ಚಾರಧಾಮ ಯಾತ್ರೆ

ಹಿಂದೂಗಳ ಜೀವನದಲ್ಲಿ ಚಾರಧಾಮ ಯಾತ್ರೆಗೆ ಅಸಾಧಾರಣ ಮಹತ್ವವಿದೆ. ಈ ಯಾತ್ರೆಯು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲೂ ಮಹತ್ವದ್ದಾಗಿದೆ. ಯಮನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದ್ರೀನಾಥ ಈ ನಾಲ್ಕು ತೀರ್ಥಕ್ಷೇತ್ರಗಳೆಂದರೆ ‘ಚಾರಧಾಮ’. ಈ ಯಾತ್ರೆಯು ಹರಿದ್ವಾರದಿಂದ ಪ್ರಾರಂಭವಾಗುತ್ತದೆ. ಹರಿದ್ವಾರ ವೆಂದರೆ ‘ಪರಮೇಶ್ವರನ ಕಡೆಗೆ ಹೋಗುವ ದ್ವಾರ’. ‘ಚಾರಧಾಮ’ ಎಂದರೆ ಹಿಮಾಲಯದ ನಾಲ್ಕು ಎತ್ತರ ಶಿಖರಗಳ ಮೇಲಿರುವ ನಾಲ್ಕು ಮುಖ್ಯ ದೇವಸ್ಥಾನಗಳು.

ಯಮುನೋತ್ರಿ
ಈ ಸ್ಥಳದಲ್ಲಿ ಪವಿತ್ರ ಯಮುನಾ ನದಿಯ ಉಗಮವಾಗುತ್ತದೆ. ಈ ಸ್ಥಾನವು ಸಂಪೂರ್ಣ ಮಂಜುಗಡ್ಡೆಯಿಂದ ಆವೃತ್ತವಾಗಿರುವುದರಿಂದ ಹಿಂದಿನ ಕಾಲದಲ್ಲಿ ಋಷಿಮುನಿಗಳು ತಪಶ್ಚರ್ಯಕ್ಕಾಗಿ ಹೋಗುವಾಗ ಅವರಿಗೆ ಬೇಯಿಸಿದ ಅನ್ನ ಸಿಗುವುದು ಕಠಿಣವಾಗುತ್ತಿತ್ತು. ಇದನ್ನು ನೋಡಿ ಯಮುನಾ ನದಿಯು ಸೂರ್ಯದೇವರಿಂದ ವರವನ್ನು ಪಡೆದುಕೊಂಡಳು ಮತ್ತು ಈ ಕ್ಷೇತ್ರದಿಂದ ೧೦ ರಿಂದ ೧೫ ಕಿ.ಮೀ. ದೂರದಲ್ಲಿ ಬಿಸಿನೀರಿನ ಕುಂಡಗಳು ತಯಾರಾದವು. ಈಗ ಈ ಕುಂಡದಲ್ಲಿ ಬಟ್ಟೆಯಲ್ಲಿ ಅಕ್ಕಿಯಿಟ್ಟು ಅನ್ನವನ್ನು ಬೇಯಿಸಿ ಪ್ರಸಾದವೆಂದು ತಯಾರಿಸಲಾಗುತ್ತದೆ.

ಗಂಗೋತ್ರಿ
ಇದು ಗಂಗಾನದಿಯ ಉಗಮಸ್ಥಾನವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂಬ ಉದ್ದೇಶದಿಂದ ಇಲ್ಲಿ ಶ್ರಾದ್ಧವನ್ನು ಮಾಡಲಾಗುತ್ತದೆ ಮತ್ತು ಇಲ್ಲಿನ ಗಂಗೆಯ ನೀರಿನಲ್ಲಿ ಅಸ್ತಿಯನ್ನು ವಿಸರ್ಜಿಸಲಾಗುತ್ತದೆ. ಶಂಕರಾಚಾರ್ಯರು ಇಲ್ಲಿ ಈ ಪವಿತ್ರನದಿಯ ದೇವಸ್ಥಾನವನ್ನು ಸ್ಥಾಪಿಸಿದ್ದಾರೆ.

ಕೇದಾರನಾಥ
ಮಹಾಭಾರತದ ಮಹಾಭಯಂಕರ ಯುದ್ಧದಲ್ಲಿ ಪಾಂಡವರು ವಿಜಯಿಯಾದರು. ಯುದ್ಧ ಮುಗಿದ ನಂತರ ಒಮ್ಮೆಲೆ ಆಕಾಶವಾಣಿಯಾಯಿತು. ಆಕಾಶವಾಣಿಯಲ್ಲಿ ಪಾಂಡವರಿಂದಾದ ಹತ್ಯೆಗಳ ಪಾಪ ಕ್ಷಾಲನೆಗಾಗಿ ಅವರು ಶಂಕರನ ದರ್ಶನ ಪಡೆಯಬೇಕು ಎಂದು ಹೇಳಲಾಯಿತು. ಅದಕ್ಕಾಗಿ ಪಾಂಡವರು ಕಾಶಿಗೆ ಬಂದರು. ಆಗ ಶಂಕರನು ಅವರನ್ನು ಪರೀಕ್ಷಿಸಲು ತನ್ನ ಸ್ಥಾನವನ್ನು ಅಲ್ಲಿಂದ ಬದಲಿಸಿ ಮುಂದೆ ಉತ್ತರಕಾಶಿಗೆ ಹೋದನು. ಪಾಂಡವರು ಅಲ್ಲಿ ಹೋದ ನಂತರ ಶಿವನು ಪುನಃ ತನ್ನ ಸ್ಥಾನವನ್ನು ಬದಲಾಯಿಸಿ ಗುಪ್ತಕಾಶಿಗೆ ಹೋದನು. ಪಾಂಡವರು ಅಲ್ಲಿ ತಲುಪಿದ ನಂತರ ಅವನು ಅಲ್ಲಿಂದ ತನ್ನ ಸ್ಥಾನವನ್ನು ಬದಲಾಯಿಸಿ ಕೇದಾರನಾಥಕ್ಕೆ ಹೋದನು. ಶಿವನು ದರ್ಶನವನ್ನು ಕೊಡುವುದಿಲ್ಲವೆಂದು ಪಾಂಡವರು ಗುಪ್ತಕಾಶಿಯಲ್ಲಿ ಪಾರ್ವತಿಯ ಆರಾಧನೆಯನ್ನು ಮಾಡಿದರು ಮತ್ತು ದೇವಿಯನ್ನು ಪ್ರಸನ್ನಳಾಗಿಸಿಕೊಂಡರು. ಕೇದಾರನಾಥದಲ್ಲಿ ಪಾಂಡವರಿಗೆ ಅನೇಕ ಮಾಯಾವಿ ಕೋಣಗಳು ಕಂಡು ಬಂದವು. ಭೀಮನು ಅವುಗಳನ್ನು ತನ್ನ ಕಾಲಿನ ಕೆಳಗಿನಿಂದ ಹೋಗಲು ಹೇಳಿದನು. ಆಗ ಎಲ್ಲ ಕೋಣಗಳು ಹೋದವು, ಭೀಮನು ಕೋಣನ ರೂಪದಲ್ಲಿರುವ ಶಿವನನ್ನು ಗುರುತಿಸಿದನು ಮತ್ತು ಆ ಕೋಣದ ಪೃಷ್ಠಭಾಗದ ಮೇಲೆ ಗದೆಯಿಂದ ಹೊಡೆದನು. ಆ ಪೃಷ್ಠಭಾಗವು ಯಾವ ಜಾಗದಲ್ಲಿದೆಯೋ, ಅದೇ ಕೇದಾರನಾಥ. ಆ ಜಾಗದಲ್ಲಿ ಅವರಿಗೆ ಶಿವನು ದರ್ಶನ ನೀಡಿದನು. ಶಿವನಿಗೆ ಪೆಟ್ಟಾದ ಜಾಗದಲ್ಲಿ ಪಾಂಡವರು ತುಪ್ಪವನ್ನು ಸವರಿದರು. ಆದ್ದರಿಂದ ಇವತ್ತಿಗೂ ಅಲ್ಲಿ ಶಿವಲಿಂಗಕ್ಕೆ ತುಪ್ಪವನ್ನು ಸವರುವ ಪದ್ಧತಿಯಿದೆ.

ಬದ್ರಿನಾಥ
ಇಲ್ಲಿ ಶ್ರೀ ವಿಷ್ಣುವಿನ ಪುರಾತನ ದೇವಸ್ಥಾನವಿದೆ. ಹಿಂದಿನ ಕಾಲದಲ್ಲಿ ಮ್ಲೇಂಛ ಮತ್ತು ಕಾಪಾಲಿಕರು ಎಲ್ಲೆಡೆ ಹಾಹಾಕಾರ ಎಬ್ಬಿಸಿದ್ದರು ಮತ್ತು ಬದ್ರಿನಾಥದ ‘ಅಲಕನಂದಾ’ ಮೂರ್ತಿಯನ್ನು ನದಿಯಲ್ಲಿ ಎಸೆದರು. ಆಗ ಶಂಕರಾಚಾರ್ಯರು ಮ್ಲೇಂಛ ಮತ್ತು ಕಪಾಲಿಕರನ್ನು ನಾಶ ಮಾಡಿ ಮೂರ್ತಿಯ ಪುನರಸ್ಥಾಪನೆಯನ್ನು ಮಾಡಿದರು. ಇಲ್ಲಿಂದಲೇ ಪಾಂಡವರು ಸ್ವರ್ಗಾರೋಹಣವನ್ನು ಆರಂಭಿಸಿದರು.

Leave a Comment