ಹುಟ್ಟಿದ ದಿನ ಎಂದರೆ ಎಲ್ಲರಿಗೂ ಸಂಭ್ರಮದ ದಿನ. ಹಿಂದೆ ಗುರು ಹಿರಿಯರ, ದೇವರ ಆಶೀರ್ವಾದವನ್ನು ಪಡೆಯುವ ದಿನವಾಗಿದ್ದ ಹುಟ್ಟಿದ ದಿನ, ಇಂದು ವಿದೇಶ ಸಂಸ್ಕೃತಿಯಲ್ಲಿ ಕೊಚ್ಚಿಹೋಗಿದೆ. ಪಾಶ್ಚಾತ್ಯ ಸಂಸ್ಕೃತಿಯಂತೆ ಇಂದು ಹುಟ್ಟುಹಬ್ಬವನ್ನು ಹೇಗೆ ಆಚರಿಸುತ್ತಾರೆ ನೋಡೋಣ : ದಿನವಿಡೀ ಏನೇನು ಮಾಡಬೇಕು ಎಂದು ಅನೇಕ ದಿನಗಳ ಹಿಂದೆ ನಿಯೋಜನೆ ಮಾಡುತ್ತೇವೆ. ಆಪ್ತೇಷ್ಟರನ್ನು ಆಮಂತ್ರಿಸುತ್ತೇವೆ. ತನ್ನ ಮಗುವಿಗೆ ಯಾವ ಕಾರ್ಟೂನ್ ಇಷ್ಟವಾಗುತ್ತದೆ ಎಂದು ಸೂಕ್ಷ್ಮವಾಗಿ ಗಮನಿಸಿ ‘ದೊರೈಮೊನ್’ ‘ಬಾರ್ನೀ’ ‘ಛೋಟಾ ಭೀಮ್’ ಮುಂತಾದ ಕೇಕ್ ಗಳನ್ನು ತಯಾರಿಸಲು ಮುಂದಾಗುತ್ತಾರೆ. ಹುಟ್ಟಿದ ದಿನ ಎಲ್ಲರೂ ಸೇರಿ ಮಗು ಮೇಣದ ಬತ್ತಿಗಳನ್ನು ಆರಿಸಿ, ಕೇಕ್ ಕತ್ತರಿಸುವಾಗ ‘happy birthday to you’ ಎಂದು ಹಾಡುತ್ತಾರೆ. ಅದಾದ ನಂತರ ಸಂಗೀತ, ನೃತ್ಯ, ಜಾದೂ, ವಿಚಿತ್ರ ಆಟಗಳ ಮಧ್ಯದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ನಿಜವಾದ ಅರ್ಥವನ್ನು ಮರೆತುಹೋಗುತ್ತಾರೆ!
ಭಾರತೀಯ ಸಂಸ್ಕೃತಿಯಂತೆ ಮತ್ತು ವಿದೇಶಿ ಶೈಲಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಎರಡು ಪದ್ಧತಿಗಳಲ್ಲಿ ಇರುವ ವ್ಯತ್ಯಾಸವನ್ನು ಒಂದು ಕಿರುಚಿತ್ರದ ಮೂಲಕ ತಿಳಿದುಕೊಳ್ಳೋಣ ಬನ್ನಿ.
ಮಿತ್ರರೇ, ಈ ಚಿತ್ರದಿಂದ ನಮ್ಮ ಹುಟ್ಟುಹಬ್ಬವನ್ನು ಜನ್ಮ ತಿಥಿಗನುಸಾರ ಆಚರಿಸುವುದು ಸೂಕ್ತ ಎಂದು ತಿಳಿದುಬರುತ್ತದೆ ಅಲ್ಲವೇ? ಅದಲ್ಲದೆ, ಹಿಂದೂ ಸಂಸ್ಕೃತಿಯಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಆಚರಣೆಯಂತೆ, ಹುಟ್ಟು ಹಬ್ಬದಂದು ಕೂಡ ಕೆಲವು ಶುಭ ಕೃತಿಗಳನ್ನು ಮಾಡುತ್ತಾರೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಹುಟ್ಟು ಹಬ್ಬವನ್ನು ಆಚರಿಸುವ ಯೋಗ್ಯ ಪದ್ಧತಿ
೧. ಹುಟ್ಟು ಹಬ್ಬದ ದಿನ ಅಭ್ಯಂಗ ಸ್ನಾನ (ಎಣ್ಣೆಯನ್ನು ಹಚ್ಚಿ ತಲೆಗೆ ಸ್ನಾನ) ಮಾಡಿ ಹೊಸ ಬಟ್ಟೆಗಳನ್ನು ಧರಿಸಬೇಕು.
೨. ಅಪ್ಪ-ಅಮ್ಮ ಮತ್ತು ಮನೆಯ ಎಲ್ಲಾ ಹಿರಿಯ ವ್ಯಕ್ತಿಗಳಿಗೆ ನಮಸ್ಕರಿಸಬೇಕು.
೩. ಕುಲದೇವರಿಗೆ ಭಕ್ತಿ ಭಾವದಿಂದ ಪೂಜೆಯನ್ನು ಮಾಡಬೇಕು ಮತ್ತು ಸಾಧ್ಯವಿದ್ದರೆ ದೇವರಿಗೆ ಅಭಿಷೇಕ ಮಾಡಬೇಕು. ೪. ಕುಲದೇವರ ನಾಮಜಪವನ್ನು ಕಡಿಮೆ ಎಂದರೆ ೪ ಮಾಲೆಯಷ್ಟಾದರೂ ಮಾಡಬೇಕು.
೫. ಯಾರ ಹುಟ್ಟುಹಬ್ಬವಿರುತ್ತದೆಯೋ, ಅವರ ಆರತಿಯನ್ನು ತುಪ್ಪದ ದೀಪದಿಂದ ಮಾಡಬೇಕು.
೬. ಆರತಿ ಮಾಡಿದ ನಂತರ ಮನೆದೇವರನ್ನು ಸ್ಮರಿಸಿ ಮೂರು ಬಾರಿ ಅಕ್ಷತೆಯನ್ನು ಅವರ ತಲೆಯ ಮೇಲೆ ಹಾಕಬೇಕು. ೭. ಅವರಿಗೆ ತಿನ್ನಲು ಸಿಹಿ ಪದಾರ್ಥವನ್ನು ನೀಡಬೇಕು.
೮. ಹುಟ್ಟುಹಬ್ಬ ಇದ್ದವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆಯನ್ನು ಮಾಡಬೇಕು.
೯. ಅವರಿಗೆ ಉಡುಗೊರೆಯನ್ನು ನೀಡಬಹುದು ಆದರೆ ನೀಡುವಾಗ ಅಪೇಕ್ಷೆ ಅಥವಾ ಕರ್ತೃತ್ವವಿರಬಾರದು.
೧೦. ಉಡುಗೊರೆಯನ್ನು ಸ್ವೀಕರಿಸುವಾಗ ’ಇದು ದೇವರ ಪ್ರಸಾದ’ ಎಂದು ಸ್ವೀಕರಿಸಬೇಕು.
ಮುಂದಿನ ಕೃತಿಗಳನ್ನು ಮಾಡದಿದ್ದರೆ ಒಳ್ಳೆಯದು
೧. ಮೇಣದ ಬತ್ತಿಯನ್ನು ಆರಿಸುವುದು : ಭಾರತೀಯ ಸಂಸ್ಕೃತಿಯಲ್ಲಿ ಉರಿಯುತ್ತಿರುವ ದೀಪವು ಶುಭಸೂಚಕ. ದೀಪವು ಅಜ್ಞಾನದ ಕತ್ತಲನ್ನು ಸರಿಸಿ ಜ್ಞಾನದ ಬೆಳಕು ಬೀರುತ್ತದೆ. ಹುಟ್ಟು ಹಬ್ಬದಂದು ದೀಪವನ್ನು ಆರಿಸುವುದರಿಂದ ನಮ್ಮ ಮುಂದಿನ ಜೀವನದಲ್ಲಿ ಕತ್ತಲನ್ನು ಆಮಂತ್ರಿಸಿದಂತೆ ಆಗುತ್ತದೆ ಅಲ್ಲವೇ!
೨. ಕೇಕ್ ಕತ್ತರಿಸುವುದು.
೩. ಕೇವಲ ಮನೋರಂಜನೆಗಾಗಿ ನಿರರ್ಥಕ ಆಟಗಳನ್ನು ಆಡುವುದು ಅಥವಾ ಹಾಡುಗಳಿಗೆ ಕುಣಿಯುವುದು.
ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ!
ಹಿರಿಯರಿಗೆ ಹುಟ್ಟು ಹಬ್ಬದ ದಿನವೆಂದರೆ ಆತ್ಮಾವಲೋಕನದ ದಿನವಾಗಿರಬೇಕು. ಕಳೆದ ವರ್ಷದಲ್ಲಿ ತನ್ನಲ್ಲಿ ಎಷ್ಟು ಒಳ್ಳೆಯ ಬದಲಾವಣೆಗಳು ಆಗಿವೆ ಎಂದು ನೋಡುವ ದಿನವಿದು. ದೇವರು ನಮ್ಮ ಮೇಲೆ ಮಾಡಿದ ಕೃಪೆಗೆ ಕೃತಜ್ಞತೆ ವ್ಯಕ್ತಪಡಿಸುವ ದಿನ, ಮತ್ತು ನಮ್ಮಿಂದಾದ ತಪ್ಪುಗಳಿಗೆ ಕ್ಷಮೆ ಯಾಚಿಸುವ ದಿನ! ಅಂತರ್ಮುಖರಾಗಿ ಮುಂದಿನ ವರ್ಷದಲ್ಲಿ ಇನ್ನಷ್ಟು ಒಳ್ಳೆಯವರಾಗಲು ಸಂಕಲ್ಪ ಮಾಡುವ ದಿನವೆಂದರೆ ಹುಟ್ಟುಹಬ್ಬ!