ಮಿತ್ರರೇ, ನಾವೆಲ್ಲರೂ ಆದರ್ಶ ಮಕ್ಕಳಾಗಬೇಕಾದರೆ ತಮ್ಮೊಂದಿಗಿರುವವರೂ ಆದರ್ಶರಾಗಿರಬೇಕು. ತಮ್ಮ ಮಿತ್ರರೂ ಆದರ್ಶ ವರ್ತನೆಯನ್ನು ಮಾಡುವವರಾಗಿದ್ದಾಗಲೇ ತಾವೂ ಆದರ್ಶರಾಗುವಿರಿ. ನಾವು ಯಾರ ಸಹವಾಸದಲ್ಲಿರುತ್ತೇವೆಯೋ ಅವರಂತೆಯೇ ಆಗುತ್ತೇವೆ ಆದುದರಿಂದ ಸಹವಾಸವು ಉತ್ತಮವಾಗಿರಬೇಕು. ಮಿತ್ರರೇ, ನಮ್ಮ ಜೊತೆಗಾರರು ಯಾರು ? ಗೆಳೆಯರು ಅಥವಾ ಗೆಳತಿಯರು ತಾನೇ? ಅವರ ಉತ್ತಮ-ಕೆಟ್ಟ ವರ್ತನೆಯ ಅಥವಾ ಸ್ವಭಾವದ ಪ್ರಭಾವವು ನಮ್ಮ ಮೇಲೆಯೂ ಆಗುತ್ತಿರುತ್ತದೆ.
ನಾವು ಬಹಳ ಕಡೆಗಳಲ್ಲಿ ನೋಡುತ್ತೇವೆ, ಶಾಲೆ ಅಥವಾ ಇತರೆಡೆ ಒಳ್ಳೆಯ ಮಕ್ಕಳಿಗೆ ಕೆಟ್ಟ ಮಕ್ಕಳು ಪೀಡಿಸುತ್ತಾರೆ. ಅಥವಾ ಅವರನ್ನು ಗೇಲಿ ಮಾಡುತ್ತಾರೆ. ಇದರಿಂದ ಕೆಲವು ಮಕ್ಕಳಿಗೆ ತಾವು ಅವರೊಂದಿಗೆ ಮಾತನಾಡದಿದ್ದರೆ ಆ ಕೆಟ್ಟ ಮಕ್ಕಳು ನಮ್ಮನ್ನು ಒಬ್ಬಂಟಿಯಾಗಿಸುವರು, ನಮ್ಮೊಂದಿಗೆ ಮಾತನಾಡುವುದಿಲ್ಲ ಹಾಗೂ ನಮ್ಮೊಂದಿಗೆ ಆಟವಾಡುವುದಿಲ್ಲ ಎಂದು ಅನಿಸುತ್ತದೆ. ಈ ಒಂಟಿತನದ ಭಯದಿಂದ ಮಕ್ಕಳು ಈ ಕೆಟ್ಟ ಸಹವಾಸದ ಮಕ್ಕಳನ್ನು ಸ್ವೀಕರಿಸುತ್ತಾರೆ. ಕೆಲವೊಮ್ಮೆ ಕೆಟ್ಟ ಸ್ವಭಾವದ ಮಕ್ಕಳು ಒಳ್ಳೆಯ ಮಕ್ಕಳಿಗೆ ತೊಂದರೆ ಕೊಟ್ಟು ತಾವೆಷ್ಟು ಶ್ರೇಷ್ಠರು ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಾರೆ. ಈ ಸಮಯದಲ್ಲಿ ಒಳ್ಳೆಯ ಮಕ್ಕಳು ಕೆಟ್ಟ ಮಕ್ಕಳ ಪ್ರಭಾವದಲ್ಲಿ ಬಿದ್ದು ತಾವೂ ಹಾಗೆಯೇ ಮಾಡತೊಡಗುತ್ತಾರೆ. ಇದರಿಂದ ನಮಗೆ ಕೆಟ್ಟ ಸಹವಾಸದಿಂದ ನಮ್ಮ ಮೇಲೆ ಹೇಗೆ ಕೆಟ್ಟ ಪರಿಣಾಮಗಳಾಗುತ್ತವೆ ಎಂಬುದು ತಿಳಿಯಿತು. ಇದನ್ನು ಒಂದು ಕಥೆಯ ಮೂಲಕ ಅರ್ಥಮಾಡಿಕೊಳ್ಳೋಣ.
ಒಬ್ಬ ಹಣ್ಣು ಮಾರುವವನಿರುತ್ತಾನೆ. ಅವನ ಬುಟ್ಟಿಯು ಮಾವಿನ ಹಣ್ಣಿನಿಂದ ತುಂಬಿತ್ತು. ಆಗ ಅವನಿಗೆ ಬುಟ್ಟಿಯ ಒಂದು ಬದಿಯಲ್ಲಿ ಒಂದು ಮಾವಿನ ಹಣ್ಣು ಕೊಳೆಯುತ್ತಿರುವುದು ಕಾಣಿಸಿತು. ಅವನು ‘ಈ ಕೆಟ್ಟ ಹಣ್ಣನ್ನು ಒಳ್ಳೆಯ ಹಣ್ಣುಗಳೊಂದಿಗೆ ಇಡುವುದರಿಂದ ಅದು ಸರಿಯಾಗುವುದು’ ಎಂದು ಯೋಚಿಸಿ ಅವನು ಆ ಕೊಳೆಯುತ್ತಿರುವ ಹಣ್ಣನ್ನು ಬುಟ್ಟಿಯಲ್ಲೇ ಬಿಟ್ಟು ಬುಟ್ಟಿಯನ್ನು ಮುಚ್ಚಿದನು. ೮ ದಿನಗಳ ನಂತರ ಅವನು ಬಿಟ್ಟಿಯನ್ನು ತೆರೆದಾಗ ಅವನಿಗೆ ಬುಟ್ಟಿಯಲ್ಲಿದ್ದ ಎಲ್ಲ ಹಣ್ಣುಗಳು ಕೊಳೆತಿರುವುದನ್ನು ನೋಡಿ ಆಶ್ಚರ್ಯವಾಯಿತು. ಈ ಕಥೆಯಿಂದ ನಾವೇನು ಕಲಿತೆವು ? ಹೇಗೆ ಒಂದು ಕೊಳೆತ ಹಣ್ಣು ಬುಟ್ಟಿಯಲ್ಲಿರುವ ಎಲ್ಲ ಹಣ್ಣುಗಳನ್ನು ಹಾಳು ಮಾಡುತ್ತದೆಯೋ ಅದೇ ರೀತಿ ಒಳ್ಳೆಯ ಮಕ್ಕಳು ಕೆಟ್ಟ ಸಹವಾಸದಿಂದ ಕೆಡುತ್ತಾರೆ. ಶ್ರಮಪಟ್ಟು ದುಡಿಯುವವನು ಕಳ್ಳರ ಸಹವಾಸದಲ್ಲಿದ್ದರೆ ಅವನು ಕಳ್ಳತನದಿಂದ ಬೇಗನೆ ಶ್ರೀಮಂತನಾಗಬಹುದು ಎಂದು ವಿಚಾರ ಮಾಡಿ ಕೆಟ್ಟ ದಾರಿಯನ್ನು ಹಿಡಿಯುತ್ತಾನೆ.
ಮಿತ್ರರೇ, ಕೆಟ್ಟ ಮಕ್ಕಳ ಸಹವಾಸದಲ್ಲಿರುವುದರಿಂದ ವಾದ ಮಾಡುವುದು, ಇತರರನ್ನು ನಿಂದಿಸುವುದು, ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಇಂತಹ ಕೆಟ್ಟ ಕೆಲಸಗಳನ್ನು ಯಾವಾಗ ಮಾಡಲು ಆರಂಭಿಸುತ್ತೇವೆ ಎಂಬುದೇ ತಿಳಿಯುವುದಿಲ್ಲ. ಇದರಿಂದ ಜೀವನವು ದಿಶಾಹೀನವಾಗುತ್ತದೆ. ಮಕ್ಕಳೇ, ಇಂತಹ ಕೆಟ್ಟ ಆಚರಣೆಗಳನ್ನು ಮಾಡುವುದರಿಂದ ಭಗವಂತನೂ ಅವರಿಗೆ ಶಿಕ್ಷೆ ಕೊಡುತ್ತಾನೆ.
ಕೆಟ್ಟ ಸಹವಾಸದಿಂದ ವ್ಯಸನಗಳು ತಗುಲುವುದು
ಇಂದಿನ ಮಹಾವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಗುಟಖಾ, ಧೂಮ್ರಪಾನ ಇತ್ಯಾದಿ ವ್ಯಸನಗಳ ಪ್ರಮಾಣವು ಹೆಚ್ಚಾಗಿದೆ. ಈ ಎಲ್ಲವೂ ಕೆಟ್ಟ ಸಹವಾಸದಿಂದಲೇ ಆಗುತ್ತವೆ.
ಬಾಲಮಿತ್ರರೇ, ಒಳ್ಳೆಯ ಜನರ ಸಹವಾಸದಲ್ಲಿ ಒಳ್ಳೆಯ, ಕೆಟ್ಟ ಜನರ ಸಹವಾಸದಲ್ಲಿ ಕೆಟ್ಟ ಸಂಸ್ಕಾರಗಳಾಗುತ್ತವೆ. ಈ ಮಾತನ್ನು ನಾವು ಇಂದು ಒಂದು ಕಥೆಯ ಮೂಲಕ ತಿಳಿದುಕೊಳ್ಳೋಣ.
ಒಂದು ಕಾಡಿನಲ್ಲಿ ಗಿಳಿಯು ೨ ಮರಿಗಳಿಗೆ ಜನ್ಮ ನೀಡಿ ಸತ್ತುಹೋಗುತ್ತದೆ. ಅದರಲ್ಲಿ ಒಂದು ಮರಿಯನ್ನು ಋಷಿಯು ಇನ್ನೊಂದನ್ನು ಬೇಡನು ತೆಗೆದುಕೊಂಡು ಹೋಗುತ್ತಾರೆ. ಕೆಲವು ದಿನಗಳ ನಂತರ ಮರಿಗಳು ಬೆಳೆದು ಮಾತನಾಡತೊಡಗುತ್ತವೆ. ಒಮ್ಮೆ ಆ ಪ್ರದೇಶದ ರಾಜನು ಕಾಡಿನಿಂದ ಹೋಗುತ್ತಿರುತ್ತಾನೆ ಅವನಿಗೆ ಬಹಳ ಬಾಯಾರಿಕೆಯಾಗುತ್ತದೆ. ಅವನು ನೀರು ಹುಡುಕಿ ಅಲ್ಲಿ-ಇಲ್ಲಿ ಅಲೆದಾಡುತ್ತಾನೆ. ಅವನಿಗೆ ಅಲ್ಲಿಯೇ ಹತ್ತಿರದಲ್ಲಿರುವ ಬೇಡನ ಗುಡಿಸಿಲು ಕಾಣಿಸುತ್ತದೆ. ಅವನು ನೀರನ್ನು ಕುಡಿಯಲು ಬೇಡನ ಬಾಗಿಲಿಗೆ ಹೋಗುತ್ತಾನೆ. ಅಲ್ಲಿ ಪಂಜರದಲ್ಲಿರುವ ಗಿಳಿಯು ರಾಜನನ್ನು ನೋಡಿ ‘ಕೊಲ್ಲು ಕೊಲ್ಲು, ಬಿಡಬೇಡ, ಇವನ ಪ್ರಾಣ ತೆಗಿ’ ಎಂದು ಕೂಗಾಡುತ್ತದೆ. ಇದನ್ನು ಕೇಳಿ ರಾಜನು ನೀರನ್ನು ಕುಡಿಯದೇ ಅಲ್ಲಿಂದ ಹೊರಟುಬಿಡುತ್ತಾನೆ. ದಣಿದ ರಾಜನು ಹಾಗೆಯೇ ನಡೆಯುತ್ತ ಹೋಗುತ್ತಿರುವಾಗ ಅವನಿಗೆ ಒಂದು ಋಷಿಗಳ ಆಶ್ರಮ ಸಿಗುತ್ತದೆ. ಅಲ್ಲಿ ಪಂಜರದಲ್ಲಿರುವ ಗಿಣಿಯು ‘ಬನ್ನಿ, ತಮಗೆ ಸ್ವಾಗತ, ಅತಿಥಿ ದೇವೋಭವ, ಹಣ್ಣು ತಿನ್ನಿ, ಹಾಲು ಕುಡಿಯಿರಿ, ವಿಶ್ರಾಂತಿ ತೆಗೆದುಕೊಳ್ಳಿ’ ಎಂದು ಹೇಳುತ್ತದೆ. ಇದನ್ನು ಕೇಳಿ ರಾಜನು ಪ್ರಸನ್ನನಾಗುತ್ತಾನೆ.
ಮಿತ್ರರೇ, ಈ ಕಥೆಯಿಂದ ನಿಮಗೇನು ತಿಳಿಯಿತು ? ಸಹವಾಸದ ಪ್ರಭಾವವು ತಿಳಿಯಿತಲ್ಲವೇ ? ಯಾವ ಗಿಳಿಯು ಋಷಿಯ ಸಹವಾಸದಲ್ಲಿರುತ್ತದೆಯೋ ಅದು ಸುಸಂಸ್ಕಾರಿಯಾಗುತ್ತದೆ ಹಾಗೂ ಎರಡನೇ ಗಿಳಿಯು ಬೇಡನ ಸಹವಾಸದಲ್ಲಿದ್ದು ಕೆಡುತ್ತದೆ. ಆದುದರಿಂದ ನಾವು ಯಾವಾಗಲೂ ಸುಸಂಸ್ಕಾರಯುತ ಜನರ ಸಹವಾಸದಲ್ಲಿರಬೇಕು. ಯಾರೊಂದಿಗೂ ಮೈತ್ರಿಯನ್ನು ಮಾಡುವಾಗ ಅವರ ಸ್ವಭಾವವನ್ನು ಅರಿತು ಗೆಳೆತನವನ್ನು ಬೆಳೆಸಬೇಕು.
ಮಕ್ಕಳೇ ನೀವೇ ಹೇಳಿ ತಮಗೆ ಜಗಳಗಂಟ ಮಕ್ಕಳ ಸಹವಾಸ ಒಳ್ಳೆಯದೆನಿಸುತ್ತದೆಯೇ ಅಥವಾ ಪ್ರೀತಿಯಿಂದ ಮಾತನಾಡುವ ಪ್ರಾಮಾಣಿಕ ಮಕ್ಕಳ ಸಹವಾಸವು ಒಳ್ಳೆಯದೆನಿಸುತ್ತದೆ? ಆದುದರಿಂದ ತಮ್ಮ ಹೆಚ್ಚಿನ ಸಮಯವನ್ನು ಒಳ್ಳೆಯ ಮಕ್ಕಳೊಂದಿಗೆ ಕಳೆಯಿರಿ. ಇದರಿಂದ ತಮ್ಮ ಮಾತು-ನಡತೆ ಹಾಗೂ ಆಚರಣೆಯೂ ಉತ್ತಮವಾಗುವುದು. ಇಂದಿನಿಂದ ನಾವು ಒಳ್ಳೆಯ ಮಕ್ಕಳ ಸಹವಾಸ ಮಾಡುವ ನಿಶ್ಚಯ ಮಾಡೋಣ.