Menu Close

ದೇವಸ್ಥಾನಗಳು ಹಿಂದೂ ಸಂಸ್ಕಾರಗಳ ಶಿಕ್ಷಣ ಕೇಂದ್ರವಾಗಬೇಕು ! – ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಅರಮೇರಿ ಕಳಂಚೇರಿ ಮಠ, ಅರಮೇರಿ, ವಿರಾಜಪೇಟೆ

ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು ಯಶಸ್ವಿ ಸಂಪನ್ನ !

ಕುಶಾಲನಗರ : ಇಡೀ ಜಗತ್ತು ಕಣ್ಣು ತೆರೆಯದೆ ಇದ್ದಾಗ ಜಗತ್ತಿಗೆ ಧರ್ಮದ ಪರಿಕಲ್ಪನೆ ನೀಡಿದ್ದು ಭಾರತೀಯ ಬೌದ್ಧಿಕ ಶಕ್ತಿ, ನಮ್ಮ ಅಂತಃ ಚಕ್ಷುಗಳನ್ನು ಜಾಗೃತಗೊಳಿಸುವ ಶಕ್ತಿ ನಮ್ಮ ದೇವಸ್ಥಾನಗಳಿಗಿದೆ. ನಮ್ಮ ಧರ್ಮದ ಪರಿಕಲ್ಪನೆಯೇ ನಮ್ಮ ದೇಶದ ಮೂಲ ಆಧಾರವಾಗಿದೆ. ಇಂದು ಆಧುನಿಕ ಶಿಕ್ಷಣದ ಹಿಂದೆ ಬಿದ್ದು ಅತ್ಯಮೂಲ್ಯವಾದ ನಮ್ಮ ಋಷಿಮುನಿಗಳು ನೀಡಿರುವ ಪ್ರಾಚೀನ ಶಿಕ್ಷಣವನ್ನು ಕಳೆದುಕೊಳ್ಳಬಾರದು, ಹಾಗಾಗಿ ಮಕ್ಕಳಿಗೆ ಶಾಲಾ ಶಿಕ್ಷಣದೊಂದಿಗೆ ಹಿಂದೂ ಸಂಸ್ಕಾರಗಳ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ, ಈ ನಿಟ್ಟಿನಲ್ಲಿ ದೇವಾಲಯಗಳು ಪ್ರಮುಖ ಪಾತ್ರವನ್ನು ವಹಿಸಬೇಕು’ ಎಂದು ವಿರಾಜಪೇಟೆ ಅರಮೇರಿಯ ಶ್ರೀ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಪ್ರತಿಪಾದಿಸಿದರು. ಅವರು ಫೆಬ್ರವರಿ 23, 2024 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಹಾಗೂ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಕೊಡಗು ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. 400 ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಹಾಗೂ ದೇವಸ್ಥಾನಗಳ ಪ್ರತಿನಿಧಿಗಳು ಈ ಪರಿಷತ್ತಿನಲ್ಲಿ ಉಪಸ್ಥಿತರಿದ್ದರು. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಎಂ.ಕೆ ದಿನೇಶ್ ಹಾಗೂ ದೇವಸ್ಥಾನ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ್ ಗೌಡ ಇವರು ದೀಪ ಪ್ರಜ್ವಲನೆ ಮೂಲಕ ಪರಿಷತ್ತಿನ ಉದ್ಘಾಟನೆ ಮಾಡಿದರು.

ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಮುಂದೆ ಮಾತನಾಡಿ, `ದೇವಸ್ಥಾನಗಳು ಉಳಿದಲ್ಲಿ ಸಂಸ್ಕೃತಿ ಉಳಿಯಲು ಸಾಧ್ಯ, ನಮ್ಮ ದೇವಸ್ಥಾನಗಳು ಬೀಗ ಸಂಪ್ರದಾಯಕ್ಕೆ ಒಳಪಡದೆ ಸದಾ ತೆರೆದಿರಬೇಕು. ದೇವಸ್ಥಾನಗಳ ಜೀವಂತಿಕೆಯು ಒಗ್ಗಟ್ಟಿನ ಮೂಲಕ ಮಾತ್ರ ಸಾಧ್ಯವಾಗುತ್ತದೆ’ ಎಂದರು.

ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ನಮ್ಮ ಸಂಸ್ಕೃತಿಯ ಕೇಂದ್ರವಾಗಿದೆ ! – ಶ್ರೀ. ಎಂ.ಕೆ. ದಿನೇಶ್, ಅಧ್ಯಕ್ಷರು, ಕುಶಾಲನಗರ ದೇವಾಲಯಗಳ ಒಕ್ಕೂಟ

ಜನ್ಮ ಹಿಂದೂಗಳನ್ನು ಕರ್ಮ ಹಿಂದೂಗಳನ್ನಾಗಿ ಮಾಡುವ ಶಕ್ತಿ ನಮ್ಮ ದೇವಸ್ಥಾನಗಳಿಗಿದೆ. ನಾವು ವಿದೇಶಿ ಸಂಸ್ಕೃತಿಗೆ ಮಾರು ಹೋಗಬಾರದು,
ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದೂಗಳಿಗೆ ದೇವಸ್ಥಾನಕ್ಕೆ ಹೇಗೆ ಹೋಗಬೇಕು, ಯಾವ ರೀತಿ ನಮಸ್ಕಾರ ಮಾಡಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲದಾಗಿದೆ, ನಮ್ಮ ಧರ್ಮದ ಮೇಲಾಗುವ ಆಘಾತಗಳಿಗೆ ಪ್ರತಿರೋಧ ಸಹ ಮಾಡುವುದಿಲ್ಲ, ಹಾಗಾಗಿ ನಮ್ಮ ದೇವಸ್ಥಾನಗಳಲ್ಲಿ ವಾಚನಾಲಯಗಳನ್ನು ಸ್ಥಾಪಿಸಿ ಧರ್ಮಶಿಕ್ಷಣವನ್ನು ನೀಡುವ ಸೌಲಭ್ಯ ಒದಗಿಸಬೇಕು, ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ನಮ್ಮ ಸಂಸ್ಕೃತಿಯ ಕೇಂದ್ರವಾಗಿದೆ’ ಎಂದರು.

ದೇವಸ್ಥಾನಗಳು ಸದೃಢವಾಗಿದ್ದರೆ, ಧರ್ಮ, ರಾಷ್ಟ್ರ ಮತ್ತು ಸಮಾಜವು ಸದೃಢವಾಗಿರುತ್ತದೆ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ದೇವಸ್ಥಾನಗಳು ನಮ್ಮ ಧರ್ಮದ ಪ್ರಾಣವಾಗಿದೆ ಮತ್ತು ಧರ್ಮವು ರಾಷ್ಟ್ರದ ಪ್ರಾಣವಾಗಿದೆ. ಹಾಗಾಗಿ ದೇವಸ್ಥಾನಗಳು ಸದೃಢವಾಗಿದ್ದರೆ, ಧರ್ಮ, ರಾಷ್ಟ್ರ ಮತ್ತು ಸಮಾಜವು ಸದೃಢವಾಗಿರುತ್ತದೆ. ಅದಕ್ಕಾಗಿ ದೇವಸ್ಥಾನಗಳ ರಕ್ಷಣೆಗೆ ನಾವೆಲ್ಲರೂ ಸಂಘಟಿತರಾಗಬೇಕಿದೆ. ಸಂಘಟಿತರಾಗಿ ಹೋರಾಡಿದರೆ ಯಶಸ್ಸು ಖಂಡಿತ ಎಂಬುದು ರಾಮಮಂದಿರ ನಿರ್ಮಾಣದಿಂದ ಸಾಬೀತಾಗಿದೆ’ ಎಂದರು.

ದೇವಸ್ಥಾನಗಳಿಂದ ಪುರಾತನ ಕಾಲದಿಂದ ಹಿಂದೂ ಧರ್ಮದ ಸಂಸ್ಕೃತಿ ಉಳಿದಿದೆ ! – ಶ್ರೀ. ಚಂದ್ರ ಮೊಗವೀರ
ಸನಾತನ ಧರ್ಮದಲ್ಲಿ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಳಗಳಾಗಿವೆ. ದೇವಸ್ಥಾನಗಳೆಂದರೆ ದೇವರ ಅಸ್ತಿತ್ವ ಹಾಗೂ ಚೈತನ್ಯವಿರುವ ಕ್ಷೇತ್ರವಾಗಿದೆ. ದೇವಸ್ಥಾನಗಳನ್ನು ಆದರ್ಶ ರೀತಿಯಲ್ಲಿ ಹೇಗೆ ನಡೆಸಬೇಕು, ಯಾವ ರೀತಿ ನಮ್ಮ ದೇವಸ್ಥಾನವನ್ನು ಧಾರ್ಮಿಕ ಕೇಂದ್ರಬಿಂದುವಾಗಿ ಮಾಡಬೇಕು, ದೇವಸ್ಥಾನದಲ್ಲಿ ಸಾತ್ತ್ವಿಕ ಉಡುಪು ಧರಿಸುವುದರಿಂದ ಯಾವ ರೀತಿ ದೇವರ ಚೈತನ್ಯದ ಲಾಭವಾಗುವುದು ಹಾಗೂ ವಸ್ತ್ರ ಸಂಹಿತೆಯ ಬಗ್ಗೆ ತಿಳಿಸಿದರು.

ನಮ್ಮ ದೇವಸ್ಥಾನಗಳ ರಕ್ಷಣೆಗೆ ದೇವಸ್ಥಾನಗಳ ಮಹಾಸಂಘದ ಜೊತೆ ಕೈಜೋಡಿಸಿ ! – ಶ್ರೀ. ಮೋಹನ್ ಗೌಡ
ಕರ್ನಾಟಕದಲ್ಲಿ 34,000 ದೇವಸ್ಥಾನಗಳನ್ನು ಸರಕಾರ ನಿಯಂತ್ರಣ ಮಾಡುತ್ತಿದೆ. ಇದರಲ್ಲಿ ಹೆಚ್ಚಿನ ದೇವಸ್ಥಾನಗಳು ಅವ್ಯವಹಾರದ ಆಗರವಾಗಿದೆ. ಈ ದೇವಸ್ಥಾನಗಳನ್ನು ಸರಕಾರದ ಮುಷ್ಟಿಯಿಂದ ಹೊರ ತರಲು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ. ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಕಾರ್ಯಕ್ಕೆ ಮುಂದಾಗಿದ್ದು, ಅದರಲ್ಲಿ ತಾವೆಲ್ಲರೂ ಕೈ ಜೋಡಿಸಿ’ ಎಂದು ಕರೆ ನೀಡಿದರು.

ನಂತರ ದೇವಸ್ಥಾನಗಳ ನಿರ್ವಹಣೆಯಲ್ಲಿ ಬರುವ ಕಾನೂನು ಸಮಸ್ಯೆಗಳಿಗೆ ನುರಿತ ವಕೀಲರು ಕಾನೂನು ಸಲಹೆಗಳನ್ನು ನೀಡಿದರು. ಜಿಲ್ಲಾ ದೇವಸ್ಥಾನಗಳ ಮಹಾಸಂಘದ ಮುಂದಿನ ಕಾರ್ಯ ಯೋಜನೆ ಬಗ್ಗೆ ಗುಂಪು ಚರ್ಚೆ ನಡೆಯಿತು. ಈ ಗುಂಪು ಚರ್ಚೆಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನ ಸಮಿತಿಯಲ್ಲಿ ಅನ್ಯಮತಿಯರ ನೇಮಕಕ್ಕೆ ವಿರೋಧ, ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸುವುದು, ವಸ್ತ್ರ ಸಂಹಿತೆ ಅಳವಡಿಕೆ ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

Related News