ಏನನ್ನು ಕೇಳಿದರೂ ಅದನ್ನು ಕೊಡಬಲ್ಲ ಕಲ್ಪತರು ಎಂದರೆ ಭಗವಂತ. ಆದರೆ ಮನಸ್ಸು ಚಂಚಲವಾಗಿದ್ದರೆ ಅದರಿಂದಾಗುವ ಅಪಾಯವೇನು ಎಂಬುವುದರ ಕುರಿತು ಒಂದು ಕಥೆ ಹೀಗಿದೆ: ಪ್ರಯಾಣಿಕನೊಬ್ಬನು ಬಹಳ ದೂರದಿಂದ ನಡೆಯುತ್ತ ಒಂದು ದೊಡ್ಡ ಬಯಲು ಪ್ರದೇಶಕ್ಕೆ ಬಂದನು. ಹಲವು ಗಂಟೆಗಳ ಕಾಲ ಅವನು ಬಿಸಿಲಿನಲ್ಲಿ ನಡೆಯುತ್ತಿದ್ದುದರಿಂದ ಬಹಳ ದಣಿದು ಬಸವಳಿದಿದ್ದನು. ವಿಶ್ರಾಂತಿಗಾಗಿ ಒಂದು ಮರದ ಕೆಳಗೆ ಕುಳಿತನು. ಆತನ ಮನಸ್ಸು ಹೀಗೆ ಯೋಚಿಸಿತು. ಇಲ್ಲೇ ಮಲಗಿಕೊಳ್ಳುವುದಕ್ಕೆ ಒಂದು ಮೆತ್ತನೆಯ ಹಾಸಿಗೆ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು. ಪೂರ್ವ ಪುಣ್ಯದಿಂದ ಅವನು ಕಲ್ಪವೃಕ್ಷದ ಕೆಳಗೆ ಕುಳಿತಿದ್ದನು. ಆಲೋಚನೆ ಹೊಳೆದ ತಕ್ಷಣವೇ ಒಂದು ಚೆನ್ನಾಗಿರುವ ಹಾಸಿಗೆಯನ್ನು ಪಕ್ಕದಲ್ಲಿ ಕಂಡನು! ಅದನ್ನು ನೋಡಿ ತುಂಬ ಅಚ್ಚರಿಗೊಂಡನು. ಅವನು ಅದರ ಮೇಲೆ ಹಾಯಾಗಿ ಮಲಗಿಕೊಂಡನು. ಮನಸ್ಸು ಚಂಚಲವಲ್ಲವೇ, ಒಬ್ಬಳು ಸುಂದರ ತರುಣಿ ಬಂದು ಮೆಲ್ಲಗೆ ಕಾಲನ್ನು ಒತ್ತಿದರೆ ಎಷ್ಟು ಸುಖ ಆಗುತ್ತಿತ್ತು ಎಂದು ಯೋಚಿಸಿದನು. ಈ ಆಲೋಚನೆ ಬಂದೊಡನೆ ತರುಣಿಯೊಬ್ಬಳು ಅವನ ಕಾಲನ್ನು ಒತ್ತತೊಡಗಿದಳು. ಪ್ರಯಾಣಿಕನಿಗೆ ಆನಂದವಾಯಿತು.
ಸ್ವಲ್ಪ ಸಮಯದ ನಂತರ ತುಂಬ ಹಸಿವಾಗ ತೊಡಗಿ ‘ನಾನು ಬಯಸಿದ್ದೆಲ್ಲಾ ಸಿಕ್ಕಿದೆ. ನನಗೆ ಸ್ವಲ್ಪ ಒಳ್ಳೆಯ ಊಟ ಸಿಗಬಾರದೆ?’ ಎಂದುಕೊಂಡನು. ತಕ್ಷಣವೇ ಎದುರಲ್ಲಿ ಬಗೆ ಬಗೆಯ ರುಚಿ ರುಚಿಕರವಾದ ಖಾದ್ಯಗಳುಳ್ಳ ತಟ್ಟೆಗಳನ್ನು ಕಂಡನು. ಲಗುಬಗೆಯಿಂದ ಹೊಟ್ಟೆ ತುಂಬ ಊಟ ಮಾಡತೊಡಗಿದನು. ಮನದಣಿಯೆ ಊಟವಾದ ಮೇಲೆ ಪುನಃ ಹಾಸಿಗೆಯ ಮೇಲೆ ಮಲಗಿ ಅಂದು ನಡೆದ ಸಂಗತಿಗಳ ಕುರಿತು ಯೋಚಿಸತೊಡಗಿದನು. ಹೀಗಿರುವಾಗ ಅವನು ‘ಇದ್ದಕ್ಕಿದ್ದಂತೆಯೇ ಕಾಡಿನಿಂದ ಒಂದು ಹುಲಿ ನನ್ನನ್ನು ಅಟ್ಟಿಸಿಕೊಂಡು ಬಂದುಬಿಟ್ಟರೆ ನನ್ನ ಗತಿಯೇನು?’ ಎಂದು ಯೋಚಿಸ ತೊಡಗಿದನು. ತಕ್ಷಣವೇ ಒಂದು ದೊಡ್ಡ ಹುಲಿಯು ಅವನ ಮೇಲೆರಗಿತು. ದೇಹ ಬಗೆದು ರಕ್ತಹೀರಿತು. ಪ್ರಯಾಣಿಕನು ಹೆದರಿಯೇ ತನ್ನ ಪ್ರಾಣವನ್ನು ಕಳೆದುಕೊಂಡನು!
ಸಾಮಾನ್ಯ ಮನುಷ್ಯನ ಸ್ಥಿತಿಯು ಹೀಗೆಯೇ ಇರುತ್ತದೆ. ಮಾನವನ ಆಸೆಗಳಿಗೆ ಮಿತಿಯೇ ಇಲ್ಲ. ದೇವರನ್ನು ಪ್ರತಿನಿತ್ಯ ನೆನೆಯುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಧ್ಯಾನ ಮಾಡುವಾಗ ಧನ-ಧಾನ್ಯ, ಕೀರ್ತಿಗಳಿಗೆ ಪ್ರಾರ್ಥಿಸಿದರೆ ಸ್ವಲ್ಪಮಟ್ಟಿಗಾದರೂ ನಿಮ್ಮ ಪ್ರಾರ್ಥನೆ ಈಡೇರುವುದು. ಆದರೆ ಜಾಗರೂಕರಾಗಿರಿ! ನಿಮಗೆ ದೊರಕಿದುದರಲ್ಲಿ ತೃಪ್ತರಾಗದಿದ್ದರೆ, ಭಯಂಕರ ಹುಲಿಯು ಅವಿತುಕೊಂಡಿರುವ ಭಯವಿದೆ. ಅನಾರೋಗ್ಯ, ಬಂಧುಬಳಗದವರ ಕಷ್ಟ, ದ್ರವ್ಯ ಮತ್ತು ಕೀರ್ತಿಗಳ ನಾಶವೆಂಬ ಹುಲಿ. ಇವು ನೈಜ ಹುಲಿಗಿಂತ ಸಾವಿರ ಪಾಲು ಭಯಂಕರವಾಗಿರುವುವು.
ಮಕ್ಕಳೇ, ಸತತ ನಾಮಜಪದಿಂದ ಮನಸ್ಸು ದೃಢವಾಗುತ್ತದೆ. ಚಿತ್ತಚಾಂಚಲ್ಯ ಕಡಿಮೆಯಾಗುತ್ತದೆ. ಪುಣ್ಯಫಲದ ಆಸೆಯಿಂದ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಕ್ಷಣಿಕ ಫಲ ಸಿಗುವುದು. ಆದುದರಿಂದ, ಪರಮಾತ್ಮನಲ್ಲಿ ಪರಮಾನಂದವನ್ನೇ ದಯಪಾಲಿಸೆಂದು ಅನುದಿನ ಪ್ರಾರ್ಥಿಸಬೇಕು.