ಇದು ತ್ರೇತಾಯುಗದ ಅರ್ಥಾತ್ ಭಗವಾನ ಶ್ರೀರಾಮನ ಕಾಲದ ವಿಷಯವಾಗಿದೆ. ಭಿಲ್ಲರ ಕುಲದಲ್ಲಿ ಜನಿಸಿದ ‘ಶ್ರಮಣಾ’ ಹೆಸರಿನ ಕನ್ಯೆಯೊಬ್ಭಳಿದ್ದಳು. ಶ್ರಮಣಾಳನ್ನು ತದನಂತರ ಶಬರಿಯ ಹೆಸರಿನಿಂದ ಗುರುತಿಸಲಾಯಿತು. ಅವಳು ಬಾಲ್ಯದಿಂದಲೂ ಭಗವಾನ ಶ್ರೀರಾಮನ ಅನನ್ಯ ಭಕ್ತಳಾಗಿದ್ದಳು. ಅವಳು ಭಗವಾನ ಶ್ರೀರಾಮನ ಪೂಜೆ-ಪುನಸ್ಕಾರಗಳನ್ನು ಹಾಗೂ ನಾಮಜಪವನ್ನು ಮಾಡುತ್ತಿದ್ದಳು.
ಶಬರಿಯು ದೇವರನ್ನು ಅರಸುತ್ತ ಮನೆಬಿಟ್ಟು ಹೋಗುವುದು
ಈ ರೀತಿಯಿಂದ ಭಗವಂತನ ಭಕ್ತಿಯನ್ನು ಮಾಡುತ್ತ ಮಾಡುತ್ತ ಅವಳು ದೊಡ್ಡವಳಾದಳು. ದೊಡ್ಡವಳಾದ ಬಳಿಕ ಅವಳ ತಂದೆ-ತಾಯಿ ಅವಳ ವಿವಾಹವನ್ನು ನಿಶ್ಚಯಿಸಿದರು. ಆಗಿನ ಕಾಲದಲ್ಲಿ ಭಿಲ್ಲರಲ್ಲಿ ವಿವಾಹದ ಸಮಯದಲ್ಲಿ ಮದುವೆಯ ದಿಬ್ಬಣವನ್ನು ಮಾಂಸದ ಊಟದೊಂದಿಗೆ ಸ್ವಾಗತಿಸುವ ಪದ್ಧತಿಯಿತ್ತು. ಆದ್ದರಿಂದ ಅವಳ ವಿವಾಹದಲ್ಲಿ ದಿಬ್ಬಣದವರಿಗೆ ಬಹಳಷ್ಟು ಕುರಿಗಳ ಮಾಂಸದೂಟವನ್ನು ಬಡಿಸಲು ಸಿದ್ಧತೆ ನಡೆಸಿದ್ದರು. ಶಬರಿಗೆ ಈ ವಿಷಯ ತಿಳಿದಾಗ, ತನ್ನ ತಾಯಿಯ ಹತ್ತಿರ ಆ ಅಮಾಯಕ ಕುರಿಗಳ ಹತ್ಯೆಯನ್ನು ವಿರೋಧಿಸಿದಳು. ಆದರೆ ಅವಳ ತಾಯಿಯು ಇದು ಅವರ ಜನಾಂಗದ ನಿಯಮವಾಗಿದ್ದು, ಈ ನಿಯಮವನ್ನು ಮುರಿಯಲು ಸಾಧ್ಯವಿಲ್ಲವೆಂದು ಹೇಳಿದಳು. ಮದುವೆ ದಿಬ್ಬಣದ ಸ್ವಾಗತವನ್ನು ಈ ರೀತಿಯ ಮಾಂಸದೂಟದೊಂದಿಗೆ ಮಾಡುವುದನ್ನು ಕೇಳಿ ಶಬರಿಗೆ ಬಹಳ ದುಃಖವಾಯಿತು. ಅವಳಂತೂ ಭಗವಂತನ ಹೆಸರಿನ ನಾಮಜಪವನ್ನು ಮಾಡುತ್ತ ದೊಡ್ಡವಳಾಗಿದ್ದಳು ಮತ್ತು ಅವಳ ವಿವಾಹದಲ್ಲಿ ಜೀವಗಳ ಹತ್ಯೆಯಾಗುವುದು ಅವಳಿಗೆ ಸರಿಯೆನಿಸಲಿಲ್ಲ. ಅವಳು ಹೀಗೆ ಆಗಲು ಬಿಡುವುದಿಲ್ಲವೆಂದು ನಿರ್ಣಯಿಸಿದಳು. ಅವಳು ನಾನು ಈ ಮನೆಯನ್ನು ಬಿಟ್ಟು ಎಲ್ಲಿಯಾದರೂ ಹೋಗುತ್ತೇನೆ. ಆಗ ನನ್ನ ವಿವಾಹವೇ ಆಗುವುದಿಲ್ಲ ಮತ್ತು ಆಗ ಕುರಿಗಳನ್ನು ಕೊಲ್ಲುವುದಿಲ್ಲ ಎಂದು ವಿಚಾರ ಮಾಡಿದಳು. ಅವಳು ಕತ್ತಲೆಯಾಗುತ್ತಲೇ ಯಾರಿಗೂ ಹೇಳದೇ-ಕೇಳದೇ ತನ್ನ ಮನೆಯನ್ನು ಬಿಟ್ಟು ಕಾಡಿನತ್ತ ಹೊರಟು ಹೋದಳು.
ಮತಂಗ ಋಷಿಗಳ ಆಶ್ರಮ ಸೇರುವುದು
ಅವಳು ಕಾಡಿನಲ್ಲಿ ಬಹಳ ದೂರ ಬಂದಿದ್ದಳು ಮತ್ತು ಅಲ್ಲಿ ಎಲ್ಲಿಯಾದರೂ ರಾತ್ರಿ ಕಳೆಯಲು ಆಸರೆಯನ್ನು ಹುಡುಕತೊಡಗಿದಳು. ಆಗ ನಡೆಯುತ್ತ ನಡೆಯುತ್ತ ಅವಳಿಗೆ ಮತಂಗ ಹೆಸರಿನ ಋಷಿಯ ಆಶ್ರಮ ಕಾಣಿಸಿತು. ಶಬರಿಯ ಆಗ್ರಹದ ಮೇರೆಗೆ ಮತಂಗ ಋಷಿಗಳು ತಮ್ಮ ಆಶ್ರಮದಲ್ಲಿ ಅವಳಿಗೆ ಆಶ್ರಯವನ್ನು ನೀಡಿದನು. ಶಬರಿಯು ಆಶ್ರಮದಲ್ಲಿ ಮನಃಪೂರ್ವಕವಾಗಿ ಎಲ್ಲರ ಸೇವೆಯನ್ನು ಮಾಡಿದಳು ಮತ್ತು ಅವಳು ತನ್ನ ಆಚರಣೆಯಿಂದ, ವ್ಯವಹಾರದಿಂದ ಮತ್ತು ಕೌಶಲ್ಯದಿಂದ ಎಲ್ಲ ಆಶ್ರಮವಾಸಿಗಳ ಮನಸ್ಸನ್ನು ಗೆದ್ದಳು. ಇದರಿಂದ ಎಲ್ಲರ ಮುದ್ದಿನವಳಾದಳು. ಶಬರಿಯ ಸೇವಾಭಾವದಿಂದ ಮತಂಗ ಋಷಿಗಳು ಅವಳನ್ನು ತನ್ನ ಶಿಷ್ಯೆಯಾಗಿ ಸ್ವೀಕರಿಸಿದರು. ಅವಳು ಆಶ್ರಮದಲ್ಲಿದ್ದು ಮತಂಗ ಋಷಿಗಳ ಸೇವೆ ಮಾಡಿದಳು. ಅವಳ ಸೇವೆಯಿಂದ ಗುರು ಮತಂಗ ಋಷಿ ಬಹಳ ಪ್ರಸನ್ನರಾಗಿದ್ದರು.
ಕಾಲಾಂತರದಲ್ಲಿ ಮತಂಗ ಋಷಿಗಳು ದೇಹತ್ಯಾಗ ಮಾಡಿದರು (ಅಂದರೆ ಅವರು ಕೊನೆಯುಸಿರೆಳೆದರು). ಮತಂಗ ಋಷಿಗಳು ದೇಹತ್ಯಾಗ ಮಾಡುವ ಮೊದಲು ಶಬರಿಯು ಅವರ ಹತ್ತಿರವಿದ್ದಳು ಮತ್ತು ಮತಂಗ ಋಷಿಗಳು ಅವಳಿಗೆ ‘ನೀನು ಪ್ರತಿದಿನ ಭಗವಾನ ಶ್ರೀರಾಮನು ಬರುವ ದಾರಿಯನ್ನು ಕಾಯುತ್ತಿರು. ಒಂದು ದಿನ ಸಾಕ್ಷಾತ್ ಶ್ರೀ ರಾಮನೇ ನಿನ್ನ ಈ ಕುಟೀರಕ್ಕೆ ಖಂಡಿತವಾಗಿಯೂ ಬರುತ್ತಾರೆ. ನೀನು ಶ್ರೀರಾಮನ ಭಕ್ತಿಯನ್ನು ಮುಂದುವರೆಸು ಹಾಗೂ ಪ್ರತೀಕ್ಷೆ ಮಾಡು. ಅವರು ಖಂಡಿತವಾಗಿಯೂ ಬರುತ್ತಾರೆ. ಶ್ರೀರಾಮನೇ ನಿನ್ನನ್ನು ಉದ್ಧರಿಸುತ್ತಾನೆ’ ಎಂದು ಹೇಳಿದರು.
ಶ್ರೀರಾಮನ ಪ್ರತೀಕ್ಷೆಯಲ್ಲಿ ಶಬರಿ
ಶಬರಿಯಲ್ಲಿ ಅಪಾರ ಗುರುಭಕ್ತಿಯಿತ್ತು ಹಾಗೂ ‘ಪ್ರಭು ಶ್ರೀರಾಮನು ಕುಟೀರಕ್ಕೆ ಖಂಡಿತವಾಗಿಯೂ ಬರುತ್ತಾನೆ’ ಎನ್ನುವ ಗುರುಗಳ ವಚನದ ಮೇಲೆ ವಿಶ್ವಾಸವಿಟ್ಟು ಶ್ರೀರಾಮನ ದಾರಿಯನ್ನು ಕಾಯತೊಡಗಿದಳು. ದಿನಗಳು ಉರುಳತೊಡಗಿತು. ಶಬರಿಯು ಪ್ರತಿದಿನ ಕುಟೀರಕ್ಕೆ ಬರುವ ದಾರಿ ಮತ್ತು ಕುಟೀರದ ಸ್ವಚ್ಛತೆಯನ್ನು ಮಾಡುತ್ತಿದ್ದಳು ಮತ್ತು ಹೋಗುವ-ಬರುವ ಮಾರ್ಗದ ಮೇಲೆ ಹೂಗಳನ್ನು ಹಾಸುತ್ತಿದ್ದಳು. ಒಂದೇ ಸಮನೆ ದಾರಿಯ ಮೇಲೆ ಕಣ್ಣುಗಳನ್ನು ನೆಟ್ಟು ಪ್ರಭು ಶ್ರೀರಾಮನ ಪ್ರತೀಕ್ಷೆಯನ್ನು ಮಾಡುತ್ತಿದ್ದಳು. ಈ ರೀತಿ ಬಹಳ ಸಮಯ ಕಳೆಯಿತು ಮತ್ತು ನಿಧಾನವಾಗಿ ಅವಳು ವೃದ್ಧಳಾದಳು. ಆದರೆ ಅವಳು ಪ್ರಭು ಶ್ರೀರಾಮನ ಪ್ರತೀಕ್ಷೆ ಮಾಡುವುದನ್ನು ಬಿಡಲಿಲ್ಲ. ಶಬರಿಯು ಪ್ರಭು ಶ್ರೀರಾಮನು ಬಂದಾಗ ಅವನ ಪಾದಗಳಿಗೆ ಮಾರ್ಗದ ಮುಳ್ಳು ಚುಚ್ಚಬಾರದೆಂದು ಪ್ರತಿದಿನ ಕುಟೀರದ ಮಾರ್ಗದ ಮೇಲೆ ಹೂಗಳನ್ನು ಹಾಸುತ್ತಿದ್ದಳು.
ಭಕ್ತೆ ಶಬರಿಗೆ ದರ್ಶನವಿತ್ತ ಪ್ರಭು ಶ್ರೀರಾಮ
ಕೊನೆಯಲ್ಲಿ ಒಂದು ದಿನ ಮಾತಾ ಶಬರಿಯ ಪ್ರತೀಕ್ಷೆಯ ಸಮಯ ಮುಕ್ತಾಯವಾಯಿತು. ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಹುಡುಕುತ್ತ ಮತಂಗ ಋಷಿಯ ಆಶ್ರಮಕ್ಕೆ ಬಂದು ತಲುಪಿದರು. ಶಬರಿಯು ತನ್ನ ಪ್ರಭು ಶ್ರೀರಾಮನನ್ನು ಕೂಡಲೇ ಗುರುತಿಸಿದಳು. ಅವರನ್ನು ನೋಡಿ ಅವಳ ಹೃದಯ ತುಂಬಿ ಬಂದಿತು. ಅವಳ ಕಣ್ಣುಗಳಿಂದ ಅಶ್ರುಧಾರೆ ಹರಿಯತೊಡಗಿತು. ಶಬರಿಯು ಪೂರ್ಣ ಭಕ್ತಿಭಾವದಿಂದ ಅವರಿಬ್ಬರನ್ನು ಆದರ ಸತ್ಕಾರ ಮಾಡಿದಳು. ಶಬರಿಯು ಓಡುತ್ತ ಪ್ರಭುವಿಗೆ ಗೆಡ್ಡೆ-ಗೆಣಸು, ಹಣ್ಣುಗಳನ್ನು ತೆಗೆದುಕೊಂಡು ಬಂದಳು. ಹಣ್ಣುಗಳಲ್ಲಿ ಕೆಲವು ಬೋರೆಹಣ್ಣುಗಳಿದ್ದವು. ಅವಳು ಗೆಡ್ಡೆ-ಗೆಣಸುಗಳನ್ನು ತನ್ನ ಪ್ರಭುವಿಗೆ ಅರ್ಪಿಸಿದಳು. ಆದರೆ ಆ ಬೋರೆಹಣ್ಣುಗಳನ್ನು ಅರ್ಪಿಸುವ ಧೈರ್ಯ ಮಾಡುತ್ತಿರಲಿಲ್ಲ. ಅವಳಿಗೆ ಆ ಬೋರೆಹಣ್ಣುಗಳು ಕೆಟ್ಟಿದ್ದರೆ ಮತ್ತು ಹುಳಿಯಾಗಿದ್ದರೆ ಎಂಬ ಪ್ರಶ್ನೆಯಿತ್ತು. ಆದ್ದರಿಂದ ಅವಳು ಆ ಬೋರೆಹಣ್ಣುಗಳನ್ನು ತಿಂದು ರುಚಿ ನೋಡತೊಡಗಿದಳು. ಒಳ್ಳೆಯ ಮತ್ತು ಸಿಹಿಯಾದ ಬೋರೆಹಣ್ಣುಗಳನ್ನು ಅವಳು ಯಾವುದೇ ಸಂಕೋಚವಿಲ್ಲದೇ ಪ್ರಭು ಶ್ರೀರಾಮನಿಗೆ ಕೊಟ್ಟಳು. ಶ್ರೀರಾಮನು ಅವಳ ಸರಳತೆಗೆ ಬಹಳ ಪ್ರಸನ್ನನಾಗಿ ತನ್ನ ಭಕ್ತೆ ಶಬರಿ ನೀಡಿದ ಎಂಜಲು ಬೋರೆಹಣ್ಣುಗಳನ್ನು ಬಹಳ ಪ್ರೀತಿಯಿಂದ ತಿಂದನು. ಶ್ರೀರಾಮನ ಕೃಪೆಯಿಂದ ಅದೇ ಸಮಯದಲ್ಲಿ ಶಬರಿಯ ಉದ್ಧಾರವಾಯಿತು.
ಮಿತ್ರರೇ, ಭಕ್ತೆ ಶಬರಿಯ ಕಥೆಯನ್ನು ಕೇಳಿ ಅವಳ ಎಷ್ಟೊಂದು ಗುಣಗಳು ನಮಗೆ ಸಿಕ್ಕಿತು? ಚಿಕ್ಕ ವಯಸ್ಸಿನಲ್ಲಿಯೇ ಭಗವಂತನ ಭಕ್ತಿಯನ್ನು ಮಾಡಲು ಪ್ರಾರಂಭಿಸಬೇಕೆಂದು ಕಲಿತೆವು. ಶಬರಿಯಂತೆ ನಮ್ಮ ಗುರುಗಳ ಮಾತಿನ ಮೇಲೆ ಶ್ರದ್ಧೆಯನ್ನಿಡಬೇಕು. ಗುರುದೇವರ ಮಾತಿನ ಮೇಲೆ ಶ್ರದ್ಧೆಯನ್ನಿಟ್ಟು, ಶಬರಿಯು ಜೀವನವಿಡೀ ತನ್ನ ಪ್ರಭು ಶ್ರೀ ರಾಮನ ಪ್ರತೀಕ್ಷೆಯನ್ನು ಮಾಡಿದಳು. ಅವಳ ಮನಸ್ಸಿನಲ್ಲಿ ಪ್ರಭು ಶ್ರೀರಾಮ ಬರದಿದ್ದರೆ ಎಂಬ ಸಂದೇಹ ಸ್ವಲ್ಪವೂ ಇರಲಿಲ್ಲ. ಅವಳು ಪೂರ್ಣ ಶ್ರದ್ಧೆಯಿಂದ ಪ್ರತೀಕ್ಷೆ ಮಾಡುತ್ತಿದ್ದಳು. ಪ್ರಭು ಶ್ರೀರಾಮನು ಅವಳ ಆರಾಧ್ಯ ದೈವವಾಗಿದ್ದನು. ಅವನಿಗೆ ಹುಳಿ ಬೋರೆಹಣ್ಣುಗಳನ್ನು ತಿನ್ನುವಂತಾಗಬಾರದೆಂದು ಅತ್ಯಂತ ಮುಗ್ಧ ಮನಸ್ಸಿನಿಂದ ಅವಳು ಬೋರೆಹಣ್ಣುಗಳನ್ನು ರುಚಿ ನೋಡಿ ತನ್ನ ಪ್ರಭುವಿಗೆ ನೀಡಿದಳು. ಇದರಿಂದ ನಾವು ಭಗವಂತನ ಬಗ್ಗೆ ನಮ್ಮ ನಿಷ್ಠೆ, ಶ್ರದ್ಧೆ ಹೇಗಿರಬೇಕು ಎಂದು ಕಲಿತೆವು.