ಜೀವನದಲ್ಲಿ ಯಶಸ್ವಿಯಾಗಬೇಕು ಎಂದಿದ್ದಲ್ಲಿ ನಾವು ಶಾರೀರಿಕವಾಗಿಯೂ ಶಕ್ತಿಶಾಲಿಯಾಗಿರಬೇಕು. ಶರೀರವು ಆರೋಗ್ಯಶಾಲಿಯಾಗಿದ್ದರೆ ನಾವು ಸಾಧನೆಯನ್ನು ಮಾಡಬಲ್ಲೆವು. ಹಾಗಾಗಿ ಶರೀರವನ್ನು ಆರೋಗ್ಯವಂತವನ್ನಾಗಿರಿಸಲು ನಾವು ಪ್ರತಿದಿನ ವ್ಯಾಯಾಮವನ್ನು ಮಾಡಬೇಕು.
ಇಂದು ಮಕ್ಕಳು ಟಿ.ವಿ.ಯ ಎದುರು ಕುಳಿತು ಕಾರ್ಯಕ್ರಮ ನೋಡುತ್ತಿರುತ್ತಾರೆ. ಅಥವಾ ಮೊಬೈಲ್‌ನಲ್ಲಿ ಗೇಮ್ ಆಡುತ್ತಾರೆ. ವ್ಯಾಯಾಮ ಮಾಡುವುದಿಲ್ಲ. ಹಾಗಾಗಿ ಶರೀರದಲ್ಲಿ ರೋಗದೊಂದಿಗೆ ಹೋರಾಡುವ ಕ್ಷಮತೆಯು ಅಥವಾ ಅದನ್ನು ತಡೆಗಟ್ಟುವ ಕ್ಷಮತೆಯು ಕಡಿಮೆಯಾಗುತ್ತದೆ. ಹಾಗಾಗಿ ನಾವು ಪದೇ ಪದೇ ಅನಾರೋಗ್ಯಪೀಡಿತರಾಗುತ್ತೇವೆ. ಹಾಗಾಗಿ ಇಂದು ನಾವು ಪ್ರತಿದಿನ ವ್ಯಾಯಾಮವನ್ನು ಮಾಡುವುದರ ಮಹತ್ವವನ್ನು ತಿಳಿದುಕೊಳ್ಳೋಣ.
ವ್ಯಾಯಾಮವನ್ನು ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿರಿಸುವುದು ಆವಶ್ಯಕವಾಗಿದೆ
೧. ಒಂದು ವೇಳೆ ಮೊದಲ ಬಾರಿ ವ್ಯಾಯಾಮ ಮಾಡುತ್ತಿದ್ದಲ್ಲಿ ಮೊದಲನೆಯ ದಿನ ಬಹಳ ವ್ಯಾಯಾಮ ಮಾಡಬೇಡಿ. ಪ್ರತಿಯೊಂದು ದಿನ ಸ್ವಲ್ಪ ಸ್ವಲ್ಪ ವ್ಯಾಯಾಮವನ್ನು ಮಾಡುತ್ತಾ ಹೆಚ್ಚಿಸುತ್ತಾ ಹೋಗೋಣ ಮತ್ತು ಎಷ್ಟಾಗುತ್ತದೆ ಅಷ್ಟನ್ನೇ ಮಾಡೋಣ.
೨. ವ್ಯಾಯಾಮ ಮಾಡಿದ 15 ನಿಮಿಷಗಳ ನಂತರ ಶರೀರವನ್ನು 5 ನಿಮಿಷ ಎಣ್ಣೆಯಿಂದ ಮಾಲೀಷು ಮಾಡಿ. ಎಣ್ಣೆಯು 5 ನಿಮಿಷದಲ್ಲಿ ಚರ್ಮದಲ್ಲಿ ಸೇರಿಕೊಳ್ಳುತ್ತದೆ. ಅದಾದ ಅರ್ಧಗಂಟೆಯ ನಂತರ ಸ್ನಾನ ಮಾಡಿ. ಇದಕ್ಕೆ ಅಭ್ಯಂಗ ಸ್ನಾನ ಎಂದು ಸಹ ಹೇಳುತ್ತಾರೆ. ನಡುವಿನ ಸಮಯದಲ್ಲಿ ನೀವು ಬಟ್ಟೆ ಒಗೆಯುವುದು, ಓದುವುದು ಅಥವಾ ನಾಮಜಪ ಮಾಡಬಹುದು.
೩. ಚಳಿಯ ದಿನಗಳಲ್ಲಿ ಬೆಳಗ್ಗೆ ಏಳುವಾಗ ಹೆಚ್ಚು ಚಳಿಯಾಗುತ್ತಿದ್ದಲ್ಲಿ 2 ನಿಮಿಷ ನಿಂತಲ್ಲಿಯೇ ಓಡಬೇಕು. (ಜಾಗಿಂಗ ಮಾಡುವುದು) ಇದರಿಂದ ಚಳಿ ಕಡಿಮೆಯಾಗುತ್ತದೆ. ವ್ಯಾಯಾಮದ ನಂತರ ಶರೀರದ ತಾಪಮಾನವು ಹೆಚ್ಚಾಗುತ್ತದೆ.
೪. ವ್ಯಾಯಾಮದ ನಂತರ 2 ನಿಮಿಷ ಒಣ ಬಟ್ಟೆ (ಟವೆಲ್) ನಿಂದ ಅಥವಾ ತಮ್ಮ ಕೈಗಳಿಂದ ಇಡೀ ಶರೀರವನ್ನು ಮರ್ದನ ಮಾಡಬೇಕು. ಇದರಿಂದ ವ್ಯಾಯಾಮದಿಂದ ಶರೀರದಲ್ಲಿ ಹೆಚ್ಚಾಗಿರುವ ವಾತವು (ವಾಯು) ಕಡಿಮೆಯಾಗುತ್ತದೆ. ಇದರ ಜೊತೆಗೆ ಟವೆಲ್ ನಿಂದ ವಿಶಿಷ್ಟ ಪದ್ಧತಿಯಲ್ಲಿ ಮರ್ದನ ಮಾಡುವುದರಿಂದ ಶರೀರದಲ್ಲಿ ಒಂದು ರೀತಿಯ ವಿದ್ಯುತ್ ಪ್ರವಾಹವು ಉತ್ಪನ್ನವಾಗುತ್ತದೆ. ಈ ಪ್ರವಾಹವು ರೋಗಗಳನ್ನು ದೂರಗೊಳಿಸುತ್ತದೆ.
ಶರೀರವನ್ನು ರೋಗಮುಕ್ತವನ್ನಾಗಿರಿಸಲು ಏನು ಮಾಡಬೇಕು?
ಮಿತ್ರರೇ, ರೋಗಮುಕ್ತ ಮತ್ತು ಶಕ್ತಿಶಾಲಿಯಾಗಿರುವ ಶರೀರವು ಮುತ್ತುಗಳ ಮಾಲೆಗೆ ಸಮಾನವಾಗಿರುತ್ತದೆ. ಶರೀರವು ರೋಗಮುಕ್ತವಾಗಿದ್ದರೆ ಮಾತ್ರ ನಾವು ಉತ್ತಮ ರೀತಿಯಲ್ಲಿ ಓದುಬರಹ ಮಾಡಬಲ್ಲೆವು, ತಿರುಗಾಡಲು ಹೋಗಬಲ್ಲೆವು ಅಥವಾ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಲೋಕಮಾನ್ಯ ತಿಲಕರು ಮತ್ತು ಸ್ವಾತಂತ್ರ್ಯವೀರ ಸಾವರಕರರು ಬಾಲ್ಯದಿಂದಲೇ ಶರೀರವನ್ನು ಬಲಶಾಲಿಯನ್ನಾಗಿಸಲು ವಿಶೇಷ ಪ್ರಯತ್ನಗಳನ್ನು ಪ್ರಾರಂಭಿಸಿದ್ದರು. ಹಾಗಾಗಿ ತಿಲಕರು ಮಾಂಡಲೆ ಕಾರಾಗೃಹವಾಸ ಮತ್ತು ಸಾವರಕರರು ಅಂಡಮಾನ್‌ನಲ್ಲಿ ಅತ್ಯಂತ ಅಮಾನುಷವಾದ ಕಾರಾಗೃಹವಾಸವನ್ನು ಭೋಗಿಸಿ ಕೂಡ ಜೀವಂತವಾಗಿ ಸ್ವದೇಶಕ್ಕೆ ವಾಪಾಸಾಗಿದ್ದರು. ಶರೀರವನ್ನು ರೋಗಮುಕ್ತ ಮತ್ತು ಶಕ್ತಿಶಾಲಿಯನ್ನಾಗಿಸಲು ಈಗ ಹೇಳಲಾಗುವ ಆಚರಣೆಗಳನ್ನು ಮಾಡಬೇಕು.
೧. ಈಗ ನಿಮ್ಮೆಲ್ಲರ ಮನಸ್ಸಿನಲ್ಲಿ ಪ್ರತಿದಿನ ಯಾವ ವ್ಯಾಯಾಮ ಮಾಡಬೇಕು ಎಂಬ ಪ್ರಶ್ನೆಯು ಬಂದಿರಬಹುದು. ನೀವು ಸೂರ್ಯ ನಮಸ್ಕಾರ ಮಾಡಬಹುದು, ಓಡುವುದು, ಈಜುವುದು, ಇತರ ಮೈದಾನದ ಆಟಗಳನ್ನು ಆಡುವುದು ಇಂತಹ ವ್ಯಾಯಾಮಗಳನ್ನು ಸಹ ಮಾಡಬಹುದು.
೨. ಪ್ರತಿದಿನ ಕಡಿಮೆಪಕ್ಷ 20 ನಿಮಿಷಗಳಾದರೂ ವ್ಯಾಯಾಮ ಮಾಡುವುದು ನಮ್ಮ ಶರೀರದ ಆರೋಗ್ಯಕ್ಕಾಗಿ ಆವಶ್ಯಕವಾಗಿದೆ.
ಅ. ನಿಯಮಿತವಾಗಿ ಯೋಗಾಸನಗಳನ್ನು ಮಾಡುವುದು : ಶರೀರವನ್ನು ದಷ್ಟಪುಷ್ಟವನ್ನಾಗಿಸಲು ಮಾಡಲಾಗುವ ಏರೋಬಿಕ್ಸ್ ವ್ಯಾಯಾಮಗಳು ಕೇವಲ ಶಾರೀರಿಕ ವ್ಯಾಯಾಮ ಮತ್ತು ಸ್ವಲ್ಪ ಮಟ್ಟಿಗೆ ಮನೋರಂಜನೆ ನೀಡುತ್ತವೆ. ಯೋಗಾಸನವು ನಮ್ಮ ಪ್ರಾಚೀನ ಋಷಿಮುನಿಗಳ ಕೊಡುಗೆಯಾಗಿದೆ. ಯೋಗಾಸನಗಳನ್ನು ಮಾಡುವುದರಿಂದ ನಾವು ಅನೇಕ ವರ್ಷಗಳ ಕಾಲ ರೋಗಮುಕ್ತರಾಗಿರಬಹುದು ಹಾಗೂ ನಮಗೆ ದೀರ್ಘಾಯುಷ್ಯವು ಲಭಿಸುತ್ತದೆ. ಸೂರ್ಯ ನಮಸ್ಕಾರವು ಪ್ರಾಥಮಿಕ ಸ್ತರದ ಯೋಗಾಸನವಾಗಿದೆ.
ಆ. ನಿಯಮಿತವಾಗಿ ಪ್ರಾಣಾಯಾಮ ಮಾಡುವುದು : ರೋಗಗಳೊಂದಿಗೆ ಹೋರಾಡುವ ಮತ್ತು ತಡೆಗಟ್ಟುವ ಶಕ್ತಿಯನ್ನು ಪ್ರಾಣಾಯಾಮವು ಹೆಚ್ಚಿಸುತ್ತದೆ ಮತ್ತು ಪದೇ ಪದೇ ಆಗುವ ನೆಗಡಿ, ದಮ್ಮು, ಅಜೀರ್ಣದ ಸಮಸ್ಯೆಗಳು ಮತ್ತು ಇತರ ಕಾಯಿಲೆಗಳು ಸಹ ಕಡಿಮೆಯಾಗುತ್ತದೆ. ಹಾಗಾಗಿ ಪ್ರಾಣಾಯಾಮ ಗೊತ್ತಿರುವ ವ್ಯಕ್ತಿಯಿಂದ ಪ್ರಾಣಾಯಾಮ ಕಲಿಯಿರಿ ಮತ್ತು ಪ್ರಾಣಾಯಾಮವನ್ನು ಮಾಡಿ ತಮ್ಮ ಆರೋಗ್ಯವನ್ನು ಉತ್ತಮವಾಗಿಸಿ.
ಇ. ಆಯುರ್ವೇದವನ್ನು ಉಪಯೋಗಿಸಿ : ಇಂದು ಆರೋಗ್ಯದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅನೇಕ ಜನರು ಆಂಗ್ಲ ಔಷಧಿಗಳನ್ನು (ಅಲೋಪಥಿ) ಸೇವಿಸಲು ಪ್ರಾರಂಭಿಸುತ್ತಾರೆ. ಆದರೆ ಅವರು ಋಷಿಮುನಿಗಳು ಹೇಳಿದಂತಹ ಆಯುರ್ವೇದದ ಮಹತ್ವವನ್ನು ಮರೆತುಬಿಡುತ್ತಾರೆ. ಆಂಗ್ಲ ಔಷಧಿಗಳಿಂದ ದುಷ್ಪರಿಣಾಮಗಳು ಸಹ ಆಗುವ ಸಾಧ್ಯತೆಯಿರುತ್ತದೆ. ಆಯುರ್ವೇದಿಕ ಔಷಧಿಗಳಲ್ಲಿ ದುಷ್ಪರಿಣಾಮಗಳು ಇರುವುದಿಲ್ಲ. ಆಯುರ್ವೇದಿಕ ಔಷಧಿಗಳಿಂದ ಶರೀರವು ಆರೋಗ್ಯಶಾಲಿಯಾಗಿ ದೀರ್ಘಾಯುಷ್ಯ ಸಹ ಸಿಗುತ್ತದೆ.