ಬೆಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ‘ದೇಶ ವಿರೋಧಿ ಷಡ್ಯಂತ್ರ ಹಾಗೂ ಅರ್ಬನ್ ನಕ್ಸಲ್ ವಾದ’ ಕಾರ್ಯಕ್ರಮ ಯಶಸ್ವಿ ಸಂಪನ್ನ !
ಬೆಂಗಳೂರು : ಅರ್ಬನ್ ನಕ್ಸಲ್ ವಾದಿಗಳಿಗೆ ಸರಕಾರೇತರ ಸಂಸ್ಥೆಗಳಿಂದ ಅಸೀಮಿತ ಹಣ ಪೂರೈಸಲಾಗುತ್ತದೆ ಹಾಗೂ ವಿವಿಧ ರೀತಿಯಲ್ಲಿ ಸಹಾಯ ನೀಡಿ ಭಾರತವಿರೋಧಿ ಚಟುವಟಿಕೆಗಳು ನಡೆಯುತ್ತವೆ. ಹಲವಾರು ಯೂನಿವರ್ಸಿಟಿಗಳು ಸಹ ಈ ಅರ್ಬನ್ ನಕ್ಸಲ್ ವಾದಕ್ಕೆ ಸಹಕರಿಸುತ್ತಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾನಿಲಯಗಳು, ಕಲಾಕ್ಷೇತ್ರ, ಸಾಮಾಜಿಕ ಮಾಧ್ಯಮಗಳು ಎಲ್ಲೆಡೆಯೂ ತಮ್ಮ ಜಾಲವನ್ನು ಹರಡಿದ್ದಾರೆ. ಅಮೇರಿಕಾ ತನ್ನ ರಾಯಭಾರಿಗಳನ್ನು ಸಹ ಇಂತಹ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ, ಗೌರಿ ಲಂಕೇಶ್ ಭಾರತದ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದರು ಎಂದು ಅವರು ಯಾರೆಂದೇ ತಿಳಿಯದ ವಿದೇಶಿ ಜನ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿದ್ದಾರೆ, ಇದು ಸಹ ಈ ಅರ್ಬನ್ ನಕ್ಸಲ್ ವಾದದ ಹಿಡೆನ್ ಅಜೆಂಡವಾಗಿದೆ, ಇದರ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಹೋರಾಡಿದರೆ ಅವರನ್ನು ಹಿಮ್ಮೆಟ್ಟಿಸಲು ಸಾಧ್ಯವಿದೆ, ಭಾರತಕ್ಕೆ ಇದು ಮೊದಲ ಬಾರಿಯ ಆಕ್ರಮಣವಲ್ಲ, ಹಿಂದೆಯೂ ಅನೇಕ ಆಕ್ರಮಣಗಳು ನಡೆದಿವೆ, ಅದರಲ್ಲಿ ಜಯ ಸಾಧಿಸಿದ್ದೇವೆ, ಇಲ್ಲಿಯೂ ಸಂಘಟಿತ ಶಕ್ತಿ ಒಂದಾದರೆ ಜಯ ನಿಶ್ಚಿತ ಎಂದು ಯುವಾ ಬ್ರಿಗೇಡ್ ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸುಲಿಬೆಲೆ ಇವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಬುಧವಾರ, 4 ಸೆಪ್ಟೆಂಬರ್ ರಂದು ಬೆಂಗಳೂರಿನ ಮಾನಂದಿ ನಂಜುಂಡಿ ಸೆಟ್ಟಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ದೇಶ ವಿರೋಧಿ ಷಡ್ಯಂತ್ರ ಹಾಗೂ ಅರ್ಬನ್ ನಕ್ಸಲ್ ವಾದ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಲೆಫ್ಟ್ ಎಕೋಸಿಸ್ಟಮ್ ಅಂತ್ಯಗೊಳಿಸಲು ಹಿಂದೂ ಎಕೋಸಿಸ್ಟಮ್ ಅನಿವಾರ್ಯ !
– ಶ್ರೀ. ಚಂದ್ರ ಮೊಗವೀರ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಇಂದು ಸೋಶಿಯಲ್ ಮೀಡಿಯಾ, OTT, ಚಲನಚಿತ್ರಗಳಲ್ಲಿ ವ್ಯಾಪಕಾಗಿ ಅರ್ಬನ್ ನಕ್ಸಲ್ ವಾದ ಹರಡಲಾಗುತ್ತಿದೆ. ಇತಿಹಾಸವನ್ನೇ ತಿರುಚಿ ತೋರಿಸಲಾಗುತ್ತಿದೆ. ಜೊತೆಗೆ ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ನರೆಟಿವ್‌ಗಳನ್ನು ಸೆಟ್ ಮಾಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ದಾಖಲೆ ಪ್ರಕಾರ ನಕ್ಸಲರಿಂದ ಪೊಲೀಸರನ್ನೂ ಸೇರಿದಂತೆ 14,000ಕ್ಕೂ ಅಧಿಕ ಹತ್ಯೆಗಳು ನಡೆದಿವೆ. ಅನೇಕ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ ನಡೆದಿವೆ. ಆದರೆ ಇದರ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ಆಗುವುದಿಲ್ಲ, ಆದರೆ ತಥಾಕಥಿಕ ಬುದ್ಧಿಜೀವಿಗಳಾದ ದಾಭೋಲ್ಕರ್, ಪಾನಸರೆ, ಕಲಬುರ್ಗಿ, ಗೌರಿ ಲಂಕೇಶ ಇವರ ಹತ್ಯೆಗಳಾದಾಗ ದೇಶದಾದ್ಯಂತ ಇದರ ಬಗ್ಗೆ ಚರ್ಚೆ ನಡೆಯುತ್ತದೆ, ಇದು ಅರ್ಬನ್ ನಕ್ಸಲ್ ವಾದದ ಷಡ್ಯಂತ್ರವಾಗಿದೆ. ಇತ್ತೀಚೆಗೆ ‘IC814 ಕಂದಾಹಾರ ಹೈಜ್ಯಾಕ್’ ವೆಬ್ ಸಿರೀಸ್ ನಲ್ಲಿ ಆ ವಿಮಾನವನ್ನು ಹಿಂದೂಗಳು ಹೈಜ್ಯಾಕ್ ಮಾಡಿದ್ದರು ಎಂದು ತಿರುಚಿ ತೋರಿಸಲಾಗಿದ್ದು ಅಷ್ಟೇ ಅಲ್ಲದೆ ಇಡೀ ಸಿರೀಸ್ ನಲ್ಲಿ ಇನ್ನೂ ಅನೇಕ ಕಡೆ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಈ ರೀತಿ ವಿವಿಧ ಮಾಧ್ಯಮಗಳಿಂದ ಲೆಫ್ಟ್ ಎಕೋಸಿಸ್ಟಮ್ ಬಲಗೊಳ್ಳುತ್ತಿದ್ದು ಅದನ್ನು ಕೊನೆಗಾಣಿಸಲು ನಾವು ಹಿಂದೂ ಎಕೋಸಿಸ್ಟಮ್ ನ ಶಕ್ತಿ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗವೀರ ಇವರು ಕರೆ ನೀಡಿದರು.
ಕೊನೆಗೆ ಹಿರಿಯ ವಿಚಾರಕರು ಮತ್ತು ಮಾಜಿ ವಿಧಾನಸಭಾ ಸದಸ್ಯರಾದ ಡಾ. ಎಸ್. ಆರ್. ಲೀಲಾ ಮಾತನಾಡಿ ಮಹಾಭಾರತ ಕಾಲದಿಂದಲೂ ಈ ದೇಶದಲ್ಲಿ ಧರ್ಮ-ಅಧರ್ಮದ ನಡುವೆ ಸಂಘರ್ಷ ನಡೆಯುತ್ತಿದೆ. ಅಲ್ಲಿಯೂ ಕಪಟ ನೀತಿಯಿಂದ ಪಾಂಡವರ ಪರಾಜಯಕ್ಕೆ ಪ್ರಯತ್ನಿಸಲಾಗುತ್ತಿತ್ತು, ಆದರೆ ಭಗವಾನ್ ಶ್ರೀಕೃಷ್ಣನ ಕೃಪೆ ಮತ್ತು ಧರ್ಮವೀರರ ಸಂಘಟಿತ ಹೋರಾಟದಿಂದ ಧರ್ಮದ ವಿಜಯವಾಯಿತು, ಈಗಲೂ ಅರ್ಬನ್ ನಕ್ಸಲ್ ವಾದದಂತಹ ವೈಚಾರಿಕ ಯುದ್ಧ ನಡೆಯುತ್ತಿದೆ. ಜನತೆ ಧರ್ಮದ ಜಯವಾಗುವುದು ಎಂದು ತಮ್ಮಷ್ಟಕ್ಕೆ ಕೈಕಟ್ಟಿ ಕುಳಿತರೆ ಆಗುವುದಿಲ್ಲ. ಎಲ್ಲರೂ ಸಂಘಟಿತರಾಗಿ ಈ ವೈಚಾರಿಕ ಯುದ್ಧವನ್ನು ಗೆಲ್ಲಬೇಕಿದೆ, ಆಗಲೇ ರಾಷ್ಟ್ರವು ಉಳಿಯುವುದು ಎಂದರು. ಈ ಕಾರ್ಯಕ್ರಮದಲ್ಲಿ 250 ಕ್ಕೂ ಅಧಿಕ ಧರ್ಮಪ್ರೇಮಿ ಮತ್ತು ರಾಷ್ಟ್ರಪ್ರೇಮಿಗಳು ಭಾಗವಹಿಸಿದ್ದರು. ಸುಮಾರು 2000 ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಿದ್ದಾರೆ.