ಶ್ರೀರಾಮನು ವನವಾಸದಿಂದ ಹಿಂದಿರುಗಿ ಬಂದು ರಾಜ್ಯಭಾರ ಮಾಡಲಾರಂಭಿಸಿದ. ಆಗ ಋಷಿಮುನಿಗಳಲ್ಲಿ ಭಗವಂತನ ನಾಮದ ಶಕ್ತಿ ದೊಡ್ಡದೋ ಅಥವಾ ಭಗವಂತನ ಶಕ್ತಿ ದೊಡ್ಡದೋ ಎಂಬ ವಾದ ನಡೆಯಿತು. ಅವರೆಲ್ಲರೂ ನಾರದಮುನಿಗಳನ್ನು ತೀರ್ಪು ನೀಡಲು ಕೇಳಿದರು.
ನಾರದರು ಒಂದು ಉಪಾಯ ಮಾಡಿ ಹನುಮಂತನಲ್ಲಿ ಶ್ರೀರಾಮನ ಗುರುಗಳನ್ನು ಚೆನ್ನಾಗಿ ಗೋಳು ಹೊಯ್ಯಿದುಕೊಳ್ಳಲು ಹೇಳಿದರು ಮತ್ತೆ ಏನು ಮಾಡಬೇಕೆಂದು ನಂತರ ಹೇಳುವದಾಗಿ ತಿಳಿಸಿದರು. ಹನುಮಂತನೂ ಹಾಗೆ ಮಾಡಿದನು. ಸಿಟ್ಟಿಗೆದ್ದ ಗುರುಗಳು ಶ್ರೀರಾಮನಿಗೆ ವಿಷಯ ತಿಳಿಸಿ ಹನುಮನನ್ನು ಶಿಕ್ಷಿಸಲು ಆದೇಶ ನೀಡಿದರು. ಹನುಮನ ನಡತೆಯ ಬಗ್ಗೆ ಆಶ್ಚರ್ಯ ಚಕಿತನಾದ ರಾಮನು ಗುರುಗಳ ಆದೇಶ ಪಾಲಿಸಲು ಸಜ್ಜಾದನು.
ನಾರದರು ಹನುಮನಿಗೆ ಕಣ್ಣನ್ನು ಮುಚ್ಚಿ ಶ್ರೀರಾಮ ನಾಮಸ್ಮರಣೆ ಮಾಡುತ್ತಾ ನಿಲ್ಲಲೂ ಹೇಳಿದರು. ಪರಮ ಭಕ್ತ ಹನುಮನನ್ನು ಶಿಕ್ಷಿಸಲು ಬಂದ ರಾಮನು ಗುರುಗಳ ಆದೇಶದಂತೆ ಹನುಮನ ಮೇಲೆ ಬಾಣ ಪ್ರಯೋಗ ಮಾಡಿದನು. ಪ್ರಯೋಗಿಸಿದ ಬಾಣಗಳೆಲ್ಲಾ ವಿಫಲವಾಗಿ ರಾಮನಾಮ ಸ್ಮರಣೆಯಲ್ಲಿ ತಲ್ಲಿನನಾದ ಹನುಮನ ಪಾದಗಳ ಬಳಿ ಬಿದ್ದವು. ಆಗ ಗುರುಗಳು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ರಾಮನಿಗೆ ಹೇಳಿದರು, ಆಗ ನಾರದರು ಇರುವ ವಿಷಯ ವಿವರಿಸಿ ಭಗವಂತನ ನಾಮದ ಶಕ್ತಿಯ ಹಿರಿಮೆಯನ್ನು ಸಾರಿದರು.
ನೀತಿ: ಭಗವಂತನ ನಾಮಸ್ಮರಣೆ ತುಂಬ ಶಕ್ತಿಯುಳ್ಳದ್ದು ಅದನ್ನು ಮಾಡುವುದರಿಂದ ನಮಗೆ ಒದಗುವ ಎಲ್ಲಾ ವಿಪತ್ತಿನಿಂದಲೂ ನಮಗೆ ರಕ್ಷಣೆ ಸಿಗುತ್ತದೆ.