ಈಗ ನಾವು ಮಕ್ಕಳಲ್ಲಿ ಯಾವಾಗಲೂ ಕಾಣಿಸಿಕೊಳ್ಳುವ ಮಾನಸಿಕ ಸಮಸ್ಯೆಗಳನ್ನು ಹಾಗೂ ಮನೆಯಲ್ಲಿಯೇ ಅವುಗಳ ಮೇಲೆ ಮಾಡಬಹುದಾದ ಉಪಾಯಗಳ ಬಗ್ಗೆ ತಿಳಿದುಕೊಳ್ಳೋಣ.
ಉಗುರು ಕಚ್ಚುವುದು, ಬೆರಳು ಚೀಪುವುದು, ಕೂದಲು ಎಳೆಯುವುದು ಇತ್ಯಾದಿ ರೂಢಿಗಳು
ಉಗುರು ಕಚ್ಚುವುದರಿಂದ ಆಗುವ ಅಪಾಯವನ್ನು ತಿಳಿಸಿ ಹೇಳಬೇಕು : ಮಗುವು ಆಗಾಗ ಉಗುರು ಕಚ್ಚುತ್ತಿರುವುದು ಕಂಡುಬಂದರೆ ಅದರ ಕಡೆಗೆ ದುರ್ಲಕ್ಷಿಸುವುದೇ ಉತ್ತಮ; ಆದರೆ ಅವನಿಗೆ ಉಗುರು ಕಚ್ಚುವ ರೂಢಿಯಾದಲ್ಲಿ 'ಉಗುರಿನಲ್ಲಿರುವ ಕೊಳೆ ಹೊಟ್ಟೆಗೆ ಹೋಗುವುದರಿಂದ ಅಪಾಯವಾಗುತ್ತದೆs' ಎಂದು ತಿಳಿಸಿ ಹೇಳಬೇಕು.
ಮಕ್ಕಳಿಗೆ 'ನೀನು ಉಗುರು ಕಚ್ಚುವುದರಿಂದ ಚೆನ್ನಾಗಿ ಕಾಣಿಸುವುದಿಲ್ಲ; ಆದರೆ ಉಗುರು ಕಚ್ಚದೇ ಇದ್ದರೆ ಕೈಗಳು ಸುಂದರವಾಗಿ ಕಾಣಿಸುತ್ತವೆ' ಎಂದು ಹೇಳಬೇಕು.
ಬೆರಳುಗಳಿಗೆ ಎಣ್ಣೆ ಹಚ್ಚಿ ಮೃದುವಾಗಿಟ್ಟರೆ ಉಗುರು ಕಚ್ಚುವ ಪ್ರಮಾಣ ಕಡಿಮೆಯಾಗುತ್ತದೆ, ಏಕೆಂದರೆ ಮಕ್ಕಳಿಗೆ ಮೃದುವಾದ ಉಗುರುಗಳನ್ನು ಕಚ್ಚುವುದು ಇಷ್ಟವಾಗುವುದಿಲ್ಲ.
ಮಗುವು ಮಲಗಿದ ನಂತರ ಮೊದಲ ೫ ನಿಮಿಷಗಳಲ್ಲಿ (ಸಮ್ಮೋಹನಾವಸ್ಥೆಯಲ್ಲಿ) ಸೂಚನೆ ಕೊಡುವುದು : ಮಗುವು ಮಲಗಿದ ನಂತರ ಮೊದಲ ೫ ನಿಮಿಷಗಳಲ್ಲಿ ನಾವು ಎಚ್ಚರದಿಂದಿದ್ದು ಉಗುರು ತಿನ್ನುವುದರ ಬಗ್ಗೆ ತಿಳಿಸಿ ಹೇಳಬೇಕು. ನಂತರ 'ನಿನಗೆ ಉಗುರು ತಿನ್ನಲು ಪ್ರಾರಂಭಿಸುತ್ತಲೇ ತಿಳಿಯುವುದು ಹಾಗೂ ನೀನು ಅದನ್ನು ನಿಲ್ಲಿಸಬಹುದು' ಎಂದು ಸೂಚನೆ ಕೊಡಬೇಕು; ಏಕೆಂದರೆ ನಿದ್ದೆಯಲ್ಲಿ ಮೊದಲ ೫ ನಿಮಿಷಗಳು ಸಮ್ಮೋಹನಾವಸ್ಥೆಯಂತೆ ಇರುತ್ತದೆ. ಈ ಸಮಯದಲ್ಲಿ ನೀಡಿದ ಸೂಚನೆಯು ಪರಿಣಾಮಕಾರಿಯಾಗಿರುತ್ತದೆ.
ಕೆಟ್ಟ ರೂಢಿಗಳನ್ನು ಬಿಡಿಸಲು ಬಹುಮಾನ ನೀಡುವುದು : ಆಗಾಗ ಉಗುರುಗಳನ್ನು ಕಚ್ಚದಿದ್ದರೆ ಬಹುಮಾನ ಕೊಡುತ್ತೇನೆ ಎಂದು ಹೇಳಿ ಮಕ್ಕಳಿಗೆ ಅಯೋಗ್ಯ ರೂಢಿಗಳನ್ನು ಬಿಡಲು ಉತ್ತೇಜಿಸಬಹುದು.
ಭಯಂಕರ ಉಪಾಯ ಮಾಡುವುದನ್ನು ತಡೆಯಬೇಕು : ಉಗುರಿಗೆ ಕಹಿ ಔಷಧವನ್ನು ಹಚ್ಚುವುದು, ಅಂಟುಪಟ್ಟಿ (ಪ್ಲಾಸ್ಟರ್) ಹಚ್ಚುವುದು ಇತ್ಯಾದಿ ಉಪಾಯಗಳನ್ನು ಮಾಡಲೇಬಾರದು. ಇದರಿಂದ ಆ ರೂಢಿಯು ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ಬೆರಳು ಚೀಪುವುದು, ಕೂದಲು ಎಳೆಯುವುದು ಇತ್ಯಾದಿ ರೂಢಿಗಳಿದ್ದರೂ ಮೇಲಿನ ಉಪಾಯ ಪದ್ಧತಿಯಿಂದ ನಿಲ್ಲಿಸಬಹುದು.
ಊಟ ತಿಂಡಿಯಲ್ಲಿ ಇಷ್ಟಾನಿಷ್ಟ
ಮಕ್ಕಳಿಗೆ ಊಟ ತಿಂಡಿಯಲ್ಲಿ ಇಷ್ಟಾನಿಷ್ಟವಿದ್ದರೆ ತಂದೆ ತಾಯಂದಿರು ಅವರಿಗಾಗಿ ಸ್ವಲ್ಪ ಹೆಚ್ಚಿನ ಸಮಯವನ್ನು ನೀಡಬೇಕು. ಅಂದರೆ ಅವರಿಗೆ ತಂದೆ ತಾಯಿಯರ ಗಮನವು ನಮ್ಮ ಮೇಲೆ ಇದೆ ಎಂಬುದು ತಿಳಿಯುತ್ತದೆ ಹಾಗೂ ಅವರ ತಾಪತ್ರಯ ಕಡಿಮೆಯಾಗುತ್ತದೆ.
ಮಕ್ಕಳಿಗೆ ಯಾವುದೇ ಪದಾರ್ಥವನ್ನು ತಿನ್ನುವಂತೆ ಒತ್ತಾಯಿಸುವುದನ್ನು ನಿಲ್ಲಿಸಬೇಕು : ತಂದೆ ತಾಯಂದಿರು ಮಗುವಿಗೆ ಯಾವುದಾದರೂ ಪಲ್ಯವನ್ನು ತಿನ್ನಲೇಬೇಕು, ಎಂದು ಅಪ್ಪಣೆ ನೀಡಬಾರದು. ಅವನು ಯಾವುದಾದರೊಂದು ಪದಾರ್ಥವನ್ನು ತಿನ್ನದಿದ್ದರೆ ಕೆಲವು ವಾರದ ವರೆಗೆ ಅವನಿಗೆ ಆ ಪದಾರ್ಥವನ್ನು ನೀಡಬಾರದು. ಪುನಃ ಕೊಡುವಾಗ ಬೇರೆ ರೀತಿಯಲ್ಲಿ ಕೊಡಬೇಕು ಉದಾ. ಕಾಯಿಪಲ್ಯ ಇಷ್ಟವಾಗದಿದ್ದರೆ ಪಾಲಕ, ಮೆಂಥ್ಯವನ್ನು ಹಾಕಿ ಪರಾಠಾ ಮಾಡಿಕೊಡುವುದು ಅಥವಾ ಇಂತಹ ಸೊಪ್ಪುಗಳನ್ನು ಹಾಕಿ ದೋಸೆ ಮಾಡಿಕೊಡುವುದು, ಹೀಗೆ ಪದಾರ್ಥದ ಸ್ವರೂಪವನ್ನು ಬದಲಿಸಿ ಕೊಡಬೇಕು. ಇದರಿಂದ ಮಕ್ಕಳು ಆ ಪದಾರ್ಥವನ್ನು ಇಷ್ಟಪಟ್ಟು ತಿನ್ನುತ್ತಾರೆ.
ಊಟ ತಿಂಡಿಯ ಸಮಯದ ವಿಷಯದಲ್ಲಿ ಬಹಳ ಕಠೋರತೆಯನ್ನು ತೋರಿಸಬಾರದು.
ಎರಡು ಊಟದ ನಡುವಿನ ಸಮಯದಲ್ಲಿ ಅವನಿಗೆ ಯಾವುದಾದರೂ ತಿಂಡಿ ತಿನ್ನಬೇಕೆಂದು ಅನಿಸಿದರೆ ಅವಶ್ಯವಾಗಿ ನೀಡಬೇಕು. ಆಗ 'ಬೆಳಿಗ್ಗೆ ಊಟದ ಸಮಯದಲ್ಲಿ ಊಟ ಮಾಡಲಿಲ್ಲ ಹಾಗೂ ಈಗ ಮಾತ್ರ ತಿಂಡಿ ಬೇಕು' ಎಂದು ಹೇಳಿ ಸಿಟ್ಟಾಗಬಾರದು.
ಊಟ ಬಡಿಸುವ ೫-೧೦ ನಿಮಿಷಗಳ ಮೊದಲು ಅವನಿಗೆ 'ಈಗ ಊಟ ಬಡಿಸುತ್ತೇನೆ' ಎಂದು ಸೂಚನೆ ನೀಡಬೇಕು, ಇದರಿಂದ ಅವನಿಗೆ ತನ್ನ ಆಟದ ಅಥವಾ ಅಧ್ಯಯನದ ಪುಸ್ತಕಗಳನ್ನು ಜೋಡಿಸಲು ಸಮಯ ದೊರೆಯುತ್ತದೆ.
ಮಕ್ಕಳೊಂದಿಗೆ ಊಟ ಮಾಡುವಾಗ ತಂದೆ ತಾಯಂದಿರು ವಹಿಸಬೇಕಾದ ಕಾಳಜಿ
೧. ಊಟದ ಸಮಯದಲ್ಲಿ ಸುತ್ತಮುತ್ತಲಿನ ವಾತಾವರಣವು ಪ್ರಸನ್ನತೆಯಿಂದ ಕೂಡಿರಬೇಕು.
೨. ಊಟದ ಕಡೆಗೆ ದುರ್ಲಕ್ಷವಾಗಬಾರದು, ಹಾಗಾಗಿ ಮಕ್ಕಳ ಬಳಿ ಆಟಿಕೆಯಂತಹ ವಸ್ತುಗಳನ್ನು ಇಡಬಾರದು.
೩. ಮಕ್ಕಳು ಊಟ ಮಾಡುವಾಗ ತಮ್ಮ ಇಷ್ಟಾನಿಷ್ಟದ ಚರ್ಚೆ ಮಾಡಬಾರದು.
೪. ಊಟ ಮಾಡುವಾಗ ಅವನ ಪ್ರಗತಿಪುಸ್ತಕ, ಕೊರತೆ ಅಥವಾ ತಪ್ಪುಗಳ ಬಗ್ಗೆ ಚರ್ಚಿಸಬಾರದು.
ಮಕ್ಕಳಿಗೆ ಜಿರಲೆ, ಹಲ್ಲಿ ಇತ್ಯಾದಿಗಳು,
ಅಂತೆಯೇ ಭೂತ ಹಾಗೂ ಕತ್ತಲೆಯ ಭಯವೆನಿಸುವುದು
ಮೇಲಿನ ಯಾವುದೇ ಕಾರಣಗಳಿಂದ ಮಕ್ಕಳು ಹೆದರಿದ್ದರೆ, ಅವರಿಗೆ ಪ್ರೀತಿಯಿಂದ ಹತ್ತಿರ ಕರೆದು ಧೈರ್ಯ ಹೇಳಬೇಕು. ಅವರ ಚೇಷ್ಟೆ ಮಾಡಬಾರದು ಅಥವಾ ಅವರಿಗೆ ಸಿಟ್ಟು ತರಿಸಬಾರದು.
ಕತ್ತಲೆಯ ಭಯ ಹೋಗಬೇಕೆಂದು ಚಿಕ್ಕ ದೀಪ ಹಚ್ಚಿ ಮಲಗಲು ಹೇಳಬೇಕು. ದಿನಗಳು ಹೆಚ್ಚುತ್ತಲೇ ಬೆಳಕು ಕಡಿಮೆಯಾಗುವಂತೆ ದೀಪ ಹಚ್ಚಬೇಕು. ಮಗುವಿಗೆ ಅದರ ರೂಢಿಯಾದರೆ ನಂತರ ದೀಪವನ್ನು ಹಚ್ಚದಿದ್ದರೂ ನಿರ್ಭಯತೆಯಿಂದ ಮಲಗಬಲ್ಲದು.
ರಾತ್ರಿ ಹಾಸಿಗೆ ಒದ್ದೆ ಮಾಡುವುದು
ಇಂದಿಗೂ ಮಕ್ಕಳು ಹಾಸಿಗೆ ಒದ್ದೆ ಮಾಡುವುದು ಒಂದು ಕೆಟ್ಟ ರೂಢಿಯಾಗಿದೆ. ಈ ರೂಢಿಯನ್ನು ತಡೆಯಲು ಮುಂದಿನ ಕಾಳಜಿಯನ್ನು ತೆಗೆದುಕೊಳ್ಳಬೇಕು.
೧. ಸಾಧ್ಯವಾದರೆ ರಾತ್ರಿ ಮಲಗುವ ೧ ಗಂಟೆಯ ಮೊದಲು ಯಾವುದೇ ಪಾನೀಯವನ್ನು ನೀಡಬಾರದು.
೨. ಮಲಗುವ ಮೊದಲು ಅವನಿಗೆ ಶೌಚಾಲಯಕ್ಕೆ ಹೋಗಿ ಬರಲು ಹೇಳಬೇಕು.
೩. ಯಾವಾಗ ಮಗು ಹಾಸಿಗೆಯನ್ನು ಒದ್ದೆ ಮಾಡುತ್ತದೆಯೋ ಅದರ ೧೫ ನಿಮಿಷಗಳ ಮೊದಲು ಅಲಾರಾಂ ಹಚ್ಚಿ ಎಬ್ಬಿಸಬೇಕು ಹಾಗೂ ಶೌಚಾಲಯಕ್ಕೆ ಕಳಿಸಿ ಬರಬೇಕು.
೪. ಕೆಲವು ದಿನಗಳ ನಂತರ ಮಗುವು ಅಲಾರಾಂ ಆದ ತಕ್ಷಣ ಎದ್ದು ಶೌಚಾಲಯಕ್ಕೆ ಹೋಗುವಂತೆ ಉತ್ತೇಜಿಸಬೇಕು. ಅನಂತರ ಅಲಾರಾಂನ ಹಾಗೂ ಅವನ ನಡುವಿನ ಅಂತರವನ್ನು ನಿಧಾನವಾಗಿ ಹೆಚ್ಚಿಸಬೇಕು. ಅನಂತರ ಅಲಾರಾಂ ಇಲ್ಲದಿದ್ದರೂ ಮೂತ್ರಾಶಯ ತುಂಬಿದಾಗ ಅವನಿಗೆ ಎಚ್ಚರವಾಗುವುದು.
೫. ಅವನು ಹಾಸಿಗೆ ಒದ್ದೆ ಮಾಡದಿರುವ ಮಾರನೇ ದಿನ ಅವನಿಗೆ ಬಹುಮಾನ ಕೊಡಬೇಕು, ಇದರಿಂದ ಅವನಿಗೆ ಸ್ವತಃ ಪ್ರಯತ್ನಿಸಲು ಪ್ರೋತ್ಸಾಹ ಸಿಗುತ್ತದೆ.
೬. ಮಗುವು ಮಲಗಿದ ನಂತರ ಮೊದಲ ೫ ನಿಮಿಷ 'ಯಾವಾಗ ಮೂತ್ರಾಶಯ ತುಂಬುವುದೋ, ಆಗ ನಿನಗೆ ಎಚ್ಚರವಾಗುವುದು. ಎಚ್ಚರವಾದ ತಕ್ಷಣ ನೀನು ಶೌಚಾಲಯಕ್ಕೆ ಹೋಗಿ ಬರುವೆ ಹಾಗೂ ಪುನಃ ಗಾಢ ನಿದ್ದೆ ಮಾಡುವೆ' ಹೀಗೆ ಕಡಿಮೆಯೆಂದರೆ ಎರಡು ತಿಂಗಳವರೆಗೆ ಸೂಚನೆಯನ್ನು ಕೊಡಬೇಕು.
ಹಟ ಮಾಡುವುದು
ಮಗುವಿಗೆ ಹಟ ಮಾಡುವ ರೂಢಿಯಾದರೆ ತಂದೆ ತಾಯಿಗೆ ತಲೆನೋವು ಪ್ರಾರಂಭವಾಗುತ್ತದೆ. .
೧. ಇಂತಹ ಸಮಯದಲ್ಲಿ ಅವರ ಬಳಿ ಸಂಪೂರ್ಣವಾಗಿ ದುರ್ಲಕ್ಷಿಸಬೇಕು. ಅವನ ಅಯೋಗ್ಯ ಬೇಡಿಕೆಯನ್ನು ಪೂರೈಸಲೇಬಾರದು.
೨. ಮಗುವು ಶಾಂತವಾದ ನಂತರ ಅವನಿಗೆ ಮೊದಲು ಹಟ ಮಾಡುವುದರ ಹಿಂದಿನ ಕಾರಣವನ್ನು ಕೇಳಬೇಕು. ಹೆಚ್ಚಿನ ಸಮಯದಲ್ಲಿ ಕಾರಣವು ಕ್ಷುಲ್ಲಕವಾಗಿರುತ್ತದೆ. ಆಗ ಸಿಟ್ಟಾಗದೆ ಪ್ರೀತಿಯಿಂದ ತಿಳಿಸಿ ಹೇಳಬೇಕು. ಅವನ ಮನಸ್ಸು ಬೇರೆ ಕಡೆಗೆ ಹೊರಳಿಸಲು ಪ್ರಯತ್ನಿಸಬೇಕು, ಉದಾ. ಸಂಗೀತ, ಕೈಕೆಲಸ, ಯಾವುದಾದರೂ ಆಟದ ಆಸಕ್ತಿಯನ್ನು ಅವನಲ್ಲಿ ನಿರ್ಮಿಸಬೇಕು.
ಕಳ್ಳತನ ಮಾಡುವುದು
ಮಗು ಕಳ್ಳತನ ಮಾಡಿದರೆ, ಸಿಟ್ಟಿನಿಂದ ಹೊಡೆಯಬಾರದು. ಹೀಗೆ ಮಾಡುವುದು ಅಯೋಗ್ಯವಾಗಿದೆ; ಆದರೆ 'ತಾನು ಮಾಡಿದ ಕೃತಿಯು ತಂದೆ ತಾಯಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ' ಎಂಬುದು ಅವನಿಗೆ ತಿಳಿಯಬೇಕು.
ಕಳ್ಳತನದ ಹಿಂದಿನ ಕಾರಣ ಹಾಗೂ ಅಡಚಣೆಯನ್ನು ತಿಳಿದುಕೊಳ್ಳಿರಿ : ಮಗು ಹೀಗೇಕೆ ವರ್ತಿಸಿತು ಎಂಬುದನ್ನು ಅದರಿಂದಲೇ ತಿಳಿದು ಅಡಚಣೆಯನ್ನು ದೂರಗೊಳಿಸಬೇಕು. ಕೆಲವೊಮ್ಮೆ ತಂದೆ ತಾಯಿಯರ ಮೇಲಿನ ಸಿಟ್ಟಿನಿಂದ ಮಕ್ಕಳು ಇಂತಹ ಕೆಲಸಗಳನ್ನು ಮಾಡುತ್ತಾರೆ. ಆದುದರಿಂದ ಅವರ ಸಿಟ್ಟಿನ ಕಾರಣವನ್ನು ತಿಳಿದು ಅದನ್ನು ತೆಗೆದುಹಾಕಲು ಪ್ರಯತ್ನಿಸಬೇಕು.
ಅವನು ಕಳ್ಳತನ ಮಾಡಿ ಬೇರೆಯವರ ವಸ್ತುವನ್ನು ತಂದಿರುವುದು ಗಮನಕ್ಕೆ ಬಂದರೆ ಅದನ್ನು ತಕ್ಷಣ ಹಿಂತಿರುಗಿಸಲು ಹೇಳಬೇಕು.
ತಪ್ಪಿಗಾಗಿ ಶಿಕ್ಷಿಸುವುದು : ಕೆಲವು ಬಾರಿ ಶಿಕ್ಷೆ ಕೊಡಬೇಕಾಗುತ್ತದೆ, ಉದಾ. ಅವನು ಕದ್ದ ಹಣವನ್ನು ಖರ್ಚು ಮಾಡಿರಬಹುದು, ಆಗ ಮನೆಯ ಕೆಲಸ ಮಾಡುವುದು, ತನ್ನ ತಟ್ಟೆ ಬಟ್ಟಲನ್ನು ತೊಳೆಯುವುದು, ತಿಂಡಿ ಕೊಡದಿರವಂತಹ ಶಿಕ್ಷೆಯನ್ನು ನೀಡಬಹುದು. ಈ ಕ್ರಮದಿಂದ ಪರಿಣಾಮವಾಗದಿದ್ದರೆ ಮನಶಾಸ್ತ್ರಜ್ಞರ ಸಲಹೆಯನ್ನು ಕೇಳಬೇಕು. ಅವನು ಹಣವನ್ನು ಖರ್ಚು ಮಾಡಿದ್ದರೆ ಅದಕ್ಕೆ ಶಿಕ್ಷೆಯೆಂದು ಅವನಿಗೆ ಊಟ ನೀಡದಿರುವುದು ಅಥವಾ ಮನೆಯಲ್ಲಿನ ಶಾರೀರಿಕ ಶ್ರಮವಾಗುವ ಕೆಲಸವನ್ನು ಮಾಡಲು ಹೇಳಬೇಕು.
ಮಗುವಿಗೆ ಅರಿವಾಗುವಂತೆ ಅವನೊಂದಿಗೆ ಮಾತನಾಡುವುದು
ಅ. ಮನೆಯಲ್ಲಿರುವ ಹಣ ಇಲ್ಲವಾದರೆ, 'ನೀನು ಇಷ್ಟು ಹಣವನ್ನು ತೆಗೆದುಕೊಂಡಿರುವೆ, ಅದನ್ನು ತಕ್ಷಣ ಹಿಂತಿರುಗಿಸು ಹಾಗೂ ಇನ್ನು ಮುಂದೆ ನಿನಗೆ ಹಣ ಬೇಕಾದರೆ ನನಗೆ ಕೇಳು. ಈಗ ಏನು ಮಾಡಬೇಕು ಎಂಬುದನ್ನು ನೋಡು' ಎಂದು ಅವನಿಗೆ ಹೇಳಬೇಕು. ಆದರೆ ಅವನು ಕಳ್ಳತನ ಮಾಡಿಲ್ಲವೆಂದು ಹೇಳಿದರೆ ಅವನೊಂದಿಗೆ ವಾದ ಮಾಡಬಾರದು ಅಥವಾ ಅದನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲೂ ಬಾರದು.
ಆ. ಕಳ್ಳತನ ಮಾಡಿದರೆ 'ನೀನು ಹೀಗೇಕೆ ಮಾಡಿದೆ?' ಎಂದು ಪ್ರಶ್ನಿಸಬಾರದು. ಆಗ ಮಗು ಏನಾದರೂ ಸುಳ್ಳು ಹೇಳುತ್ತದೆ. ಅವನಿಗೆ ಕೇವಲ 'ನಿನಗೆ ಹಣ ಬೇಕಾಗಿತ್ತು ಎಂಬುದನ್ನು ನೀನು ನನಗೆ ಹೇಳಲಿಲ್ಲ, ನನಗೆ ಈ ಬಗ್ಗೆ ಬೇಸರವಾಯಿತು' ಎಂದು ಹೇಳಬೇಕು.
ಸುಳ್ಳು ಹೇಳುವುದು
ಸುಳ್ಳು ಹೇಳುವುದರ ಕಾರಣಗಳು : ನಿಜ ಹೇಳಿದರೆ ಶಿಕ್ಷೆಯಾಗುತ್ತದೆ ಅಥವಾ ತಂದೆ ತಾಯಿಯರು ಸಿಟ್ಟಾಗುತ್ತಾರೆ ಎಂದು ಮಕ್ಕಳು ಸುಳ್ಳು ಹೇಳುತ್ತಾರೆ. ಕೆಲವು ಮಕ್ಕಳು ತಮ್ಮ ಬಗ್ಗೆ ಹೊಗಳಿಕೊಳ್ಳಲು ಅಥವಾ ತಮಗೆ ಮಹತ್ವ ದೊರೆಯಬೇಕೆಂದು (ಷಿಫಾರಸ್ಸಿಗಾಗಿ) ಸುಳ್ಳು ಹೇಳುತ್ತಾರೆ.
ಸುಳ್ಳು ಹೇಳುವುದರ ಹಿಂದಿನ ಕಾರಣವನ್ನು ಹುಡುಕಿ ಮಗುವಿಗೆ ಭರವಸೆ ಕೊಟ್ಟು ತಿಳಿಸಿಹೇಳಬೇಕು : ಮಕ್ಕಳು ಏಕೆ ಸುಳ್ಳು ಹೇಳಿದರು ಎಂಬುದನ್ನು ಹುಡುಕಿ ಅದರಂತೆ ಉಪಾಯ ಮಾಡಬೇಕು. ಉದಾ. ಶಿಕ್ಷೆಯ ಭಯವಿದ್ದರೆ ಅವನಿಗೆ ಶಿಕ್ಷೆ ಕೊಡುವುದಿಲ್ಲ ಎಂದು ಭರವಸೆಕೊಟ್ಟು ಒಪ್ಪಿಸಬೇಕು ಆಗ ಅವನು ನಿಜ ಹೇಳುತ್ತಾನೆ. ಅನಂತರ ಏಕೆ ಸುಳ್ಳು ಹೇಳಬಾರದು ಎಂಬುದನ್ನು ತಿಳಿಸಿ ಹೇಳಬೇಕು.
ಸುಳ್ಳು ಹೇಳುವುದನ್ನು ತಡೆಯಲು ಮಾಡಬೇಕಾದ ಉಪಾಯ : ಮಗುವು ಗೊಂದಲದಿಂದ ಸುಳ್ಳು ತೋರಿಕೆಯನ್ನು ಮಾಡುತ್ತಿದ್ದರೆ ಅವನಲ್ಲಿರುವ ಒಳ್ಳೆಯ ಗುಣ, ಅವನ ಒಳ್ಳೆಯ ವರ್ತನೆ ಇತ್ಯಾದಿ ವಿಷಯಗಳ ಕಡೆಗೆ ಗಮನಹರಿಸಬೇಕು. ಇದರಿಂದ ಅವನ ಆತ್ಮವಿಶ್ವಾಸವು ಹೆಚ್ಚುತ್ತದೆ ಹಾಗೂ ಸುಳ್ಳು ಹೇಳುವುದು ಕಡಿಮೆಯಾಗುತ್ತದೆ.
ಅಧ್ಯಯನ ಮಾಡದಿರುವುದು
೧. ಶಾಲೆಯಿಂದ ಬಂದ ತಕ್ಷಣ ಅಧ್ಯಯನಕ್ಕೆ ಕಳುಹಿಸಬೇಡಿ : ಸದ್ಯ ಶಾಲೆಯಲ್ಲಿ ಮಕ್ಕಳಿಗೆ ಕಲಿಯಲು ಬಹಳ ವಿಷಯಗಳಿರುತ್ತವೆ ಹಾಗೂ ಅಷ್ಟೇ ಮನೆಕೆಲಸವನ್ನೂ ನೀಡಲಾಗುತ್ತದೆ. ಇದರಿಂದ ಅವರಿಗೆ ಅಧ್ಯಯನದ ಬಗ್ಗೆ ಅಸಹ್ಯವೆನಿಸುವುದು ಸ್ವಾಭಾವಿಕವಾಗಿದೆ. ಇಂತಹ ಸಮಯದಲ್ಲಿ ಶಾಲೆಯಿಂದ ಬಂದ ತಕ್ಷಣ ಮಗುವನ್ನು ಅಧ್ಯಯನಕ್ಕೆ ಕುಳಿತುಕೊಳ್ಳಲು ಹೇಳದೆ, ಅವನ ತಿಂಡಿ ತಿಂದು ಆದ ನಂತರ ಒಂದು ಗಂಟೆಯವರೆಗೆ ಆಟ ಆಡಲು ಬಿಟ್ಟು ಅನಂತರ ಅಧ್ಯಯನ ಮಾಡಲು ಹೇಳಬೇಕು.
೨. ಇತರ ವಿಷಯದಲ್ಲಿ ಮಕ್ಕಳ ಆಸಕ್ತಿಯನ್ನು ಗಮನಿಸಿರಿ : ಕೆಲವೊಮ್ಮೆ ಮಕ್ಕಳಿಗೆ ಬೇರೆ ವಿಷಯದಲ್ಲಿ ಆಸಕ್ತಿಯುಂಟಾದ್ದರಿಂದ ಅಧ್ಯಯನದ ಕಡೆಗೆ ದುರ್ಲಕ್ಷವಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಆಸಕ್ತಿಯು ಉತ್ತಮವಾಗಿದ್ದರೆ ಉದಾ. ಅವನಿಗೆ ಸಂಗೀತ, ಚಿತ್ರಕಲೆ ಅಥವಾ ಯಾವುದಾದರೂ ಆಟದಲ್ಲಿ ಆಸಕ್ತಿ ನಿರ್ಮಾಣವಾದರೆ ಅವನಿಗೆ ಅದರಲ್ಲಿ ಮುಂದುವರಿಯಲು ಪ್ರೋತ್ಸಾಹ ಕೊಡಬೇಕು. ಆದರೆ ಸಮಯದ ನಿಬಂಧನೆ ಹಾಕಬೇಕು ಹಾಗೂ ಅವನು ತನ್ನ ದೈನಂದಿನ ಅಧ್ಯಯನವನ್ನು ಪ್ರತಿದಿನ ಮಾಡುವಂತೆ ನೋಡಿಕೊಳ್ಳಬೇಕು.
೩. ಶಾಲೆಗೆ ನಿಯಮಿತವಾಗಿ ಹೋಗಿ ಬರುತ್ತಿರುವುದರ ಬಗ್ಗೆ ಮಗುವಿನ ಬಳಿ ವಿಚಾರಿಸಬೇಕು : ಪಾಲಕರು ಆಗಾಗ ಶಾಲೆಗೆ ಹೋಗಿ ಮಕ್ಕಳು ಸಮಯಕ್ಕೆ ಸರಿಯಾಗಿ ಹಾಗೂ ನಿಯಮಿತವಾಗಿ ಶಾಲೆಗೆ ಬರುತ್ತಾರೆಯೋ ಇಲ್ಲವೋ, ಹಾಗೂ ಅವರ ವರ್ತನೆ ಹೇಗಿದೆ ಎಂಬುದರ ಬಗ್ಗೆ ಗಮನಿಸಬೇಕು; ಏಕೆಂದರೆ ಸದ್ಯ ಮಕ್ಕಳು 'ಎಲೆಕ್ಟ್ರಾನಿಕ ಗೇಮ್ಸ್'ನ ಕಡೆಗೆ ಆಕರ್ಷಿತರಾಗಿರುವುದು ಕಂಡುಬರುತ್ತದೆ. ಕೆಲವು ಮಕ್ಕಳು ಶಾಲೆಯನ್ನು ತಪ್ಪಿಸಿ ಆಟ ಆಡಲು ಹೋಗುತ್ತಾರೆ. ಇಂತಹ ಆಟಕ್ಕಾಗಿ ಹಣ ಬೇಕಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಹಣವು ಕಳುವಾಗಲು ಪ್ರಾರಂಭವಾಗುತ್ತದೆ ಹಾಗೂ ಅಧ್ಯಯನದ ಕಡೆಗೆ ದುರ್ಲಕ್ಷವಾಗುತ್ತದೆ. ಹೀಗಾದರೆ ಮಗುವಿನ ಶಾಲೆಯನ್ನು ಬದಲಿಸುವುದು ಅವಶ್ಯಕವಾಗುತ್ತದೆ, ಇಲ್ಲದಿದ್ದರೆ ಮುಂದೆ ಆ ಮಕ್ಕಳು ಅಪರಾಧದ ಜಗತ್ತಿನತ್ತ ಹೋಗುತ್ತಾರೆ.
ಪರೀಕ್ಷೆಯಲ್ಲಿ ಯಾವುದಾದರೂ ವಿಷಯದಲ್ಲಿ ಒಳ್ಳೆಯ ಅಂಕಗಳು ದೊರೆತರೆ ಅವನನ್ನು ಹೊಗಳಬೇಕು. ಚಿಕ್ಕ ಬಹುಮಾನ ಕೊಟ್ಟರೆ ಅವನಿಗೆ 'ಶ್ಯಯನದಲ್ಲಿ ಇನ್ನಷ್ಟು ಪ್ರಯತ್ನ ಮಾಡಬೇಕು' ಎಂದು ಅನಿಸುತ್ತದೆ.
ಪ್ರಮುಖವಾಗಿ ಮನೆಯ ವಾತಾವರಣವು ಆನಂದ ಹಾಗೂ ಪ್ರಸನ್ನತೆಯಿಂದ ಕೂಡಿರಬೇಕು. ತಂದೆ ತಾಯಿಯರ ಸಮಸ್ಯೆಯಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮವಾಗದಿರುವಂತೆ ಜಾಗರೂಕತೆಯನ್ನು ವಹಿಸಬೇಕು.
ಏಕಾಗ್ರತೆಯನ್ನು ಹೆಚ್ಚಿಸಲು ಸಮ್ಮೋಹನ ಶಾಸ್ತ್ರವನ್ನು ಉಪಯೋಗಿಸಿದರೆ ಬಹಳ ಲಾಭವಾಗುತ್ತದೆ.
ಮನೆಯಲ್ಲಿಯೇ ಮಾಡಬಹುದಾದ ಸುಲಭ ಮಾನಸೋಪಚಾರದಿಂದ ಮಕ್ಕಳ ಬಹಳಷ್ಟು ಸಮಸ್ಯೆಗಳನ್ನು ದೂರಗೊಳಿಸಬಹುದು. ಅಂತೆಯೇ ತಂದೆ ತಾಯಿಯರ ಯೋಗ್ಯ ವರ್ತನೆಯಿಂದ ಅವರ ವ್ಯಕ್ತಿತ್ವವು ಆರೋಗ್ಯಮಯವಾಗಲು ಸಹಾಯವಾಗುತ್ತದೆ. ಇದರಿಂದ ಮುಂದೆ ಮಾನಸಿಕ ವಿಕಾರಗಳಾಗುವ ಸಂಭಾವ್ಯತೆಯು ಕಡಿಮೆಯಾಗುತ್ತದೆ.
– ಆಧುನಿಕ ವೈದ್ಯೆ (ಡಾ.) ಸೌ. ಕುಂದಾ ಆಠವಲೆ
ಅಧಾರ: ಆಕಾಶವಾಣಿಯಲ್ಲಿನ ಭಾಷಣ, ಕ್ರಿಶ. ೧೯೮೮