ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ
ಎಡಗಡೆ ಯಿಂದ ಶ್ರೀ.ಅಪ್ಪಣ್ಣ ಹೀರಗಣ್ಣವರ,ದಾಜಿಬಾನ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಶ್ರೀ. ಭಾಸ್ಕರ ಜಿತೂರಿ,ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ಗುರುಪ್ರಸಾದ ಗೌಡ,ಗಾಯತ್ರಿ ತಪೋವನ ದೇವಸ್ಥಾನ ಕಮಿಟಿ ಅಧ್ಯಕ್ಷರು ಶ್ರೀ.ವಿನಾಯಕ ಆಕಳವಾಡಿ,ಶ್ರೀ.ಮಲ್ಲಪ್ಪ ಲಕ್ಕನಗೌಡರ ಶ್ರೀ.ಪ್ರಕಾಶ ಬೆಂಡಿಗೇರಿ.
ಹುಬ್ಬಳ್ಳಿ : ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಡಿಸೆಂಬರ್ 16 ಮತ್ತು 17 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ದೇವಸ್ಥಾನಗಳ ಅಧಿವೇಶನದ ನಂತರ ಜನವರಿ 4 ರಂದು ಹುಬ್ಬಳ್ಳಿಯ ದುರ್ಗಾದೇವಿ ದೇವಸ್ಥಾನದಲ್ಲಿ ದೇವಸ್ಥಾನ ವಿಶ್ವಸ್ಥರ ಪ್ರಥಮ ಸಮಲೋಚನಾ ಸಭೆಯನ್ನು ಕರೆಯಲಾಗಿತ್ತು. ಈ ಸಮಾಲೋಚನಾ ಸಭೆಯಲ್ಲಿ ದೇವಸ್ಥಾನಗಳ ವಿಶ್ವಸ್ಥರು ಪುರೋಹಿತರು ಮತ್ತು ಮಠಾಧಿಪತಿಗಳು ಸೇರಿದಂತೆ ಸರಿಸುಮಾರು 50 ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.ಈ ಸಮಾಲೋಚನಾ ಸಭೆಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಮಟ್ಟದ ದೇವಸ್ಥಾನಗಳ ಅಧಿವೇಶನವನ್ನು ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಅದೇ ರೀತಿಯಲ್ಲಿ ಸುಮಾರು 24 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಲು ದೇವಸ್ಥಾನ ವಿಶ್ವಸ್ಥರು ನಿರ್ಣಯವನ್ನು ತೆಗೆದುಕೊಂಡರು ಎಂದು ದೇವಸ್ಥಾನ ಮಹಾಸಂಘದ ಶ್ರೀ. ಗುರುಪ್ರಸಾದ್ ಗೌಡ ಇವರು ತಿಳಿಸಿದರು.
ನಂತರ ಅವರು ಮಾತನ್ನು ಮುಂದುವರಿಸಿ ಜನವರಿ 28 ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ದೇವಸ್ಥಾನ ಅಧಿವೇಶನದ ಪೂರ್ವಭಾವಿ ಸಿದ್ಧತೆಗಾಗಿ ಮತ್ತು ನಿಯೋಜನೆಗಾಗಿ ಬರುವ ಸಂಕ್ರಾಂತಿಯ ನಂತರ ಹುಬ್ಬಳ್ಳಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಮಾಜದ ದೇವಸ್ಥಾನಗಳ ಮತ್ತು ಮಠಗಳ ವಿಶ್ವಸ್ಥರು ಮತ್ತು ಸ್ವಾಮೀಜಿಗಳನ್ನು ಸೇರಿಸಿ ದೊಡ್ಡಮಟ್ಟದ ಪೂರ್ವಭಾವಿ ಸಭೆಯನ್ನು ಕರೆದು ಎಲ್ಲರ ಸಲಹೆಗಳನ್ನು ಕೇಳಿಕೊಂಡು ಅಧಿವೇಶನದ ನಿಯೋಜನೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಪರಿಷತ್ತಿನಲ್ಲಿ ಶ್ರೀ. ವಿನಾಯಕ ಆಕಳವಾಡಿ, ಶ್ರೀ. ಭಾಸ್ಕರ ಜಿತೂರಿ, ಶ್ರೀ. ಅಪ್ಪಣ್ಣಾ ಹಿರಗಣ್ಣವರ, ಶ್ರೀ. ಜಸ್ಮೇರ ಸಿಂಗ್ ಗಿಲ್ ಮತ್ತಿತರರು ಉಪಸ್ಥಿತರಿದ್ದರು.ಇಂದು ದೇಶದಲ್ಲಿನ ಅನೇಕ ದೇವಸ್ಥಾನಗಳು, ಗುರುದ್ವಾರ, ಚರ್ಚ್, ಮಸೀದಿ ಮತ್ತು ಇತರ ಪ್ರಾರ್ಥನಾ ಸ್ಥಳಗಳಲ್ಲಿ, ಖಾಸಗಿ ಕಂಪನಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ನ್ಯಾಯಾಲಯ, ಪೋಲೀಸ್ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಅದರ ಆಧಾರದಲ್ಲಿ ದೇವಸ್ಥಾನದ ಪಾವಿತ್ರ್ಯತೆ, ಶಿಷ್ಟಾಚಾರ, ಸಂಸ್ಕೃತಿ ಕಾಪಾಡುವುದಕ್ಕಾಗಿ, ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಭೆಯಲ್ಲಿ ರಾಜ್ಯದ 500 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರ ವಸ್ತ್ರಸಂಹಿತೆ ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಅವರು ಹೇಳಿದರು. ಅವರು ಹುಬ್ಬಳ್ಳಿಯ ಪ್ರೆಸ್ ಕ್ಲಬ್ ನಲ್ಲಿ ಅಯೋಜಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕರ್ನಾಟಕದ ಎಲ್ಲಾ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವುದಕ್ಕಾಗಿ ವ್ಯಾಪಕ ಅಭಿಯಾನ ನಡೆಸಿ ಶ್ರದ್ಧಾಳುಗಳಲ್ಲಿ ವಸ್ತ್ರ ಸಂಹಿತೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜೈನ್ ನ ಶ್ರೀ ಮಹಾಕಾಲೇಶ್ವರ ದೇವಸ್ಥಾನ, ಮಹಾರಾಷ್ಟ್ರದ ಶ್ರೀ ಘೃಣೆಶ್ವರ ದೇವಸ್ಥಾನ, ವಾರಾಣಸಿಯ ಶ್ರೀಕಾಶಿ ವಿಶ್ವೇಶ್ವರ ದೇವಸ್ಥಾನ, ಆಂಧ್ರ ಪ್ರದೇಶದ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನ, ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ಕನ್ಯಾಕುಮಾರಿಯ ಶ್ರೀ ಮಾತಾ ಮಂದಿರ ಹೀಗೆ ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಅನೇಕ ವರ್ಷಗಳಿಂದ ಭಕ್ತರಿಗಾಗಿ ಸಾತ್ತ್ವಿಕ ವಸ್ತ್ರ ಸಂಹಿತೆ ಜಾರಿಯಿದೆ. ಕರ್ನಾಟಕದಲ್ಲಿ ಮಾನ್ಯ ಧಾರ್ಮಿಕ ದತ್ತಿ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಸರಕಾರಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಅಳವಡಿಸಲು ಮನವಿ ನೀಡಲಾಗುವುದು. ತಮಿಳುನಾಡಿನಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯ ಅಲ್ಲಿಯ ದೇವಸ್ಥಾನಗಳನ್ನು ಪ್ರವೇಶ ಮಾಡಲು ಸಾತ್ತ್ವಿಕ ಉಡುಪು ಇರಬೇಕು ಎಂದು ಸಮ್ಮತಿಸಿದೆ ಮತ್ತು 01 ಜನವರಿ 2016 ರಿಂದ ಇಡೀ ರಾಜ್ಯದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದೆ ಎಂದರು. ಇದರ ಜೊತೆಗೆ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ತುಂಡು ಬಟ್ಟೆ ಅಥವಾ ಪಾಶ್ಚಾತ್ಯ ಉಡುಪಿನಲ್ಲಿ ಬರುವುದು ಇದು ವ್ಯಕ್ತಿ ಸ್ವಾತಂತ್ರ್ಯ ಆಗುವುದಿಲ್ಲ. ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ; ಆದರೆ ದೇವಸ್ಥಾನ ಒಂದು ಧಾರ್ಮಿಕ ಸ್ಥಳವಾಗಿದೆ ಮತ್ತು ಅಲ್ಲಿ ಧಾರ್ಮಿಕತೆಗೆ ತಕ್ಕಂತೆ ಆಚರಣೆ ಮಾಡಬೇಕಾಗುತ್ತದೆ. ಅಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕಲ್ಲದೆ ಧರ್ಮಾಚರಣೆಗೆ ಮಹತ್ವ ನೀಡಲಾಗುತ್ತದೆ ಎಂದು ಶ್ರೀ. ಗುರುಪ್ರಸಾದ್ ಗೌಡ ಹೇಳಿದರು.