ಒಮ್ಮೆ ಚಂದ್ರನು 'ನಿನ್ನ ದೊಡ್ಡ ಹೊಟ್ಟೆ ಏನು, ಬೀಸಣಿಗೆಯಂತಿರುವ ಕಿವಿಗಳೇನು, ಆ ಸೊಂಡಿಲು, ಆ ಚಿಕ್ಕ ಕಣ್ಣುಗಳೇನು!' ಎಂದು ಗಣಪತಿಯ ರೂಪದ ಬಗ್ಗೆ ಚೇಷ್ಟೆಯನ್ನು ಮಾಡಿದನು. ಗಣಪತಿಯು ಅದನ್ನು ಕೇಳಿ ಚಂದ್ರನನ್ನು ಸಂಬೋಧಿಸುತ್ತ 'ಇನ್ನು ಮುಂದೆ ನಿನನ್ನು ಯಾರು ಕಣ್ಣೆತ್ತಿ ನೋಡಲಾರರು, ಒಂದೊಮ್ಮೆ ನೋಡಿದರೆ ಅಂಥವರ ಮೇಲೆ ಕಳ್ಳತನದ ಆರೋಪ ಬರುವುದು' ಎಂದು ಶಪಿಸಿದನು. ಆದುದರಿಂದ ಯಾರೂ ಕೂಡ ಚಂದ್ರನನ್ನು ನೋಡದೆ, ಚಂದ್ರನು ತಮ್ಮ ಕಣ್ಣಿಗೆ ಬೀಳದ ಹಾಗೆ ಓಡಾಡುತ್ತಿದ್ದರು. ಅವನಿಗೆ ಎಲ್ಲಿಯೂ ಹೋಗಲು ಆಗುತ್ತಿರಲಿಲ್ಲ. ಒಬ್ಬಂಟಿ ಜೀವನ ಅವನಿಗೆ ಕಷ್ಟವಾಗತೊಡಗಿತು. ಆದಕ್ಕಾಗಿ ಚಂದ್ರನು ತೀವ್ರ ತಪಸ್ಸನ್ನು ಆಚರಿಸಿ ಶ್ರೀ ಗಣಪತಿಯನ್ನು ಪ್ರಸನ್ನಗೊಳಿಸಿದನು. ಗಣಪತಿಯ ಹತ್ತಿರ ತನಗೆ ಕೊಟ್ಟ ಶಾಪವನ್ನು ಹಿಂಪಡೆಯಲು ಪ್ರಾರ್ಥಿಸಿದನು. 'ನಾವೇ ಕೊಟ್ಟಿರುವ ಶಾಪವನ್ನು ಸಂಪೂರ್ಣವಾಗಿ ಹಿಂಪಡೆಯಲು ಆಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಮೂಲ ಶಾಪವು ಉಳಿಯುತ್ತದೆ, ಇನ್ನುಳಿದ ಶಾಪವನ್ನು ಹಿಂಪಡೆಯಬಹುದು' ಎಂದು ವಿಚಾರ ಮಾಡಿ ಶ್ರೀ ಗಣಪತಿಯು 'ಗಣೇಶ ಚತುರ್ಥಿಯಂದು ಯಾರೂ ನಿನ್ನ ದರ್ಶನವನ್ನು ಪಡೆಯಲಾರರು; ಆದರೆ ಸಂಕಷ್ಟ ಚತುರ್ಥಿಯಂದು ನಿನ್ನ ದರ್ಶನವಾಗದೆ ಯಾರೂ ಭೋಜನವನ್ನು ಸ್ವೀಕರಿಸುವುದಿಲ್ಲ' ಎಂದು ಚಂದ್ರನಿಗೆ ನೀಡಿದ ಶಾಪವನ್ನು ಹಿಂಪಡೆದರು.