ಶ್ರೀಕೃಷ್ಣ ಜನ್ಮಾಷ್ಟಮಿ

ತಿಥಿ ಮತ್ತು ಇತಿಹಾಸ

ಶ್ರೀಕೃಷ್ಣನ ಜನುಮವು ಶ್ರಾವಣ ಶುಕ್ಲ ಅಷ್ಟಮಿಯ ಮಧ್ಯರಾತ್ರಿ, ರೋಹಿಣೀ ನಕ್ಷತ್ರದಲ್ಲಿ ಚಂದ್ರ ವೃಷಭ ರಾಶಿಯಲ್ಲಿರುವಾಗ ಆಯಿತು.

ಮಹತ್ವ

ಈ ದಿನದಂದು ಶ್ರೀಕೃಷ್ಣನ ತತ್ತ್ವವು ಪೃಥ್ವಿಯ ಮೇಲೆ ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನದಂದು ಶ್ರೀಕೃಷ್ಣನ ಉಪಾಸನೆ ಮಾಡಿ ಶ್ರೀಕೃಷ್ಣ ತತ್ತ್ವ ಅತಿ ಹೆಚ್ಚು ಲಾಭ ಪಡೆಯುವುದೆಂದರೆ ಶ್ರೀಕೃಷ್ಣ ಜನ್ಮಾಷ್ಟಮಿಯ ಆಚರಣೆಯಾಗಿದೆ.

ಈಗ ನಾವು ಶ್ರೀಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳೋಣ

ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ |

ಪ್ರಣತಃ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ ||

ಅರ್ಥ : ಸರ್ವ ದುಃಖಗಳನ್ನು ದೂರ ಮಾಡುವ, ಭಕ್ತರ ಪೀಡೆ, ಕ್ಲೇಶಗಳನ್ನು ನಾಶ ಮಾಡುವ, ಶರಣಾದವರಿಗೆ ಅಭಯವನ್ನು ಪ್ರದಾನಿಸುವ ಮತ್ತು ನಿಸ್ಸೀಮ ಭಕ್ತಿಗೆ ಆನಂದವನ್ನು ನೀಡುವ, ವಾಸುದೇವ ಕೃಷ್ಣನಿಗೆ ನಮಸ್ಕಾರಗಳು!

ಈ ಶ್ಲೋಕದಲ್ಲಿ ಭಗವಾನ್ ಶ್ರೀಕೃಷ್ಣನ ಅನೇಕ ಗುಣ ವೈಶಿಷ್ಟ್ಯಗಳನ್ನು ಸ್ಮರಿಸಿ, ಅವನನ್ನು ನಮಿಸಲಾಗಿದೆ. ಹೀಗೆ ಮಾಡಿದರೆ ಭಕ್ತನಿಗೆ ಭಗವಂತನ ಬಗ್ಗೆ ಭಾವ ನಿರ್ಮಾಣವಾಗಿ, ಅವನು ಭಗವಂತನ ಕೃಪೆಗೆ ಪಾತ್ರನಾಗುತ್ತಾನೆ.

ಶ್ರೀಕೃಷ್ಣನ ವೈಶಿಷ್ಟ್ಯಗಳು!

ಕುಶಲ ರಾಜನೀತಿಜ್ಞ, ಮಹಾನ್ ತತ್ತ್ವಜ್ಞಾನಿ, ಸಮಾಜ ರಕ್ಷಣೆಯ ಧ್ಯೇಯವೊಂದೆ ಇಟ್ಟುಕೊಂಡ, ಸಾಮಾಜಿಕ ಕರ್ತವ್ಯಪರ ದಕ್ಷ, ಇತರ ಕಲ್ಯಾಣಕ್ಕಾಗಿಯೇ ಎಲ್ಲವನ್ನೂ ಮಾಡುವ, ಅನ್ಯಾಯವನ್ನು ಸಹಿಸದ, ದುರ್ಜನರ ನಾಶ ಮಾಡುವವ, ಇವು ಶ್ರೀಕೃಷ್ಣನ ಮಹತ್ವದ ವೈಶಿಷ್ಟ್ಯಗಳಾಗಿವೆ.

'ಶ್ರೀ' ಈ ಅಕ್ಷರದ ಅರ್ಥ

'ಶ್ರೀಕೃಷ್ಣ' ಈ ಶಬ್ದದಲ್ಲಿರುವ 'ಶ್ರೀ' ಶಬ್ದವು ಶಕ್ತಿ, ಸೌಂದರ್ಯ, ಸದ್ಗುಣ, ವೈಭವ ಮುಂತಾದ ಗುಣಗಳ ಸಮುಚ್ಚಯ ಅಥವಾ ಸಂಗ್ರಹವಾಗಿದೆ. ನಮ್ಮ ಹೆಸರಿನ ಮುಂದೆ ನಾವು 'ಶ್ರೀ' ಎಂದು ಹಾಕಿಕೊಳ್ಳುತ್ತೇವೆ. ಅದರಲ್ಲಿ 'ಶ್ರೀ' ನಂತರ ಒಂದು ಪೂರ್ಣವಿರಾಮ ವಿರುತ್ತದೆ. ಇದರ ಅರ್ಥ ಅದು 'ಶ್ರೀಯುತ' ಎಂಬುವುದರ ಸಂಕ್ಷಿಪ್ತ ರೂಪವಾಗಿದೆ. ನಾವು 'ಶ್ರೀಯುತ'ರಾಗಿರುತ್ತೇವೆ, ಅಂದರೆ 'ಶ್ರೀ' ಯಿಂದ 'ಯುಕ್ತ'; ನಮ್ಮಲ್ಲಿ ದೇವರ ಅಂಶವಿರುತ್ತದೆ. ಆದರೆ ಶ್ರೀಕೃಷ್ಣನು ಸ್ವತಃ ಭಗವಂತನಾಗಿರುವುದರಿಂದ, 'ಶ್ರೀಕೃಷ್ಣ'ನಲ್ಲಿ 'ಶ್ರೀ'ಯ ನಂತರ ಪೂರ್ಣವಿರಾಮವಿರುವುದಿಲ್ಲ.

ಶ್ರೀಕೃಷ್ಣನಿಗೆ ತುಳಸಿಯನ್ನು ಏಕೆ ಅರ್ಪಿಸುತ್ತಾರೆ?

ದೇವತೆಗಳ ಪವಿತ್ರಕವೆಂದರೆ ಆ ದೇವತೆಯ ಸೂಕ್ಷ್ಮಾತಿ ಸೂಕ್ಷ್ಮ ಕಣಗಳ ರೂಪ. ಯಾವ ವಸ್ತುವಿನಲ್ಲಿ ಆ ದೇವತೆಯ ಪವಿತ್ರಕಗಳನ್ನು ಹೆಚ್ಚು ಆಕರ್ಷಿಸುವ ಕ್ಷಮತೆಯು ಇತರ ವಸ್ತುಗಳಿಗಿಂತ ಹೆಚ್ಚು ಇದೆಯೋ, ಅಂತಹ ವಸ್ತುವನ್ನು ಆ ದೇವತೆಗೆ ಅರ್ಪಿಸಿದರೆ, ಸಹಜವಾಗಿ ಆ ದೇವತೆಯ ಮೂರ್ತಿಯಲ್ಲಿ ದೇವತೆಯ ತತ್ತ್ವವು ಬಂದು ನಮಗೆ ಬೇಗ ಚೈತನ್ಯದ ಲಾಭವಾಗುತ್ತದೆ. ಆದುದರಿಂದ ಶ್ರೀಕೃಷ್ಣನಿಗೆ ತುಳಸಿಯನ್ನು ಅರ್ಪಿಸುತ್ತಾರೆ. ತುಳಸಿಯಲ್ಲಿ ಶ್ರೀಕೃಷ್ಣ ತತ್ತ್ವವು ಅಧಿಕ ಪ್ರಮಾಣದಲ್ಲಿರುತ್ತದೆ. ಕೃಷ್ಣ ತುಳಸಿಯು (ಕಪ್ಪು ಎಲೆಗಳ) ಶ್ರೀಕೃಷ್ಣನ ಮಾರಕ ತತ್ತ್ವದ ಪ್ರತೀಕವಾದರೆ, ಹಸಿರು ತುಳಸಿಯು ಅವನ ತಾರಕ ತತ್ತ್ವದ ಪ್ರತೀಕವಾಗಿದೆ.

ಶ್ರೀಕೃಷ್ಣನಿಗೆ ಯಾವ ಹೂವುಗಳನ್ನು ಅರ್ಪಿಸಬೇಕು?

ಕೃಷ್ಣಕಮಲದ ಹೂವಿನಲ್ಲಿ ಶ್ರೀಕೃಷ್ಣ ತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಇತರ ಹೂವುಗಳಿಗಿಂತ ಹೆಚ್ಚಾಗಿರುವುದರಿಂದ ಶ್ರೀಕೃಷ್ಣನಿಗೆ ಕೃಷ್ಣಕಮಲದ ಹೂವುಗಳನ್ನು ಅರ್ಪಿಸಬೇಕು. ಹೂವುಗಳನ್ನು ವಿಶಿಷ್ಟ ಸಂಖ್ಯೆ ಮತ್ತು ವಿಶಿಷ್ಟ ಆಕಾರದಲ್ಲಿ ದೇವತೆಯ ಚರಣಗಳಲ್ಲಿ ಅರ್ಪಿಸಿದರೆ, ಆ ದೇವತೆಯ ತತ್ತ್ವವು ಬೇಗನೆ ಆಕರ್ಷಿತವಾಗುತ್ತದೆ. ಇದಕ್ಕನುಸಾರ, ಶ್ರೀಕೃಷ್ಣನಿಗೆ ಹೂವುಗಳನ್ನು ಅರ್ಪಿಸುವಾಗ ೩ ಅಥವಾ ಮೂರರ ಪಟ್ಟಿನಲ್ಲಿ ಲಂಬಗೋಲಾಕಾರದಲ್ಲಿ ಅರ್ಪಿಸಬೇಕು. ಶ್ರೀಕೃಷ್ಣನಿಗೆ ಸುಗಂಧ ದ್ರವ್ಯವನ್ನು ಅರ್ಪಿಸುವಾಗ ಚಂದನದ ಸುಗಂಧವನ್ನು ಅರ್ಪಿಸಬೇಕು.

ಪೂರ್ಣಾವತಾರಿ ಶ್ರೀಕೃಷ್ಣ !

ಶ್ರೀಕೃಷ್ಣನು ಒಂದೇ ಸಮಯದಲ್ಲಿ ಇಚ್ಛೆ, ಕ್ರಿಯೆ ಮತ್ತು ಜ್ಞಾನದ ಮೂರು ಶಕ್ತಿಗಳ ಸ್ತರದಲ್ಲಿ ಕಾರ್ಯ ನಿರ್ವಹಿಸಬಲ್ಲನು, ಆದುದರಿಂದ ಅವನನ್ನು ಪೂರ್ಣಾವತಾರಿ ಎಂದು ಕರೆಯುತ್ತಾರೆ.

ಶ್ರೀಕೃಷ್ಣನಿಗೆ ಎಷ್ಟು ಪ್ರದಕ್ಷಿಣೆಗಳನ್ನು ಹಾಕಬೇಕು?

ಶ್ರೀಕೃಷ್ಣನು ಇಚ್ಛೆ, ಕ್ರಿಯೆ ಮತ್ತು ಜ್ಞಾನದ ಮೂರು ಶಕ್ತಿಗಳ ಸ್ತರದಲ್ಲಿ ಕಾರ್ಯ ನಿರ್ವಹಿಸಬಲ್ಲನು. ಅದರ ಪ್ರತೀಕವಾಗಿ ಶ್ರೀಕೃಷ್ಣನಿಗೆ ಕಡಿಮೆ ಪಕ್ಷ ೩ ಮತ್ತು ಮೂರರ ಪಟ್ಟಿನಲ್ಲಿ ಪ್ರದಕ್ಷಿಣೆಯನ್ನು ಹಾಕಬೇಕು. ಪ್ರತಿಯೊಂದು ಪ್ರದಕ್ಷಿಣೆ ಹಾಕಿದ ನಂತರ ದೇವರಿಗೆ ನಮಸ್ಕಾರ ಮಾಡಿ ನಂತರ ಮುಂದಿನ ಪ್ರದಕ್ಷಿಣೆಯನ್ನು ಹಾಕಬೇಕು.ಕನಿಷ್ಠ ಪಕ್ಷ ೩ ಪ್ರದಕ್ಷಿಣೆಗಳನ್ನು ಹಾಕಿ ಮತ್ತೆ ಶಕ್ತ್ಯಾನುಸಾರ ಮೂರರ ಪಟ್ಟಿನಲ್ಲಿ ಹೆಚ್ಚು ಪ್ರದಕ್ಷಿಣೆಗಳನ್ನು ಹಾಕಬಹುದು. ಪ್ರದಕ್ಷಿಣೆ ಹಾಕುವಾಗ ದೇವತೆಯ ಕಡೆಯಿಂದ ಪ್ರಕ್ಷೆಪಿತವಾಗುವ ಚೈತನ್ಯವು ಅಲ್ಪ ಸಮಯದಲ್ಲಿ ಶರೀರದಲ್ಲಿ ಕ್ರಮಿಸುತ್ತದೆ. ಯಾರಿಗಾದರೂ ಪ್ರದಕ್ಷಿಣೆ ಹಾಕಲು ಕಷ್ಟವಾಗುತ್ತಿದ್ದರೆ, ಅವರು ನಿಂತಲ್ಲಿಯೇ ಪ್ರದಕ್ಷಿಣೆ ಹಾಕಬಹುದು.

ಈ ದಿನದಂದು ಶ್ರೀಕೃಷ್ಣನ ನಾಮಜಪವನ್ನು ಮಾಡುವುದರ ಮಹತ್ವ

ಈ ದಿನದಂದು ಆದಷ್ಟು 'ಓಂ ನಮೋ ಭಗವತೇ ವಾಸುದೇವಾಯ |' ಈ ನಾಮಜಪವನ್ನು ಮಾಡಬೇಕು. ಇದರಿಂದಾಗಿ ಇತರ ದಿನಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುವ ಶ್ರೀಕೃಷ್ಣನ ತತ್ವದಿಂದ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭವಾಗುತ್ತದೆ.

ಆಧಾರ : ಸನಾತನ ಪ್ರಕಾಶಿಸಿದ ಕಿರು ಗ್ರಂಥ 'ಶ್ರೀಕೃಷ್ಣ'

Leave a Comment