ಮಿತ್ರರೇ, ಹಿಂದೆ ದೇವಗಿರಿ ಹೆಸರಿನ ರಾಜ್ಯವಿತ್ತು. ರಾಜಾ ರಾಮದೇವನು ಆ ರಾಜ್ಯವನ್ನು ಆಳುತ್ತಿದ್ದನು. ಒಮ್ಮೆ ಅಲ್ಲಾಉದ್ದೀನ ಖಿಲಜಿಯು ದೇವಗಿರಿಯ ಮೇಲೆ ದಾಳಿ ಮಾಡಲು ಬಂದನು ಮತ್ತು ರಾಜನಿಗೆ ತನ್ನ ದೂತರ ಮೂಲಕ ಶರಣಾಗುವಂತೆ ಸಂದೇಶವನ್ನು ಕಳುಹಿಸಿದನು. ಆ ಸಂದೇಶದಲ್ಲಿ ಅಲ್ಲಾಉದ್ದೀನನು, ರಾಜಾ ರಾಮದೇವನಿಗೆ ಅವನ ಸಂಪೂರ್ಣ ರಾಜ್ಯವನ್ನು ಅಲ್ಲಾಉದ್ದೀನನಿಗೆ ಒಪ್ಪಿಸಿ, ಅವನಿಗೆ ಶರಣಾಗಬೇಕೆಂದು ಬರೆದಿದ್ದನು. ಈ ಸಂದೇಶವನ್ನು ಕೇಳಿ ರಾಜಾ ರಾಮದೇವನಿಗೆ ಸಹಿಸಲು ಆಗಲಿಲ್ಲ. ತನ್ನ ರಾಜ್ಯದ ಮೇಲೆ ಯಾರೋ ಆಕ್ರಮಣ ಮಾಡಿರುವುದನ್ನು ಅವನು ಹೇಗೆ ತಾನೆ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬಹುದು. ಅವನು ಬಹಳ ಪರಾಕ್ರಮಿ ರಾಜನಾಗಿದ್ದನು. ಅವನು ಅಲ್ಲಾಉದ್ದೀನನ ಪ್ರಸ್ತಾವನೆ ಒಪ್ಪಿಕೊಳ್ಳಲಿಲ್ಲ. ಇದನ್ನು ಕೇಳಿ ಅಲ್ಲಾಉದ್ದೀನ ಕೋಪಗೊಂಡನು ಮತ್ತು ತನ್ನ ದೊಡ್ಡ ಸೈನ್ಯದೊಂದಿಗೆ ದೇವಗಿರಿಯ ಮೇಲೆ ಆಕ್ರಮಣ ಮಾಡಿದನು.
ದೇವಗಿರಿಯ ಕೋಟೆ ಒಂದು ಅಭೇದ್ಯ ಕೋಟೆಯಾಗಿತ್ತು. ಆ ಕೋಟೆಯನ್ನು ಬಹಳ ಸುಲಭವಾಗಿ ಗೆಲ್ಲಲು ಸಾಧ್ಯವಿರಲಿಲ್ಲ. ಅರ್ಥಾತ್ ಆ ಕೋಟೆಯೊಳಗೆ ಯಾರಿಗೂ ಸುಲಭವಾಗಿ ನುಸುಳಲು ಸಾಧ್ಯವಿರಲಿಲ್ಲ. ಸ್ವಲ್ಪ ದಿನದಲ್ಲಿಯೇ ಇಬ್ಬರೂ ರಾಜರ ನಡುವೆ ಬಹಳ ಭಯಾನಕ ಯುದ್ಧ ನಡೆಯಿತು. ರಾಜಾ ರಾಮದೇವನ ಸೈನಿಕರು ಯುದ್ಧ ಮಾಡುವುದರಲ್ಲಿ ಬಹಳ ನಿಪುಣರಾಗಿದ್ದರು. ಯುದ್ಧದಲ್ಲಿ ರಾಜಾ ರಾಮದೇವನ ಸೇನೆಯು ಬಹಳ ಪರಾಕ್ರಮವನ್ನು ತೋರಿಸಿತು. ಈ ಕಾರಣದಿಂದ ಅಲ್ಲಾಉದ್ದೀನನ ಸೇನೆಯ ಬಹಳಷ್ಟು ಸೈನಿಕರು ಸತ್ತರು. ಅಲ್ಲಾಉದ್ದೀನನಿಗೆ ಬೇರೆ ಯಾವುದೇ ದಾರಿ ಕಾಣದೇ ಅವನು ತನ್ನ ದೇಶಕ್ಕೆ ಮರಳಿ ಹೋದನು. ಅಲ್ಲಾಉದ್ದೀನನ ಮೇಲೆ ವಿಜಯವನ್ನು ಸಾಧಿಸಿರುವ ಖುಷಿಯಲ್ಲಿ ದೇವಗಿರಿಯಲ್ಲಿ ಬಹಳ ದೊಡ್ಡ ವಿಜಯೋತ್ಸವವನ್ನು ಆಚರಿಸಲಾಯಿತು.
ರಾಜಾ ರಾಮದೇವನ ಸೇನೆಯಲ್ಲಿ ಒಬ್ಬ ಪರಾಕ್ರಮಿ ಸೈನಿಕನಿದ್ದನು. ಅವನು ಮಾತೃಭೂಮಿಯ ರಕ್ಷಣೆಗಾಗಿ ಈ ಯುದ್ಧದಲ್ಲಿ ಅಲ್ಲಾಉದ್ದೀನನ ಸೇನೆಯೊಂದಿಗೆ ಹೋರಾಡುತ್ತ ತನ್ನ ಪ್ರಾಣವನ್ನು ಅರ್ಪಿಸಿದ್ದನು. ಈ ವೀರ ಯೋಧನ ಮರಣದ ಬಳಿಕ ಅವನ ಮಗಳು ಒಬ್ಬಂಟಿಯಾದಳು. ಅವಳ ಹೆಸರು ವೀರಮತಿಯಾಗಿತ್ತು. ಅವಳನ್ನು ರಾಜಾ ರಾಮದೇವನು ತನ್ನ ಮಗಳಂತೆಯೇ ನೋಡಿಕೊಂಡನು. ವೀರಮತಿ ಮದುವೆಯ ವಯಸ್ಸಿನವಳಾದಾಗ ರಾಜನು ಕೃಷ್ಣರಾವ ಹೆಸರಿನ ಒಬ್ಬ ಯುವಕನೊಂದಿಗೆ ಅವಳ ವಿವಾಹವನ್ನು ನಿಶ್ಚಯಿಸಿದನು. ಕೃಷ್ಣರಾವ್ ಅತ್ಯಂತ ಸ್ವಾರ್ಥಿ ಮತ್ತು ಲೋಭಿಯಾಗಿದ್ದನು. ಅವನು ಏನು ಮಾಡಿದನು ಗೊತ್ತೇ? ಅಲ್ಲಾಉದ್ದೀನ ರಾಜಾ ರಾಮದೇವನೊಂದಿಗೆ ಸೋತು ಮರಳಿ ತನ್ನ ದೇಶಕ್ಕೆ ಹೋಗುತ್ತಿರುವಾಗ ಇದೇ ಕೃಷ್ಣರಾವ ಅವನನ್ನು ಭೇಟಿಯಾಗಿ, ‘ನೀವು ನನ್ನ ಒಂದು ಷರತ್ತನ್ನು ಒಪ್ಪಿಕೊಂಡರೆ, ನಾನು ನಿಮಗೆ ದೇವಗಿರಿಯನ್ನು ಗೆಲ್ಲುವ ರಹಸ್ಯವನ್ನು ಹೇಳುತ್ತೇನೆ, ಮತ್ತು ರಾಜಾ ರಾಮದೇವನ ಸೇನೆ, ಅವನ ಶಕ್ತಿಯ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ’ ಎಂದು ಹೇಳಿದನು. ಅವನ ಷರತ್ತು ಏನೆಂದರೆ, ‘ನೀವು ದೇವಗಿರಿಯನ್ನು ಗೆದ್ದು, ನನ್ನನ್ನು ಅದರ ರಾಜನನ್ನಾಗಿ ಮಾಡಬೇಕು’ ಎಂದು ಆಗಿತ್ತು.
ಅಲ್ಲಾಉದ್ದೀನ ವಿಚಾರ ಮಾಡಿ, ಕೃಷ್ಣರಾವ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಅಲ್ಲಾಉದ್ದೀನನು ಒಪ್ಪಿಗೆ ಸೂಚಿಸಿದ ಬಳಿಕ ಕೃಷ್ಣರಾವ್ ಅವನಿಗೆ ಕೋಟೆಯ ಎಲ್ಲ ರಹಸ್ಯಗಳನ್ನು ಹೇಳಿದನು. ಅದರ ಬಳಿಕ ಅಲ್ಲಾಉದ್ದೀನನು ದೇವಗಿರಿಯ ಮೇಲೆ ಮತ್ತೊಮ್ಮೆ ದಂಡೆತ್ತಿ ಬಂದನು.
ಈ ಸಮಾಚಾರ ತಿಳಿಯುತ್ತಲೇ ರಾಜಾ ರಾಮದೇವನು ಎಲ್ಲ ವೀರ ಸರದಾರರ ಸಭೆಯನ್ನು ಕರೆದನು. ಸಭೆಯಲ್ಲಿ ರಾಜನು ‘ಸೋತ ಶತ್ರುವು ಎಂದಿಗೂ ಇಷ್ಟು ಬೇಗ ಮರಳಿ ಬರುವುದಿಲ್ಲ. ಹಾಗಿರುವಾಗ ಇವನು ಹೇಗೆ ಬಂದನು? ಇದರರ್ಥವೇನೆಂದರೆ ನಮ್ಮಲ್ಲಿಯೇ ಯಾರೋ ಅಲ್ಲಾಉದ್ದೀನನೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ. ಆದರೆ ಚಿಂತಿಸಬಾರದು, ನಾವು ಅವನನ್ನು ಮತ್ತೆ ಸೋಲಿಸೋಣ’ ಎಂದು ಹುರಿದುಂಬಿಸಿದನು. ಇದನ್ನು ಕೇಳಿ ಎಲ್ಲರೂ ತಮ್ಮ ತಮ್ಮ ತಲವಾರನ್ನು ಎತ್ತಿ ಮತ್ತು ‘ಈ ಹೋರಾಟದಲ್ಲಿ ನಾವು ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತೇವೆ ಮತ್ತು ದೇವಗಿರಿಯನ್ನು ರಕ್ಷಿಸುತ್ತೇವೆ’ ಎಂದು ಪಣತೊಟ್ಟರು.
ಅದೇ ಸಭೆಯಲ್ಲಿ ಕೃಷ್ಣರಾವ್ ಕೂಡ ಇದ್ದನು ಮತ್ತು ಅವನು ಸುಮ್ಮನೆ ಕುಳಿತುಕೊಂಡು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದನು. ಇದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಎಲ್ಲರೂ ಅವನನ್ನು ಸುಮ್ಮನೆ ಕುಳಿತಿರುವ ಕಾರಣವನ್ನು ಕೇಳಿದರು. ಕೃಷ್ಣರಾವ್‌ನು ಈ ರೀತಿ ಸುಮ್ಮನೆ ಕುಳಿತಿರುವುದನ್ನು ನೋಡಿ ವೀರಮತಿಗೆ ಬಹಳ ಕೋಪ ಬಂತು ಮತ್ತು ಅವಳು ಹುಲಿಯಂತೆ ಅವನ ಮೇಲೆ ಎರಗಿದಳು. ಅವಳು ‘ಇವನೇ ನಮ್ಮ ದೇಶದ ದ್ರೋಹಿಯಾಗಿದ್ದಾನೆ’ ಎಂದು ಹೇಳಿ ಮಿಂಚಿನ ಗತಿಯಲ್ಲಿ ತನ್ನ ಸೊಂಟಕ್ಕೆ ಕಟ್ಟಿದ ತಲವಾರನ್ನು ತೆಗೆದಳು ಮತ್ತು ಕೃಷ್ಣರಾವ್‌ನ ಎದೆಯನ್ನು ತಿವಿದಳು. ವೀರಮತಿಗೆ ಕೃಷ್ಣರಾವ್‌ನ ಪ್ರಾಮಾಣಿಕತೆಯ ಬಗ್ಗೆ ಮೊದಲೇ ಸಂದೇಹವಿತ್ತು. ಆದ್ದರಿಂದ ವೀರಮತಿಯು ಅವನ ಮೇಲೆ ಒಂದು ಕಣ್ಣಿಟ್ಟಿದ್ದಳು. ಯಾವಾಗ ವೀರಮತಿಗೆ ಅವನು ಅಲ್ಲಾಉದ್ದೀನನೊಂದಿಗೆ ಸೇರಿಕೊಂಡಿರುವ ವಿಷಯ ತಿಳಿಯಿತೋ, ಆಗದಿಂದ ಅವಳು ಕೋಪದಿಂದ ಕುದಿಯುತ್ತಿದ್ದಳು. ಅವನ ಪಾಪದ ಶಿಕ್ಷೆಯನ್ನು ನೀಡಲೇ ಬೇಕಾಗಿತ್ತು. ಅವಕಾಶ ದೊರೆಯುತ್ತಲೇ ಅವಳು ಶಿಕ್ಷಿಸಿದಳು.
ಸಾಯುವಾಗ ಕೃಷ್ಣರಾವ್ ‘ನಾನು ನಿನ್ನ ಪತಿಯಾಗಿದ್ದರೂ ನನ್ನನ್ನೇಕೆ ಕೊಂದೆ’ ಎಂದು ಕೇಳಿದನು. ಆಗ ವೀರಮತಿಯು ‘ನನ್ನ ವಿವಾಹ ನಿಮ್ಮೊಂದಿಗೆ ಆಗುವುದರಲ್ಲಿತ್ತು ಹಾಗೂ ನಾನು ನಿಮ್ಮನ್ನು ನನ್ನ ಪತಿಯೆಂದು ಒಪ್ಪಿಕೊಂಡಿದ್ದೆನು. ಆದರೆ ನಿಮ್ಮಂತಹ ದೇಶದ್ರೋಹಿಯನ್ನು ಕೊಂದು ನಾನು ನನ್ನ ರಾಷ್ಟ್ರ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಈಗ ನಾನು ಪತ್ನಿಯ ಧರ್ಮವನ್ನು ಪಾಲಿಸುತ್ತೇನೆ’ ಎಂದು ಹೇಳಿ ಅವಳು ತಲವಾರನ್ನು ತಿರುಗಿಸಿ ಮತ್ತು ತನ್ನ ಹೊಟ್ಟೆಯನ್ನೇ ತಿವಿದು ಮರುಕ್ಷಣವೇ ಪ್ರಾಣ ತ್ಯಜಿಸಿ ಕೃಷ್ಣರಾವ್‌ನ ಶವದ ಪಕ್ಕದಲ್ಲಿ ಬಿದ್ದಳು.
ವೀರಮತಿಯ ಮನಸ್ಸಿನಲ್ಲಿ ಎಷ್ಟು ರಾಷ್ಟ್ರಪ್ರೇಮವಿತ್ತು! ಅವಳು ತಾನು ಮದುವೆಯಾದ ಪತಿ ದೇಶದ್ರೋಹಿಯಾಗಿದ್ದಾನೆ ಎಂದು ಗಮನಕ್ಕೆ ಬರುತ್ತಲೇ ಅವಳು ತನ್ನ ಸ್ವಂತ ವಿಚಾರವನ್ನು ಮಾಡಲಿಲ್ಲ. ದೇಶದ್ರೋಹಿಯನ್ನು ಕೊಂದು ಅವನನ್ನು ಶಿಕ್ಷಿಸಿದಳು. ಇದರರ್ಥವೇನೆಂದರೆ, ವೀರಮತಿಗೆ ಅವಳ ಸ್ವಾರ್ಥಕ್ಕಿಂತ ದೇಶದ ರಕ್ಷಣೆಯು ಹೆಚ್ಚು ಮಹತ್ವಪೂರ್ಣವಾಗಿತ್ತು. ಪತಿಗೆ ಶಿಕ್ಷೆ ನೀಡುವುದರೊಂದಿಗೆ ಅವಳು ಪತ್ನಿಯ ಧರ್ಮವನ್ನು ಪಾಲಿಸಿದಳು ಮತ್ತು ತನ್ನ ಪ್ರಾಣವನ್ನೂ ತ್ಯಜಿಸಿದಳು.
ಮಿತ್ರರೇ, ನಮ್ಮಲ್ಲಿಯೂ ವೀರಮತಿಯಂತೆ ರಾಷ್ಟ್ರಪ್ರೇಮವಿರಬೇಕು. ಒಂದು ವೇಳೆ ದೇಶಕ್ಕೆ ಯಾವುದಾದರೂ ಸಂಕಟ ಎದುರಾದರೆ, ನಾವೂ ಕೂಡ ವೀರಮತಿಯಂತೆ ಸಿದ್ಧರಾಗಿರಬೇಕು. ಯಾರ ಮನಸ್ಸಿನಲ್ಲಿ ವೀರಮತಿಯಂತೆ ದೇಶದ ಬಗ್ಗೆ ನಿಷ್ಠೆ ಮತ್ತು ಧರ್ಮಪಾಲನೆಯ ಚಡಪಡಿಕೆಯಿರುತ್ತದೆಯೋ, ಅವರೇ ಆದರ್ಶ ನಾಗರಿಕರಾಗುತ್ತಾರೆ. ಹಾಗಿದ್ದರೆ, ಈ ಕಥೆಯಿಂದ ಕಲಿತು ನಾವೂ ಸಹ ರಾಷ್ಟ್ರಪ್ರೇಮಿ ಮತ್ತು ಧರ್ಮಪಾಲನೆ ಮಾಡುವ ಆದರ್ಶ ನಾಗರಿಕರಾಗಲು ಪ್ರಯತ್ನಿಸಬೇಕು. ಪ್ರಯತ್ನಿಸುತ್ತೀರಲ್ಲವೇ?