ದೇವಸ್ಥಾನಗಳಲ್ಲಿ ಭಕ್ತರು ಭಕ್ತಿಯಿಂದ ದೇವರಿಗೆಂದು ನೀಡಿದ ಅರ್ಪಣೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆ. ಆದರೆ ದೇವಸ್ಥಾನದ ಅಭಿವೃದ್ಧಿಯಡೆಗೆ ದುರ್ಲಕ್ಷ್ಯವೇ ಕಂಡುಬರುತ್ತದೆ. ಇತರೆ ಯಾವುದೇ ಧಾರ್ಮಿಕ ಕೇಂದ್ರಗಳ ಮೇಲೆ ಸರಕಾರ ಕಣ್ಣು ಹಾಯಿಸುವುದಿಲ್ಲ. ಅನೇಕ ದೇವಸ್ಥಾನಗಳಲ್ಲಿ ಅಲ್ಲಿನ ಮೂಲ ಆಚಾರಗಳನ್ನು ಬದಿಗೊತ್ತಿ ದೇವಸ್ಥಾನದ ತೆರೆಯುವ ಸಮಯ, ಪೂಜೆಗೆ ಮಿತಿ, ದರ್ಶನಕ್ಕೆ ವಿಶೇಷ ಟಿಕೆಟ್ ಈ ರೀತಿಯ ಅನೇಕ ಬದಲಾವಣೆಗಳನ್ನು ಮಾಡಿ ಅಲ್ಲಿನ ಪಾರಂಪರಿಕ ಸಂಪ್ರದಾಯಕ್ಕೆ ಧಕ್ಕೆ ತರಲಾಗುತ್ತಿದೆ. ಇಂದು ಸಮಾಜದ ಅನೇಕ ಕ್ಷೇತ್ರಗಳಲ್ಲಿ ಅದರದ್ದೇ ಆದ ಸಂಘಟನೆಯಿದೆ, ಆದರೆ ದೇವಸ್ಥಾನಗಳ ಸಂಘಟನೆ ಇಲ್ಲ, ಆದ್ದರಿಂದ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ವು ಕಾರ್ಯ ಮಾಡುತ್ತಿದೆ. ದೇವಸ್ಥಾನಗಳನ್ನು ಸರಕಾರದ ಕಪಿಮುಷ್ಠಿಯಿಂದ ಬಿಡಿಸಲು ಮಹಾಸಂಘದ ಮೂಲಕ ಅನೇಕ ದೇವಸ್ಥಾನ ವಿಶ್ವಸ್ಥರು ಒಗ್ಗೂಡುತ್ತಿದ್ದಾರೆ ಎಂದರು.
ಸಭೆಯಲ್ಲಿ ಉಪಸ್ಥಿತ ದೇವಸ್ಥಾನ ವಿಶ್ವಸ್ಥರು !
ಈ ಸಭೆಯಲ್ಲಿ ಸನಾತನ ಧರ್ಮರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಾ. ಗಜೇಂದ್ರ. ಕೆ ನಾಯಕ್, ದುರ್ಗಾದೇವಿ ದೇವಸ್ಥಾನದ ಕಾರ್ಯದರ್ಶಿಗಳಾದ ಶ್ರೀ. ಲಿಂಗರಾಜ್ ಕಲ್ಲುಟ್ಕರ್ ಮತ್ತು ಅಧ್ಯಕ್ಷರಾದ ಶ್ರೀ. ಅನಿಲ್ ಕಲ್ಲುಟ್ಕರ್ ಜೊತೆಗೆ ದೇವಸ್ಥಾನ ಕಮಿಟಿಯ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯ ದೇವಸ್ಥಾನಗಳ ಸುವ್ಯವಸ್ಥಾಪನೆ ಮತ್ತು ಸಂಘಟನೆ ದೃಷ್ಟಿಯಿಂದ ಇದೇ ಜನವರಿ ೨೮, ೨೦೨೪ ರಂದು ಪ್ರಥಮವಾಗಿ ಕಾರವಾರ ತಾಲ್ಲೂಕು ಮಟ್ಟದಲ್ಲಿ ಎಲ್ಲ ದೇವಸ್ಥಾನ ಕಮಿಟಿಯ ಸದಸ್ಯರುಗಳ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದಲ್ಲಿ ದೇವಸ್ಥಾನ ವಿಶ್ವಸ್ಥರ ಅಧಿವೇಶನ ನಡೆಸುವುದೆಂದು ಎಲ್ಲರೂ ಒಕ್ಕೊರಲಿನಿಂದ ನಿಶ್ಚಯಿಸಿದರು. ದೇವಸ್ಥಾನ ಮಹಾಸಂಘವು ಈ ಮೂಲಕ ಎಲ್ಲ ದೇವಸ್ಥಾನ ವಿಶ್ವಸ್ಥರಿಗೆ ಈ ಸಭೆಗೆ ಸ್ವಾಗತಿಸುತ್ತಿದೆ.