ಈಗಿನ ಮಕ್ಕಳು ಶಾಲೆಗೆ ಹೋಗುವಾಗ ಮನೆಯಿಂದ ಬುತ್ತಿಯನ್ನು ತೆಗೆದುಕೊಂಡು ಹೋಗಲು ಬಯಸುವುದಿಲ್ಲ. ಅವರಿಗೆ ಡಬ್ಬಿಯಿಂದ ಊಟ ತಿನ್ನಲು ನಾಚಿಕೆಯೆನಿಸುತ್ತದೆ. ದುಡ್ಡು ಕೊಟ್ಟು ಸಿಗುವ ಪದಾರ್ಥಗಳತ್ತ ಅವರ ಒಲವಿರುತ್ತದೆ. ಈ ಲೇಖನದಲ್ಲಿ ಬುತ್ತಿಯ ವಿಷಯದಲ್ಲಿ ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ.
ಶಾಲೆಯ ಊಟದ ಡಬ್ಬಿಯಲ್ಲಿ ಮನೆಯಿಂದಲೇ ಪದಾರ್ಥಗಳನ್ನು ಒಯ್ಯಬೇಕು
ಮಕ್ಕಳೇ, ಅಂಗಡಿಗಳಲ್ಲಿ ಸಿಗುವ ಕೇಕ್, ಬಿಸ್ಕೆಟ್, ಚಿಪ್ಸ್ ಮುಂತಾದ ಖಾದ್ಯಪದಾರ್ಥಗಳು ಉತ್ಪಾದನೆಯ ನಂತರ ತುಂಬ ದಿನಗಳ ವರೆಗೆ ಹಾಗೆಯೇ ಇರುತ್ತವೆ. ಮಾತ್ರವಲ್ಲದೆ, ಈ ಪದಾರ್ಥಗಳಲ್ಲಿ ಕಲಬೆರಕೆಯ ವಸ್ತುಗಳಿರುವ ಸಾಧ್ಯತೆಯೂ ಇರುತ್ತದೆ. ಇಂತಹ ಖಾದ್ಯಪದಾರ್ಥಗಳಿಂದ ಪೋಷಣೆಯೂ ಆಗುವುದಿಲ್ಲ. ಈ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಆಗುವ ಸಾಧ್ಯತೆ ಇರುತ್ತದೆ. ಆದುದರಿಂದ ಇಂತಹ ಪದಾರ್ಥಗಳನ್ನು ಶಾಲೆಯ ಊಟದ ಡಬ್ಬಿಯಲ್ಲಿ ಹಾಕಿಕೊಂಡು ಹೋಗಬಾರದು. ಮನೆಯಲ್ಲಿಯೇ ತಯಾರಿಸಿದ ಚಪಾತಿ-ಪಲ್ಯ, ಅನ್ನದ ಪದಾರ್ಥಗಳು, ಮುಂತಾದ ಶುದ್ಧ ಮತ್ತು ಆರೋಗ್ಯಕರ ಖಾದ್ಯಪದಾರ್ಥಗಳಿಂದ ಅಧಿಕ ಪೌಷ್ಟಿಕಾಂಶಗಳು ಸಿಗುತ್ತವೆ. ಅದಲ್ಲದೆ, ತಾಯಿಯ ಪ್ರೀತಿಯೂ ಆ ಪದಾರ್ಥದಲ್ಲಿ ಬೆರೆತಿರುತ್ತದೆ. ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೂ ಇಲ್ಲ! ಆದುದರಿಂದ ಶಾಲೆಯ ಬುತ್ತಿಯಲ್ಲಿ ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನೇ ಒಯ್ಯಬೇಕು.
ಬುತ್ತಿಯ ಬಗ್ಗೆ ಕೆಲವು ಸೂಚನೆಗಳು
ಅ. ಡಬ್ಬಿಯನ್ನು ತೆರೆದು ಪದಾರ್ಥಗಳನ್ನು ತಿನ್ನುವ ಮೊದಲು ಕೈಗಳನ್ನೂ ಚೆನ್ನಾಗಿ ತೊಳೆದುಕೊಳ್ಳಿ.
ಆ. ಡಬ್ಬಿಯ ಮುಚ್ಚಳ ತೆರೆದು ಕುಲದೇವತೆ ಅಥವಾ ಇಷ್ಟ ದೇವತೆಗೆ ಪ್ರಾರ್ಥನೆಯನ್ನು ಮಾಡಬೇಕು.
ಇ. ನಿಮ್ಮ ಸಹಪಾಠಿಯ ಹತ್ತಿರ ತಿನ್ನಲು ಏನೂ ಇರದಿದ್ದರೆ, ನಿಮ್ಮ ಡಬ್ಬಿಯ ಪದಾರ್ಥದಿಂದ ಸ್ವಲ್ಪ ಭಾಗ ಅವನ ಜೊತೆ ಹಂಚಿಕೊಳ್ಳಬೇಕು.
ಈ. ಡಬ್ಬಿಯಲ್ಲಿರುವ ಪದಾರ್ಥವನ್ನು ಸಂಪೂರ್ಣವಾಗಿ ಮುಗಿಸಬೇಕು.
ಉ. ಆಹಾರವು ಕೆಳಗಡೆ ಚೆಲ್ಲದ ಹಾಗೆ ಜಾಗ್ರತೆ ವಹಿಸಬೇಕು. ತಪ್ಪಿ ಚೆಲ್ಲಿದರೆ ಅದನ್ನು ಅಲ್ಲಿಯೇ ಬಿಡದೆ ಅದನ್ನು ಕಸದ ಬುಟ್ಟಿಯಲ್ಲಿ ಹಾಕಬೇಕು.
ಊ. ನೀರು ಕುಡಿದು ಕೈ ಹಾಗೂ ಬಾಯಿಯನ್ನು ಚೆನ್ನಾಗಿ ಸ್ವಚ್ಚಗೊಳಿಸಬೇಕು.