Menu Close

ದಾವಣಗೆರೆಯಲ್ಲಿ ದೇವಸ್ಥಾನ ವಿಶ್ವಸ್ಥರ ಸಭೆ; ನಿಟ್ಟವಳ್ಳಿಯ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ !

ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ದೇವಸ್ಥಾನ ಸಂಸ್ಕೃತಿ ರಕ್ಷಣೆ ಅಭಿಯಾನ

ನಿಟ್ಟವಳ್ಳಿಯ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ

ದಾವಣಗೆರೆ : ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಡಿಸೆಂಬರ್ 16 ಮತ್ತು 17 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪರಿಷತ್ತು ನಡೆದಿತ್ತು. ಅಲ್ಲಿ ಪಾಲ್ಗೊಂಡ ಪ್ರತಿ ದೇವಸ್ಥಾನ ವಿಶ್ವಸ್ಥರು ತಮ್ಮ ತಮ್ಮ ಕ್ಷೇತ್ರದಲ್ಲಿ ದೇವಸ್ಥಾನಗಳ ರಕ್ಷಣೆ ಮತ್ತು ಸಂಸ್ಕೃತಿ ಸಂವರ್ಧನೆಗೆ ಮುಂದಾಗುತ್ತಿದ್ದಾರೆ. ದಾವಣಗೆರೆಯಲ್ಲಿ ದೇವಸ್ಥಾನ ಮಹಾಸಂಘದ ವತಿಯಿಂದ ಫೆಬ್ರವರಿ ೫ ರಂದು ಶಂಕರ ಮಠದಲ್ಲಿ ಕ್ಷೇತ್ರದ ವಿಶ್ವಸ್ಥರ ಸಭೆ ಕರೆಯಲಾಗಿತ್ತು.

ಈ ಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಮನ್ವಯಕರಾದ ಶ್ರೀ. ವಿಜಯ ರೇವಣಕರ್ ಇವರು ಮಾತನಾಡುತ್ತ ಸಧ್ಯ 34,500 ದೇವಸ್ಥಾನಗಳು ಮುಜರಾಯಿ ಇಲಾಖೆಯ ಆಧೀನದಲಿದ್ದು ಅದರಲ್ಲಿ ಕೇವಲ 500 ರಿಂದ 600 ದೇವಸ್ಥಾನಗಳಿಂದ 500 ಕೋಟಿಗೂ ಅಧಿಕ ಆದಾಯ ಬರುತ್ತಿದ್ದು, ಆ ಹಣವನ್ನು ಉಳಿದ 34 ಸಾವಿರ ದೇವಸ್ಥಾನಗಳ ಅಭಿವೃದ್ಧಿಗೆ ಬಳಸದೆ ಅನ್ಯಮತೀಯರ ಪ್ರಾರ್ಥನಾ ಸ್ಥಳಗಳಿಗೆ ಉದಾರವಾಗಿ ನೀಡುತ್ತಿದ್ದು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಅನ್ಯಾಯ ಮಾಡುತ್ತಿದೆ. ಇದನ್ನು ತಡೆಯಲು ಎಲ್ಲಾ ದೇವಸ್ಥಾನಗಳು ಸಂಘಟಿರಾಗಬೇಕು ಮತ್ತು ಎಲ್ಲಾ ದೇವಸ್ಥಾನಗಳು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕಿದೆ ಎಂದರು. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸಾಗರದಲ್ಲಿ ಇಂತಹ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಭೆ ನಡೆಸಲಾಗುವುದು ಎಂದರು.

ದಾವಣಗೆರೆಯ ದತ್ತಾತ್ರೇಯ ಟ್ರಸ್ಟಿನ ಅಧ್ಯಕ್ಷರಾದ ಶ್ರೀ. ರಾಘವೇಂದ್ರ ಅಂಗಡಿ ಮಾತನಾಡುತ್ತ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ದೇವಸ್ಥಾನಗಳ ಅಧಿವೇಶನ ನಂತರ ನಮ್ಮ ಜಿಲ್ಲೆಯಲ್ಲಿ ಈ ಪ್ರಥಮ ಸಭೆಯಿಂದಾಗಿ ನಮಗೆ ಪ್ರೇರಣೆ ಬಂದಿದ್ದು ಜಿಲ್ಲೆಯ ಸುತ್ತ ಮುತ್ತಲಿನ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರನ್ನು ಒಟ್ಟುಗೂಡಿಸಿ ಧರ್ಮ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಲು ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಈ ಧರ್ಮಕಾರ್ಯದಲ್ಲಿ ಸಮಾಜ ಬಾಂಧವರನ್ನು ಕರೆತರುವುದಾಗಿ ತಿಳಿಸಿದರು. ಈ ಸಭೆಯ ನಂತರ ಶ್ರೀ ಶಿವ ಚಿದಂಬರ ದೇವಸ್ಥಾನ ಅಧ್ಯಕ್ಷರಾದ ಶ್ರೀ. ಮೋಹನ್ ದೀಕ್ಷಿತ್ ದೇವಸ್ಥಾನದ ಆವರಣದಲ್ಲಿ ವಸ್ತ್ರ ಸಂಹಿತೆ ಫಲಕ ಅಳವಡಿಸಿ ಈ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಬ್ರಹ್ಮ ಚೈತನ್ಯ ಮಂದಿರದ ಅಧ್ಯಕ್ಷರಾದ ಶ್ರೀ. ಮಹಾಬಲೇಶ್ವರ ರಾವ್, ಹುಲ್ಲುಮನೆ ದುರ್ಗಾಂಬಿಕಾ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ಸುರೇಶ್ ಕುಮಾರ್, ದತ್ತಾತ್ರೇಯ ಮಂದಿರ ಅಧ್ಯಕ್ಷರಾದ ಶ್ರೀ. ನಾಗೇಂದ್ರಪ್ಪ ಸೇರಿದಂತೆ 30ಕ್ಕಿಂತ ಹೆಚ್ಚು ದೇವಸ್ಥಾನಗಳ 44 ವಿಶ್ವಸ್ಥರು, ಅರ್ಚಕರು ಉಪಸ್ಥಿತರಿದ್ದರು.

Related News