ಅಕ್ಷಯ ತದಿಗೆ (ಅಕ್ಷಯತೃತಿಯಾ)

ಅಕ್ಷಯ ತದಿಗೆಯ ಮಹತ್ವ

ಅಕ್ಷಯ ತದಿಗೆಯಂದು ಬ್ರಹ್ಮ ಮತ್ತು ಶ್ರೀ ವಿಷ್ಣು ಇವರ ಸಂಯುಕ್ತ ಲಹರಿಗಳು ಉಚ್ಚ ಲೋಕದಿಂದ (ಸಗುಣಲೋಕದಿಂದ) ಪೃಥ್ವಿಯ ಮೇಲೆ ಬಂದು ಪೃಥ್ವಿಯ ಸಾತ್ವಿಕತೆಯು ಶೇಕಡ ೧೦ ರಷ್ಟು ಹೆಚ್ಚಾಗುತ್ತದೆ.

ಅರ್ಥ

ಅಕ್ಷಯ ತದಿಗೆಯ ದಿನದಂದು, ನಮಗೆ ನಿರಂತರವಾಗಿ ಸುಖ ಮತ್ತು ಸಮೃದ್ಧಿಯನ್ನು ದಯಪಾಲಿಸುವ ದೇವರಿಗೆ ಕೃತಜ್ಞತೆಯ ಭಾವವಿಟ್ಟು ಮಾಡಿದ ಉಪಾಸನೆಯಿಂದ, ನಮ್ಮ ಮೇಲೆ ಇರುವ ಆ ದೇವರ ಕೃಪೆಯು ಎಂದೂ ಕ್ಷೀಣಿಸುವುದಿಲ್ಲ. ಆದುದರಿಂದ ಆ ದಿನಂದಂದು ಕೃತಜ್ಞತಾ ಭಾವವಿಟ್ಟು ಪೂಜೆಯನ್ನು ಮಾಡಬೇಕು.

ಮೃತ್ತಿಕಾ ಪೂಜೆ

ಮೃತ್ತಿಕೆಯ (ಮಣ್ಣು/ಭೂಮಿ) ನಿರಂತರ ಕೃಪೆಯಿಂದ ನಮಗೆ ಧಾನ್ಯಲಕ್ಷ್ಮಿ, ಧನಲಕ್ಷ್ಮಿ ಮತ್ತು ವೈಭವಲಕ್ಷ್ಮಿಯ ಲಾಭವಾಗುತ್ತದೆ. ಅಕ್ಷಯ ತದಿಗೆಯಂದು ನಾವು ಕೃತಜ್ಞತೆಯ ಭಾವದಿಂದ ಮೃತ್ತಿಕೆಯ ಪೂಜೆಯನ್ನು ಮಾಡಬೇಕು.

ಭೂಮಿಯನ್ನು ಅಗೆದು ಬಿತ್ತನೆ ಮಾಡುವುದು

ಅಕ್ಷಯ ತದಿಗೆಯು ಬರುವಾಗ ಮಳೆಯ ಮೋಡಗಳನ್ನು ಜೊತೆಯಲ್ಲಿ ತರುತ್ತದೆ. ಯುಗಾದಿಯ ದಿನದಂದು ಶುಭ ಮುಹೂರ್ತದಲ್ಲಿ ಭೂಮಿಯನ್ನು ಮುಂದೆ ಉಳುಮೆ ಮಾಡಲು ತಯಾರಿಸುವ ಕಾರ್ಯವನ್ನು ಪ್ರಾರಂಭ ಮಾಡಿರುತ್ತಾರೆ. ಅಕ್ಷಯ ತದಿಗೆಯಂದು ಭೂಮಿಗೆ ಕೃತಜ್ಞತಾಪೂರ್ವಕ ಪೂಜಿಸಿ, ಉಳುಮೆ ಮಾಡಿ ಬೀಜ ಬಿತ್ತುವ ಕಾರ್ಯವನ್ನು ಮಾಡುತ್ತಾರೆ. ಹೀಗೆ, ಈ ದಿನದಂದು ಶುಭ ಮುಹೂರ್ತದಲ್ಲಿ ಬಿತ್ತನೆ ಮಾಡಿದ ಬೀಜಗಳಿಂದ ಉತ್ತಮ ಫಸಲು ಲಭಿಸುತ್ತದೆ ಮತ್ತು ಇಂತಹ ಫಸಲಿಗೆ ಯಾವುದೇ ಹಾನಿ ಬರಲಾರದು. ಇದರಿಂದ ಸಂಪತ್ತು ಪ್ರಾಪ್ತವಾಗುತ್ತದೆ. (ಹೀಗೆ ಲಭಿಸಿದ ಫಸಲಿನಿಂದ, ಒಂದು ಭಾಗವನ್ನು ತನಗಾಗಿ ಮೀಸಲಿಟ್ಟು, ಉಳಿದ ಭಾಗವನ್ನು ಇತರರಿಗೆ ಮತ್ತು ಮುಂದಿನ ವರ್ಷ ಬಿತ್ತುವ ಸಲುವಾಗಿ ಉಪಯೋಗಿಸಬೇಕು).

(ಹಿಂದಿನ ಕಾಲದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಮಳೆಯು ಒಮ್ಮೆ ಪ್ರಾರಂಭವಾದರೆ ನಿಲ್ಲುತ್ತಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಬೀಜ ಬಿತ್ತುವುದು ಅಸಾಧ್ಯವಾಗುತಿತ್ತು. ಆದುದರಿಂದ ಅಕ್ಷಯ ತದಿಗೆಯ ದಿನದಂದು, ಅಂದರೆ ಮಳೆಯು ಪ್ರಾರಂಭವಾಗುವ ಮುಂಚೆ, ಬೀಜ ಬಿತ್ತುವ ಕಾರ್ಯವನ್ನು ಮಾಡುತ್ತಿದ್ದರು. ಆದರೆ, ಈಗ ಮಳೆಯ ಪ್ರಮಾಣವು ಕ್ಷೀಣಿಸುತ್ತಿದೆ. ಭೂಮಿಯ ಫಲವತ್ತತೆಯೂ ಕಡಿಮೆ ಆಗುತ್ತಿದೆ)

ಗಿಡಗಳನ್ನು ನೆಡುವುದು

ಅಕ್ಷಯ ತದಿಗೆಯ ಶುಭ ಮುಹೂರ್ತದಲ್ಲಿ ನೆಟ್ಟ ಸಸಿಗಳಿಂದ ಸಮೃದ್ಧವಾಗಿ ಫಲಗಳ ಉತ್ಪತ್ತಿಯು ಆಗುತ್ತದೆ. ಆಯುರ್ವೇದದಲ್ಲಿ ಹೇಳಿರುವ ಔಷಧೀಯ ಗಿಡ ಮೂಲಿಕೆಗಳನ್ನು ಅಕ್ಷಯ ತದಿಗೆಯಂದು ನೆಡುವ ಕಾರ್ಯವನ್ನು ಮಾಡಿದರೆ ಆ ಗಿಡಮೂಲಿಕೆಗಳ ಕೊರತೆ ಎಂದೂ ಆಗುವುದಿಲ್ಲ.

ಅಕ್ಷಯ ತದಿಗೆಯ ದಿನ ಶ್ರೀ ವಿಷ್ಣು ಸಮೇತ ವೈಭವ ಲಕ್ಷ್ಮೀಯ ಪೂಜೆ ಮಾಡುವುದರ ಮಹತ್ವ

ಅಕ್ಷಯ ತದಿಗೆಯ ದಿನ ರಾಜರು ಮತ್ತು ಪ್ರಜೆಗಳ ಜವಾಬ್ದಾರಿ ಇರುವಂತಹ ಜನರು (ಉದಾ : ರಾಜಕಾರಿಣಿಗಳು) ಸಾರ್ವಜನಿಕ ಸ್ಥಳದಲ್ಲಿ ಶ್ರೀ ವಿಷ್ಣು ಸಮೇತ ವೈಭವ ಲಕ್ಷ್ಮೀಯ ಪ್ರತಿಮೆಯ ಪೂಜೆಯನ್ನು ಭಕ್ತಿ ಮತ್ತು ಕೃತಜ್ಞತಾ ಭಾವದಿಂದ ಪೂಜೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಪ್ರಜೆಗಳಿಗೆ ಸುಖ ಮತ್ತು ಸಮೃದ್ಧಿಯು ಪ್ರಾಪ್ತವಾಗುತ್ತದೆ. ಶ್ರೀ ವಿಷ್ಣುವಿನ ಪೂಜೆಯನ್ನು ಮಾಡುವ ಕಾರಣ ಮುಂದಿನಂತಿದೆ : ಲಕ್ಷ್ಮೀದೇವಿಯು ಶ್ರೀ ವಿಷ್ಣುವಿನ ಶಕ್ತಿ ಆಗಿದ್ದಾಳೆ. ಎಲ್ಲಿ ಶ್ರೀ ವಿಷ್ಣುವಿನ ಆಹ್ವಾನವನ್ನು ಮಾಡಿರುವುದಿಲ್ಲವೋ, ಅಲ್ಲಿ ಅವನಲ್ಲಿ ನೆಲೆಸಿರುವ ಮತ್ತು ಅವನ ಶಕ್ತಿ ಆಗಿರುವ ಲಕ್ಷ್ಮಿಯು ಹೇಗೆ ತಾನೆ ಬರುವಳು? ಆದುದರಿಂದ ಶ್ರೀವಿಷ್ಣುವಿನ ಆಹ್ವಾನವನ್ನು ಪ್ರಥಮವಾಗಿ ಮಾಡುತ್ತಾರೆ.

Leave a Comment