'ನಾನು ರಾಷ್ಟ್ರದ ಅಧಾರ ಸ್ತಂಭವನ್ನು ಕಟ್ಟುತ್ತಿದ್ದೇನೆ' ಎಂಬ ದೃಷ್ಟಿಕೋನ ಇಟ್ಟುಕೊಳ್ಳಿ
'ಪಾಲಕರೇ, ನೀವು ಕೇವಲ ನಿಮ್ಮ ಮಗುವಿನ ಪಾಲಕರಾಗಿರದೆ, ಸಂಪೂರ್ಣ ರಾಷ್ಟ್ರದ ಪಾಲಕರಾಗಿದ್ದೀರಿ. ಇಂದು ಸಮಾಜ ಮತ್ತು ರಾಷ್ಟ್ರದ ಸ್ಥಿತಿ ಎಷ್ಟು ಹದೆಗೆಟ್ಟಿದೆ ಎಂದು ನಾವು ನೋಡುತ್ತಿದ್ದೇವೆ. ಇದಕ್ಕೆ ಕಾರಣವೇನಿರಬಹುದು? ನಾವು ಪಾಲಕರಾಗಿ ನಮ್ಮ ದೇಶಕ್ಕೆ ಸುಸಂಸ್ಕಾರಿತ ಪೀಳಿಗೆಯನ್ನು ನೀಡುವಲ್ಲಿ ವಿಫಲರಾಗಿದ್ದೇವೆ. ಪ್ರತಿಯೊಬ್ಬ ಪಾಲಕರೂ ರಾಷ್ಟ್ರಕ್ಕೆ ಸುಸಂಸ್ಕಾರಿತ ಪೀಳಿಗೆಯನ್ನು ನೀಡಿದರೆ, ರಾಷ್ಟ್ರದ ಈ ಸ್ಥಿತಿಯನ್ನು ನಾವು ಬದಲಾಯಿಸಬಹುದು. ಪ್ರತಿಯೊಬ್ಬ ಪಾಲಕರು 'ನಾನು ನನ್ನ ಮಗುವಿನ ಭವಿಷ್ಯವನ್ನು ನಿರ್ಮಿಸುತ್ತಿದ್ದೇನೆ' ಎಂದು ವಿಚಾರ ಮಾಡದೆ 'ನಾನು ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುತ್ತಿದ್ದೇನೆ' ಎಂಬುದನ್ನು ಅರಿತುಕೊಳ್ಳಬೇಕು.
ವ್ಯಕ್ತಿ (ವ್ಯಕ್ತಿತ್ವ) ನಿರ್ಮಾಣವಾದರೆ ಸಮಾಜ, ಸಮಾಜದಿಂದ ರಾಷ್ಟ್ರ ನಿರ್ಮಾಣವಾಗುತ್ತದೆ. ಆದುದರಿಂದಲೇ ಪ್ರತಿಯೊಬ್ಬ ಪಾಲಕರೂ 'ನಾನು ರಾಷ್ಟ್ರದ ಆಧಾರ ಸ್ತಂಭವನ್ನು ನಿರ್ಮಿಸುತ್ತಿದ್ದೇನೆ' ಎಂಬ ವ್ಯಾಪಕ ದೃಷ್ಟಿಕೋನವನ್ನಿಟ್ಟುಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಅವಶ್ಯಕತೆ ಇದೆ. ನಾವು ವ್ಯಾಪಕ ದೃಷ್ಟಿಕೋನವನ್ನು ಇಟ್ಟುಕೊಂಡರೆ ನಮಗೆ ಅದರಿಂದ ಆನಂದ ಸಿಗುತ್ತದೆ, ಅದೇ ಸಂಕುಚಿತ ಮನೋಭಾವದಿಂದ ನಮಗೆ ಒತ್ತಡವಾಗುತ್ತದೆ. ಇಂದು ಪಾಲಕರಾಗಿ ನಮ್ಮ ದೃಷ್ಟಿಕೋನವು ಸಂಕುಚಿತವಾಗಿದೆ, ಆದುದರಿಂದ ನಮ್ಮಲ್ಲಿ ಒತ್ತಡವೂ ಹೆಚ್ಚಾಗುತ್ತಿದೆ. ನಾವು ನಮ್ಮ ಮಕ್ಕಳನ್ನು ನೋಡಿಕೊಳ್ಳುವಾಗ 'ಅವನು ದೊಡ್ಡವನಾಗಿ ತುಂಬಾ ಸಂಪಾದಿಸುತ್ತಾನೆ, ನಮಗೆ ಆಧಾರವಾಗುತ್ತಾನೆ' ಎಂದು ಆಶಯವನ್ನಿಟ್ಟುಕೊಂಡು ನೋಡಿಕೊಳ್ಳುತ್ತೇವೆ. 'ನಮ್ಮ ಮಕ್ಕಳು ಸುಖಮಯ ಜೀವನವನ್ನು ಜೀವಿಸಬೇಕು, ನಮ್ಮನ್ನೂ ಸುಖವಾಗಿರಿಸಬೇಕು, ನಮ್ಮ ಹೆಸರನ್ನು ಉಜ್ವಲಗೊಳಿಸಬೇಕು' ಎಂದು ಸಂಕುಚಿತ ಮನೋಭಾವವನ್ನು ಇಟ್ಟುಕೊಂಡರೆ, ಮಕ್ಕಳ ಜೊತೆ ನಮ್ಮ ವ್ಯವಹಾರವು ಸಹಜವಾಗಿರದು, ಆನಂದದಾಯಕವಾಗಿರದು. ಹೀಗಾಗಲು ಕಾರಣವೇನು? ಇದಕ್ಕೆ ಕಾರಣ ನಮ್ಮ ಅಹಂಕಾರ. 'ನನ್ನ ಮಕ್ಕಳು ಸುಸಂಸ್ಕಾರಿತರಾಗಬೇಕು, ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಸಿದ್ಧರಿರಬೇಕು, ರಾಷ್ಟ್ರಾಭಿಮಾನಿಗಳಾಗಬೇಕು, ಪರಹಿತ ಚಿಂತಕನಾಗಿ ಜೀವಿಸಬೇಕು, ಭೋಗಿಯಾಗಿರದೆತ್ಯಾಗಿಯಾಗಿರಬೇಕು' ಎಂಬ ವ್ಯಾಪಕ ದೃಷ್ಟಿಕೋನ ನಮ್ಮದಾಗಿರಬೇಕು. ಇಂದಿನ ಪಾಲಕರ ದೃಷ್ಟಿಕೋನವು ವ್ಯಾಪಕವಾಗಿರದ ಕಾರಣ ನಾವು ಸ್ವಾರ್ಥಿ ಪೀಳಿಗೆಯನ್ನು ನೋಡುತ್ತಿದ್ದೇವೆ. 'ತ್ಯಾಗವೆಂದರೆ ಆನಂದ, ಭೋಗವೆಂದರೆ ದುಃಖ' ಎಂಬ ಸೂತ್ರದ ಕಲ್ಪನೆಯೂ ಅವರಿಗಿಲ್ಲ!
'ತ್ಯಾಗದ ಸಂಸ್ಕಾರವೇ ಜೀವನದ ಅಡಿಪಾಯ'ಎಂದು ಬಿಂಬಿಸಿ
'ಪರೀಕ್ಷೆಯಲ್ಲಿ ನನಗೆ ಸರ್ವಾಧಿಕ ಅಂಕಗಳು ಸಿಗಬೇಕು, ನಾನೇ ಎಲ್ಲರಿಗಿಂತ ಹೆಚ್ಚು ಹಣವನ್ನು ಸಂಪಾದಿಸಬೇಕು, ನನಗೆ ಎಲ್ಲವೂ ಸಿಗಬೇಕು' ಎಂಬ ವಿಚಾರಗಳನ್ನು ಮಾಡುವ, ಸ್ವಾರ್ಥದಿಂದ ತುಂಬಿಕೊಂಡಿರುವ ಮತ್ತು ಸ್ವಂತದ ವಿಚಾರ ಮಾತ್ರ ಮಾಡುವ ಪೀಳಿಗೆಯು ಇಂದು ನಿರ್ಮಾಣವಾಗುತ್ತಿದೆ. ಆದುದರಿಂದಲೇ ನಮಗೆ ಎಲ್ಲಿ ನೋಡಿದರೂ ಅಲ್ಲಿ ಭ್ರಷ್ಟಾಚಾರ ಕಾಣಿಸುತ್ತದೆ. ಸ್ವಾರ್ಥವೇ ಇದಕ್ಕೆ ಮೂಲ! ಅದರಲ್ಲಿ 'ನಾನು, ನನ್ನದು, ನನಗೆ' ಎಂಬಷ್ಟೇ ವಿಚಾರವಿರುತ್ತದೆ. 'ಇತರರ ವಿಚಾರ ಮಾಡಬೇಕು' ಎಂಬ ಮೌಲ್ಯವು ಜೀವನದಿಂದ ಲೋಪವಾಗಿದಂತೆಕಾಣಿಸುತ್ತದೆ! ನಾವು ಮಕ್ಕಳಿಗೆ ತ್ಯಾಗವನ್ನು ಕಲಿಸಬೇಕು. ಸ್ವಂತಕ್ಕೋಸ್ಕರ ಎಲ್ಲರೂ ಜೀವಿಸುತ್ತಾರೆ, ಆದರೆ ನಿಜವಾದ ಆನಂದ ಇತರರಿಗೆ ಜೀವಿಸುವುದರಲ್ಲಿದೆ ಎಂದು ಕಲಿಸಬೇಕು. ಪಾಲಕರು ಇದನ್ನು ಕೃತಿಯ ಮುಖಾಂತರ ಮಕ್ಕಳಿಗೆ ಕಲಿಸಬೇಕು. ನೀವೇ ಅವರನ್ನು ಸ್ವಾರ್ಥಿಗಳನ್ನಗಿ ಮಾಡಿದರೆ ಮುಂದೊಂದು ದಿನ ಇದೆ ಪೀಳಿಗೆ ತನ್ನ ಸ್ವಾರ್ಥ ಮತ್ತು ಸುಖಕ್ಕಾಗಿ ನಿಮ್ಮನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತದೆ. 'ನಾವು ಇತರರಿಗೋಸ್ಕರ ಬದುಕಬೇಕು, ತ್ಯಾಗವೇ ಸಂಸ್ಕಾರ, ಇದೇ ಜೀವನದ ಸಾರ' ಎಂಬ ದೃಷ್ಟಿಕೋನವನ್ನು ನಾವು ಪಾಲಕರ ಸ್ಥಾನದಲ್ಲಿದ್ದುಕೊಂಡು ಮಕ್ಕಳಿಗೆ ಕಲಿಸಬೇಕಾಗುತ್ತದೆ. ವ್ಯಾಪಕತೆಯನ್ನು ಹೊಂದಿರುವ ಜೀವವು (ಮನುಷ್ಯನು) ಸ್ವತಃ ಆನಂದವನ್ನು ಅನುಭವಿಸುವುದಲ್ಲದೆ, ಇತರರಿಗೂ ಆನಂದವನ್ನು ನೀಡುತ್ತದೆ.
ಶ್ರೀ. ರಾಜೇಂದ್ರ ಪಾವಸ್ಕರ (ಗುರುಜಿ), ಪನವೇಲ