ಋಷಿ ಶಮಿಕರು ಅಪಾರ ಪಾಂಡಿತ್ಯ ಮತ್ತು ಸಾತ್ವಿಕತೆ ಹೊಂದಿದ ಋಷಿಯಾಗಿದ್ದರು. ಕೌಶಿಕಿ ನದಿಯ ಸುಂದರ ಪರಿಸರದಲ್ಲಿ ಅವರ ಆಶ್ರಮವಿತ್ತು. ಆಶ್ರಮದಲ್ಲಿ ತುಂಬ ಋಷಿಕುಮಾರರು ವೇದಾಧ್ಯಯನದಲ್ಲಿ ನಿರತರಾಗಿದ್ದರು. ಅವರಲ್ಲಿ ಋಷಿ ಶಮಿಕರ ಪುತ್ರನಾದ ಶೃಂಗಿಯೂ ಒಬ್ಬನಾಗಿದ್ದ. ಒಂದು ದಿನ ಋಷಿಕುಮಾರರು ಹೋಮ ಹವನಾದಿಗಳಿಗೆ ಬೇಕಾಗುವ ಸಮಿದ್ದಗಳನ್ನು ಒಟ್ಟು ಮಾಡಲು ಹೋಗಿದ್ದರು. ಋಷಿ ಶಮಿಕರು ಆ ಸಮಯದಲ್ಲಿ ಬ್ರಹ್ಮಧಾನ್ಯದಲ್ಲಿ ನಿರತರಾಗಿದ್ದರು.ಈ ಸ್ಥಿತಿಯಲ್ಲಿ ಅವರಿಗೆ ಹೊರ ಪ್ರಪಂಚದ ಪರಿವೆಯೇ ಇರುತ್ತಿರಲಿಲ್ಲ.
ಇದೇ ಸಮಯದಲ್ಲಿ ಅರಣ್ಯದಲ್ಲಿ ಬೇಟೆ ಆಡಲು ಬಂದ ಪರೀಕ್ಷಿತ ಮಹಾರಾಜರು (ಅರ್ಜುನನ ಮೊಮ್ಮಗ) ಬಿಸಿಲಿನ ಬೇಗೆ ಮತ್ತು ಬೇಟೆಯಾಡಿದ ಆಯಾಸದಿಂದ ಆಶ್ರಯವನ್ನು ಹುಡುಕುತ್ತ ಸಮೀಪದಲ್ಲಿರುವ ಋಷಿ ಶಮಿಕರ ಆಶ್ರಮಕ್ಕೆ ಬರುತ್ತಾರೆ. ಋಷಿ ಶಮಿಕರು ಆಳವಾದ ಧಾನ್ಯದಲ್ಲಿದ್ದು, ಮಹಾರಾಜರು ಆಶ್ರಮ ಪ್ರವೇಶಿಸಿದ್ದು, ನಮಸ್ಕಾರವನ್ನು ಮಾಡಿದ್ದು ಗಮನಕ್ಕೆ ಬರುವುದಿಲ್ಲ. ಮಹಾರಾಜರು ಪುನಃ 'ತಮಗೆ ಬಹಳ ಬಾಯಾರಿಕೆಯಾಗಿದೆ, ನೀರು ಬೇಕು' ಎಂದು ಕೇಳುತ್ತಾರೆ. ಅದರೆ ಬ್ರಹ್ಮನ ಸ್ಮರಣೆಯಲ್ಲಿ ಮಗ್ನರಾಗಿದ್ದ ಋಷಿ ಶಮಿಕರಿಗೆ ರಾಜನ ಮಾತುಗಳು ೩, ೪ಸಲ ಕೂಗಿದರು ಕೇಳಿಸುವುದಿಲ್ಲ. ರಾಜ ಪರೀಕ್ಷಿತರಿಗೆ ಸಿಟ್ಟು ಬರುತ್ತದೆ. ಅವರು ಅಂಗಳದಲ್ಲಿ ಸತ್ತು ಬಿದ್ದಿರುವ ಹಾವನ್ನು ಬಾಣದ ತುದಿಯಲ್ಲಿ ಎತ್ತಿ ಅದನ್ನು ಋಷಿ ಶಮಿಕರ ಕೊರಳಿಗೆ ಹಾಕುತ್ತಾರೆ. ಆಶ್ರಮಕ್ಕೆ ಮರಳಿ ಬಂದ ಋಷಿಕುಮಾರರು ರಾಜಾ ಪರೀಕ್ಷಿತನು ಹೊರಡುತ್ತಿರುವುದನ್ನು ನೋಡುತ್ತಾರೆ ಮತ್ತು ಶೃಂಗಿಯನ್ನು ಕರೆದುಕೊಂಡು ಬರುತ್ತಾರೆ. ಶೃಂಗಿಯು ಪರೀಕ್ಷಿತರನ್ನು ಆಶ್ರಮಕ್ಕೆ ಬರಮಾಡಿಕೊಳ್ಳಲು ಧಾವಿಸಿ ಬರುತ್ತಾನೆ ಆದರೂ ಕೋಪಗೊಂಡ ಮಹಾರಾಜರು ಹಿಂದಿರುಗದೆ ಹೋಗುತ್ತಾರೆ. ಆಶ್ರಮವನ್ನು ಪ್ರವೇಶಿಸಿದ ಶೃಂಗಿಯು ಋಷಿ ಶಮಿಕರು ಧ್ಯಾನ ಮಗ್ನರಾಗಿರುವುದನ್ನೂ, ಅವರ ಕೊರಳಲ್ಲಿರುವ ಸತ್ತ ಹಾವು ಮತ್ತು ಅದರ ಸುತ್ತ ಒಡಾಡುವ ಇರುವೆಗಳನ್ನೂ ನೋಡಿ ಉದ್ರಿಕ್ತನಾಗುತ್ತಾನೆ. ಕೋಪಗೊಂಡು ಒಂದು ಕೋಲಿನಿಂದ ಹಾವನ್ನು ತೆಗೆದು, 'ಯಾರು ಈ ಪಾಪವನ್ನು ಮಾಡಿದ್ದಾರೋ ಅವರು ಇಂದಿನಿಂದ ೭ ದಿನಗಳ ಒಳಗೆ ಸರ್ಪರಾಜನಾದ ತಕ್ಷಕನಿಂದ ಮರಣ ಹೊಂದಲಿ' ಎಂದು ಶಾಪವನ್ನು ಕೊಟ್ಟು ಕಮಂಡಲದಿಂದ ನೀರನ್ನು ಭೂಮಿಗೆ ಚಿಮಿಕಿಸುತ್ತಾನೆ.
ಅಷ್ಟರಲ್ಲಿ ಎಚ್ಚರಗೊಂಡ ಋಷಿಗಳು ಮಗನು ಕೋಪದಿಂದ ನಡುಗುತ್ತೀರುವುದು ಮತ್ತು ಶಿಷ್ಯರ ಮುಖದಲ್ಲಿರುವ ಭೀತಿಯನ್ನು ನೋಡಿ ಎನಾಯಿತು ಎಂದು ವಿಚಾರಿಸುತ್ತಾರೆ, ಆಗ ಶೃಂಗಿಯು ನಡೆದ ವಿಷಯವನ್ನು ತಿಳಿಸಿದಾಗ 'ಮನುಷ್ಯನು ಸಣ್ಣ ವಿಷಯಕ್ಕೆಲ್ಲ ಕೋಪಿಸಿಕೊಳ್ಳಬಾರದು, ಮತ್ತು ಇಂತಹ ವಿಷಯಕ್ಕೆಲ್ಲ ಶಾಪವನ್ನು ಹಾಕಬಾರದು' ಎಂದು ಶೃಂಗಿಗೆ ಬುದ್ಧಿವಾದ ಹೇಳುತ್ತಾರೆ. 'ಮಹಾರಾಜ ಪರೀಕ್ಷಿತರು ವಿಷ್ಣುವಿನ ಅವತಾರವಾಗಿದ್ದು, ರಾಜನಲ್ಲಿ ಕ್ಷಮೆಯನ್ನು ಯಾಚಿಸಿ ಅವರಿಗೆ ಶಾಪದಿಂದ ವಿಮುಕ್ತನಾಗಿ ಮಾಡು' ಎಂದು ಹೇಳುತ್ತಾರೆ. ಇತ್ತ ರಾಜನು ಆರಮನೆಗೆ ತಲುಪಿದ ನಂತರ ತನ್ನ ಹೇಯ ಕೃತಿಯನ್ನು ನೆನೆಸಿಕೊಂಡು ತಾನು ತಪ್ಪು ಮಾಡಿದೆ, ಋಷಿಗಳಲ್ಲಿ ಕ್ಷಮೆಯಾಚಿಸಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸುತ್ತಾನೆ.
ಮಾರನೇ ದಿನ ಋಷಿ ಶಮಿಕರು 'ತಾವು ರಾಜನನ್ನು ಆದರದಿಂದ ಆಶ್ರಮಕ್ಕೆ ಬರಮಾಡಿಕೊಳ್ಳದಿರುವುದಕ್ಕೆ ಕ್ಷಮೆಯನ್ನು ಕೋರಬೇಕು, ಶೃಂಗಿ ಹಾಕಿದ ಶಾಪವನ್ನೂ, ಅದರ ಪರಿಹಾರವನ್ನು ಸೂಚಿಸಿಬೇಕು' ಎಂದು ಶಿಷ್ಯರನ್ನು ಆರಮನೆಗೆ ಕಳುಹಿಸುತ್ತಾರೆ. ಶಿಷ್ಯರು ರಾಜನಿಗೆ ನಡೆದ ಘಟನೆ ಬಗ್ಗೆ ವಿವರಿಸಿ, 'ಋಷಿಗಳು ಶಾಪಕ್ಕೆ ಪರಿಹಾರವಾಗಿ ಒಂದು ವಾರ ಭಾಗವತ ಪಠಣ ಮಾಡಲು ಹೇಳಿದ್ದಾರೆ' ಎಂದು ತಿಳಿಸುತ್ತಾರೆ. ಮಹಾರಾಜರು ತಾನು ಮಾಡಿದ ಹೇಯ ಕೃತಿಗೆ ಕ್ಷಮೆಯನ್ನು ಯಾಚಿಸಿ, ಗಂಗಾ ನದಿಯ ತೀರದಲ್ಲಿರುವ ಶುಕಮುನಿಗಳ ಆಶ್ರಮದಲ್ಲಿ ಭಾಗವತ ಪಠಣವನ್ನು ಆಯೋಜಿಸುತ್ತಾರೆ. ಇದರಿಂದ ಎಲ್ಲರಿಗೂ ಭಾಗವತವನ್ನು ಆಲಿಸುವ ಪುಣ್ಯವು ಲಭಿಸುತ್ತದೆ ಮತ್ತು ಆನಂದಗೊಂಡ ಋಷಿ ಶಮಿಕರೂ ರಾಜನ ಮುಕ್ತಿಗಾಗಿ ಭಗವಂತನಲ್ಲಿ ಪ್ರಾರ್ಥನೆಯಲ್ಲಿ ತೊಡಗುತ್ತಾರೆ.