ಪುರಾಣಗಳಿಗನುಸಾರ: ಅತ್ರಿಋಷಿಗಳ ಪತ್ನಿ ಅನಸೂಯಾಳು ಮಹಾಪತಿವ್ರತೆಯಾಗಿದ್ದಳು. ಅವಳ ಪಾತಿವ್ರತ್ಯದ ಪರೀಕ್ಷೆ ತೆಗೆದುಕೊಳ್ಳಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನಿರ್ಧರಿಸಿದರು. ಒಮ್ಮೆ ಅತ್ರಿಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋದಾಗ ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು) ಅತಿಥಿಗಳ ವೇಷದಲ್ಲಿ ಬಂದರು ಮತ್ತು ಅನಸೂಯಾಳ ಬಳಿ ಭೋಜನವನ್ನು ಬೇಡಿದರು. ಅದಕ್ಕೆ ಅನಸೂಯಾಳು, ‘ಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋಗಿದ್ದಾರೆ ಅವರು ಬರುವ ತನಕ ಕಾಯಿರಿ’ ಎಂದಳು. ಆಗ ತ್ರಿಮೂರ್ತಿಗಳು ಅನಸೂಯಾಳಿಗೆ, ‘ಋಷಿಗಳಿಗೆ ಹಿಂದಿರುಗಲು ತಡವಾಗಬಹುದು; ನಮಗೆ ತುಂಬಾ ಹಸಿವಾಗಿದೆ; ‘ಆಶ್ರಮಕ್ಕೆ ಬಂದ ಅತಿಥಿಗಳಿಗೆ ನೀವು ಇಚ್ಛಾ ಭೋಜನವನ್ನು ನೀಡುತ್ತೀರಿ,’ ಎಂದು ನಾವು ಕೇಳಿದ್ದೇವೆ; ಆದುದರಿಂದ ನಾವು ಇಚ್ಛಾ ಭೋಜನವನ್ನು ಮಾಡಲು ಬಂದಿದ್ದೇವೆ. ತಕ್ಷಣ ಆಹಾರವನ್ನು ನೀಡು, ಇಲ್ಲವಾದರೆ ನಾವು ಬೇರೆ ಕಡೆ ಹೋಗುತ್ತೇವೆ’ ಎಂದು ಹೇಳಿದರು.
ನಂತರ ಅನಸೂಯಾಳು ಅವರನ್ನು ಸ್ವಾಗತಿಸಿದಳು ಮತ್ತು ಭೋಜನಕ್ಕೆ ಕುಳಿತುಕೊಳ್ಳಲು ವಿನಂತಿಸಿದಳು. ಅದರಂತೆಯೇ ಅವರು ಭೋಜನಕ್ಕೆ ಕುಳಿತು ಕೊಂಡರು. ಅವಳು ಊಟಕ್ಕೆ ಬಡಿಸಲು ಬಂದಾಗ ಅವರು, ‘ನೀನು ವಿವಸ್ತ್ರಳಾಗಿ ನಮಗೆ ಬಡಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ’ ಎಂದರು. ‘ಅತಿಥಿಗಳನ್ನು ಹಿಂದಿರುಗಿಸಿ ಕಳುಹಿಸುವುದು ಅಯೋಗ್ಯವಾಗುತ್ತದೆ. ನನ್ನ ಮನಸ್ಸು ನಿರ್ಮಲವಾಗಿದೆ. ನನ್ನ ಪತಿಯ ತಪಸ್ಸಿನ ಫಲವು ನನ್ನನ್ನು ಕಾಪಾಡುವುದು,’ ಎಂದು ವಿಚಾರ ಮಾಡಿ ಅವಳು ಅತಿಥಿಗಳಿಗೆ ‘ಸರಿ, ನೀವು ಭೋಜನಕ್ಕೆ ಕುಳಿತುಕೊಳ್ಳಿರಿ’ ಎಂದಳು. ನಂತರ ಅಡುಗೆ ಮನೆಗೆ ಹೋಗಿ ಪತಿಯ ಸ್ಮರಣೆಯನ್ನು ಮಾಡಿದಳು, ಮನಸ್ಸಿನಲ್ಲಿ ‘ಅತಿಥಿಗಳು ನನ್ನ ಮಕ್ಕಳೇ ಆಗಿದ್ದಾರೆ’ ಎಂಬ ಭಾವವನ್ನಿಟ್ಟುಕೊಂಡಳು. ನಂತರ ನೋಡಿದರೆ ಅಲ್ಲಿ ಅತಿಥಿಗಳ ಜಾಗದಲ್ಲಿ ಅಳುತ್ತಿರುವ ಮೂರು ಮಕ್ಕಳಿದ್ದರು! ಅವರನ್ನು ಮಡಿಲಲ್ಲಿ ತೆಗೆದುಕೊಂಡು ಅವಳು ಸ್ತನಪಾನವನ್ನು ಮಾಡಿಸಿದಳು. ಮಕ್ಕಳು ಅಳುವುದನ್ನು ನಿಲ್ಲಿಸಿದರು.
ಅಷ್ಟರಲ್ಲಿಯೇ ಅತ್ರಿಋಷಿಗಳು ಬಂದರು. ಅವಳು ಅವರಿಗೆ ಎಲ್ಲ ವೃತ್ತಾಂತವನ್ನು ತಿಳಿಸಿದಳು. ಅವಳು, ‘ಸ್ವಾಮಿನ್ ದೇವೇನ ದತ್ತಮ್ |’ ಎಂದು ಹೇಳಿದಳು. ಇದರ ಅರ್ಥ – ‘ಹೇ ಸ್ವಾಮಿ, ದೇವರು ನೀಡಿದ (ಮಕ್ಕಳು).’ ಇದರಿಂದ ಅತ್ರಿಯವರು ಆ ಮಕ್ಕಳ ನಾಮಕರಣವನ್ನು ‘ದತ್ತ’ ಎಂದು ಮಾಡಿದರು. ನಂತರ ಅತ್ರಿಋಷಿಗಳು ಅಂತರ್ ಜ್ಞಾನದಿಂದ ಆ ಮಕ್ಕಳ ನಿಜ ಸ್ವರೂಪವನ್ನು ತಿಳಿದುಕೊಂಡು ಅವರಿಗೆ ನಮಸ್ಕಾರ ಮಾಡಿದರು. ಮಕ್ಕಳು ತೊಟ್ಟಿಲಲ್ಲಿ ಉಳಿದವು ಹಾಗೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅವರೆದುರು ಪ್ರಕಟರಾದರು ಮತ್ತು ಪ್ರಸನ್ನರಾಗಿ ‘ವರ ಬೇಡಿ’, ಎಂದರು. ಅತ್ರಿ ಮತ್ತು ಅನಸೂಯರು ‘ಬಾಲಕರು ನಮ್ಮ ಮನೆಯಲ್ಲಿಯೇ ಇರಲಿ’, ಎಂಬ ವರವನ್ನು ಕೇಳಿದರು. ಆ ವರವನ್ನು ನೀಡಿ ದೇವರು ತಮ್ಮತಮ್ಮ ಲೋಕಗಳಿಗೆ ತೆರಳಿದರು. ಮುಂದೆ ಬ್ರಹ್ಮದೇವನಿಂದ ಚಂದ್ರ, ಶ್ರೀವಿಷ್ಣುವಿನಿಂದ ದತ್ತ ಮತ್ತು ಶಂಕರನಿಂದ ದೂರ್ವಾಸರಾದರು. ಮೂವರಲ್ಲಿ ಚಂದ್ರ ಮತ್ತು ದೂರ್ವಾಸರು ತಪಸ್ಸಿಗೆ ಹೋಗಲು ಅನುಮತಿಯನ್ನು ಪಡೆದು ಕ್ರಮವಾಗಿ ಚಂದ್ರ ಲೋಕ ಮತ್ತು ತೀರ್ಥಕ್ಷೇತ್ರಗಳಿಗೆ ಹೋದರು. ಮೂರನೆಯವನಾದ ದತ್ತನು ವಿಷ್ಣುವಿನ ಕಾರ್ಯಕ್ಕಾಗಿ ಭೂಮಿಯ ಮೇಲೆ ಉಳಿದನು. ಇದೇ ಗುರುಗಳ ಮೂಲಪೀಠವಾಗಿದೆ.