ಚಿತ್ರದುರ್ಗದ ಕೋಟೆಯನ್ನು ೧೦ನೇ ಶತಮಾನದಿಂದ ಹಿಡಿದು ೧೮ನೇ ಶತಮಾನದ ವರೆಗೆ ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಂಸ್ಥಾನ ಮುಂತಾದ ಅನೇಕ ಮಹಾನ ಸಂಸ್ಥಾನಗಳಿಂದ ಕಟ್ಟಲ್ಪಟ್ಟಿತು. ಈ ಕೋಟೆಯಲ್ಲಿ ಏಳು ಭದ್ರವಾದ ಕಲ್ಲಿನ ಕೋಟೆಗಳನ್ನು ನಿರ್ಮಿಸಲಾಗಿದೆ. ಈ ಕೋಟೆಯಲ್ಲಿ ಅನೇಕ ನೀರಿನ ಕೊಳಗಳನ್ನು ಒಂದಕ್ಕೊಂದು ಜೋಡಿಸಲಾಗಿದೆ ಮತ್ತು ಮಳೆ ನೀರು ಸಂಗ್ರಹ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಇಲ್ಲಿ ನೀರಿಗೆ ಎಂದಿಗೂ ತೊಂದರೆಯಾಗುವುದಿಲ್ಲ. ಮದಕರಿ ನಾಯಕನ ಕಾಲದಲ್ಲಿ ಹೈದರಾಲಿಯ ಸೈನಿಕರು ಕೋಟೆಯ ಕಿಂಡಿಯಿಂದ ನುಗ್ಗಲು ಯತ್ನಿಸಿದರು. ಇದನ್ನು ನೋಡಿದ ಅಲ್ಲಿನ ಕಾವಲುಗಾರನ ಪತ್ನಿ ಓಬವ್ವ ಒನಕೆಯಿಂದ ಒಳ ನುಸುಳುತ್ತಿದ್ದ ಸೈನಿಕರನ್ನು ಹೊಡೆದು ಸಾಯಿಸಿದಳು. ಈಗಲೂ ಅಲ್ಲಿ ಈ ಕಿಂಡಿಯನ್ನು ಓಬವ್ವನ ಕಿಂಡಿ ಎಂದು ಕರೆಯಲಾಗುತ್ತದೆ ಮತ್ತು ಕೋಟೆಯನ್ನು ಶತ್ರುಗಳಿಂದ ರಕ್ಷಿಸಲು ತನ್ನ ಪ್ರಾಣವನ್ನೂ ಪಣಕ್ಕಿಟ್ಟು ಧೈರ್ಯ ಮೆರೆದ ಓಬ್ಬವ್ವ ಒನಕೆ ಓಬ್ಬವ್ವ ಎಂದು ಇತಿಹಾಸ ಪ್ರಸಿದ್ಧಳಾಗಿದ್ದಾಳೆ.