ಮಿತ್ರರೇ, ಸದಾಚಾರ ಅಂದರೆ ಉತ್ತಮ ಆಚರಣೆಗಳು, ಇವೇ ನಮ್ಮ ಜೀವನದ ಆಧಾರವಾಗಿವೆ. ಸತ್ ಆಚರಣೆಯ ಅರ್ಥವೆಂದರೆ ನೈತಿಕ ಹಾಗೂ ಧಾರ್ಮಿಕ ಆಚರಣೆ ! ದೇವತೆಗಳೂ ಸದಾಚಾರವನ್ನು ಪಾಲಿಸುವವರೊಂದಿಗೆ ಇರುತ್ತಾರೆ ಹಾಗೂ ಯಾರೊಂದಿಗೆ ದೇವತೆಗಳಿದ್ದಾರೆಯೋ ಅವರ ಜೀವನವು ಆನಂದಮಯವಾಗುತ್ತದೆ.
ಇದು ಮಹಾಭಾರತದ ಸಮಯದ ಸಂಗತಿಯಾಗಿದೆ. ಆ ಸಮಯದಲ್ಲಿ ಸತ್ಯದೇವ ಎಂಬ ರಾಜನಿದ್ದನು. ಅವನು ಅತ್ಯಂತ ಸದಾಚಾರಿಯಾಗಿದ್ದನು. ಒಂದು ದಿನ ಅವನು ಬೆಳಗ್ಗೆ ಎದ್ದು ತನ್ನ ಕೋಣೆಯಿಂದ ಹೊರಬಂದಾಗ ಓರ್ವ ಸುಂದರ ಸ್ತ್ರೀಯು ಅರಮನೆಯಿಂದ ಹೊರಗೆ ಹೋಗುತ್ತಿರುವುದನ್ನು ನೋಡಿದನು. ರಾಜನಿಗೆ ಬಹಳ ಆಶ್ಚರ್ಯವಾಯಿತು ಹಾಗೂ ಈ ಸ್ತ್ರೀ ಯಾರು ಹಾಗೂ ಏಕೆ ಹೊರಗೆ ಹೋಗುತ್ತಿದ್ದಾಳೆ, ಈ ಸ್ತ್ರೀಯನ್ನು ಹಿಂದೆಂದೂ ನೋಡಲೇ ಇಲ್ಲವಲ್ಲ ಎಂಬ ಪ್ರಶ್ನೆ ಮೂಡಿತು. ರಾಜನು ಆ ಸ್ತ್ರೀಯನ್ನು ಹಿಂಬಾಲಿಸಿ ಆ ಸ್ತ್ರೀಯ ಎದುರು ಕೈಜೋಡಿಸಿ ನಮೃತೆಯಿಂದ ಆಕೆಯಲ್ಲಿ ‘ಹೇ ದೇವಿ, ತಾವು ಯಾರು, ನಾನು ಹಿಂದೆಂದೂ ತಮ್ಮನ್ನು ಈ ಅರಮನೆಯಲ್ಲಿ ನೋಡಿಲ್ಲವಲ್ಲ ?’ ಎಂದು ಕೇಳಿದನು. ಆಗ ಆ ಸ್ತ್ರೀಯು ‘ನಾನು ಲಕ್ಷ್ಮೀ, ಈಗ ನಾನು ಈ ಅರಮನೆಯನ್ನು ಬಿಟ್ಟು ಹೋಗುತ್ತಿದ್ದೇನೆ’ ಎಂದು ಹೇಳಿದಳು. ರಾಜನು ಬಹಳ ಚಿಂತೆಗೊಳಗಾಗಿ ಲಕ್ಷ್ಮೀಮಾತೆಯಲ್ಲಿ ‘ತಾವು ಅರಮನೆಯನ್ನು ಬಿಟ್ಟು ಏಕೆ ಹೋಗುತ್ತಿದ್ದೀರಿ’ ಎಂದು ಕೇಳಿ ಲಕ್ಷ್ಮೀಮಾತೆಯಲ್ಲಿ ರಾಜಭವನವನ್ನು ಬಿಟ್ಟುಹೋಗದಂತೆ ಬಹಳ ವಿನಂತಿಸಿದನು. ಆದರೆ ಲಕ್ಷ್ಮೀದೇವಿಯು ರಾಜನ ಮಾತುಗಳನ್ನು ಕೇಳಲಿಲ್ಲ. ಆಗ ರಾಜನು ಲಕ್ಷ್ಮೀದೇವಿಯನ್ನು ತಡೆಯಲು ಪ್ರಯತ್ನಿಸಲಿಲ್ಲ. ಅವನು ‘ನಿಮ್ಮ ಇಚ್ಛೆ!’ ಎಂದು ಕೈಜೋಡಿಸಿ ಹೇಳಿದನು. ಆಗ ಲಕ್ಷ್ಮೀದೇವಿಯು ರಾಜಭವನವನ್ನು ಬಿಟ್ಟು ಹೋದಳು.
ಲಕ್ಷ್ಮೀದೇವಿಯು ಹೋದ ತಕ್ಷಣ ರಾಜನಿಗೆ ಓರ್ವ ಸುಂದರ ಪುರುಷನೂ ಅರಮನೆಯಿಂದ ಹೊರಗೆ ಹೋಗುತ್ತಿರುವುದು ಕಾಣಿಸಿತು. ಇದನ್ನು ನೋಡಿ ರಾಜನಿಗೆ ಬಹಳ ಆಶ್ಚರ್ಯವಾಯಿತು, ಅವನು ವಿಚಾರದಲ್ಲಿ ಮಗ್ನನಾದನು. ರಾಜನ ಮನಸ್ಸಿನಲ್ಲಿ ‘ಇದು ಯಾರು, ನನ್ನ ಅರಮನೆಯಿಂದ ಏಕೆ ಹೊರಗೆ ಹೋಗುತ್ತಿದ್ದಾರೆ ?’ ಎಂಬ ಪ್ರಶ್ನೆಯು ಉದ್ಭವಿಸಿತು. ರಾಜನು ಆ ಪುರುಷನಿಗೆ ‘ಹೇ ತೇಜಸ್ವಿ ಪುರುಷ, ತಾವು ಯಾರು ?’ ಎಂದು ಕೇಳಿದಾಗ ಅವನು ‘ನಾನು ದಾನ, ಲಕ್ಷ್ಮೀಮಾತೆ ಇರುವಲ್ಲಿ ನಾನು ಇರುತ್ತೇನೆ. ತಮ್ಮಲ್ಲಿ ಲಕ್ಷ್ಮೀ ಇಲ್ಲ ಅಂದರೆ ಧನವಿಲ್ಲ. ಆದುದರಿಂದ ತಾವು ದಾನ ಮಾಡಲಾರಿರಿ, ಆದ ಕಾರಣ ನಾನು ಲಕ್ಷ್ಮೀಯೊಂದಿಗೆ ಹೋಗುತ್ತಿದ್ದೇನೆ’ ಎಂದು ಹೇಳಿದನು. ಆಗ ರಾಜನು ‘ನಿಮ್ಮ ಇಚ್ಛೆ, ನೀವು ಹೋಗಬೇಕಾದರೆ ಹೋಗಬಹುದು’ ಎಂದು ಹೇಳಿದನು.
ಅದೇ ಸಮಯದಲ್ಲಿ ಅವರಿಬ್ಬರ ಹಿಂದೆ ‘ಯಶಸ್ಸು’ ಹೋಗುತ್ತಿತ್ತು. ಆ ಇಬ್ಬರಿಗೆ ಕೇಳಿದಂತೆ ರಾಜನು ಯಶಸ್ಸಿಗೂ ಪ್ರಶ್ನೆ ಕೇಳಿದನು. ಆಗ ಯಶಸ್ಸು ಕೂಡ ಲಕ್ಷ್ಮೀಯ ಹಿಂದೆ ಹೋಯಿತು.
ಮಿತ್ರರೇ, ತಮಗೆ ತಿಳಿಯುತ್ತಿದೆಯಲ್ಲವೇ, ಲಕ್ಷ್ಮೀದೇವಿಯು ಹೋಗುತ್ತಿದ್ದಂತೆಯೇ ರಾಜನ ಬಳಿ ಇದ್ದ ದಾನ ಹಾಗೂ ಯಶಸ್ಸೂ ಹೋದವು. ಇದರ ನಂತರ ರಾಜನ ಎದುರು ನಾಲ್ಕನೇ ಪುರುಷನು ಪ್ರಕಟನಾದನು. ಆಗ ರಾಜನು ಅವನಿಗೂ ಕೈಜೋಡಿಸಿ ಅದೇ ಪ್ರಶ್ನೆಗಳನ್ನು ಕೇಳಿದನು.
ಆಗ ಆ ಪುರುಷನು ‘ನನ್ನ ಹೆಸರು ಸದಾಚಾರ, ನಾನು ಈ ಅರಮನೆಯನ್ನು ಬಿಟ್ಟು ಹೋಗುತ್ತಿದ್ದೇನೆ’ ಎಂದು ಹೇಳಿದನು. ಇದನ್ನು ಕೇಳುತ್ತಲೇ ರಾಜನು ಕೈಜೋಡಿಸಿ ಎದುರಿಗೆ ಬಂದು ಹಾಗೆ ಮಾಡದಂತೆ ಪರಿಪರಿಯಾಗಿ ಬೇಡಿದನು. ರಾಜನು ‘ನಾನು ನಿಮ್ಮನ್ನು ಹೋಗಲು ಬಿಡುವುದಿಲ್ಲ, ನಾನು ನನ್ನ ಸಂಪೂರ್ಣ ಜೀವನದಲ್ಲಿ ಯಾರೊಂದಿಗೆ ಕೆಟ್ಟದಾಗಿ ವರ್ತಿಸಲಿಲ್ಲ, ಯಾರ ಬಗ್ಗೆಯೂ ಕೆಟ್ಟದಾಗಿ ವಿಚಾರ ಮಾಡಲಿಲ್ಲ. ನಾನು ಯಾವಾಗಲೂ ಎಲ್ಲರೊಂದಿಗೆ ಉತ್ತಮವಾಗಿ ವ್ಯವಹಾರ ನಡೆಸಿದ್ದೇನೆ, ಸದಾ ಸದಾಚಾರವನ್ನೇ ಮಾಡಿದ್ದೇನೆ. ಹೀಗಿರುವಾಗ ನೀವೇಕೆ ನನ್ನನ್ನು ಬಿಟ್ಟು ಹೋಗುತ್ತೀರಿ ? ನನ್ನ ಮನಸ್ಸಿನಲ್ಲಿ ಯಾವುದೇ ದುರಾಸೆಯಿಲ್ಲ. ಆದುದರಿಂದಲೇ ನಾನು ಲಕ್ಷ್ಮೀಮಾತೆಯು ಹೋಗುತ್ತಿರುವುದನ್ನು ನೋಡಿಯೂ ಅವರನ್ನು ತಡೆಯಲಿಲ್ಲ. ನನಗೆ ಲಕ್ಷ್ಮೀ, ದಾನ ಹಾಗೂ ಯಶಸ್ಸಿಗಿಂತಲೂ ಸದಾಚಾರವೇ ಮೇಲು. ಆದುದರಿಂದಲೇ ನಾನು ಲಕ್ಷ್ಮೀ, ದಾನ ಇತ್ಯಾದಿಗಳನ್ನು ತ್ಯಜಿಸಿದ್ದೇನೆ. ತಾವೂ ನನ್ನನ್ನು ಬಿಟ್ಟು ಹೋದರೆ ನನ್ನ ಬಳಿ ಏನೂ ಇರುವುದಿಲ್ಲ!’ ಎಂದು ಹೇಳಿದನು.
ರಾಜನ ಮಾತುಗಳನ್ನು ಕೇಳಿ ‘ಸದಾಚಾರ’ ಅರಮನೆಯಲ್ಲಿ ಉಳಿದನು. ಸದಾಚಾರವು ಅರಮನೆಯಲ್ಲಿ ಉಳಿದಿರುವುದನ್ನು ನೋಡಿ ಲಕ್ಷ್ಮೀದೇವಿ, ದಾನ ಹಾಗೂ ಯಶಸ್ಸೂ ಮರಳಿದರು. ಮಿತ್ರರೇ, ಈ ಕಥೆಯಿಂದ ನಮ್ಮ ಜೀವನದಲ್ಲಿ ಸದಾಚಾರವು ಎಷ್ಟು ಮಹತ್ವದ್ದಾಗಿದೆ ಎಂಬುದು ಗಮನಕ್ಕೆ ಬಂದಿದೆಯಲ್ಲವೇ ? ಯಾರು ಸದಾಚಾರಿಗಳಾಗಿರುತ್ತಾರೆ ಅವರ ಬಳಿ ಲಕ್ಷ್ಮೀ, ದಾನ ಹಾಗೂ ಯಶಸ್ಸು ಸದಾ ಇರುತ್ತವೆ. ಜೀವನದಲ್ಲಿ ಸದಾಚಾರವನ್ನು ಮಾಡದಿದ್ದರೆ ದಾನ, ಲಕ್ಷ್ಮೀ ಇತ್ಯಾದಿಗಳೆಲ್ಲ ವ್ಯರ್ಥ. ಹಾಗಾದರೆ ಇಂದಿನಿಂದ ನಾವೂ ಕೂಡ ಖಂಡಿತವಾಗಿಯೂ ಭಗವಂತನಿಗೆ ಇಷ್ಟವಾಗುವುದನ್ನೇ ಮಾಡಿ ಸದಾಚಾರಿಗಳಾಗೋಣ ಅಲ್ಲವೇ ?