ಇದು ಬಹಳ ಹಿಂದಿನ ಕಾಲದ ವಿಷಯವಾಗಿದೆ. ಒಂದು ಊರಿನಲ್ಲಿ ಓರ್ವ ರಾಜನಿದ್ದನು. ಅವನು ಶಿವನ ಭಕ್ತನಾಗಿದ್ದನು. ಆ ಊರಿನಲ್ಲಿ ಶಿವನ ಒಂದು ದೇವಸ್ಥಾನವಿತ್ತು. ಅದರಲ್ಲಿ ಒಂದು ಶಿವಲಿಂಗವಿತ್ತು. ರಾಜನು ಪ್ರತಿದಿನ ಭಗವಾನ ಶಿವನಿಗಾಗಿ ಬಂಗಾರದ ಪಾತ್ರೆಯಲ್ಲಿ ನೈವೇದ್ಯವನ್ನು ಅರ್ಪಿಸುತ್ತಿದ್ದನು. ಅವನು ಈಶ್ವರನಿಗಾಗಿ ದಾನಧರ್ಮ ಮಾಡುತ್ತಿದ್ದನು.
ಅದೇ ದೇವಸ್ಥಾನದಲ್ಲಿ ಓರ್ವ ಪೂಜಾರಿಯಿದ್ದನು. ಅವನು ಅತ್ಯಂತ ಶ್ರದ್ಧೆಯಿಂದ ಹಾಗೂ ಭಕ್ತಿ ಭಾವದಿಂದ ಭಗವಾನ ಶಿವನ ಪೂಜೆ ಮಾಡುತ್ತಿದ್ದನು. ಆ ಪೂಜಾರಿಗೆ ಆಗಾಗ ಶಿವನು ದರ್ಶನ ನೀಡುತ್ತಿದ್ದನು. ರಾಜನಿಗೆ ‘ನಾನು ಇಷ್ಟೆಲ್ಲ ಮಾಡುತ್ತೇನೆ ಆದರೆ ನನಗೆ ಭಗವಂತನು ದರ್ಶನ ನೀಡಲಿಲ್ಲ. ಆದರೆ ಪೂಜಾರಿಯು ಭಗವಂತನಿಗೆ ಏನನ್ನೂ ಕೊಡಲಿಲ್ಲ, ಆದರೂ ಅವನಿಗೆ ಭಗವಂತನು ಏಕೆ ದರ್ಶನ ನೀಡುತ್ತಾನೆ ?’ ಎಂಬ ವಿಚಾರ ಬರುತ್ತಿತ್ತು.
ಕೆಲವು ದಿನಗಳ ನಂತರ ರಾಜನು ಶಿವನ ದೇವಸ್ಥಾನಕ್ಕೆ ತಲುಪಿದಾಗ ಪೂಜಾರಿಯು ಪೂಜೆ ಮಾಡುತ್ತಿದ್ದನು. ಅದೇ ಸಮಯದಲ್ಲಿ ಒಂದು ಬಲವಾದ ಭೂಕಂಪವಾಯಿತು. ದೇವಸ್ಥಾನದ ಗೋಡೆಗಳು ಬಹಳ ಜೋರಾಗಿ ಅಲುಗಾಡತೊಡಗಿದವು. ರಾಜನು ಇದನ್ನು ನೋಡಿ ಹೆದರಿದನು ಹಾಗೂ ತನ್ನ ರಕ್ಷಣೆಗಾಗಿ ಓಡಿಹೋದನು. ಆದರೆ ಇನ್ನೊಂದು ಕಡೆ ಪೂಜಾರಿಯು ಅದೇ ದೇವಸ್ಥಾನದಲ್ಲಿ ನಿಂತಿದ್ದನು. ಅವನು ಆ ಶಿವಲಿಂಗದ ಮೇಲೆ ಬಾಗಿ ನಿಂತನು. ಅವನು ‘ಮೇಲ್ಛಾವಣೆಯು ಬಿದ್ದರೆ ನನ್ನ ಶಿವನ ಮೇಲೆ ಬೀಳಬಹುದು. ಇದರಿಂದ ನನ್ನ ಭಗವಂತನಿಗೆ ನೋವಾಗುವುದು’ ಎಂದು ವಿಚಾರ ಮಾಡಿದ್ದನು. ಆದುದರಿಂದ ಅವನು ಶಿವಲಿಂಗವನ್ನು ತನ್ನ ಶರೀರದಿಂದ ರಕ್ಷಿಸಿದನು. ಅವನೇ ಭಗವಂತನ ನಿಜವಾದ ಭಕ್ತನಾಗಿದ್ದನು. ಅವನು ಮೊದಲಿಗೆ ಶಿವಲಿಂಗದ ಕಾಳಜಿ ವಹಿಸಿದನು.
ಈಗ ನಿಮಗೂ ಅರ್ಥವಾಗಿರಬಹುದು ಭಗವಾನ ಶಿವನು ಪೂಜಾರಿಗೆ ದರ್ಶನ ಏಕೆ ನೀಡುತ್ತಿದ್ದರು ಎಂದು.
ಜೀವನದ ಪ್ರತಿಯೊಂದು ಕಠಿಣ ಪ್ರಸಂಗದಲ್ಲಿ ಭಗವಂತನು ನಮ್ಮ ರಕ್ಷಣೆ ಮಾಡುತ್ತಾನೆ. ನಾವು ಭಗವಂತನ ಮೇಲೆ ದೃಢ ಶ್ರದ್ಧೆಯನ್ನಿಡಬೇಕು. ನಾವು ನಾಮಜಪ, ಪ್ರಾರ್ಥನೆ, ಕೃತಜ್ಞತೆ ವ್ಯಕ್ತ ಮಾಡುತ್ತಿರಬೇಕು. ಆಗ ಈಶ್ವರನು ಸೇವೆಯ ಮಾಧ್ಯಮದಿಂದ ನಮ್ಮಲ್ಲಿರುವ ಅನೇಕ ಗುಣಗಳ ವಿಕಾಸ ಮಾಡುತ್ತಾನೆ. ಅವರ ಭಕ್ತರಾದರೆ ಭಗವಂತನು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ನಾವೂ ಹಾಗೆಯೇ ಮಾಡೋಣ ಅಲ್ಲವೇ ?