ಅಧ್ಯಯನ ಮಾಡುವಾಗ ನಮ್ಮಲ್ಲಿ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬಹುದು ಮತ್ತು ನಮ್ಮಲ್ಲಿ ಇರುವ ಗುಣಗಳನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದರ ಬಗ್ಗೆ ನನ್ನ ಗಮನಕ್ಕೆ ಬಂದ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ.
ವ್ಯಾವಹಾರಿಕ ಗುಣಗಳು ಹೇಗೆ ಮೈಗೂಡುತ್ತವೆ ?
ಅ. ವ್ಯವಸ್ಥಿತತೆ : ಪಠ್ಯ ಪುಸ್ತಕಗಳನ್ನು ನಿಗದಿತ ಸ್ಥಳದಲ್ಲಿ ಇಡುವುದರಿಂದ ವ್ಯವಸ್ಥಿತತೆಯ ಗುಣ ಬರುತ್ತದೆ.
ಆ. ಒಳ್ಳೆಯ ರೂಢಿಗಳನ್ನು ಬೆಳೆಸುವುದು : ಪ್ರತಿದಿನ ನಾಮಜಪ ಮಾಡುವುದರಿಂದ ಹೇಗೆ ಅದರ ರೂಢಿಯಾಗುತ್ತದೆಯೋ ಹಾಗೆಯೇ ಪ್ರತಿದಿನ ಅಧ್ಯಯನ ಮಾಡುವುದರಿಂದಲೂ ಅದರ ರೂಢಿಯೂ ಅಗುತ್ತದೆ.
ಇ. ಏಕಾಗ್ರತೆ : ಒಂದೇ ಜಾಗದಲ್ಲಿ ದೀರ್ಘ ಕಾಲದವರೆಗೆ ಕುಳಿತು ಅಧ್ಯಯನ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ.
ಈ. ಜಿಗುಟುತನ : ಪ್ರತಿದಿನ ಅಧ್ಯಯನ ಮಾಡುವುದರಿಂದ ಜಿಗುಟುತನ ಹೆಚ್ಚುತ್ತದೆ.
ಉ. ಸಹನೆ : ಅಧ್ಯಯನ ಮಾಡಲು ಬಹಳಷ್ಟು ಇದ್ದರೂ ಕೂಡ, ಧೈರ್ಯಗೆಡದೆ ಅದನ್ನು ಹೇಗೆ ಪೂರ್ಣಗೊಳಿಸಬೇಕು ಎಂಬುದು ಕಲಿಯಲು ಸಿಗುತ್ತದೆ. ಇದರಿಂದಲೇ ಸಹನೆ ಹೆಚ್ಚುತ್ತದೆ.
ಊ. ಪ್ರಾಮಾಣಿಕತೆ : ಒಂದು ವೇಳೆ ಪರೀಕ್ಷೆಯಲ್ಲಿ ಪ್ರಶ್ನೆಗೆ ಸರಿಯಾದ ಉತ್ತರ ಬರದಿದ್ದರೆ ಇತರರ ಉತ್ತರ ಪತ್ರಿಕೆಯನ್ನು ನೋಡದೆ (ಕಾಪಿ ಮಾಡದೆ) ತಮಗೆ ತಿಳಿದಷ್ಟು ಬರೆಯುವುದರಿಂದ ಪ್ರಾಮಾಣಿಕತೆಯು ವೃದ್ಧಿಯಾಗುತ್ತದೆ.
ಬೌದ್ಧಿಕ ಗುಣಗಳು ಹೇಗೆ ಮೈಗೂಡುತ್ತವೆ ?
ಅ. ಆಯೋಜನಾಬದ್ಧತೆ : ಅಧ್ಯಯನದ ಆಯೋಜನೆ ಮಾಡಿದರೆ ಎಷ್ಟು ಗಂಟೆಗಳ ಕಾಲ ಅಥವಾ ಎಷ್ಟು ದಿನಗಳು ಅಧ್ಯಯನ ಮಾಡಿದರೆ ವಿಷಯವು ಪೂರ್ಣಗೊಳ್ಳುತ್ತದೆ ಎಂಬುದು ತಿಳಿಯುತ್ತದೆ. ಇದರಿಂದ ಆಯೋಜನೆ ಮಾಡುವ ರೂಢಿಯಾಗುತ್ತದೆ.
ಆ. ನಿರ್ಣಯ ಕ್ಷಮತೆಯು ವೃದ್ಧಿಯಾಗುವುದು : ಎರಡು ಮಹತ್ವದ ವಿಷಯಗಳಲ್ಲಿ ಯಾವ ವಿಷಯವು ಹೆಚ್ಚು ಮಹತ್ವದ್ದಾಗಿದೆ ಎಂಬುದನ್ನು ನಿರ್ಧರಿಸಬೇಕಾಗುತ್ತದೆ ಹಾಗೂ ಅದರಂತೆ ಅಧ್ಯಯನಕ್ಕೆ ಪ್ರಾಧಾನ್ಯತೆಯನ್ನು ನೀಡಬೇಕಾಗುತ್ತದೆ. ಇದರಿಂದ ನಿರ್ಣಯಕ್ಷಮತೆಯು ಹೆಚ್ಚುತ್ತದೆ.
ಇ. ಪೂರ್ವಸಿದ್ಧತೆ ಮಾಡುವುದು : ಮೊದಲಿನಿಂದಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದರೆ ಪರೀಕ್ಷೆಯ ಸಮಯದಲ್ಲಿ ಒತ್ತಡವೆನಿಸುವುದಿಲ್ಲ ಎಂಬುದು ತಿಳಿದರೆ ಪ್ರತಿಯೊಂದು ಕೆಲಸಕ್ಕಾಗಿ ಪೂರ್ವಸಿದ್ಧತೆ ಮಾಡುವ ರೂಢಿಯಾಗುತ್ತದೆ.
ಈ. ಸಮಯದ ಮಹತ್ವವನ್ನು ತಿಳಿಯುವುದು : ಸಮಯವು ಎಷ್ಟು ಮಹತ್ವದ್ದಾಗಿದೆ ಹಾಗೂ ಕೆಲವು ನಿಮಿಷಗಳೂ ಎಷ್ಟು ಮಹತ್ವದ್ದಾಗಿದೆ ಎಂಬುದು ಉತ್ತರಪತ್ರಿಕೆಯನ್ನು ಬರೆಯುವಾಗ ತಿಳಿಯುತ್ತದೆ.
ಅಧ್ಯಯನದ ತಂತ್ರಗಳನ್ನು ವಿಕಸಿತಗೊಳಿಸುವ ಸುಲಭ ಸೂತ್ರಗಳಿಗೆ ಈ ಲೇಖನದ ಅಧ್ಯಯನ ಮಾಡಿ
ಆಧ್ಯಾತ್ಮಿಕ ಗುಣಗಳು ಹೇಗೆ ಮೈಗೂಡುತ್ತವೆ ?
ಅ. ಜಿಜ್ಞಾಸುವೃತ್ತಿ ಹೆಚ್ಚುವುದು : ಪ್ರತಿಯೊಂದು ವಿಷಯದಲ್ಲಿ ಮುಂದಿನ ವಿಷಯಗಳು ಕಲಿಯಲು ಸಿಗುತ್ತವೆ ಹಾಗೂ ಜಿಜ್ಞಾಸೆಯೂ ಹೆಚ್ಚುತ್ತದೆ.
ಆ. ಕೇಳಿಕೊಳ್ಳುವ ಅಭ್ಯಾಸವಾಗುವುದು : ಯಾವುದಾದರೊಂದು ಅಂಶವು ತಿಳಿಯದಿದ್ದರೆ ಅದನ್ನು ಶಿಕ್ಷಕರ ಬಳಿ ಕೇಳಬೇಕಾಗುತ್ತದೆ.
ಇ. ತತ್ಪರತೆ : ಶಿಕ್ಷಕರ ಬಳಿ ಮನಸ್ಸಿನಲ್ಲಿ ಬಂದಂತಹ ಸಂದೇಹವನ್ನು ತತ್ಪರತೆಯಿಂದ ಕೇಳಲು ಕಲಿಯುತ್ತೇವೆ.
ಈ. ಇತರರ ಬಗ್ಗೆ ಗಮನಕೊಡದಿರುವುದು : ಯಾವುದೇ ಪ್ರಶ್ನೆ ಅಥವಾ ಸಂದೇಹವನ್ನು ಶಿಕ್ಷಕರ ಬಳಿ ಕೇಳಿದಾಗ ಇತರ ವಿದ್ಯಾರ್ಥಿಗಳು ನಗುತ್ತಾರೆ ಎಂಬುದು ತಿಳಿದಿದ್ದರೂ ಸಂದೇಹ ನಿವಾರಣೆ ಮಾಡಿಕೊಳ್ಳಬೇಕಾಗುತ್ತದೆ.
ಉ. ಉತ್ಸಾಹ ಹೆಚ್ಚುವುದು : ಪ್ರತಿದಿನ ಕಲಿಯಲು ಹೊಸ ವಿಷಯಗಳು ದೊರೆಯುವುದರಿಂದ ಉತ್ಸಾಹ ಹೆಚ್ಚುತ್ತದೆ.
ಊ. ಸಾತತ್ಯ : ಪ್ರತಿದಿನ ಶಾಲೆ/ ಮಹಾವಿದ್ಯಾಲಯಕ್ಕೆ ಹೋಗುವುದು ಹಾಗೂ ಪ್ರತಿದಿನ ಅಧ್ಯಯನ ಮಾಡುವುದರಿಂದ ಸಾತತ್ಯತೆ ಬರುತ್ತದೆ.
ಋ. ತಳಮಳ ಹೆಚ್ಚುವುದು : ಯಾವುದಾದರೂ ಪ್ರಶ್ನೆಗೆ ಉತ್ತರ ದೊರೆಯದಿದ್ದರೆ ಅದರ ಉತ್ತರ ಪಡೆಯುವ ತಳಮಳವು ಹೆಚ್ಚಾಗುತ್ತದೆ.
ಎ. ಸ್ವಭಾವದೋಷ ನಿರ್ಮೂಲನೆ : ಶಿಕ್ಷಕರು ಉತ್ತರಪತ್ರಿಕೆಯ ತಪಾಸಣೆಯ ನಂತರ ತಪ್ಪುಗಳನ್ನು ಹೇಳುತ್ತಾರೆ, ಇದರಿಂದ ಸ್ವಭಾವದೋಷಗಳು (ಉದಾ. ಗಡಿಬಿಡಿ ಮಾಡುವುದು) ತಿಳಿಯುತ್ತವೆ ಹಾಗೂ ಅವುಗಳ ನಿರ್ಮೂಲನೆ ಮಾಡುವ ಅವಕಾಶ ಲಭಿಸುತ್ತದೆ.
ಏ. ಅಹಂ ನಿರ್ಮೂಲನೆ : ಕಡಿಮೆ ಅಂಕಗಳು ದೊರೆತರೆ ತನ್ನಷ್ಟಕ್ಕೆ ಅಹಂ ನಿರ್ಮೂಲನೆಯಾಗುತ್ತದೆ. ಸ್ನೇಹಿತರಿಗೆ ಯಾವುದೇ ಪ್ರಶ್ನೆಯನ್ನು ಕೇಳಿದಾಗ ಅವರು ‘ನಿನಗೆ ಇಷ್ಟೂ ಬರುವುದಿಲ್ಲ‘ ಎಂದು ಹೇಳಿದಾಗ ಅಹಂ ನಿರ್ಮೂಲನೆಯಾಗುತ್ತದೆ.
ಐ. ಮನಸ್ಸಿನ ವಿರುದ್ಧ ಕಾರ್ಯ ಮಾಡುವುದು : ಅಧ್ಯಯನ ಮಾಡುವ ಇಚ್ಛೆ ಇಲ್ಲದಿರುವಾಗಲೂ ಅಧ್ಯಯನ ಮಾಡಲು ಕುಳಿತರೆ ಮನೋಲಯವಾಗಲು ಸಹಾಯವಾಗುತ್ತದೆ. ವಿಷಯವು ಇಷ್ಟವಾದರೂ ಇಷ್ಟವಾಗದಿದ್ದರೂ ಅಧ್ಯಯನ ಮಾಡಲೇ ಬೇಕಾಗುತ್ತದೆ ಆದುದರಿಂದ ಇಷ್ಟಾನಿಷ್ಟಗಳು ಕಡಿಮೆಯಾಗುತ್ತವೆ.
ಒ. ಇತರರ ಸಹಾಯ ಪಡೆಯುವುದು ಹಾಗೂ ಅವರಿಗೆ ಸಹಾಯ ಮಾಡುವುದು : ಯಾವುದೇ ಕಠಿಣ ಗಣಿತವು ತಿಳಿಯದಿದ್ದರೆ ಇತರ ವಿದ್ಯಾರ್ಥಿಗಳಿಗೆ ಕೇಳಬೇಕಾಗುತ್ತದೆ, ಅಂತೆಯೇ ಅವರಿಗೆ ಯಾವುದೇ ಗಣಿತ ತಿಳಿಯದಿದ್ದರೆ ಸಹಾಯ ಮಾಡಬೇಕಾಗುತ್ತದೆ.
ಓ. ತಳಮಳದಿಂದ ಪ್ರಾರ್ಥನೆ ಮಾಡುವುದು : ಒಂದು ವಿಷಯವು ಬಹಳ ಕಠಿಣವಾಗಿದ್ದರೆ ಈಶ್ವರನಿಗೆ ‘ನನಗೆ ಏನೂ ಬರುವುದಿಲ್ಲ, ನೀನು ಸಹಾಯ ಮಾಡು‘ ಎಂದು ತಳಮಳದಿಂದ ಪ್ರಾರ್ಥನೆಯಾಗುತ್ತದೆ.
ಔ. ಅಂತರ್ಮುಖತೆ ಬರುವುದು : ಇತರ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳು ದೊರೆತಾಗ ‘ನಾನು ಎಲ್ಲಿ ಹಿಂದೆ ಬೀಳುತ್ತಿದ್ದೇನೆ‘ ಎಂಬುದರ ಬಗ್ಗೆ ಅಂತರ್ಮುಖತೆಯಿಂದ ವಿಚಾರವಾಗುತ್ತದೆ.
ಅಂ. ಕೃತಜ್ಞತೆ ಹೆಚ್ಚುವುದು : ಅಧ್ಯಯನ ಮಾಡಿದ ವಿಷಯದಲ್ಲಿಯೇ ಪರೀಕ್ಷೆಯ ಪ್ರಶ್ನೆಗಳು ಬಂದಾಗ ಕೃತಜ್ಞತೆ ಅನಿಸುತ್ತದೆ.
ಅಃ. ತ್ಯಾಗ : ಅಧ್ಯಯನದ ದಿನಗಳಲ್ಲಿ ಸಂಬಂಧಿಕರು ಬಂದರೆ ಅವರೊಂದಿಗೆ ಹೊರಗೆ ಹೋಗಲು ಬರುವುದಿಲ್ಲ, ಈ ಪ್ರಸಂಗದಲ್ಲಿ ತ್ಯಾಗ ಕಲಿಯುತ್ತೇವೆ.
ಕ. ಆನಂದ ದೊರೆಯುವುದು : ಮನಃಪೂರ್ವಕವಾಗಿ ಅಭ್ಯಾಸ ಮಾಡಿದರೆ ಸಮಾಧಾನ ಹಾಗೂ ಆನಂದ ದೊರೆಯುತ್ತದೆ.
'ಹೇ ಈಶ್ವರ, ಅಧ್ಯಯನವು ಒಂದು ಸತ್ಸೇವೆಯೇ ಆಗಿದೆ ಎಂಬುದನ್ನು ಕಲಿಸಿದೆ ಹಾಗೂ ಹಾಗೆ ಮಾಡಿದರೆ ಅದರಿಂದ ವೃದ್ಧಿಯಾಗುವ ಗುಣಗಳನ್ನೂ ತೋರಿಸಿ ಕೊಟ್ಟಿರುವೆ, ಅದಕ್ಕಾಗಿ ನಾನು ನಿನ್ನ ಚರಣಗಳಲ್ಲಿ ಕೃತಜ್ಞಳಾಗಿದ್ದೇನೆ. ಈ ಎಲ್ಲ ಗುಣಗಳು ನಮ್ಮ ಎಲ್ಲ ವಿದ್ಯಾರ್ಥಿಗಳಲ್ಲಿಯೂ ಬರಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !‘
– ಕು. ಪ್ರಾಜಕ್ತಾ ಘೋಳೆ, ಚಂದೀಗಡ