ಇವನು ಶಿವ-ಪಾರ್ವತಿಯರ ಪುತ್ರ. ಆರು ಕೃತಿಕರು (ಕೃತಿಕಾ ಎಂದರೆ ದೇವತೆಗಳ ಒಂದು ಪ್ರಕಾರ) ಅವನ ಪೋಷಣೆಯನ್ನು ಮಾಡಿದರು. ಆದುದರಿಂದ ಅವನಿಗೆ ಕಾರ್ತಿಕೇಯ ಎಂಬ ಹೆಸರು ಬಂದಿತು. ಕಾರ್ತಿಕೇಯನ ಕಥೆಯು ಹೀಗಿದೆ-ತಾರಕಾಸುರನ ಹತ್ಯೆಯನ್ನು ಮಾಡಿದ ನಂತರ ಕಾರ್ತಿಕೇಯನು ಬಹಳ ಕೀರ್ತಿಯನ್ನು ಪಡೆದನು. ಆದುದರಿಂದ ಪಾರ್ವತಿಯು ಅವನನ್ನು ಬಹಳ ಮುದ್ದು ಮಾಡತೊಡಗಿದಳು. ಇದರಿಂದ ಅವನು ಕೆಟ್ಟು ಹೋದನು ಮತ್ತು ದೇವಸ್ತ್ರೀಯರ ಮೇಲೆ ಕೈ ಹಾಕತೊಡಗಿದನು. ದೇವರು ಇದರ ಬಗ್ಗೆ ಪಾರ್ವತಿಯ ಬಳಿ ದೂರನ್ನು ಸಲ್ಲಿಸಿದರು. ಪುತ್ರನ ಸ್ವೇಚ್ಛಾಚಾರ ನಾಶವಾಗಬೇಕೆಂದು ಪಾರ್ವತಿಯು ಅವನಿಗೆ ಎಲ್ಲ ಸ್ತ್ರೀಯರಲ್ಲಿ ತನ್ನ ರೂಪವನ್ನು ತೋರಿಸತೊಡಗಿದಳು. ಈ ಸಾಕ್ಷಾತ್ಕಾರದಿಂದ ಕಾರ್ತಿಕೇಯನಿಗೆ ಪಶ್ಚಾತ್ತಾಪವಾಯಿತು ಮತ್ತು ಅವನು ‘ಇಂದಿನಿಂದ ಜಗತ್ತಿನಲ್ಲಿರುವ ಪ್ರತಿಯೊಬ್ಬ ಸ್ತ್ರೀಯನ್ನೂ ನಾನು ಮಾತೆಯ ಸಮಾನವೆಂದು ಪರಿಗಣಿಸುವೆನು’ ಎಂದು ಶಪಥ ಮಾಡಿದನು. ಕಾರ್ತಿಕೇಯನು ಸ್ತ್ರೀಜಾತಿಗೆ, ‘ನನ್ನ ದರ್ಶನಕ್ಕೆ ಬರುವ ಸ್ತ್ರೀಯರಿಗೆ ಏಳು ಜನ್ಮ ವೈಧವ್ಯ ಬರುವುದು’ ಎಂದು ಶಾಪವನ್ನು ಕೊಟ್ಟಿದ್ದಾನೆ ಎಂಬ ಕಥೆಯು ಶಿವಲೀಲಾಮೃತದಲ್ಲಿದೆ. ಆದರೆ ಈ ಕಥೆಗೆ ಪುರಾಣಗಳಲ್ಲಿ ಆಧಾರವಿಲ್ಲ. ಮಹಾರಾಷ್ಟ್ರದಲ್ಲಿ ಕಾರ್ತಿಕೇಯನು ಬ್ರಹ್ಮಚಾರಿಯಾಗಿದ್ದರೆ ದಕ್ಷಿಣ ಭಾರತದಲ್ಲಿ ಅವನು ಇಬ್ಬರು ಸ್ತ್ರೀಯರ ಪತಿಯಾಗಿದ್ದಾನೆ. ಬಂಗಾಳದಲ್ಲಿ ಪುತ್ರಲಾಭವಾಗಬೇಕೆಂದು ಸ್ತ್ರೀಯರು ಕಾರ್ತಿಕ ಮಾಸದಲ್ಲಿ ಅವನ ಮಣ್ಣಿನ ಮೂರ್ತಿಯನ್ನು ತಯಾರಿಸಿ ಪೂಜಿಸುತ್ತಾರೆ.’ ಇವನ ಕೈಯಲ್ಲಿ ದಂಡವಿರದೆ ನವಿಲುಗರಿ ಇರುತ್ತದೆ.