ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕೃತಿಗಳು
ಯಾವುದೇ ಹಬ್ಬ ಬಂದರೆ ಆ ಹಬ್ಬದ ವೈಶಿಷ್ಟ್ಯದಂತೆ ಮತ್ತು ನಮ್ಮ ಪದ್ಧತಿಯಂತೆ ನಾವು ಏನಾದರೂ ಮಾಡುತ್ತಿರುತ್ತೇವೆ, ಆದರೆ ಧರ್ಮದಲ್ಲಿ ಹೇಳಿದಂತಹ ಇಂತಹ ಪಾರಂಪರಿಕ ಕೃತಿಯ ಹಿಂದಿನ ಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡರೆ ಅದರ ಮಹತ್ವವು ನಮಗೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಇಲ್ಲಿ ನಾವು ಯುಗಾದಿಯಂದು ಮಾಡಬೇಕಾದ ಧಾರ್ಮಿಕ ಕೃತಿಗಳ ಮಾಹಿತಿಯನ್ನು ಪಡೆಯೋಣ.
ಅಭ್ಯಂಗಸ್ನಾನ
ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು. ಅಭ್ಯಂಗಸ್ನಾನವನ್ನು ಮಾಡುವಾಗ ‘ದೇಶಕಾಲಕಥನ’ ಮಾಡಬೇಕು. ‘ದೇಶಕಾಲಕಥನ’ದಿಂದ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.
ತೋರಣವನ್ನು ಕಟ್ಟುವುದು
ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು. ಏಕೆಂದರೆ ಕೆಂಪು ಬಣ್ಣ ಶುಭಸೂಚಕವಾಗಿದೆ. ಸಾತ್ತ್ವಿಕ ತೋರಣದಿಂದ ಚೈತನ್ಯ ಪ್ರಕ್ಷೇಪಿತವಾಗುತ್ತದೆ.
ಬ್ರಹ್ಮಧ್ವಜವನ್ನು ಏರಿಸುವುದು
ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಅದರ ಮುಂದೆ ಸುಂದರವಾದ ರಂಗೋಲಿ ಬಿಡಿಸುತ್ತಾರೆ. ಇದಕ್ಕೆ 'ಬ್ರಹ್ಮಧ್ವಜಾಯ ನಮಃ|' ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಎರಡನೆಯ ದಿನದಿಂದ ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸಬೇಕು, ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯವನ್ನು ತೋರಿಸಿ ಧ್ವಜವನ್ನು ಕೆಳಗಿಳಿಸುತ್ತಾರೆ.
ದಾನ
ಯಾಚಕರಿಗೆ ಅನೇಕ ವಿಧದ ದಾನವನ್ನು ಕೊಡಬೇಕು, ಉದಾ. ಅರವಟ್ಟಿಗೆಯನ್ನು (ಜಲ ಮಂದಿರ) ನಿರ್ಮಿಸಿ ನೀರಿನ ದಾನವನ್ನು ಮಾಡುತ್ತಾರೆ.
ಪಂಚಾಂಗ ಶ್ರವಣ
ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು. ಈ ವರ್ಷಫಲಕೇಳುವುದರ ಫಲವನ್ನು ಮುಂದಿನಂತೆ ಹೇಳಲಾಗಿದೆ –
ತಿಥೇಶ್ಚ ಶ್ರೀಕರಂ ಪ್ರೋಕ್ತಂ ವಾರಾದಾಯುಷ್ಯವರ್ಧನಮ್| |
ಅರ್ಥ : ತಿಥಿಯ ಶ್ರವಣದಿಂದ ಲಕ್ಷ್ಮೀಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು ವೃದ್ಧಿಯಾಗುತ್ತದೆ, ನಕ್ಷತ್ರಶ್ರವಣದಿಂದ ಪಾಪನಾಶವಾಗುತ್ತದೆ, ಯೋಗಶ್ರವಣದಿಂದ ರೋಗಗಳ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿತ ಕಾರ್ಯವು ಸಾಧ್ಯವಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ.’
ಬೇವಿನ ಪ್ರಸಾದ
ಪಂಚಾಂಗಶ್ರವಣದ ನಂತರ ಕಹಿ ಬೇವಿನ ಪ್ರಸಾದ ಹಂಚಬೇಕು. ಈ ಪ್ರಸಾದವನ್ನು ಬೇವಿನ ಹೂವು, ಚಿಗುರೆಲೆಗಳು, ನೆನೆಸಿದ ಕಡಲೆಕಾಳು ಅಥವಾ ಬೇಳೆ, ಜೇನು, ಜೀರಿಗೆ ಮತ್ತು ಸ್ವಲ್ಪ ಇಂಗು ಇವೆಲ್ಲವನ್ನು ಬೆರೆಸಿ ತಯಾರಿಸುತ್ತಾರೆ.
ಭೂಮಿಯನ್ನು ಊಳುವುದು
ಯುಗಾದಿಯಂದು ಭೂಮಿಯನ್ನು ಊಳಬೇಕು. ಭೂಮಿಯನ್ನು ಊಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಹೊಲದಲ್ಲಿ (ಗದ್ದೆಯಲ್ಲಿ) ಕೆಲಸ ಮಾಡುವವರಿಗೆ ಹೊಸ ಬಟ್ಟೆಗಳನ್ನು ಕೊಡುತ್ತಾರೆ. ಈ ದಿನ ಹೊಲದಲ್ಲಿ ಕೆಲಸ ಮಾಡುವ ಜನರ ಮತ್ತು ಎತ್ತುಗಳ ಭೋಜನದಲ್ಲಿ ಕುಂಬಳಕಾಯಿ, ಹೆಸರುಬೇಳೆ, ಅಕ್ಕಿ, ಹೂರಣ ಮುಂತಾದ ಪದಾರ್ಥಗಳಿರುತ್ತವೆ.
ಸುಖದಾಯಕ ಕಾರ್ಯಗಳು
ಈ ದಿನ ಅನೇಕ ವಿಧದ ಮಂಗಲ ಹಾಡುಗಳನ್ನು ಮತ್ತು ಪುಣ್ಯಪುರುಷರ ಕಥೆಗಳನ್ನು ಕೇಳುತ್ತಾ ಈ ದಿನವನ್ನು ಆನಂದದಿಂದ ಕಳೆಯಬೇಕು. ಈಗಿನ ಕಾಲದ ಹಬ್ಬವೆಂದರೆ ಮೋಜು ಮಜಾ ಮಾಡುವ ದಿನವೆಂಬ ಸಂಕಲ್ಪನೆ ಬರುವಂತಾಗಿದೆ, ಆದರೆ ಹಿಂದೂ ಧರ್ಮದ ಶಾಸ್ತ್ರೀಯ ಪದ್ಧತಿಯ ಹಬ್ಬವೆಂದರೆ 'ಹೆಚ್ಚೆಚ್ಚು ಚೈತನ್ಯ ಪಡೆಯುವ ದಿನ'ವಾಗಿರುತ್ತದೆ. ಆದ್ದರಿಂದ ಹಬ್ಬದಂದು ಸಾತ್ತ್ವಿಕ ಆಹಾರ, ಸಾತ್ತ್ವಿಕ ಬಟ್ಟೆ ಹಾಗೂ ಇತರ ಧಾರ್ಮಿಕ ಕೃತಿ ಇತ್ಯಾದಿಗಳನ್ನು ಮಾಡುವುದರೊಂದಿಗೆ ಸಾತ್ತ್ವಿಕವಾದ ಸುಖದಾಯಕ ಕೃತಿಗಳನ್ನು ಮಾಡಲು ಶಾಸ್ತ್ರವು ಹೇಳಿದೆ.