ಅಹಂಕಾರದಿಂದ ಮಾಡಿರುವ ದಾನಕ್ಕೆ ಯಾವುದೇ ಲಾಭವಿಲ್ಲ !

ದಾನವನ್ನು ಅಹಂಕಾರ ಅರ್ಥಾತ್ ‘ನನ್ನ’ ತನದಿಂದ ನೀಡಬಾರದು. ಅಹಂಕಾರದಿಂದ ಮಾಡಿರುವ ದಾನಕ್ಕೆ ಯಾವುದೇ ಲಾಭವಿರುವುದಿಲ್ಲ. ಇದರ ಮಹತ್ವವನ್ನು ಒಂದು ಕಥೆಯಿಂದ ತಿಳಿದುಕೊಳ್ಳೋಣ.

ಮಹಾಭಾರತ ಕಾಲದ ಕಥೆಯಾಗಿದೆ. ಒಬ್ಬ ಬ್ರಾಹ್ಮಣನು ಭಿಕ್ಷೆಯನ್ನು ಬೇಡಿ ತನ್ನ ಕುಟುಂಬದವರ ಹೊಟ್ಟೆಯನ್ನು ತುಂಬಿಸುತ್ತಿದ್ದನು. ಒಮ್ಮೆ ಆ ಬ್ರಾಹ್ಮಣ ಹಾಗೂ ಅವನ ಕುಟುಂಬದವರು ಊಟವನ್ನು ತಯಾರಿಸುತ್ತಿದ್ದರು. ಅದೇ ಸಮಯದಲ್ಲಿ ಒಬ್ಬ ವೃದ್ಧ ವ್ಯಕ್ತಿ ಅವರ ಮನೆಯ ಬಾಗಿಲಿಗೆ ಬಂದನು. ಅವನು ಹಸಿದಿದ್ದನು ಮತ್ತು ಅವನು ಭಿಕ್ಷೆಯಲ್ಲಿ ಏನಾದರೂ ತಿನ್ನಲು ಕೊಡುವಂತೆ ಕೇಳಿದನು. ಬ್ರಾಹ್ಮಣ ಕುಟುಂಬದವರು ತಮ್ಮ ಸಂಪೂರ್ಣ ಊಟವನ್ನು ಆ ವೃದ್ಧ ಅತಿಥಿಗೆ ಅರ್ಪಿಸಿದರು. ಆ ವೃದ್ಧ ಅತಿಥಿ ಅನ್ನವನ್ನು ಗ್ರಹಣ ಮಾಡಿ ತೃಪ್ತನಾದನು. ತದನಂತರ ಅತಿಥಿಯು ತನ್ನ ಕೈಗಳನ್ನು ತೊಳೆದನು.

ಅದೇ ಸಮಯದಲ್ಲಿ ಅಲ್ಲಿಗೆ ಒಂದು ಮುಂಗುಸಿ ಬಂದಿತು ಮತ್ತು ಎಲ್ಲಿ ಆ ಅತಿಥಿಯು ಕೈತೊಳೆದಿದ್ದನೋ, ಆ ಸ್ಥಾನದಲ್ಲಿ ಬಿದ್ದ ನೀರಿನಲ್ಲಿ ಆ ಮುಂಗುಸಿ ಹೊರಳಾಡತೊಡಗಿತು. ಮುಂಗುಸಿಯ ಅರ್ಧಶರೀರ ಬಂಗಾರದ ಬಣ್ಣದ್ದಾಯಿತು. ಈ ವಿಷಯವು ಅರಣ್ಯದಲ್ಲಿ ಹರಡುವ ಬೆಂಕಿಯಂತೆ ಎಲ್ಲೆಡೆಯೂ ಹಬ್ಬಿತು. ಧರ್ಮರಾಜ ಯುಧಿಷ್ಠಿರನಿಗೂ ಈ ವಿಷಯ ತಲುಪಿತು. ಆಗ ಅವನ ಮನಸ್ಸಿನಲ್ಲಿ ‘ನಾನಂತೂ ಲಕ್ಷಾಂತರ ಜನರಿಗೆ ಪ್ರತಿದಿನ ಊಟವನ್ನು ಹಾಕುತ್ತೇನೆ. ಒಂದು ವೇಳೆ ಇಲ್ಲಿಗೆ ಬಂದು ಆ ಮುಂಗುಸಿ ಹೊರಳಾಡಿದರೆ ಅದರ ಉಳಿದರ್ಧ ಭಾಗವೂ ಬಂಗಾರದ ಬಣ್ಣವಾಗುವುದು’ ಎಂದು ವಿಚಾರ ಮಾಡಿದರು. ಯುಧಿಷ್ಠಿರನು ಒಂದು ಅನ್ನ ಛತ್ರವನ್ನು ಆಯೋಜಿಸಿದನು. ಅಲ್ಲಿಯೂ ಅದೇ ಮುಂಗುಸಿ ಬಂದಿತು ಮತ್ತು ಅದು ಅದೇ ರೀತಿ ಮಾಡಿತು; ಆದರೆ ಅದರ ಉಳಿದರ್ಧ ಶರೀರ ಮೂಲ ಬಣ್ಣದ್ದಾಗಿಯೇ ಉಳಿಯಿತು. ಧರ್ಮರಾಜನು ಇದರ ಕಾರಣವನ್ನು ಕೇಳಿದಾಗ, ಭಗವಾನ ಶ್ರೀಕೃಷ್ಣನು ‘ಹೇ ರಾಜಾ! ನೀನು ಎಷ್ಟು ಜನರಿಗೆ ಭೋಜನವನ್ನು ಬಡಿಸಬಲ್ಲೆ, ಅನ್ನದಾನ ಮಾಡಬಲ್ಲೆ ಎನ್ನುವ ಅಹಂಕಾರ ನಿನಗೆ ಇದೆ. ಈ ಅಹಂಕಾರದ ಕಾರಣವೇ ಈ ಮುಂಗುಸಿಯ ಶರೀರ ಬಂಗಾರದ ಬಣ್ಣಕ್ಕೆ ತಿರುಗಲಿಲ್ಲ. ಆ ಬಡ ಬ್ರಾಹ್ಮಣನ ಕುಟುಂಬದವರು ಮಾತ್ರ ಮನೆಗೆ ಬಂದ ಅತಿಥಿ ಬರಿಹೊಟ್ಟೆಯಲ್ಲಿ ಹಿಂದಿರುಗಿ ಹೋಗಬಾರದು ಎಂದು ತಾವು ಬರಿಹೊಟ್ಟೆಯಲ್ಲಿದ್ದರೂ ಅತಿಥಿಗೆ ಊಟವನ್ನು ಬಡಿಸಿದರು. ಅದರ ಹಿಂದೆ ಯಾವುದೇ ಸ್ವಾರ್ಥ ಅಥವಾ ಅಹಂಕಾರವಿರಲಿಲ್ಲ’ ಎಂದು ಹೇಳಿದನು.

ಬಾಲಮಿತ್ರರೇ ಇದರಿಂದ ನಾವು ಏನು ಕಲಿತೆವು? ನಾವು ಎಂದಿಗೂ ಅಹಂಕಾರ ಅರ್ಥಾತ್ ಗರ್ವವನ್ನು ಮಾಡಬಾರದು!

0 thoughts on “ಅಹಂಕಾರದಿಂದ ಮಾಡಿರುವ ದಾನಕ್ಕೆ ಯಾವುದೇ ಲಾಭವಿಲ್ಲ !”

Leave a Comment