ತೀರ್ಥಯಾತ್ರೆಯ ಅರ್ಥವನ್ನು ತಿಳಿಯದಿರುವುದರಿಂದ ಕೇವಲ ‘ಸ್ವಲ್ಪ ಸಮಯ ಆನಂದದಲ್ಲಿರೋಣ’ ಎಂದು ಜನರು ಪರ ಊರಿಗೆ ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಮೋಜು ಮಾಡುತ್ತಾರೆ. ನಾವು ಅಷ್ಟು ಸಮಯ ಮೋಜು ಮಾಡಿದೆವೆಂದು ಅವರಿಗೆ ಅನಿಸುತ್ತದೆ. ಆದರೆ ಅಲ್ಲಿಗೆ ಹೋಗುವಾಗ ಅವರ ವಿಕಾರಗಳು ಅವರೊಂದಿಗೇ ಇರುತ್ತವೆ. ಇದರಿಂದ ಅವರು ಪುನಃ ವ್ಯವಹಾರಕ್ಕೆ ಬಂದ ಕೂಡಲೇ ಅವರ ಮನಸ್ಸು ವಿಕಾರದಿಂದ ತುಂಬಿರುತ್ತದೆ. ‘ಗಂಗೆಯಲ್ಲಿ ಮುಳುಗಿದಾಗ ಮನುಷ್ಯರ ಪಾಪವು ಮರದ ಮೇಲೆ ಕುಳಿತುಕೊಳ್ಳುತ್ತದೆ. ಅವರು ನೀರಿನಿಂದ ಮೇಲೆ ಬಂದ ತಕ್ಷಣ ಅವರ ಮೇಲೆ ಸವಾರಿ ಮಾಡುತ್ತದೆ’ ಎಂಬಂತಹ ಸ್ಥಿತಿ ಇದು.
ತೀರ್ಥಯಾತ್ರೆ ಮಾಡುವವರು ತೀರ್ಥಯಾತ್ರೆ ನಿಮಿತ್ತ ತೀರ್ಥಸ್ಥಾನಕ್ಕೆ ಹೋಗುತ್ತಾರೆ, ಆದರೆ ‘ತೀರ್ಥಯಾತ್ರೆಯೆಂದರೇನು? ಮತ್ತು ಅದನ್ನು ಹೇಗೆ ಮಾಡುವುದು’ ಎಂಬುದರ ಜ್ಞಾನವಿಲ್ಲದಿರುವುದರಿಂದ ಅವರ ತೀರ್ಥಯಾತ್ರೆಯು ಕೇವಲ ತಿರುಗಾಟ ಅಥವಾ ಪ್ರವಾಸವಾಗುತ್ತದೆ. ದೇವಸ್ಥಾನದ ವಾರ್ಷಿಕ ಯಾತ್ರೆ ಮಾಡುವವರು ತಮ್ಮ ಇಚ್ಛೆ ಪೂರ್ಣವಾಗಲೆಂದು ಅಥವಾ ವ್ರತವೆಂದು ಯಾತ್ರೆ ಮಾಡುತ್ತಾರೆ. ಅವರಲ್ಲಿ ಚಿತ್ತಶುದ್ಧಿಯ ಅಥವಾ ದೇವರ ವಿಚಾರ ಮಾಡುವ ಉದ್ದೇಶವಿರುವುದಿಲ್ಲ. ಒಮ್ಮೆ ಸಂತ ತುಕಾರಾಮ ಮಹಾರಾಜರು ತೀರ್ಥಯಾತ್ರೆಗೆ ಹೋಗುವ ಯಾತ್ರಿಕರಿಗೆ ಒಂದು ಕಹಿಸೋರೆಕಾಯಿ ಕೊಟ್ಟು ‘ನೀವು ಎಲ್ಲೆಲ್ಲಿ ಹೋಗುತ್ತೀರೋ ಮತ್ತು ಸ್ನಾನ ಮಾಡುತ್ತೀರೋ ಅಲ್ಲಲ್ಲಿ ಇದಕ್ಕೂ ಸ್ನಾನ ಮಾಡಿಸಿ ತನ್ನಿರಿ’ ಎಂದು ಹೇಳಿದರು. ಯಾತ್ರಿಕರು ಹಿಂದಿರುಗಿ ಬಂದ ನಂತರ ಸಮಾರಾಧನೆಗೆ ಆ ಸೋರೆಕಾಯಿಯ ಪಲ್ಯ ಮಾಡಲು ಮಹಾರಾಜರು ಹೇಳಿದಾಗ ಯಾತ್ರೆ ಮಾಡಿ ಬಂದ ನಂತರವೂ ಆ ಸೋರೆಕಾಯಿಯ ಪಲ್ಯವು ಕಹಿಯಾಗಿತ್ತು. ಇದರಿಂದ ಚಿತ್ತಶುದ್ಧಿಯಾಗದೇ, ವಿಕಾರಗಳು ದೂರವಾಗದೇ ಯಾತ್ರೆಯ ಪರಿಣಾಮವಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
– ಪ.ಪೂ. ಪಾಂಡೆ ಮಹಾರಾಜರು, ದೇವದ, ಪನವೇಲ.