‘ಪ್ರತಿಯೊಬ್ಬರೂ ಕೂಡ ಸೂರ್ಯೋದಯದ ಮುಂಚೆ ಎದ್ದೇಳಬೇಕೆಂದು’ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ; ಆದರೆ ಇತ್ತೀಚಿಗೆ ಮಕ್ಕಳು ಅಧ್ಯಯನ ಅಥವಾ ಇನ್ಯಾವುದಾದರೂ ಕಾರಣದಿಂದ ತಡ ರಾತ್ರಿಯ ತನಕ ಕುಳಿತುಕೊಂಡು ಬೆಳಗ್ಗೆ ೮-೯ ಗಂಟೆಗೆ ಎದ್ದೇಳುವ ಕೆಟ್ಟ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಜಾಗರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹಾನಿಕಾರಕವಾಗಿದೆ. ಇದಕ್ಕಿಂತ ರಾತ್ರಿ ಬೇಗ ಮಲಗಿ ಮತ್ತು ಬೆಳಗ್ಗೆ ಬೇಗ ಎದ್ದೇಳುವುದರಿಂದ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ ಎಂದು ಹೇಳಲಾಗಿದೆ.
ಬೆಳಗ್ಗೆ ತಡವಾಗಿ ಎದ್ದೇಳುವ ದುಷ್ಪರಿಣಾಮಗಳು
ಅ. ತಡವಾಗಿ ಎದ್ದರೆ ಶರೀರದಲ್ಲಿ ಆಲಸ್ಯ ಹೆಚ್ಚಾಗುತ್ತದೆ.
ಆ. ತಡವಾಗಿ ಎದ್ದೇಳುವ ಮಕ್ಕಳು ಹೆಚ್ಚಾಗಿ ದುಃಖಿ ಮತ್ತು ನಿರಾಶರಾಗಿರುತ್ತಾರೆ; ಕಾರಣ ಬೆಳಗ್ಗೆ ತಡವಾಗಿ ಎದ್ದಿರುವುದರಿಂದ ಅವರ ವೈಯಕ್ತಿಕ ಕೆಲಸಗಳು, ಹಾಗೂ ಮನೆಪಾಠ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ.
ಬೆಳಗ್ಗೆ ಬೇಗ ಎದ್ದೆಳುವುದರಿಂದ ಆಗುವ ಲಾಭಗಳು
ಪುರಾತನ ಕಾಲದಲ್ಲಿ ಋಷಿ ಮುನಿಗಳು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ವೇದಪಠಣ ಮಾಡುತ್ತಿದ್ದರು. ರಾತ್ರಿ ವಾತಾವರಣದಲ್ಲಿ ರಜ-ತಮ ಕಣಗಳ, ಅಂದರೆ ತೊಂದರೆದಾಯಕ ಕಣಗಳ ಪ್ರಮಾಣವು ಹೆಚ್ಚಾಗಿರುತ್ತದೆ; ಅದೇ, ಮುಂಜಾನೆ ವಾತಾವರಣವು ಸಾತ್ವಿಕವಾಗಿರುತ್ತದೆ, ಅಂದರೆ ಆನಂದದಾಯಕವಾಗಿರುತ್ತದೆ. ಆಗ ವಾತಾವರಣವು ಶುದ್ಧ, ಪವಿತ್ರ, ಶಾಂತ ಮತ್ತು ತಂಪಾಗಿರುತ್ತದೆ. ಈ ಸಮಯದಲ್ಲಿ ಮಾಡಿದ ನಾಮಜಪವು ಭಾವಪೂರ್ಣವಾಗಿರುತ್ತದೆ ಮತ್ತು ಮಾಡಿದ ಅಧ್ಯಯನದ ಮೇಲೆಯೂ ಉತ್ತಮ ಪರಿಣಾಮವಾಗುತ್ತದೆ.
ನಿಯಮಿತವಾಗಿ ಬೆಳಗ್ಗೆ ಬೇಗ ಎದ್ದೇಳುವ ಮಕ್ಕಳು ಸುಖವಾಗಿರುತ್ತಾರೆ. ಮಕ್ಕಳೇ, ಸೂರ್ಯೋದಯದ ಮುಂಚೆಯೇ ಎದ್ದೇಳುವ ಅಭ್ಯಾಸ ಮಾಡಿಕೊಳ್ಳಿ ಮತ್ತು ಇತರರಿಗೂ ಹೀಗೆ ಮಾಡಲು ಪ್ರೇರೇಪಿಸಿ.