ಭಕ್ತನೆಂದರೆ ಯಾರು? ಭಕ್ತನೆಂದರೆ ಯಾರು ಪ್ರತಿ ಕ್ಷಣ ಭಗವಂತನ ಸ್ಮರಣೆಯನ್ನು ಮಾಡುತ್ತಾನೆಯೋ ಅವನು. ತಾನು ಮಾಡಿದ ಎಲ್ಲ ಕೃತಿಗಳನ್ನು ಭಗವಂತನೇ ತನ್ನಿಂದ ಮಾಡಿಸಿಕೊಂಡಿದ್ದಾನೆ ಎಂದು ಭಕ್ತನಿಗೆ ಅನಿಸುತ್ತದೆ. ಭಗವಂತನಿಂದಾಗಿ ಅವನಿಗೆ ನಡೆದಾಡಲು ಆಗುತ್ತಿದೆ. ಭಗವಂತನಿಂದಾಗಿ ಶ್ವಾಸವು ನಡೆಯುತ್ತದೆ. ಭಗವಂತನೇ ನನ್ನ ಮುಖದಿಂದ ಮಾತನಾಡುತ್ತಾನೆ ಹಾಗಾಗಿ ತನಗೆ ಮಾತನಾಡಲು ಆಗುತ್ತಿದೆ. ಹೀಗೆ ಭಕ್ತನ ಯಾವುದೇ ಕೃತಿ ಭಗವಂತನನ್ನು ಬಿಟ್ಟು ಇರುವುದಿಲ್ಲ. ಇಂತಹ ಭಕ್ತನ ಪ್ರತಿಯೊಂದು ಮಾತನ್ನು ಭಗವಂತನು ಕೇಳುತ್ತಾನೆ. ಇಂತಹ ಭಕ್ತನ ಇಚ್ಛೆಗನುಸಾರ ಭಗವಂತನು ಪ್ರತ್ಯಕ್ಷನಾಗುತ್ತಾನೆ. ಭಕ್ತನು ಕರೆದ ತಕ್ಷಣ ಅವನು ಓಡಿ ಬರುತ್ತಾನೆ.
ಸಂತ ನಾಮದೇವ ಮಹಾರಾಜ ಎಂಬ ವಿಠಲನ ಪರಮಭಕ್ತರೊಬ್ಬರಿದ್ದರು. ಒಂದು ದಿನ ನಾಮದೇವ ಮಹಾರಾಜರು ದೆಹಲಿಯ ಒಂದು ದೇವಸ್ಥಾನದಲ್ಲಿ ಕೀರ್ತನೆ ಮಾಡುತ್ತಿದ್ದರು. ದೆಹಲಿಯ ಬಾದಶಹನಿಗೆ ಇದು ಗೊತ್ತಾಯಿತು. ಬಾದಶಹನ ಮನಸ್ಸಿನಲ್ಲಿ ಇವರು ನಿಜವಾಗಿಯೂ ಸಂತರು ಹೌದೋ ಅಲ್ಲವೋ ಎಂಬ ಸಂದೇಹ ಬಂತು. ಮಹಾರಾಜರನ್ನು ಪರೀಕ್ಷಿಸಲು ಬಯಸಿ ನಾಮದೇವ ಮಹಾರಾಜರ ಕೀರ್ತನೆ ನಡೆಯುತ್ತಿದ್ದ ದೇವಸ್ಥಾನಕ್ಕೆ ಗೋಮಾತೆಯನ್ನು ತೆಗೆದುಕೊಂಡು ಹೋದನು. ಬಾದಶಾಹನು ನಾಮದೇವ ಮಹಾರಾಜರ ಎದುರು ಗೋಮಾತೆಯ ವಧೆ ಮಾಡಿ ಮಹಾರಾಜರಿಗೆ, ‘ನೀವು ನಿಜವಾದ ಸಂತರಾಗಿದ್ದರೆ ಈ ಹಸುವನ್ನು ಜೀವಂತಗೊಳಿಸಿರಿ, ಇಲ್ಲವಾದರೆ ಸಾಯಲು ಸಿದ್ಧರಾಗಿರಿ. ಎಷ್ಟು ಸಮಯದೊಳಗೆ ಈ ಹಸುವನ್ನು ಜೀವಂತಗೊಳಿಸುವಿರೆಂದು ಹೇಳಿ’ ಎಂದು ಸವಾಲು ಹಾಕಿದನು. ಆಗ ನಾಮದೇವರು ‘ಆಗಬಹುದು, ನಾನು ನಾಲ್ಕು ದಿನಗಳಲ್ಲಿ ಈ ಹಸುವನ್ನು ಜೀವಂತಗೊಳಿಸುತ್ತೇನೆ’ ಎಂದುತ್ತರಿಸಿದರು. ಬಾದಶಹನು, ಆಗಬಹುದು ಎಂದು ಹೇಳಿ ಹೊರಟುಹೋದನು.
ಬಾದಶಹನು ಹೋದ ನಂತರ ನಾಮದೇವ ಮಹಾರಾಜರು ವಿಠಲನಿಗೆ ಎಲ್ಲ ವಿಷಯವನ್ನು ತಿಳಿಸಿ, ‘ದೇವಾ, ಈಗ ನೀನೇ ಬರಬೇಕು’ ಎಂದು ಬೇಡಿಕೊಂಡರು. ಸತತವಾಗಿ ನಾಲ್ಕು ದಿನಗಳ ಕಾಲ ನಾಮದೇವ ಮಹಾರಾಜರು ಕರೆದ ನಂತರ ವಿಠಲನು ಬಂದು ಗೋಮಾತೆಯನ್ನು ಜೀವಂತಗೊಳಿಸಿದನು. ಇದನ್ನು ನೋಡಿ ನಾಮದೇವ ಮಹಾರಾಜರು, ‘ಇಷ್ಟು ತಡ ಏಕೆ ಮಾಡಿದಿರಿ? ನೀವು ತಕ್ಷಣ ಏಕೆ ಬರಲಿಲ್ಲ?’ ಎಂದು ಕೇಳಿದಾಗ ಭಗವಂತನು, ‘ನೀನು ಬಾದಶಹನಿಗೆ ನಾಲ್ಕು ದಿನಗಳ ಸಮಯವನ್ನು ನೀಡಿದ್ದೆ. ಆ ಸಮಯದಲ್ಲಿ ‘ನಾನು ಈ ಹಸುವನ್ನು ಈಗಲೇ ಜೀವಂತ ಗೊಳಿಸುತ್ತೇನೆ’ ಎಂದು ಹೇಳಿರಲಿಲ್ಲವಲ್ಲ. ನೀನು ಹೇಗೆ ವಚನ ನೀಡಿದ್ದೀಯೋ ಹಾಗೆಯೇ ನಾನು ವಚನವನನ್ನು ನಿಭಾಯಿಸಿದೆ. ನೀನು ನನ್ನ ಭಕ್ತನಾಗಿರುವೆ, ನಾನು ನಿನ್ನ ಇಚ್ಛೆಯಂತೆಯೇ ಮಾಡುತ್ತೇನೆ. ನಾನು ನನ್ನ ಭಕ್ತರ ಇಚ್ಛೆಗ ಅಧೀನನಾಗಿರುತ್ತೇನೆ’ ಎಂದು ಉತ್ತರಿಸುತ್ತಾರೆ.
ನಾಲ್ಕು ದಿನಗಳ ನಂತರ ಬಾದಶಹನು ದೇವಸ್ಥಾನಕ್ಕೆ ಬಂದು ನೋಡಿದಾಗ, ಮಹಾರಾಜರು ಜೀವಂತವಾಗಿರುವ ಗೋಮಾತೆಯನ್ನು ಮುಂದೆ ತಂದು ನಿಲ್ಲಿಸುತ್ತಾರೆ. ಆಗ ಅವನಿಗೆ ನಾಮದೇವ ಮಹಾರಾಜರು ನಿಜವಾಗಿಯೂ ಸಂತರಾಗಿದ್ದಾರೆ ಎಂದು ಅರಿವಾಗುತ್ತದೆ ಮತ್ತು ಅವರು ನಾಮದೇವ ಮಹಾರಾಜರ ಬಳಿ ಕ್ಷಮಾಯಾಚನೆ ಮಾಡುತ್ತಾರೆ.
ಮಿತ್ರರೇ, ನಾವು ಕೂಡ ಸಂತ ನಾಮದೇವ ಮಹಾರಾಜರ ಹಾಗೆ ಭಕ್ತರಾಗಲು ಪ್ರಯತ್ನಿಸೋಣ.