ಹಿಂದೂ ಶಬ್ದ ಅಪಮಾನಾತ್ಮಕ, ಹೀನ, ದೂಷಣೆಗೆ ಒಳಗಾದವನು ಹಿಂದೂ (ಅಂತೆ) !
ಶ್ರೀ. ಮೋಹನ ಗೌಡ,ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಪದೇ ಪದೇ ಹಿಂದೂ ಸಮಾಜವನ್ನು ಕೆಣಕಲು ಯತ್ನಿಸುವ ಧರ್ಮವಿರೋಧಿ ಪ್ರೊ. ಭಗವಾನ್ ಮತ್ತೊಮ್ಮೆ ಹಿಂದೂ ಧರ್ಮದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ರಾಯಚೂರು ಬಳಿ ಆಯೋಜಿಸಿದ್ದ 3 ದಿನಗಳ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿ ‘ಕಾಶ್ಮೀರದ ಶೈವ ಗ್ರಂಥಗಳಲ್ಲಿ ಹಿಂದೂ ಪದಕ್ಕೆ ಯಾರು ಹೀನರಾಗಿದ್ದಾರೆಯೋ, ಯಾರು ದೂಷಣೆಗೆ ಒಳಗಾಗಿದ್ದಾರೆಯೋ ಅವರು ಹಿಂದೂಗಳು, ಹಾಗಾಗಿ ಹಿಂದೂ ಅನ್ನೋ ಶಬ್ದ ಬಹಳ ಅಪಮಾನಕರವಾಗಿದೆ. ರಾಮಾಯಣ, ಮಹಾಭಾರತ, ಪುರಾಣ, ವೇದ ಗ್ರಂಥಗಳಲ್ಲಿ ಹಿಂದೂ ಅನ್ನೋ ಹೆಸರಿಲ್ಲ ಎಂದು ಹೇಳಿದ್ದಾರೆ’ ! ಪ್ರೊ. ಭಗವಾನ್ ರವರ ಈ ಹೇಳಿಕೆಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರ ಶಬ್ದಗಳಲ್ಲಿ ಖಂಡಿಸುತ್ತದೆ.
ಪುರಾಣಗಳಲ್ಲಿರುವ ‘ಹಿಂದೂ’ ಶಬ್ದದ ಉಲ್ಲೇಖ !
ವಾಸ್ತವದಲ್ಲಿ ಎಂಟನೇ ಶತಮಾನದಲ್ಲಿ ರಚಿಸಲಾದ ಮೇರುತಂತ್ರ ಎಂಬ ಶೈವ ಗ್ರಂಥದಲ್ಲಿ ‘ಹೀನಶ್ಚ ದೂಷಯಪ್ಯೇವ ಸ ಹಿನ್ದುರಿತ್ಯುಚ್ಯತೇ ಪ್ರಿಯೇ’ ಅಂದರೆ ಹೀನ ಕರ್ಮ ಮತ್ತು ಗುಣಗಳನ್ನು ತ್ಯಜಿಸುವವನು ಹಿಂದೂ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಪಾಣಿನೀಯ ಶಬ್ದಕಲ್ಪದ್ರುಮದಲ್ಲಿ ‘ಹೀನಂ ದೂಷಯತಿ ಇತಿ ಹಿನ್ದು ಜಾತಿ ವಿಶೇಷಃ’ ಎಂದು ಹೇಳಿದ್ದಾರೆ, ಇದರರ್ಥ ಹೀನತೆಯನ್ನು ತ್ಯಾಗ ಮಾಡುವವನು ಎಂದಾಗಿದೆ. ಇನ್ನೂ ಹೇಳಬೇಕೆಂದರೆ ಪಾರಿಜಾತ ಹರಣ, ಮಾಧವ ದಿಗ್ವಿಜಯ, ಋಗ್ವೇದದಂತಹ ಅನೇಕ ಸಾನತನ ಧರ್ಮದ ಪ್ರಾಚೀನ ಗ್ರಂಥಗಳಲ್ಲಿ ಹಿಂದೂ ಶಬ್ದದ ಸ್ಪಷ್ಟ ಉಲ್ಲೇಖವಿದೆ. ಇದೇ ವಾಕ್ಯಗಳನ್ನು ತಿರುಚಿ ಪ್ರೊ. ಭಗವಾನ್ ರವರು ಹಿಂದೂ ಸಮಾಜದ ಬಗ್ಗೆ ತಮ್ಮ ದ್ವೇಷಪೂರಿತ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ !
ಪುರಾಣ ಗ್ರಂಥಗಳನ್ನು ಉಲ್ಲೇಖಿಸಿ ತಿರುಚಿದ ಹೇಳಿಕೆ ನೀಡುತ್ತಿರುವ ಪ್ರೊ. ಭಗವಾನ್
ಧರ್ಮಶಾಸ್ತ್ರ ಮತ್ತು ಪುರಾಣಗಳ ಸರಿಯಾದ ಅಧ್ಯಯನವಿಲ್ಲದೆ ದ್ವೇಷಪೂರಿತ ಹೇಳಿಕೆಗಳನ್ನು ನೀಡುವ ಭಗವಾನ್ ರವರ ಬಳಿ ಈ ಮೇಲಿನ ಉಲ್ಲೇಖಗಳ ಬಗ್ಗೆ ಉತ್ತರವಿದೆಯೇ ಎಂಬುದು ನಮ್ಮ ಪ್ರಶ್ನೆ. ಹಿಂದೂ ಸಮಾಜ ಸಹಿಷ್ಣುವಾಗಿದೆ ಎಂದು ಇಂತಹ ಧರ್ಮವಿರೋಧಿಗಳು ಪದೇ ಪದೇ ಕೆಣಕಲು ಪ್ರಯತ್ನಿಸುತ್ತಾರೆ. ಪ್ರೊ. ಭಗವಾನ್ ರವರು ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲ ಬಾರಿಯಲ್ಲ, ಹಿಂದೂಗಳ ಶ್ರದ್ಧಾಸ್ಥಾನ ಪ್ರಭು ಶ್ರೀರಾಮ, ಮಾತೆ ಸೀತೆ ಹೀಗೆ ಹಿಂದೂ ದೇವತೆಗಳ ಬಗ್ಗೆಯೂ ಅನೇಕ ಬಾರಿ ಪ್ರೊ. ಭಗವಾನ್ ಇವರು ಅಪಮಾನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆದರೂ ಇದುವೆರೆಗೆ ಅವರ ಮೇಲೆ ಯಾವುದೇ ಕ್ರಮಗಳಾಗದಿರುವುದು ಪ್ರಶ್ನಾರ್ಥಕವಾಗಿದೆ. ಹಾಗಾಗಿ ಮತ್ತೊಮ್ಮೆ ರಾಜ್ಯ ಸರಕಾರವು ಪ್ರೊ. ಭಗವಾನ್ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಹಿಂದೂ ಸಮಾಜದ ಪರವಾಗಿ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುತ್ತದೆ.