Menu Close

ಹಿಂದೂ ಧರ್ಮದ ಆಧಾರ ಶಿಲೆಗಳಾಗಿರುವ ದೇವಸ್ಥಾನಗಳು !

ಪ್ರವೇಶ : ಸಾವಿರಾರು ವರ್ಷಗಳಿಂದ ಸನಾತನ ಹಿಂದೂ ಧರ್ಮದ ರಕ್ಷಣೆ, ಜೋಪಾಸನೆ ಹಾಗೂ ಸಂವರ್ಧನೆಯಲ್ಲಿ ದೇವಸ್ಥಾನಗಳ ಪಾತ್ರ ಅಸಾಧಾರಣವಾಗಿದೆ. ‘ಹಿಂದೂ’ ಶ್ರದ್ಧಾವಂತನಾಗಿರುತ್ತಾನೆ. ಅವನು ತನ್ನ ಎಲ್ಲ ದುಃಖಗಳನ್ನು ದೇವರಿಗೆ ಹೇಳಿ ತನ್ನ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾನೆ ಹಾಗೂ ‘ದೇವರೆ ಅಡಚಣೆಯಿಂದ ಹೊರಗೆ ತರುವನು’, ಎಂಬ ಶ್ರದ್ಧೆಯಿಂದ ಅವನ ಜೀವನ ನಡೆಸುವ ಆಸೆ ಚಿಗುರುತ್ತದೆ ! ಈ ರೀತಿ ದೇವಸ್ಥಾನಗಳಿಂದ ಹಿಂದೂಗಳಿಗೆ ಮಾನಸಿಕ ದೃಷ್ಟಿಯಲ್ಲಿ ಆಧಾರ ಸಿಗುವುದು ಮಾತ್ರವಲ್ಲ, ಆಧ್ಯಾತ್ಮಿಕ ದೃಷ್ಟಿಯಲ್ಲಿಯೂ ಚೈತನ್ಯದ ಲಾಭವಾಗುತ್ತದೆ. ಈ ಚೈತನ್ಯದಿಂದಲೆ ಲಕ್ಷಗಟ್ಟಲೆ ಹಿಂದೂಗಳು ಪ್ರತಿದಿನ ದೇವಸ್ಥಾನಗಳಿಗೆ ಅಥವಾ ತೀರ್ಥಕ್ಷೇತ್ರಗಳಿಗೆ ಆಕರ್ಷಿಸಲ್ಪಡುತ್ತಾರೆ. ವಿವಿಧ ನೈಸರ್ಗಿಕ ಆಪತ್ತುಗಳ ಸಮಯದಲ್ಲಿ ಹಿಂದೂಗಳಿಗೆ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳೆ ಆಧಾರವಾಗಿರುತ್ತವೆ. ಹೀಗಿರುವಾಗ ಬೇರೆ ಬೇರೆ ರಾಜ್ಯಗಳಲ್ಲಿನ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಸರಕಾರ ವಶಪಡಿಸಿಕೊಳ್ಳಲು ಪ್ರಯತ್ನಿಸುವುದೆಂದರೆ ಇದು ಹಿಂದೂಗಳ ಮಾನಸಿಕ, ಆಧ್ಯಾತ್ಮಿಕ ಹಾಗೂ ಆಪತ್ಕಾಲಿಕ ಆಧಾರವನ್ನು ಕಸಿದುಕೊಂಡಂತಾಗುತ್ತದೆ. ಅಷ್ಟು ಮಾತ್ರವಲ್ಲ, ಇದು ಹಿಂದೂ ಧರ್ಮದ ಮೇಲಿನ ಆಕ್ರಮಣವೇ ಆಗಿದೆ.

ದೇವಸ್ಥಾನಗಳ ಸಂಸ್ಕೃತಿ ರಕ್ಷಣೆಯ ಆವಶ್ಯಕತೆ !
ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಹಾಗೂ ಹೆಚ್ಚು ಸಾತ್ತ್ವಿಕತೆಯನ್ನು ಗ್ರಹಿಸಲು ದೇವಸ್ಥಾನಗಳಿಗೆ ಬರುವ ಭಕ್ತರು ವಸ್ತ್ರಸಂಹಿತೆಯನ್ನು ಪಾಲಿಸಬೇಕು. ಇತ್ತೀಚಿನ ದಿನಗಳಲ್ಲಿ ಅನೇಕರು ದೇವಾಲಯಕ್ಕೆ ಹೋಗುವಾಗ ಜೀನ್ಸ್, ಶಾರ್ಟ್ಸ ಇತ್ಯಾದಿ ಅಸಾತ್ವಿಕ ಉಡುಪು ಧರಿಸಿ ಹೋಗುತ್ತಾರೆ, ಇದರಿಂದ ಅವರಿಗೆ ದೇವಾಲಯದ ದರ್ಶನದ ಲಾಭ ಆಗುವುದಿಲ್ಲ, ಜೊತೆಗೆ ದರ್ಶನಕ್ಕೆಂದು ಬಂದ ಇತರ ಭಕ್ತರಿಗೂ ಅಡಚಣೆಯುಂಟಾಗಬಹುದು, ಆದ್ದರಿಂದ ಕರ್ನಾಟಕ ದೇವಸ್ಥಾನ ಮಹಾಸಂಘವು ಈ ವಿಷಯದಲ್ಲಿ ಮುಂದಾಳತ್ವ ವಹಿಸಿ ಕಾರ್ಯ ಮಾಡುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಈ ರಾಜ್ಯಗಳಲ್ಲಿ ದೇವಸ್ಥಾನಗಳ ಸಂಸ್ಕೃತಿ ರಕ್ಷಣೆಯ ಉದ್ದೇಶದಿಂದ ಅಭಿಯಾನಗಳನ್ನು ಹಮ್ಮಿಕೊಳ್ಳಲಾಯಿತು. ರಾಜ್ಯಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ದೇವಸ್ಥಾನ ಅಧಿವೇಶನಗಳು ನೆರವೇರಿದವು. ಈ ಅಧಿವೇಶನಗಳ ಮೂಲಕ ವಸ್ತ್ರಸಂಹಿತಾ ಅಭಿಯಾನಕ್ಕೆ ಹೆಚ್ಚು ಚಾಲನೆ ಸಿಕ್ಕಿತು. ದೇವಸ್ಥಾನ ಮಹಾಸಂಘದ ವತಿಯಿಂದ ವಸ್ತ್ರಸಂಹಿತೆಯ ‘ಫಲಕ’ಗಳನ್ನು ತಯಾರಿಸಿ ಎಲ್ಲ ದೇವಸ್ಥಾನಗಳಿಗೆ ತಲುಪಿಸಲಾಯಿತು. ಅದರ ಪರಿಣಾಮದಿಂದ ಕಳೆದ 6 ತಿಂಗಳ ಅವಧಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಒಟ್ಟು 670 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅನ್ವಯಿಸಲಾಗಿದೆ. ಇದೆಲ್ಲವೂ ಕೇವಲ ಹಿಂದುತ್ವನಿಷ್ಠರ ಸಂಘಟಿತ ಪ್ರಯತ್ನದ ಫಲವಾಗಿದೆ. ಇದರಲ್ಲಿ ಆದಿಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾರದಾ ಪೀಠ, ಸುಪ್ರಸಿದ್ಧ ಶ್ರೀ ಕ್ಷೇತ್ರ ಹಂಪಿ ವಿರೂಪಾಕ್ಷ ದೇವಸ್ಥಾನ, ಪುರಿಯ ಜಗನ್ನಾಥ ದೇವಸ್ಥಾನ, ಉಜ್ಜೈನ್‌ನಲ್ಲಿನ ಮಹಾಕಾಳೇಶ್ವರ ದೇವಸ್ಥಾನ, ಮಹಾರಾಷ್ಟ್ರದ 6 ನೇ ಜ್ಯೋತಿರ್ಲಿಂಗ ಶ್ರೀ ಭಿಮಾಶಂಕರ ದೇವಸ್ಥಾನ, ಅಷ್ಟವಿನಾಯಕನ ದೇವಸ್ಥಾನಗಳು, ಇಂತಹ ದೇವಸ್ಥಾನಗಳ ಸಮಾವೇಶವಿದೆ. ಮಹೇಶ್ವರಿ ಸಮಾಜದ ದೇವಸ್ಥಾನಗಳು ಕೂಡ ಸ್ವಯಂಪ್ರೇರಣೆಯಿಂದ ವಸ್ತ್ರಸಂಹಿತೆಯನ್ನು ಕಾರ್ಯಗತಗೊಳಿಸಿವೆ. ಅಯೋಧ್ಯೆಯಲ್ಲಿನ ಶ್ರೀರಾಮನದೇವಸ್ಥಾನದಲ್ಲಿಯೂ ಈಗ ವಸ್ತ್ರಸಂಹಿತೆಯನ್ನು ಅನ್ವಯಗೊಳಿಸುವ ವಿಚಾರ ನಡೆಯುತ್ತಿದೆ. ವಸ್ತ್ರಸಂಹಿತೆಯ ಅಭಿಯಾನ ಆರಂಭವಾದ ನಂತರ ಅದಕ್ಕೆ ದೇವಸ್ಥಾನಗಳಿಂದ ಉತ್ತಮ ಸ್ಪಂದನೆ ದೊರಕಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಒಂದೇ ದಿನ 72 ದೇವಸ್ಥಾನಗಳಲ್ಲಿ, ರತ್ನಾಗಿರಿಯಲ್ಲಿ ಒಂದೇ ದಿನ 51 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅನ್ವಯಿಸಲಾಯಿತು.

ಸಾಮ್ಯವಾದಿ ವಿಚಾರದವರು (ಬುದ್ಧಿವಾದಿಗಳೆಂದು ಹೇಳಿಸಿಕೊಳ್ಳುವವರು) ವಸ್ತ್ರಸಂಹಿತೆಯನ್ನು ವಿರೋಧಿಸುತ್ತಿದ್ದಾರೆ. ಅನಾವಶ್ಯಕ ಟೀಕೆ ಹಾಗೂ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಅಭಿವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಕೆಲವರು ವಿರೋಧಿಸುತ್ತಾರೆ. ಅವರು ಗಮನದಲ್ಲಿಡಬೇಕಾದ ಅಂಶವೆಂದರೆ, ಅಭಿವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳ ಪರಂಪರೆಯನ್ನು ಕೆಡಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಓಡಾಡುವಾಗ ಸಮಾಜದ ನೀತಿನಿಯಮಗಳಿಗನುಸಾರ ವರ್ತಿಸಬೇಕು.

ದೇವಸ್ಥಾನಗಳ ರಕ್ಷಣೆಗೆ ನಿರಂತರ ಕಟಿಬದ ದೇವಸ್ಥಾನ ಮಹಾಸಂಘ !

ಡಿಸೆಂಬರ್ 2023 ರ ಮಾರ್ಗಶಿರ ಹುಣ್ಣಿಮೆಯಂದು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ ಅಂಧಕಾಸುರನ ಸಂಹಾರ ಧಾರ್ಮಿಕ ಕಾರ್ಯಕ್ರಮವನ್ನು ನೆರೆವೇರಿಸುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದರು. ಈ ಕುರಿತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ದೇವಸ್ಥಾನ – ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಮಾನ್ಯ ಗೃಹ ಸಚಿವ ಜಿ. ಪರಮೇಶ್ವರ್ ಇವರಿಗೆ ಮನವಿ ನೀಡಲಾಯಿತು. ಜೊತೆಗೆ ಈ ವಿರುದ್ಧ ರಾಜ್ಯವ್ಯಾಪಿ ಆಂದೋಲನಗಳನ್ನೂ ನಡೆಸಲಾಯಿತು. ಅದೇ ರೀತಿ ತುಮಕೂರು ಜಿಲ್ಲೆಯ ನಿಟ್ಟೂರಿನ ಪುರದಲ್ಲಿ 800 ವರ್ಷದ ಪ್ರಾಚೀನ ಚೋಳರ ಕಾಲದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿ ಸುಟ್ಟು ಹಾಕಿದ್ದರು. ಈ ಘಟನೆ ಕುರಿತು ದೇವಸ್ಥಾನ ಮಹಸಂಘ ಕೃತ್ಯದ ಹಿಂದಿರುವ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತುಮಕೂರಿನ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಹೀಗೆ ದೇವಸ್ಥಾನ ಮಹಾಸಂಘವು ದೇವಸ್ಥಾನಗಳ ಸಂದರ್ಭದಲ್ಲಿ ಯಾವುದೇ ಘಟನೆಗಳು ಗಮನಕ್ಕೆ ಬಂದರೆ ಕೂಡಲೇ ಕಾರ್ಯಪ್ರವೃತ್ತವಾಗುತ್ತಿದೆ. ಇನ್ನು ದೇವಸ್ಥಾನ ವಿಶ್ವಸ್ಥರು ಮತ್ತು ಭಕ್ತರಲ್ಲಿ ನಿರಂತರ ಧರ್ಮಜಾಗೃತಿ ಮೂಡಿಸಲು ದೀಪಾವಳಿಯಂತಹ ಹಬ್ಬಗಳ ಸಮಯದಲ್ಲಿ ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ ಇಂತಹ ವಿಶೇಷ ಅಭಿಯಾನಗಳನ್ನು ಸಹ ಹಮ್ಮಿಕೊಳ್ಳಲಾಗಿದೆ.

ದೇವಸ್ಥಾನ ಮಹಾಸಂಘಕ್ಕೆ ಸಿಕ್ಕಿದ ಯಶಸ್ಸು
1. ಡಿಸೆಂಬರ 2023 ರಲ್ಲಿ ಕರ್ನಾಟಕ ರಾಜ್ಯದ ದೇವಸ್ಥಾನ ಪರಿಷತ್ತಿನ ಸಮಯದಲ್ಲಿ ಕಾಂಗ್ರೆಸ್ ಸರಕಾರ ಇನ್ನೂ ಕೆಲವು ಹೊಸ ದೇವಸ್ಥಾನಗಳ ಸರಕಾರೀಕರಣ ಮಾಡಲು ಪ್ರಯತ್ನಿಸುತ್ತಿರುವಾಗ ಅದರ ವಿರುದ್ಧ ನಿಷೇಧ ಪ್ರಸ್ತಾಪ ಮಂಡಿಸಲಾಯಿತು, ಆಗ ಕಾಂಗ್ರೆಸ್ಸಿನ ಸಚಿವ ರಾಮಲಿಂಗ ರೆಡ್ಡಿ ಇವರಿಗೆ ತಕ್ಷಣ ಮಾಧ್ಯಮಗಳ ಮುಂದೆ ಹೋಗಿ ಕಾಂಗ್ರೆಸ್ ಸರಕಾರದ ಅಂತಹ ಯಾವುದೇ ಪ್ರಸ್ತಾಪವಿಲ್ಲವೆಂಬ ಸ್ಪಷ್ಟೀಕರಣ ನೀಡಬೇಕಾಯಿತು, ಇದು ದೇವಸ್ಥಾನ ಸಂಘಟನೆಯ ಪ್ರಭಾವವಾಗಿದೆ. ಅನಂತರ ಕಾಂಗ್ರೆಸ್ ಸರಕಾರ ದೇವಸ್ಥಾನಗಳ ಉತ್ಪನ್ನದ ಮೇಲೆ ಶೇ. 10 ರಷ್ಟು ತೆರಿಗೆ ಹೇರುವ ಒಂದು ಮಸೂದೆಯನ್ನು ಸಲ್ಲಿಸಿತು. ಅದಕ್ಕೂ ಪ್ರಖರವಾಗಿ ವಿರೋಧಿಸಿದ ನಂತರ ಸರಕಾರದ ಆ ಮಸೂದೆಯು ವಿಧಾನ ಪರಿಷತ್ತಿನಲ್ಲಿ ಅಸ್ವೀಕಾರವಾಯಿತು ಹಾಗೂ ರಾಜ್ಯಪಾಲರೂ ಆ ಮಸೂದೆಗೆ ಸಹಿ ಹಾಕದೆ ಹಿಂತಿರುಗಿಸಿದರು. ಇದರಿಂದ, ದೇವಸ್ಥಾನಗಳ ವಿಶ್ವಸ್ತರು, ಪುರೋಹಿತರು, ಭಕ್ತರು ಎಲ್ಲರೂ ಸಂಘಟಿತರಾಗಿದ್ದರೆ, ಕಾಂಗ್ರೆಸ್ ಪಕ್ಷಕ್ಕೂ ದೇವಸ್ಥಾನಗಳ ವಿರುದ್ಧ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಸಿದ್ಧವಾಗುತ್ತದೆ.
2. ಭಕ್ತರಿಗೆ ಹಿಂದೂ ಧರ್ಮದ ಶಿಕ್ಷಣ ಸಿಗಬೇಕೆಂದು, ಅನೇಕ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ಫಲಕಗಳನ್ನು ಹಚ್ಚಲು ಪ್ರಾರಂಭಿಸಲಾಗಿದೆ ಹಾಗೂ ಕೆಲವು ದೇವಸ್ಥಾನಗಳಲ್ಲಿ ಧರ್ಮಗ್ರಂಥಗಳ ಉಚಿತ ವಾಚನಾಲಯಗಳನ್ನು ಆರಂಭಿಸಲಾಗಿದೆ.
3. ದೇವಸ್ಥಾನಗಳಲ್ಲಿ ಗಿಡ್ಡ, ಅಶ್ಲೀಲ ಉಡುಪುಗಳನ್ನು ಧರಿಸಿ ಪ್ರವೇಶ ಮಾಡುವುದನ್ನು ನಿಲ್ಲಿಸುವ ದೃಷ್ಟಿಯಲ್ಲಿ ‘ವಸ್ತ್ರಸಂಹಿತೆ’ (ಪಾರಂಪರಿಕ ವಸ್ತ್ರ) ಅನ್ವಯಗೊಳಿಸಲು ಪ್ರಯತ್ನ ಮಾಡಲಾಗಿದೆ. ಅನೇಕ ದೇವಸ್ಥಾನಗಳು ಹಾಗೂ ಭಕ್ತರು ಅದನ್ನು ಸ್ವಾಗತಿಸಿದ್ದು ಇಂದು ಸುಮಾರು 650 ಕ್ಕಿಂತಲೂ ಹೆಚ್ಚು ದೇವಸ್ಥಾನಗಳ ಹೊರಗೆ ವಸ್ತ್ರಸಂಹಿತೆಯ ಪಾಲನೆ ಮಾಡಲು ಸೂಚನೆ ನೀಡುವ ಫಲಕ ಹಚ್ಚಲಾಗಿದೆ.

ಮತ್ತೊಮ್ಮೆ ಸಮಸ್ತ ದೇವಸ್ಥಾನ ವಿಶ್ವಸ್ಥರ ಸಂಘಟನೆಯ ಪ್ರಯತ್ನ !

ಕರ್ನಾಟಕ ದೇವಸ್ಥಾನ ಮಹಾಸಂಘವು ಪ್ರಾರಂಭಿಸಿದ ದೇವಸ್ಥಾನಗಳ ಸಂಸ್ಕೃತಿ ರಕ್ಷಣೆಯ ಅಭಿಯಾನಕ್ಕೆ ಅತ್ಯಂತ ಕಡಿಮೆ ಕಾಲಾವಧಿಯಲ್ಲಿಯೇ ಅಭೂತಪೂರ್ವ ಯಶಸ್ಸು ಸಿಕ್ಕಿದ್ದನ್ನು ನಾವು ಗಮನಿಸಿದೆವು. ಇದೀಗ ಮತ್ತೊಮ್ಮೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಜನವರಿ 4 ಮತ್ತು 5 2025 ರಂದು ರಾಜ್ಯ ಮಟ್ಟದ ಅಧಿವೇಶನವನ್ನು ಆಯೋಜಿಸಲಾಗಿದೆ. ಈ ಬಾರಿ ಸರಿ ಸುಮಾರು 1000 ದೇವಸ್ಥಾನ ಅರ್ಚಕರು, ವಿಶ್ವಸ್ಥರು ಈ ಅಧಿವೇಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಅಧಿವೇಶನದಲ್ಲಿ ಹರಿಹರಪುರ ಮಠದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿಯವರು, ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಆಯುಕ್ತರಾದ ಶ್ರೀ. ನಂದಕುಮಾರ್, ದೇವಾಲಯಗಳ ರಕ್ಷಣೆಗಾಗಿ ನಿರಂತರ ಶ್ರಮಿಸುವ ಹಿರಿಯ ವಕೀಲರಾದ ಶ್ರೀ. ಅರುಣ ಶಾಮ್, ದೇವಸ್ಥಾನ ಮಹಾಸಂಘದ ರಾಷ್ಟ್ರೀಯ ಸಂಘಟಕರಾದ ಶ್ರೀ. ಸುನೀಲ ಘನವಟ ಮತ್ತಿತರ ಗಣ್ಯರು ಮಾರ್ಗದರ್ಶನ ಮಾಡಲಿದ್ದಾರೆ. ನಾಡಿನ ಸಮಸ್ತ ಜನತೆಯ ಮನೆ ಮೆನೆಗೆ ಈ ಅಧಿವೇಶನ ತಲುಪಿಸಲು HJSKarnataka ಈ ಯೂಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರ ಮಾಡಲಾಗುತ್ತಿದೆ. ಎಲ್ಲರೂ ಕುಟುಂಬಸಮೇತರಾಗಿ ವೀಕ್ಷಣೆ ಮಾಡಬೇಕೆಂದು ವಿನಂತಿ

Related News