ಸಂಸ್ಕೃತ ಸುಭಾಷಿತಗಳು ೧

ಚಿಂತಾ ಚಿತಾ ಸಮಾನಾsಸ್ತಿ ಬಿಂದುಮಾತ್ರವಿಶೇಷತಃ |
ಸಜೀವಂ ದಹತೇ ಚಿಂತಾ ನಿರ್ಜೀವಂ ದಹತೇ ಚಿತಾ ||

ಅರ್ಥ: ಚಿಂತೆ ಮಾತು ಚಿತೆಯಲ್ಲಿ ಕೇವಲ ಅನುಸ್ವಾರದ ವ್ಯತ್ಯಾಸವಿದೆ. ಚಿಂತೆಯು ಜೀವವಿರುವವರನ್ನು ಸುಟ್ಟರೆ, ಚಿತೆಯು ನಿರ್ಜೀವಿ (ಸತ್ತವರನ್ನು) ಸುಡುತ್ತದೆ.

ವಿದ್ಯಾ ಶಸ್ತ್ರಸ್ಯ ಶಾಸ್ತ್ರಸ್ಯ ದ್ವೇ ವಿದ್ಯೇ ಪ್ರತಿಪತ್ತಯೇ |
ಆದ್ಯಾ ಹಾಸ್ಯಾಯ ವೃದ್ಧತ್ವೇ ದ್ವಿತೀಯಾsದ್ರಿಯತೇ ಸದಾ ||

ಅರ್ಥ: ಶಸ್ತ್ರವಿದ್ಯೆ ಮತ್ತು ಶಾಸ್ತ್ರವಿದ್ಯೆ (ಜ್ಞಾನ) ಇವೆರಡೂ ವಿದ್ಯೆಗಳಿಂದ ಕೀರ್ತಿಯನ್ನು ಗಳಿಸಬಹುದಾದರೂ, ವ್ರದ್ಧಾಪ್ಯದಲ್ಲಿ ಮೊದಲನೆಯದು (ಉಪಯುಕ್ತವಾಗಿರದೆ) ಹಾಸ್ಯಾಸ್ಪದವಾಗಿರುತ್ತದೆ, ಆದರೆ ಎರಡನೆಯದಕ್ಕೆ ಸದಾ ಮನ್ನಣೆ ಇರುತ್ತದೆ.

ನಾಪ್ರಾಪ್ಯಮಭಿವಾಞ್ಛನ್ತಿ ನಷ್ಟಂ ನೇಚ್ಛನ್ತಿ ಶೋಚಿತುಮ್ |
ಆಪತ್ಸ್ವಪಿ ನ ಮುಹ್ಯನ್ತಿ ನರಾಃ ಪಂಡಿತಬುದ್ಧಯಃ ||

ಅರ್ಥ: ವಿದ್ವಾಂಸರು ಸಿಗಲಾರದ ವಸ್ತುಗಳನ್ನು ಇಚ್ಚಿಸುವುದಿಲ್ಲ, ನಾಶವಾಗಿರುವ ವಸ್ತುಗಳ ಬಗ್ಗೆ ದುಃಖಪಡುವುದಿಲ್ಲ ಮತ್ತು ಸಂಕಟ ಬಂದಾಗ ಚಂಚಳವಾಗಿರುವುದಿಲ್ಲ (ಧೃಡವಾಗಿರುತ್ತಾರೆ).

ನಷ್ಟಂ ದ್ರವ್ಯಂ ಲಭ್ಯತೇ ಕಷ್ಟಸಾಧ್ಯಂ , ನಷ್ಟಾ ವಿದ್ಯಾ ಲಭ್ಯತೇsಭ್ಯಾಸಯುಕ್ತಾ |
ನಷ್ಟಾರೋಗ್ಯಂ ಸೂಪಚಾರೈಃ ಸುಸಾಧ್ಯಮ್ ನಷ್ಟಾ ವೇಲಾ ಯಾ ಗತಾ ಸಾ ಗತೈವ ||


ಅರ್ಥ: ಕಳೆದು ಹೋದ ಸಂಪತ್ತು ಕಷ್ಟಪಟ್ಟು ಗಳಿಸಬಹುದು. (ಮರೆತುಹೋದ) ವಿದ್ಯೆಯು ಪುನರಧ್ಯಯನದಿಂದ ಮತ್ತೆ ಲಭಿಸುತ್ತದೆ. ಆರೋಗ್ಯವು ಕೆಟ್ಟು ಹೋದರೆ, ಶುಶ್ರೂಷೆಯಿಂದ ಅದು ಕೂಡ ಗಳಿಸಬಹುದು. ಆದರೆ, ವ್ಯರ್ಥ ಮಾಡಿಕೊಂಡ (ಕಳೆದುಕೊಂಡ) ಸಮಯವು ತಿರುಗಿ ಸಿಗಲಾರದು. (ಸಮಯದ ಸದುಪಯೋಗ ಮಾಡಿ)

ಯತ್ರ ವಿದ್ವವಜ್ಜನೋ ನಾಸ್ತಿ ಶ್ಲಾಘ್ಯಸ್ತತ್ರಾಲ್ಪಧೀರಪಿ |
ನಿರಸ್ತಪಾದಪೇ ದೇಶೇ ಏರಣ್ಡೋsಪಿ ದ್ರುಮಾಯತೇ ||

ಅರ್ಥ: ಯಾವ ಊರಲ್ಲಿ ವಿದ್ವಾಂಸರು ಇಲ್ಲವೋ, ಅಂತಹ ಜಾಗದಲ್ಲಿ ಅಲ್ಪಮತಿಗಳು (ಕಡಿಮೆ ಬುದ್ಧಿಯಿರುವವರು) ಕೂಡ ಪ್ರಶಂಸೆಗೆ ಪಾತ್ರರಾಗುತ್ತಾರೆ. ದೊಡ್ಡ ವೃಕ್ಷವಿಲ್ಲದ ಸ್ಥಳದಲ್ಲಿ ಹೇಗೆ ಹರಳೆಣ್ಣೆಯ ಗಿಡ ‘ವೃಕ್ಷ’ವೆಂದು ಮೆರೆಯುತ್ತದೆಯೋ (ಹಾಗೆ).

ವಾಚ್ಯಂ ಶ್ರದ್ಧಾಸಮೇತಸ್ಯ ಪೃಚ್ಛಕಸ್ಯ ವಿಶೇಷತಃ |
ಪ್ರೋಕ್ತಂ ಶ್ರದ್ಧಾವಿಹೀನಾಯ ಹ್ಯರಣ್ಯರುದಿತಂ ಭವೇತ್‌ ||

ಅರ್ಥ:ಯಾರಿಗೆ (ನಮ್ಮ ಮೇಲೆ) ವಿಶ್ವಾಸವಿದೆಯೋ, ಮತ್ತು ಹೆಚ್ಚಾಗಿ ಅವರು ನಮ್ಮಲ್ಲಿ (ಅದರ ಬಗ್ಗೆ) ವಿಚಾರಿಸುತ್ತಾರೆಯೋ ಅವರಿಗೆ ಉಪದೇಶಿಸಬೇಕು (ಮಾರ್ಗದರ್ಶನ ಮಾಡಬೇಕು). ಆದರೆ ವಿಶ್ವಾಸವಿಲ್ಲದಿದ್ದವರಿಗೆ ಹೇಳಿದರೆ ನಮ್ಮ ಪರಿಶ್ರಮ ವ್ಯರ್ಥವಾಗುತ್ತದೆ.

ಅವಜ್ಞಾತ್ರುಟಿತಂ ಪ್ರೇಮ ನವೀಕರ್ತುಂ ಕ ಈಶ್ವರಃ |
ಸಂಧಿಂ ನ ಯಾಂತಿ ಸ್ಫುಟಿತಂ ಲಾಕ್ಷಾಲೇಪೇನ ಮೌಕ್ತಿಕಮ್ ||

ಅರ್ಥ: ಅವಮಾನದಿಂದ ಮುರಿದುಬಿದ್ದ ಪ್ರೀತಿಯನ್ನು ಪುನಃ ಸರಿಪಡಿಸಲು ಯಾರಿಗೆ ಸಾಮರ್ಥ್ಯವಿದೆ? ಹೇಗೆ ಒಂದು ಮುತ್ತು ಒಡೆದು ಚೂರಾಗಿದ್ದರೆ (ನಾವು) ಒಂದು ಲಕ್ಷದ ಲೇಪವನ್ನು ಹಾಕಿದರೂ (ಅದನ್ನು) ಸಂಧಿಸಲು ಸಾಧ್ಯವಿಲ್ಲ (ಹಾಗೆಯೇ ಯಾರಿಂದಾದರೂ ಅವಮಾನವಾದರೆ, ಪುನಃ ಸಾಮೀಪ್ಯ ಬೆಳೆಸಲು ಆಗುವುದಿಲ್ಲ).

ಶ್ವ:ಕಾರ್ಯಮದ್ಯ ಕುರ್ವೀತ ಪೂರ್ವಾಂಣ್ಹೇ ಚಾಪರಾಣ್ಹಿಕಮ್ |
ನ ಹಿ ಪ್ರತೀಕ್ಷತೇ ಮೃತ್ಯುಃ ಕೃತಮಸ್ಯ ನ ವಾ ಕೃತಮ್ ||


ಅರ್ಥ: ನಾಳೆ ಮಾಡುವ ಕೆಲಸ ಕಾರ್ಯಗಳನ್ನು ಇವತ್ತೇ ಮಾಡಬೇಕು, ಮತ್ತು ಮಧ್ಯಾಹ್ನ ಮಾಡುವ ಕಾರ್ಯವನ್ನು ಬೆಳಗ್ಗೆಯೇ ಮಾಡಬೇಕು. ಕಾರಣವೇನೆಂದರೆ ‘ಈ ಮನುಷ್ಯನ ಎಲ್ಲ ಕೆಲಸ ಮುಗಿದಿದೆಯೇ ಇಲ್ಲವೇ’ ಎಂದು ಮೃತ್ಯು ಕಾದು ಕುಳಿತಿರುತ್ತದೆ.


ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿಗಚ್ಛತಿ |
ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ ||

ಅರ್ಥ: ಹೇಗೆ ಗುದ್ದಲಿಯಿಂದ (ನಿರಂತರ ಒಂದೇ ಕಡೆ) ಗಡ್ಡ ತೊಡುತ್ತಾ ಹೋದರೆ ಮನುಷ್ಯನಿಗೆ (ಭೂಮಿಯೊಳಗಿನ) ನೀರು ಸಿಗುತ್ತದೆಯೋ, ಅದೇ ರೀತಿ ಗುರುಗಳ ಸೇವೆಯನ್ನು (ನಿಷ್ಠೆಯಿಂದ) ಮಾಡುವ (ಮತ್ತು ಅವರಿಂದ ವಿದ್ಯೆಯನ್ನು ಕಲಿಯಲು ಪರಿತಪಿಸುವ) ವಿದ್ಯಾರ್ಥಿಗೆ ಗುರುಗಳಿಂದ ವಿದ್ಯೆಯು ಖಂಡಿತ ಲಭಿಸುತ್ತದೆ.

ತ್ವಯಿ ಮೇsನನ್ಯವಿಷಯಾ ಮತಿರ್ಮಧುತೇsಸಕೃತ್ |
ರತಿಮುದ್ವಹತಾದ್ಧಾ ಗಂಗೇವೋಘಮುದನ್ವತಿ || ಕುಂತೀ ಭಾಗವತ ೧ ಸ್ಕಂಧ ೮ ಅಧ್ಯಾಯ


ಅರ್ಥ: ಮಧು ರಾಕ್ಷಸನನ್ನು ವಧಿಸಿದ ಹೇ ಕೃಷ್ಣನೇ, ಹೇಗೆ ಗಂಗೆಯ ಪ್ರವಾಹವು ಅವ್ಯಾಹತವಾಗಿ ಸಮುದ್ರದೆಡೆಗೆ ಇರುತ್ತದೆಯೋ, ಅದೇ ರೀತಿ ನಿನ್ನ ವಿಚಾರಗಳು ನನ್ನ ಮನಸ್ಸಿನಲ್ಲಿ ಅವಿಭಕ್ತವಾಗಿ ಬರಲಿ (ಬೇರೆ ಯಾವುದೇ ವಿಚಾರಗಳಿಗೆ ಆಸ್ಪದವಿಲ್ಲದೆ).

ವಿಪದಃ ಸಂತು ನಃ ಶಶ್ವತ್ತತ್ರ ತತ್ರ ಜಗದ್ಗುರೋ |
ಭವತೋ ದರ್ಶನಂ ಯತ್ಸ್ಯಾದಪುನರ್ಭವದರ್ಶನಮ್ || ಕುಂತೀ ಭಾಗವತ ೧ ಸ್ಕಂಧ ೮ ಅಧ್ಯಾಯ.

ಅರ್ಥ: ಜಗತ್ತಿನಲ್ಲಿಯೇ ಶ್ರೇಷ್ಠನಾದ ಶ್ರೀ ಕೃಷ್ಣನೇ, ನಮಗೆ ಸತತವಾಗಿ (ನಿಮ್ಮ ನೆನಪು ಬರುವಂತೆ ಆಗಲು) ಸಂಕಟಗಳು ಬರಲಿ, ಮತ್ತು ನಾವು ಈ ಜನ್ಮ ಮೃತ್ಯುವಿನ ಚಕ್ರದಿಂದ ಹೊರಬಂದು ನಿನ್ನ ದರ್ಶನವಾಗುವಂತಾಗಲಿ.

Leave a Comment