ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದ್ದು, ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾದಿಗಳ ಕಾಮನೆಗಳ ಪ್ರದಾಯಕನಾಗಿ, ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ. ಈ ಕ್ಷೇತ್ರವನ್ನು ಗುಪ್ತ ಕ್ಷೇತ್ರವೆಂಬುವುದಾಗಿಯೂಕರೆಯುತ್ತಾರೆ.
"ಮೃತ್ತಿಕಾ" (ಮಣ್ಣು) ಪ್ರಸಾದ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ಪವಿತ್ರ ಕುಮಾರಧಾರ ತೀರ್ಥ ಸ್ನಾನದಿಂದ ಕುಷ್ಠ ರೋಗದಂತಹ ಭಯಾನಕ ರೋಗಗಳೂ, ಚರ್ಮ ವ್ಯಾಧಿಗಳೂ ಶಮನವಾಗುವುದೆಂಬುದು ಭಕ್ತರ ಅಪಾರ ನಂಬಿಕೆ. ಶ್ರೀ ದೇವರಿಗೆ ಅನ್ನದಾತ ಸುಬ್ಬಪ್ಪನೆಂಬ ನಾಮಾಭಿದಾನವಿದ್ದು, ಶ್ರೀ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತಿದೆ. ಸರ್ಪದೋಷದಿಂದ ಬರುವಂತಹ ಸಂತಾನ ಹೀನತೆ, ಚರ್ಮ ವ್ಯಾಧಿ, ದೃಷ್ಠಿ ಮಾಂದ್ಯ, ಭೂಮಿದೋಷವೇ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಅಶ್ಲೇಷ ಬಲಿ, ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸಿ ಕೃತಾರ್ಥರಾಗುತ್ತಾರೆ.
ಪೌರಾಣಿಕ ಕಥೆ
ಶ್ರೀ ಕುಮಾರಸ್ವಾಮಿಯು ತಾರಕಾಸುರ ಶೂರ ಪದ್ಮಾಸುರ ಹಾಗೂ ಅವನ ಅನುಯಾಯಿಗಳನ್ನು ಸಂಹರಿಸಿ ಕುಮಾರ ಪರ್ವತದಲ್ಲಿ ಸಹೋದರ ಗಣೇಶನು ಮತ್ತು ಇತರರೊಂದಿಗೆ ಬಂದು ನೆಲೆಸುತ್ತಾರೆ. ಸ್ಕಂದ ಪುರಾಣದ ಪ್ರಕಾರ ಷಣ್ಮುಖನು ರಾಕ್ಷಸರನ್ನು ಸಂಹರಿಸಿದ ನಂತರ ಅವನ ಆಯುಧವನ್ನು ಧಾರ ನದಿಯಲ್ಲಿ ತೊಳೆದನು. ಆಗಿನಿಂದ ಇಲ್ಲಿನ ಪವಿತ್ರ ನದಿಯನ್ನು ಧಾರತೀರ್ಥ ಎಂದು ಹೇಳುವರು.
ಇಂದ್ರನು ತನ್ನ ಮಗಳಾದ ದೇವಸೇನಾಳನ್ನು ಮದುವೆಯಾಗುವಂತೆ ಸುಬ್ರಹ್ಮಣ್ಯನನ್ನು ಕೇಳಿಕೊಂಡನು. ಆಗ ಸುಬ್ರಹ್ಮಣ್ಯನು ಆಗಲೇ ಸಮ್ಮತಿಸುತ್ತಾನೆ. ಸ್ವಾಮಿ ಕಾರ್ತಿಕ ಎಂಬ ನಗರವನ್ನು ಕುಮಾರಧಾರದ ದಡದಲ್ಲಿ ಕಟ್ಟುತ್ತಾರೆ. ಮಾರ್ಗಶಿರ ಷಷ್ಠಿಯ ದಿವಸ ಮದುವೆ ನಡೆಯುತ್ತದೆ. ಆ ದಿನವನ್ನೇ "ಚಂಪಾಷಷ್ಠಿ" ಎಂಬುದಾಗಿ ಕರೆಯುವರು.
ಪರಮ ಶಿವಭಕ್ತ, ಸರ್ಪರಾಜನಾದ ವಾಸುಕಿಯು ಸುಬ್ರಹ್ಮಣ್ಯನ ಬಿಲ್ವದ್ವಾರ ಗುಹೆಯಲ್ಲಿ ಪಕ್ಷಿರಾಜ ಗರುಡನಿಂದ ಪಾರಾಗಲು ಘೋರ ತಪಸ್ಸನ್ನು ಕೈಗೊಂಡನು. ಆಗ ಷನ್ಮುಖನು ಅವನಿಗೆ ತನ್ನ ದರ್ಶನ ನೀಡಿ ಪರಮಭಕ್ತನೊಂದಿಗೆ ಮುಂದೆ ಇಲ್ಲೇ ನೆಲೆಸುವೆನೆಂದು ಅಭಯವನ್ನು ನೀಡಿದನು. ಆದ್ದರಿಂದ ವಾಸುಕಿ ಅಥವಾ ನಾಗರಾಜನಿಗೆ ಮಾಡುವ ಪೂಜೆಗಳೆಲ್ಲವು ಸುಬ್ರಹ್ಮಣ್ಯನಿಗೆ ಸಲ್ಲುತ್ತದೆ ಎಂಬ ನಂಬಿಕೆ ಇದೆ.
ಕುಕ್ಕೆಯ ಇನ್ನೊಂದು ಚರಿತ್ರೆಯೆಂದರೆ ಮಲೆ ಕುಡಿಯ ಎಂಬ ಜನಾಂಗದವರು ಹಾವುಗಳನ್ನು ಕುಮಾರಗಿರಿಯ ಕಾಡ್ಗಿಚ್ಚಿನಿಂದ ಕಾಪಾಡಿ ಅವುಗಳನ್ನು ಕುಕ್ಕೆ (ಬುಟ್ಟಿ)ಗಳಲ್ಲಿ ತಂದು ಒಂದು ಊರಿನಲ್ಲಿ ಬಿಟ್ಟರು ಅದೇ ಕುಕ್ಕೆ ಲಿಂಗ. ಆದ್ದರಿಂದ ಈ ಜನಾಂಗದವರನ್ನು ದೇವಸ್ಥಾನದ ಉತ್ಸವ ಮತ್ತು ಹಬ್ಬಗಳಿಗೆ ಆಹ್ವಾನಿಸುತ್ತಾರೆ.