ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ !
ಬೆಂಗಳೂರು : ಮೂಡಲಪಾಳ್ಯದ ಸರಸ್ವತಿ ನಗರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿನ ಮಕ್ಕಳಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ’ಸಮಾಜ ಸಹಾಯ’ ಅಭಿಯಾನದ ಅಡಿಯಲ್ಲಿ ಸಂಸ್ಕಾರ ನೋಟ್ ಬುಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಾದ ಸೌ. ಸವಿತ ಕ್ಷಾತ್ರ ಇವರು ಮಕ್ಕಳಿಗೆ ನಾವು ಅಭ್ಯಾಸಕ್ಕಿಂತ ಮೊದಲು ದೇವರ ಪ್ರಾರ್ಥನೆಯನ್ನು ಮಾಡಿದರೆ ನಮ್ಮ ಸ್ಮರಣ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ. ನಾವು ಸುಸಂಸ್ಕಾರ ಬೆಳೆಸಿಕೊಳ್ಳುವುದರ ಮೂಲಕ ದೇಶಕ್ಕೆ ಒಳ್ಳೆಯ ಪ್ರಜೆಗಳಾಗುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಪ್ರಬೋಧನೆ ನೀಡಿದರು. ಈ ವೇಳೆ ಸಮಿತಿಯ ಕಾರ್ಯಕರ್ತರಾದ ಸೌ. ಶರಾವತಿ, ಸೌ. ಸಂಧ್ಯಾ, ಶ್ರೀಮತಿ ರಜನಿ, ಸೌ. ತೇಜಸ್ವಿನಿ, ಸೌ. ಪುಷ್ಪ, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯು ಕಳೆದ 22 ವರ್ಷಗಳಿಂದ ಸಮಾಜದಲ್ಲಿನ ಜನರಿಗೆ ರಾಷ್ಟ್ರಪ್ರೇಮ, ಧರ್ಮಜಾಗೃತಿಯ ಕಾರ್ಯವನ್ನು ಮಾಡುತ್ತಾ ಬಂದಿದೆ. ನೈತಿಕ ಮೌಲ್ಯಗಳಿಂದ ಭ್ರಷ್ಟವಾಗುತ್ತಿರುವ ಸಮಾಜಕ್ಕೆ ಧರ್ಮಶಿಕ್ಷಣದ ಮೂಲಕ ಧರ್ಮಪ್ರೇಮವನ್ನು ಜಾಗೃತಗೊಳಿಸುವ ಕಾರ್ಯವನ್ನು ಸಮಿತಿಯು ಮಾಡುತ್ತಿದೆ. ಈ ಸಂಸ್ಕಾರ ನೋಟ್ ಬುಕ್ಕಿನಲ್ಲಿ ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿಚೆನ್ನಮ್ಮ ರಂತಹ ವೀರ ವನಿತೆಯರ, ಛತ್ರಪತಿ ಶಿವಾಜಿ ಮಹಾರಾಜರು, ಶ್ರೀ ಕೃಷ್ಣ ದೇವರಾಯರಂತಹ ಧರ್ಮನಿಷ್ಠರು, ಆಯುರ್ವೇದ ಪಿತಾಮಹ ಚರಕ ಹಾಗೂ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ರಾಷ್ಟ್ರ ಪ್ರೇಮದ ಮಾಹಿತಿಗಳನ್ನು ಒಳಗೊಂಡಿದೆ.