ಬಹಳ ಹಿಂದಿನ ಕಾಲದ ಕಥೆಯಾಗಿದೆ. ಒಂದು ಊರಿನಲ್ಲಿ ಧರಮದಾಸಜೀ ಹೆಸರಿನ ಒಬ್ಬ ಮಹಂತರಿದ್ದರು. ಅವರಿಗೆ ಗರೀಬದಾಸ ಹೆಸರಿನ ಒಬ್ಬ ಶಿಷ್ಯನಿದ್ದನು. ಅವನು ಪ್ರತಿದಿನ ಕಾಡಿಗೆ ಹಸುಗಳನ್ನು ಮೇಯಿಸಲು ಹೋಗುತ್ತಿದ್ದನು. ಗರೀಬದಾಸ ಭಗವಾನ ಶ್ರೀ ಕೃಷ್ಣನ ಪರಮಭಕ್ತನಾಗಿದ್ದನು, ಹಾಗಾಗಿ ಯಾವುದೇ ಕೆಲಸ ಮಾಡುವಾಗ ಕೂಡ ಅವನು ಭಗವಂತನ ಸ್ತುತಿಯಲ್ಲಿ ತಲ್ಲೀನನಾಗಿರುತ್ತಿದ್ದನು. ಭಗವಾನ ಶ್ರೀಕೃಷ್ಣನು ಅವನ ಭಕ್ತಿಯಿಂದ ಬಹಳ ಪ್ರಸನ್ನನಾಗಿದ್ದನು. ಆದುದರಿಂದ ಕಾಡಿನಲ್ಲಿ ಹಸುಗಳನ್ನು ಮೇಯಿಸುವಾಗ ಅವನಿಗೆ ಭಗವಾನ ಶ್ರೀಕೃಷ್ಣನು ಭೇಟಿಯಾಗುತ್ತಿದ್ದನು. ಮತ್ತು ಅವನು ಪ್ರತಿದಿನ ತನ್ನ ಊಟದ ಬುತ್ತಿಯ ಅರ್ಧ ಭಾಗವನ್ನು ಶ್ರೀಕೃಷ್ಣನಿಗೆ ತಿನ್ನಿಸುತ್ತಿದ್ದನು.
ಒಂದು ಮಧ್ಯಾಹ್ನ ಗರೀಬದಾಸನೊಂದಿಗೆ ಊಟ ಮಾಡುವಾಗ ಭಗವಾನ ಶ್ರೀಕೃಷ್ಣನು ‘ಗರೀಬದಾಸ, ನಾಳೆ ಗುರುಗಳಿಂದ ಹೆಚ್ಚಿನ ಊಟವನ್ನು ತೆಗೆದುಕೊಂಡು ಬಾ. ನಾಳೆ ರಾಧೆಯು ನನ್ನೊಂದಿಗೆ ಬರುವವಳಿದ್ದಾಳೆ ಹಾಗೂ ನಾಡಿದ್ದು ಮತ್ತಷ್ಟು ಊಟವನ್ನು ತೆಗೆದುಕೊಂಡು ಬಾ ಏಕೆಂದರೆ ನಾಡಿದ್ದು ಸತ್ಯಭಾಮೆ ಮತ್ತು ರುಕ್ಮಣಿ ಬರುವವರಿದ್ದಾರೆ’ ಎಂದು ಹೇಳಿದನು. ಮಿತ್ರರೇ, ರಾಧೆ ಭಗವಾನ ಶ್ರೀ ಕೃಷ್ಣನ ಪರಮಭಕ್ತಳಾಗಿದ್ದಳು, ಸತ್ಯಭಾಮಾ ಮತ್ತು ರುಕ್ಮಿಣಿ ಭಗವಾನ ಶ್ರೀಕೃಷ್ಣನ ಪತ್ನಿಯರಾಗಿದ್ದಾರೆ.
ಗರೀಬದಾಸ ಆಶ್ರಮಕ್ಕೆ ಮರಳಿ ಬಂದು ತನ್ನ ಗುರುದೇವರಿಗೆ ಎಲ್ಲ ಮಾತುಗಳನ್ನು ಹೇಳುತ್ತಿದ್ದನು. ಭಗವಾನ ಶ್ರೀಕೃಷ್ಣನು ಹೇಳಿದಂತೆ ಅವನು ಎರಡು ದಿನಗಳೂ ತನ್ನ ಗುರುದೇವರಿಗೆ ಹೇಳಿ ಹೆಚ್ಚು ಊಟವನ್ನು ತೆಗೆದುಕೊಂಡು ಹೋದನು. ಒಂದು ದಿನ ಹೆಚ್ಚಿನ ಊಟವನ್ನು ತೆಗೆದುಕೊಂಡು ಹೋದ ಬಳಿಕ ಅವನು ಮರುದಿನವೂ ಭಗವಾನ ಶ್ರೀಕೃಷ್ಣನಿಗಾಗಿ ಭೋಜನವನ್ನು ತೆಗೆದುಕೊಂಡು ಹೋದನು. ಆಗ ಭಗವಾನ ಶ್ರೀ ಕೃಷ್ಣನು ‘ಗರೀಬದಾಸ ನಾಳೆ ಸುದಾಮ ಮತ್ತು ನನ್ನ ಇತರೆ ಭಕ್ತರೂ ಬರುವವರಿದ್ದಾರೆ. ಆದ್ದರಿಂದ ನಾಳೆ ಗುರುಗಳಿಂದ ಮತ್ತಷ್ಟು ಹೆಚ್ಚು ಊಟವನ್ನು ತೆಗೆದುಕೊಂಡು ಬರುವಂತೆ’ ಎಂದು ಹೇಳಿದನು.
ಹೀಗೆ ಪ್ರತಿ ದಿನ ಗರೀಬದಾಸನು ಹೆಚ್ಚು ಊಟವನ್ನು ತೆಗೆದುಕೊಂಡು ಹೋಗತೊಡಗಿದನು. ಆಗ ಮಹಂತ ಧರಮದಾಸಜೀಯ ಮನಸ್ಸಿನಲ್ಲಿ ಗರೀಬದಾಸನು ಸುಳ್ಳು ಹೇಳುತ್ತಿರಬಹುದೆಂದು ಸಂಶಯ ಬಂತು ಮತ್ತು ಅವರ ಮನಸ್ಸಿನಲ್ಲಿ ಸತ್ಯವನ್ನು ತಿಳಿದುಕೊಳ್ಳಲು ಅವರು ಅವನನ್ನು ಹಿಂಬಾಲಿಸಿದರು. ಅವರು ಅಲ್ಲಿ ಏನು ನೋಡಿರಬಹುದು? ಊಟದ ಸಮಯದಲ್ಲಿ ಗರೀಬದಾಸನು ಹೇಳಿದಂತೆ ಭಗವಾನ ಶ್ರೀಕೃಷ್ಣ, ಸುದಾಮ ಹಾಗೂ ಇತರ ಅನೇಕ ಭಕ್ತರು ಒಟ್ಟಿಗೆ ಬಂದಿದ್ದರು ಮತ್ತು ಎಲ್ಲ ಭಕ್ತರು ಅವನೊಂದಿಗೆ ಸೇರಿಕೊಂಡು ಊಟವನ್ನು ಮಾಡುತ್ತಿದ್ದರು. ಇದನ್ನು ನೋಡಿ ಮಹಂತರಿಗೆ ಗರೀಬದಾಸನ ಮಹಾನತೆಯ ಅರಿವಾಯಿತು. ಏಕೆಂದರೆ ಸಾಕ್ಷಾತ್ ಭಗವಾನ ಶ್ರೀಕೃಷ್ಣನು ಅವನನ್ನು ಭೇಟಿಯಾಗಲು ಬರುತ್ತಾನೆ ಮತ್ತು ಅವನೊಂದಿಗೆ ಪ್ರತಿದಿನ ಊಟವನ್ನು ಸಹ ಮಾಡುತ್ತಾನೆ. ಆದಾಗ್ಯೂ ಈ ವಿಷಯದ ಬಗ್ಗೆ ಗರೀಬದಾಸನಿಗೆ ಸ್ವಲ್ಪವೂ ಗರ್ವವಿಲ್ಲ. ಅವನ ಸರಳತೆಯನ್ನು ಅವರು ಅರಿತರು. ಭಗವಂತನಿಗೆ ಗರೀಬದಾಸನು ಅತ್ಯಂತ ಪ್ರಿಯವನಾಗಿದ್ದಾನೆ. ಏಕೆಂದರೆ ಅವನು ನಿಜವಾದ ಭಕ್ತನಾಗಿದ್ದಾನೆ. ಈ ಎಲ್ಲ ಗುಣಗಳ ಕಾರಣದಿಂದ ಗರೀಬದಾಸನು ಆದರ್ಶ ಮತ್ತು ಶ್ರೇಷ್ಠನಾಗಿದ್ದಾನೆ ಎಂದು ತಿಳಿದುಕೊಂಡ ಮಹಂತ ಧರಮದಾಸಜೀ ಅದೇ ದಿನದಿಂದ ಗರೀಬದಾಸನನ್ನು ತನ್ನ ಗುರುವೆಂದು ಘೋಶಿಸಿದರು.
ಮಿತ್ರರೇ, ಇದರಿಂದ ನಾವು ಒಂದು ವೇಳೆ ನಮಗೆ ಯಾವುದೇ ಸಣ್ಣ ವ್ಯಕ್ತಿಯ ಮಹಾನತೆ ಗಮನಕ್ಕೆ ಬಂದರೆ, ತಕ್ಷಣವೇ ಅದನ್ನು ಒಪ್ಪಿಕೊಳ್ಳಬೇಕು ಮತ್ತು ಅವನನ್ನು ಗೌರವಿಸಬೇಕು ಎಂದು ಕಲಿತೆವು.