ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯನ್ನು 'ಅನಂತ ಚತುರ್ದಶಿ' ಎಂದು ಕರೆಯುತ್ತಾರೆ. ಈ ದಿನವು ಶ್ರೀ ಗಣೇಶ ಚತುರ್ಥಿ ಆಚರಣೆಯ ಕೊನೆಯ ದಿನವೂ ಹೌದು. ಈ ದಿನದಂದು ಅನೇಕರು ಅನಂತ ವ್ರತವನ್ನು ಆಚರಿಸುತ್ತಾರೆ. ಈ ವ್ರತದ ಬಗ್ಗೆ ಪ್ರಚಲಿತವಿರುವ ಮಾಹಿತಿಯನ್ನು ತಿಳಿದುಕೊಳ್ಳೋಣ.
ಈ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂದು ನಂಬಿಕೆಯಿದೆ. ಶ್ರೀ ಅನಂತ ಪದ್ಮನಾಭ ದೇವರು ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರಿಸುತ್ತಾರೆ ಮತ್ತು ಸುಖ, ಆರೋಗ್ಯ, ಸಂಪತ್ತನ್ನು ಪ್ರದಾನಿಸುತ್ತಾರೆ ಎಂದು ನಂಬಿಕೆಯಿದೆ.
ಅನಂತ ವ್ರತದ ಬಗ್ಗೆ ಒಂದು ಕಥೆಯನ್ನು ನೋಡೋಣ
ಕೌಂಡಿಲ್ಯ ಮುನಿಯು ವಿವಾಹದ ನಂತರ ಸಪತ್ನೀಕನಾಗಿ ಮನೆಯಿಂದ ಹೊರಟನು. ದಾರಿಯಲ್ಲಿ ನದಿಯ ತೀರದಲ್ಲಿ ಅವರು ನಿತ್ಯ ಕರ್ಮಗಳಿಗೆ ನಿಂತಾಗ, ಅವರ ಪತ್ನಿಯು ಕೆಲವು ಮಹಿಳೆಯರನ್ನು ಒಂದು ವ್ರತವನ್ನು ಆಚರಿಸುತ್ತಿರುವುದನ್ನು ನೋಡಿದರು. ಆ ಮಹಿಳೆಯರನ್ನು ಕೇಳಿದಾಗ 'ನಾವು ಅನಂತ ವ್ರತವನ್ನು ಆಚರಿಸುತ್ತಿದ್ದೇವೆ' ಎಂದೂ, ಆ ವ್ರತದಿಂದ ಆಗುವ ಲಾಭಗಳೇನು ಎಂದೂ ತಿಳಿಸಿದರು.
ಇದರಿಂದ ಪ್ರಭಾವಿತರಾದ ಕೌಂಡಿಲ್ಯ ಮುನಿಯ ಪತ್ನಿಯೂ ಕೂಡ ಶೇಷಶಯನನಾದ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಲು ಅನಂತ ವ್ರತವನ್ನು ಆಚರಿಸತೊಡಗಿದಳು. ಇದರಿಂದಾಗಿ ಕೌಂಡಿಲ್ಯ ಮುನಿಯ ಧನ ಸಂಪತ್ತು ವೃದ್ಧಿಯಾಯಿತು. ಅನೇಕ ವರ್ಷಗಳ ನಂತರ ಒಂದು ದಿನ ಕೌಂಡಿಲ್ಯ ಮುನಿಯು ತನ್ನ ಪತ್ನಿಯ ಕೈಯಲ್ಲಿರುವ ಅನಂತ ವ್ರತದ ದಾರವನ್ನು ನೋಡಿ ಅದೇನೆಂದು ವಿಚಾರಿಸಿದನು. ಪತ್ನಿಯು 'ಇದು ಅನಂತ ವ್ರತದ ದಾರ, ಈ ವ್ರತದಿಂದ ನಮಗೆ ದೇವರು ಸುಖ ಸಂಪತ್ತನ್ನು ಕರುಣಿಸಿದ್ದಾನೆ' ಎಂದು ಹೇಳಿದಳು. ಇದನ್ನು ಕೇಳಿ ಕೌಂಡಿಲ್ಯ ಮುನಿಯು ಕೋಪಗೊಂಡು 'ಈ ಸುಖ ಸಂಪತ್ತು ನನ್ನ ಪಾಂಡಿತ್ಯದಿಂದ ನಾನು ಸಂಪಾದಿಸಿದ್ದೇನೆ' ಎಂದು ಹೇಳಿ, ಪತ್ನಿಯ ಕೈಯಲ್ಲಿರುವ ದಾರವನ್ನು ಕಿತ್ತೆಸೆದನು.
ಕ್ರಮೇಣ ಅವರಲ್ಲಿರುವ ಸಂಪತ್ತು ಕ್ಷೀಣಿಸತೊಡಗಿತು. ಮುಂದೊಂದು ದಿನ ಎಲ್ಲವನ್ನೂ ಕಳೆದುಕೊಂಡ ಕೌಂಡಿಲ್ಯ ಮುನಿಗೆ ತನ್ನ ತಪ್ಪಿನ ಅರಿವಾಯಿತು. ಅಖಂಡ ತಪಸ್ಸನ್ನು ಆಚರಿಸಿ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಿದನು. ಶ್ರೀ ವಿಷ್ಣು ಕೌಂಡಿಲ್ಯ ಮುನಿಗೆ ದರ್ಶನವನ್ನಿತ್ತು, ೧೪ ವರ್ಷಗಳ ಕಾಲ ಅನಂತ ವ್ರತವನ್ನು ಆಚರಿಸಿದರೆ, ಹೋದ ಸುಖ ಸಂಪತ್ತು ಪುನಃ ಗಳಿಸುವುದಾಗಿ ವರವನ್ನು ನೀಡಿದರು.
ಅನಂತ ವ್ರತದ ಬಗ್ಗೆ ಇನ್ನೊಂದು ಕಥೆಯನ್ನು ನೋಡೋಣ : ಪಾಂಡವರು ಕೌರವರ ಕೈಯಲ್ಲಿ ರಾಜ್ಯವನ್ನು ಸೋತು ೧೪ ವರ್ಷಗಳ ಕಾಲ ವನವಾಸವನ್ನು ಅನುಭವಿಸಬೇಕಾಯಿತು. ಈ ಸಮಯದಲ್ಲಿ ಶ್ರೀ ಕೃಷ್ಣನು ಪಾಂಡವರಿಂದ ಅನಂತ ವ್ರತವನ್ನು ಆಚರಿಸಿದನು, ಇದರ ಫಲವಾಗಿ ಅವರಿಗೆ ರಾಜ್ಯ ಭಾಗ್ಯ ಮರಳಿ ದೊರೆಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಅನೇಕರು ಅನಂತ ವ್ರತವನ್ನು ೧೪ ವರ್ಷಗಳ ಕಾಲ ಆಚರಿಸುತ್ತಾರೆ. ಕೆಲವರು ಪರಂಪರಾಗತವಾಗಿ ಅನಂತ ವ್ರತವನ್ನು ಆಚರಿಸುತ್ತಾರೆ. ಇನ್ನು ಕೆಲವರು ಶಕ್ತಿಗನುಸಾರ ಆಚರಿಸುತ್ತಾರೆ. ನಿಷ್ಕಲ್ಮಶ ಮನಸ್ಸಿನಿಂದ, ಭಕ್ತಿಯಿಂದ, ಭಾವದಿಂದ ಅನಂತ ಚತುರ್ದಶಿ ವ್ರತವನ್ನು ಆಚರಿಸಿದವರಿಗೆ ಅನಂತ ದೇವರು ಒಲಿದು ಆರೋಗ್ಯ, ಆಯಸ್ಸು, ಸುಖ, ಸಂಪತ್ತು ಪ್ರದಾನಿಸುತ್ತಾರೆ.