ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ)

ನರಕ ಚತುರ್ದಶಿ

ಶ್ರೀಮದ್ಭಾಗವತಪುರಾಣದಲ್ಲಿ ಒಂದು ಕಥೆಯಿದೆ – 'ಒಂದು ಕಾಲದಲ್ಲಿ ಪ್ರಾಗ್ಜ್ಯೋತಿಷಪುರದಲ್ಲಿ ಭೌಮಾಸುರ (ನರಕಾಸುರ) ಎಂಬ ಬಲಿಷ್ಠ ಅಸುರನು ರಾಜ್ಯವಾಳುತ್ತಿದ್ದನು. ಮಾನವರಿಗೆ ಮತ್ತು ದೇವತೆಗಳಿಗೆ ಇವನು ತುಂಬಾ ಪೀಡೆ ಕೊಡುತ್ತಿದ್ದನು. ಈ ದುಷ್ಟನು ಸ್ತ್ರೀಯರಿಗೂ ಪೀಡಿಸಲಾರಂಭಿಸಿದ್ದನು. ಅವನು ಹದಿನಾರು ಸಾವಿರಕ್ಕೂ ಹೆಚ್ಚು ರಾಜ ಕನ್ಯೆಯರನ್ನು ಅಪಹರಿಸಿ ತಂದು, ಅವರನ್ನು ಸೆರೆಮನೆಯಲ್ಲಿ ಇಟ್ಟು, ಅವರನ್ನು ಮದುವೆಯಾಗಲು ಮುಂದಾದನು. ಇದರಿಂದ ಎಲ್ಲೆಡೆ ಹಾಹಾಕಾರವಾಗತೊಡಗಿತು. ಶ್ರೀಕೃಷ್ಣನಿಗೆ ಈ ವಿಷಯ ತಿಳಿದಾಕ್ಷಣ ಸತ್ಯಭಾಮೆಯೊಂದಿಗೆ ಅಸುರನ ವಿರುದ್ಧ ಯುದ್ಧ ಸಾರಿದನು. ನರಕಾಸುರನನ್ನು ವಧಿಸಿ, ಅವನು ಬಂಧಿಸಿಟ್ಟ ರಾಜ ಕನ್ಯೆಯರನ್ನು ಬಂಧಮುಕ್ತಗೊಳಿಸಿದನು.

ತನ್ನ ಕೊನೆಯುಸಿರು ಎಳೆಯುವಾಗ ನರಕಾಸುರನು ಶ್ರೀ ಕೃಷ್ಣನಲ್ಲಿ ಒಂದು ವರವನ್ನು ಕೇಳಿ ಪಡೆದುಕೊಂಡನು. 'ಈ ದಿನ (ತಿಥಿಯಂದು) ಯಾರು ಅಭ್ಯಂಗ ಸ್ನಾನವನ್ನು ಮಾಡುವರೋ, ಅವರಿಗೆ ನರಕ ಪ್ರಾಪ್ತಿಯಾಗಬಾರದು' ಎಂಬುವುದು ಆ ವರವಾಗಿತ್ತು. ಚತುರ್ದಶಿಯಂದು ನರಕಾಸುರನನ್ನು ವಧಿಸಿ, ಆವನ ರಕ್ತವನ್ನು ತನ್ನ ಹಣೆಗೆ ಹಚ್ಚಿಕೊಂಡು ಮನೆಗೆ ಮರಳಿದ ಶ್ರೀಕೃಷ್ಣನಿಗೆ ನಂದನು ಅಭ್ಯಂಗ ಸ್ನಾನ ಮಾಡಿಸಿದನು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ, ಜನರು ಈ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.

ಯಮತರ್ಪಣೆ

ಅಭ್ಯಂಗ ಸ್ನಾನದ ನಂತರ ಅಪಮೃತ್ಯು (ಅಕಾಲ ಮೃತ್ಯು) ಬಾರದಿರುವಂತೆ ಯಮತರ್ಪಣೆಯನ್ನು ನೀಡಲು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ವಿಧಿಯನ್ನು ಪಂಚಾಂಗದಲ್ಲಿ ನೀಡಲಾಗುತ್ತದೆ, ಅದನ್ನು ಅನುಸರಿಸಿ ತರ್ಪಣೆಯನ್ನು ನೀಡಬೇಕು. ಅದಾದ ನಂತರ ತಾಯಂದಿರು ತಮ್ಮ ಮಕ್ಕಳಿಗೆ ಆರತಿಯನ್ನು ಬೆಳಗುತ್ತಾರೆ. ಕೆಲವರು ಅಭ್ಯಂಗ ಸ್ನಾನದ ನಂತರ ನರಕಾಸುರನ ವಧೆಯ ಪ್ರತೀಕವೆಂದು ಕಾರಿಟ್ (ಒಂದು ರೀತಿಯ ಕಾಯಿ) ಅನ್ನು ಕಾಲಿನಿಂದ ಜಜ್ಜಿ, ಒದೆಯುತ್ತಾರೆ, ಇನ್ನೂ ಕೆಲವರು ಅದನ್ನು ಜಜ್ಜಿ ಅದರ ರಸವನ್ನು (ರಕ್ತದ ಸಂಕೇತವಾಗಿ) ನಾಲಿಗೆಗೆ ಹಚ್ಚಿಕೊಳ್ಳುತ್ತಾರೆ.

ನರಕ ಚತುರ್ದಶಿಯಂದು ಬ್ರಹ್ಮ
ಮುಹೂರ್ತದಲ್ಲಿ ಅಭ್ಯಂಗ ಸ್ನಾನವನ್ನು ಏಕೆ ಮಾಡಬೇಕು?

ಬ್ರಹ್ಮ ಮುಹೂರ್ತದಲ್ಲಿ ಮಾಡುವ ಸ್ನಾನವು 'ದೇವ ಪರಂಪರೆ' ಎಂದು ಪರಿಗಣಿಸಲ್ಪಡುತ್ತದೆ. ಈ ರೀರಿ ದೇವ ಪರಂಪರೆಯನ್ನು ಅನುಸರಿಸುವುದರಿಂದ ಮನುಷ್ಯರಿಗೆ ಮುಂದಿನ ಲಾಭಗಳಾಗುತ್ತವೆ –

ಅ. ಶುದ್ಧ, ಪವಿತ್ರ ಮತ್ತು ನಿರ್ಮಲ ಸಂಸ್ಕಾರಗಳಾಗುತ್ತವೆ.

ಆ. ಬ್ರಹ್ಮ ಮುಹೂರ್ತದಲ್ಲಿ ಪ್ರಕ್ಷೇಪಿಸುವ ಈಶ್ವರೀ ಚೈತನ್ಯ ಮತ್ತು ದೇವತೆಗಳ ಲಹರಿಗಳನ್ನು ಗ್ರಹಿಸುವ ಸಾಮರ್ಥ್ಯ ಬರುತ್ತದೆ.

ಇ. ಈಶ್ವರೀ ಚೈತನ್ಯವನ್ನು ಗ್ರಹಿಸುವಂತಾಗಲು ತನ್ನನ್ನು ಸಮರ್ಥನನ್ನಾಗಿಸಲು ಮತ್ತು ಈಶ್ವರನ 'ಸಂಕಲ್ಪ, ಇಚ್ಛೆ ಮತ್ತು ಕ್ರಿಯೆ' ಈ ಮೂರು ರೀತಿಯ ಶಕ್ತಿಗಳು, ಮತ್ತು ಆ ಶಕ್ತಿಯ ಸಮ್ಮಿಲದಿಂದ ಜ್ಞಾನ ಶಕ್ತಿಯೂ ಗ್ರಹಿಸಲು ಅನುಕೂಲವಾಗುತ್ತದೆ.

ಈ. ಸ್ನಾನದ ನಂತರ ಹಣೆಗೆ ಹಚ್ಚಿಕೊಳ್ಳುವ ತಿಲಕವು 'ದುಷ್ಟ ಸಂಹಾರ, ಮತ್ತು ಧರ್ಮದ ವಿಜಯದ' ಪ್ರತೀಕವಾಗಿದೆ !


Leave a Comment