ಭಗವಾನ ಶ್ರೀಕೃಷ್ಣ ಗೋಕುಲದಲ್ಲಿ ವಾಸಿಸುತ್ತಿದ್ದರು. ಅಲ್ಲಿ ಗೋವರ್ಧನ ಎಂಬ ದೊಡ್ಡ ಪರ್ವತವಿತ್ತು. ಗೋಕುಲದಲ್ಲಿ ಶ್ರೀಕೃಷ್ಣನೊಂದಿಗೆ ಎಲ್ಲಾ ಗೋಪ ಗೋಪಿಯರು ಆನಂದದಿಂದ ವಾಸಿಸುತ್ತಿದ್ದರು. ಪ್ರತಿವರ್ಷ ಮಳೆ ಬರಲಿ ಎಂದು ಎಲ್ಲರು ಇಂದ್ರದೇವನ ಪೂಜೆಯನ್ನು ಮಾಡುತ್ತಿದ್ದರು. ಒಂದು ಸಲ ಇಂದ್ರದೇವನಿಗೆ ನಾನು ಮಳೆ ಬರಿಸುವುದರಿಂದಲೇ ಎಲ್ಲ ನಡೆಯುತ್ತಿದೆ ಎಂದು ಗರ್ವವಾಯಿತು. ಇದು ಶ್ರೀಕೃಷ್ಣನಿಗೆ ತಿಳಿಯಿತು. ಪ್ರತಿಯೊಬ್ಬರ ಮನಸಲ್ಲಿ ಏನಿದೆ ಎಂದು ಶ್ರೀಕೃಷ್ಣನಿಗೆ ತಿಳಿಯುತ್ತದೆ. ಅದಕ್ಕೆ ಶ್ರೀಕೃಷ್ಣನು ಎಲ್ಲ ಗೋಪ ಗೋಪಿಯರಿಗೆ ಹೇಳಿದರು “ನಮಗೆ ಗೋವರ್ಧನ ಪರ್ವತದಿಂದ ಮಳೆ ಬರುತ್ತಿದೆ, ಅದಕ್ಕಾಗಿ ನಾವು ಇನ್ನು ಮುಂದೆ ಇಂದ್ರದೇವನ ಪೂಜೆ ಮಾಡುವುದು ಬೇಡ, ಗೋವರ್ಧನ ಪರ್ವತದ ಪೂಜೆ ಮಾಡೋಣ” ಎಂದು ಹೇಳಿದರು. ಆಗಿನಿಂದ ಎಲ್ಲರೂ ಗೋವರ್ಧನ ಪರ್ವತದ ಪೂಜೆ ಮಾಡಲು ಶುರು ಮಾಡಿದರು.
ಇದನ್ನು ನೋಡಿ ಇಂದ್ರನಿಗೆ ಕೋಪ ಬಂತು. ಆಗ ಇಂದ್ರನು ತುಂಬಾ ರಭಸವಾಗಿ ಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಇದರಿಂದಾಗಿ ನದಿಯು ತುಂಬಿ ಹರಿಯಲಾರಂಭಿಸಿತು. ಎಲ್ಲ ಜನರು ಗಾಬರಿಯಿಂದ ಶ್ರೀಕೃಷ್ಣನ ಬಳಿಗೆ ಸಹಾಯ ಕೇಳಲು ಓಡಿದರು. ಆಗ ಶ್ರೀಕೃಷ್ಣನು “ಅರೇ, ನಾವು ಯಾವ ಪರ್ವತವನ್ನು ಪೂಜಿಸಿದ್ದೇವೆಯೋ ಅವರೇ ನಮ್ಮ ರಕ್ಷಣೆಯನ್ನು ಮಾಡುವರು! ನಾವೆಲ್ಲರೂ ಸಂಘಟಿತರಾಗೋಣ” ಎಂದು ಹೇಳಿದರು. ಆಗ ಎಲ್ಲಾ ಗೋಪ ಗೋಪಿಯರು ಒಂದು ಕಡೆ ಸೇರಿದರು. ಆಗ ಶ್ರೀಕೃಷ್ಣ ಏನು ಮಾಡಿದರೆಂದು ತಿಳಿದಿದೆಯೇ? ಗೋವರ್ಧನ ಪರ್ವತವನ್ನು ತನ್ನ ಕಿರು ಬೆರಳಿನಿಂದ ಎತ್ತಿದರು. ಎಲ್ಲಾ ಗೋಪ ಗೋಪಿಯರು ತಮ್ಮ ಕೋಲಿನಿಂದ ಪರ್ವತದ ಕೆಳಗೆ ಆಧಾರವಾಗಿ ಇಟ್ಟರು. ಪರ್ವತದ ಕೆಳಗೆ ಎಲ್ಲರಿಗೆ ಆಶ್ರಯ ದೊರಕಿತು.
ಈ ರೀತಿ ಶ್ರೀಕೃಷ್ಣನು ಭೀಕರ ಮಳೆಯಿಂದ ಎಲ್ಲರನ್ನು ರಕ್ಷಿಸಿದರು ಮತ್ತು, ಸಹಾಯ ಮಾಡಲು ಎಲ್ಲರು ಹೋಗಿದ್ದರಿಂದ ಅವರ ಮೇಲೆ ಶ್ರೀ ಕೃಷ್ಣನು ಪ್ರಸನ್ನನಾದನು. ಈ ರೀತಿ ಸೇವೆ ಮಾಡಿದ್ದರಿಂದ ಅವರೆಲ್ಲರು ಮೋಕ್ಷಕ್ಕೆ ಹೋದರು.
ಮಕ್ಕಳೇ, ಗರ್ವದಿಂದ ಏನಾಗುತ್ತದೆಂದು ನಿಮಗೆ ತಿಳಿಯಿತು ತಾನೆ? ಶಾಲೆಯಲ್ಲಿ ನಾವು ಚೆನ್ನಾಗಿ ಓದಿದರೂ ನಮಗೆ ಗರ್ವವಾಗುತ್ತದೆ. ಅದರಿಂದಾಗಿ ನಾವು ಇತರರನ್ನು ತುಚ್ಛವಾಗಿ ಕಾಣುತ್ತೇವೆ. ಆದರೆ ಈಶ್ವರನು ಪ್ರತಿ ಒಬ್ಬರಿಗೆ ಒಂದಲ್ಲಾ ಒಂದು ಗುಣವನ್ನು ಕೊಟ್ಟೇ ಇರುತ್ತಾನೆ. ಕೆಲವರು ಓದುವುದರಲ್ಲಿ ಹುಷಾರಿದ್ದರೆ, ಕೆಲವರು ಹಾಡುವುದರಲ್ಲಿ, ಕೆಲವರು ಚಿತ್ರಕಲೆಯಲ್ಲಿ ಹುಷಾರಿರುತ್ತಾರೆ. ಯಾರು ಎಲ್ಲರೊಂದಿಗೆ ಹೊಂದಿಕೊಂಡಿ ಇರುತ್ತಾರೆಯೋ ಅವರು ಎಲ್ಲಾರಿಗೆ ಸಹಾಯ ಮಾಡುತ್ತಾರೆ. ಅದರಿಂದಾಗಿ ನಾವು ಯಾರನ್ನೂ ತುಚ್ಛವಾಗಿ ಕಾಣಬಾರದು.
ಮಕ್ಕಳೇ ಇದರಿಂದ ನಾವು ಏನು ಪಾಠ ಕಲಿಯಬಹುದು? ದೇವರ ಭಕ್ತಿಯನ್ನು ಮಾಡುತ್ತಾ ದೇವರ ಕಾರ್ಯದಲ್ಲಿ ಸಹಾಯ ಮಾಡಬೇಕು. ಆಗ ನಮ್ಮ ಜನ್ಮ ಸಾರ್ಥಕವಾಗುತ್ತದೆ.