ಇಕ್ಷ್ವಾಕು ವಂಶದ ರಾಜ ಚಿತ್ರಭಾನು ಸಂಪೂರ್ಣ ಜಂಬೂದ್ವೀಪದ ರಾಜನಾಗಿರುತ್ತಾನೆ. ಅವನು ಪ್ರತಿ ಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡುತ್ತಿರುತ್ತಾನೆ. ಒಂದು ಸಲ ರಾಜನನ್ನು ಭೇಟಿ ಮಾಡಲು ಬಂದ ಋಷಿ ಅಷ್ಟವಕ್ರ ರಾಜನನ್ನು ಕೇಳುತ್ತಾನೆ, "ರಾಜಾ, ನೀವು ಶಿವರಾತ್ರಿಯಂದು ಉಪವಾಸ ಮತ್ತು ಜಾಗರಣೆಯನ್ನು ಯಾಕೆ ಮಾಡುತ್ತೀರಾ?" ಆಗ ರಾಜ ಚಿತ್ರಭಾನು ತನ್ನ ಹಿಂದಿನ ಜನ್ಮದ ಕತೆಯನ್ನು ಹೇಳುತ್ತಾನೆ. ಹಿಂದಿನ ಜನ್ಮದಲ್ಲಿ ಅವನು ಒಬ್ಬ ಬೇಡನಾಗಿದ್ದನು. ಜೀವನಕ್ಕಾಗಿ ಅವನು ಪ್ರಾಣಿ ಪಕ್ಷಿಗಳನ್ನು ಕೊಂದು ಮಾರಾಟ ಮಾಡುತ್ತಿದ್ದನು. ಒಂದು ದಿನ ಬೇಡನು ಕಾಡಿನಲ್ಲಿ ಎಷ್ಟು ಹುಡುಕಿದರೂ ಒಂದೂ ಪ್ರಾಣಿ ಸಿಗಲಿಲ್ಲ. ಬೇಟೆಗಾಗಿ ಕಾಯುತ್ತಾ ರಾತ್ರಿ ಆಗುತ್ತದೆ. ಕತ್ತಲೆಯಲ್ಲಿ ಕಾಡಿನಿಂದ ಹೊರ ಹೋಗಲು ದಾರಿ ತಿಳಿಯದೆ ಬೇಡನು ಬಿಲ್ವದ ವೃಕ್ಷ ಹತ್ತಿ ಕೂರುತ್ತಾನೆ. ಬೇಡನಿಗೆ ತುಂಬಾ ಹೊಟ್ಟೆ ಹಸಿಯುತ್ತಿರುತ್ತದೆ ಮತ್ತು ಬಾಯಾರಿಕೆ ಆಗುತ್ತಿರುತ್ತದೆ. ಬೇಡನು ಮನೆಯಲ್ಲಿ ಹೆಂಡತಿ ಮಕ್ಕಳು ಹಸಿದಿರುತ್ತಾರೆಂದು ದುಃಖಿಸುತ್ತಿರುತ್ತಾನೆ. ರಾತ್ರಿ ಕಾಡಿನಲ್ಲಿ ನಿದ್ದೆಯನ್ನು ಮಾಡಿದರೆ ಕಾಡು ಪ್ರಾಣಿಗಳು ಅವನನ್ನು ತಿಂದುಬಿಡಬಹುದೆಂದು ಅವನು ಸಂಪೂರ್ಣ ರಾತ್ರಿ ಎಚ್ಚರವಿರಲು ತೀರ್ಮಾನಿಸುತ್ತಾನೆ. ಸಮಯ ಕಳೆಯಲು ಅವನು ಬಿಲ್ವದ ಎಲೆಗಳನ್ನು ಒಂದೊಂದಾಗಿ ಕಿತ್ತು ನೆಲದ ಮೇಲೆ ಹಾಕುತ್ತಿರುತ್ತಾನೆ.
ಮಾರನೇ ದಿನ ಅವನು ಮನೆಗೆ ಹೋಗುತ್ತಾನೆ. ತುಂಬಾ ಹೊಟ್ಟೆ ಹಸಿಯುತ್ತಿದ್ದರಿಂದ ಅವನು ಕೂಡಲೇ ತನ್ನ ಉಪವಾಸ ಬಿಟ್ಟು ಊಟ ಮಾಡಬೇಕು ಎಂದು ಕೊಳ್ಳುತ್ತಾನೆ ಆದರೆ ಆಗಲೇ ಒಬ್ಬ ಭಿಕ್ಷುಕ ಬಂದು ಭಿಕ್ಷೆ ಬೇಡುತ್ತಾನೆ. ಬೇಡನು ಮೊದಲು ಭಿಕ್ಷುಕನಿಗೆ ಊಟ ನೀಡಿ ನಂತರ ತಾನು ಊಟ ಮಾಡುತ್ತಾನೆ.
ಇದಾಗಿ ಎಷ್ಟೋ ವರ್ಷಗಳ ನಂತರ ಬೇಡನ ಸಾವಿನ ಸಮಯ ಬರುತ್ತದೆ. ಬೇಡನನ್ನು ಕರೆದುಕೊಂಡು ಹೋಗಲು ಶಿವಲೋಕದಿಂದ ಇಬ್ಬರು ಶಿವ ಕಿಂಕರರು ಬರುತ್ತಾರೆ. ಬೇಡನಿಗೆ ತಾನು ಶಿವನ ಆರಾಧನೆಯನ್ನೂ ಮಾಡಿಲ್ಲ ಮೇಲಾಗಿ ನಾನು ಪ್ರಾಣಿ ಪಕ್ಷಿಗಳನ್ನು ಕೊಂದು ಬದುಕಿದವನು, ಹೀಗಿದ್ದರೂ ಇವರೇಕೆ ನನ್ನನ್ನು ಶಿವಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತದೆ. ಇವನ ವಿಚಾರವನ್ನು ಅರಿತ ಶಿವ ಕಿಂಕರರು,"ನೀನು ನಿನಗೆ ತಿಳಿಯದಂತೆ ಶಿವರಾತ್ರಿಯಂದು ಶಿವನ ಆರಾಧನೆಯನ್ನು ಮಾಡಿದ್ದೀಯ. ತುಂಬಾ ವರ್ಷಗಳ ಹಿಂದೆ ನೀನು ಕಾಡಿನಲ್ಲಿ ಒಬ್ಬನೇ ರಾತ್ರಿ ಸಿಕ್ಕಿ ಹಾಕಿಕೊಂಡಿದ್ದಾಗ ಬೇಲದ ಮರದ ಮೇಲೆಕುಳಿತು ಜಾಗರಣೆ ಮಾಡಿರುವೆ. ಬಿಲ್ವದ ಎಲೆಗಳನ್ನು ಕಿತ್ತು ನೆಲದ ಮಲೆ ಹಾಕುತ್ತಿದ್ದೆ. ಆದರೆ ನೀನು ಹಾಕಿದ ಬಿಲ್ವದ ಎಲೆಗಳು ಮರದಡಿ ಇದ್ದ ಶಿವಲಿಂಗಕ್ಕೆ ಅರ್ಪಣೆಯಾಗುತ್ತಿದ್ದವು. ನೀನು ಅರಿವಿಲ್ಲದಂತೆಯೇ ರಾತ್ರಿ ಇಡೀ ಉಪವಾಸವನ್ನೂ ಮಾಡಿದೆ. ಈ ಕಾರಣದಿಂದಾಗಿ ನಿನಗೆ ಶಿವಲೋಕದ ಆನಂದ ಅನುಭವಿಸಲು ಸಿಗುತ್ತಿದೆ ಮತ್ತು ತುಂಬಾ ವರ್ಷಗಳ ನಂತರ ನೀನು ರಾಜಾ ಚಿತ್ರಭಾನು ಆಗಿ ಹುಟ್ಟುವೆ"ಎಂದುಹೇಳುತ್ತಾರೆ.