ಸ್ವಾಮಿ ವಿವೇಕಾನಂದರು ಮಹಾನ ಸಂತರಾದ ರಾಮಕೃಷ್ಣ ಪರಮಹಂಸರ ಪರಮಪ್ರಿಯ ಶಿಷ್ಯರಾಗಿದ್ದರು. ಅವರಿಗೆ ಸಾಧನೆ ಹಾಗೂ ಧರ್ಮಪ್ರಸಾರ ಮಾಡಲು ಬಹಳ ಆಸಕ್ತಿ ಇತ್ತು. ಅವರು ಜೀವನಪೂರ್ತಿ ಅಧ್ಯಾತ್ಮದ ಪ್ರಚಾರ-ಪ್ರಸಾರ ಮಾಡುತ್ತಿದ್ದರು. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಅವರ ಪ್ರವಚನಗಳಲ್ಲಿ ಜನಜಂಗುಳಿ ಇರುತ್ತಿತ್ತು. ಅಮೇರಿಕಾದ ಜನತೆಯು ಅವರ ವಾಣಿಯಿಂದ ಅತ್ಯಂತ ಮಂತ್ರಮುಗ್ಧವಾಗುತ್ತಿತ್ತು. ಅವರಲ್ಲಿ ತಮ್ಮ ಜೀವನದ ಸಮಸ್ಯೆಗಳನ್ನು ಹೇಳಿ ಪರಿಹಾರ ಕೇಳುತ್ತಿದ್ದರು.
ಒಮ್ಮೆ ಓರ್ವ ವ್ಯಕ್ತಿಯು ಅವರ ಬಳಿ ಅಳುತ್ತ ಬಂದು ‘ಸ್ವಾಮಿ ನನ್ನನ್ನು ರಕ್ಷಿಸಿ, ನನ್ನ ದುರ್ಗುಣಗಳಿಂದ ನನಗೆ ಜೀವಿಸುವುದು ಕಠಿಣವಾಗಿದೆ. ನಾನು ಬಹಳ ಪ್ರಯತ್ನಿಸಿದೆ; ಆದರೆ ಕೆಟ್ಟ ರೂಢಿಗಳು ನನ್ನ ಬೆನ್ನು ಬಿಡುತ್ತಿಲ್ಲ. ಈಗ ನಾನು ಏನು ಮಾಡಲಿ ?’ ಎಂದು ಹೇಳಿ ಅವರ ಕಾಲಿಗೆರಗಿದನು.
ಆಗ ಸ್ವಾಮಿ ವಿವೇಕಾನಂದರು ತಮ್ಮ ಓರ್ವ ಶಿಷ್ಯನನ್ನು ಕರೆದು ಅವನ ಕಿವಿಯಲ್ಲಿ ಏನೋ ಹೇಳಿದರು. ಸ್ವಲ್ಪ ಸಮಯದ ನಂತರ ವಿವೇಕಾನಂದರು ಆ ವ್ಯಕ್ತಿಯೊಂದಿಗೆ ತೋಟದಲ್ಲಿ ತಿರುಗಾಡಲು ಹೋದರು. ದಾರಿಯಲ್ಲಿ ಓರ್ವ ವ್ಯಕ್ತಿಯು ಒಂದು ಮರವನ್ನು ಅಪ್ಪಿಕೊಂಡು ಕುಳಿತಿದ್ದನು. ಹಾಗೂ ಮರಕ್ಕೆ ಒದಿಯುತ್ತ ‘ನನ್ನನ್ನು ಬಿಡು, ನನ್ನನ್ನು ಬಿಡು!’ ಎಂದು ಹೇಳುತ್ತಿದ್ದನು. ಇದನ್ನು ನೋಡಿದಾಗ ಸ್ವಾಮಿಜೀಯವರೊಂದಿಗೆ ಇದ್ದ ವ್ಯಕ್ತಿಯು ನಕ್ಕು ‘ಈ ವ್ಯಕ್ತಿಯು ಸ್ವತಃ ಮರವನ್ನು ಹಿಡಿದು ಕುಳಿತಿದ್ದಾನೆ ಆದರೆ ಮರಕ್ಕೆ ತನ್ನನ್ನು ಬಿಡುವಂತೆ ಹೇಳುತ್ತಿದ್ದಾನೆ. ಸ್ವಾಮಿಜೀ ಇವನು ಹುಚ್ಚನೋ?’ ಎಂದು ಹೇಳಿದನು. ಆಗ ಸ್ವಾಮಿಜಿಗಳು ‘ನನಗೆ ನಿಮ್ಮ ಪರಿಸ್ಥಿತಿಯೂ ಹಾಗೆಯೇ ಇದೆ ಎಂದು ಅನಿಸುತ್ತಿದೆ. ನಿಮಗೆ ಹಾಗೆ ಅನಿಸುವುದಿಲ್ಲವೇ ? ನೀವು ಕೆಟ್ಟ ರೂಢಿಗಳನ್ನು ಹಿಡಿದಿಟ್ಟಿದ್ದೀರಿ ಹಾಗೂ ಕೆಟ್ಟ ರೂಢಿಗಳು ನಿಮ್ಮನ್ನು ಬಿಡಬೇಕು ಎಂದು ಹೇಳುತ್ತೀರಿ’ ಎಂದು ಹೇಳಿದರು. ಆಗ ಅದನ್ನು ಕೇಳಿ ಆ ವ್ಯಕ್ತಿಗೆ ನಾಚಿಕೆಯಾಯಿತು.
ಹಾಗೆಯೇ ಇಬ್ಬರೂ ಇನ್ನೂ ಸ್ವಲ್ಪ ದೂರ ಹೋದರು. ತೋಟದಲ್ಲಿ ಮಾಲಿಯು ಗಿಡಗಳಿಗೆ ಗೊಬ್ಬರ ಹಾಕುತ್ತಿದ್ದನು. ಗೊಬ್ಬರದಿಂದ ಬಹಳ ವಾಸನೆ ಬರುತ್ತಿತ್ತು. ಆಗ ಆ ವ್ಯಕ್ತಿಯು ಮೂಗಿನ ಮೇಲೆ ಬಟ್ಟೆಯನ್ನು ಹಿಡಿದುಕೊಂಡನು. ಸ್ವಾಮಿ ವಿವೇಕಾನಂದರು ಇದನ್ನು ನೋಡಿ ನಕ್ಕರು. ಅಲ್ಲಿಂದ ಸ್ವಲ್ಪ ಮುಂದೆ ಬಂದಾಗಿ ಅಲ್ಲಿ ಅನೇಕ ಗಿಡಗಳಲ್ಲಿ ಬಣ್ಣ-ಬಣ್ಣದ ಹೂವುಗಳು ಅರಳಿದ್ದವು. ಅವುಗಳಿಂದ ಮಂದವಾದ ಮಧುರವಾದ ಸುಗಂಧ ಎಲ್ಲೆಡೆ ಹಬ್ಬಿತ್ತು. ಆ ವ್ಯಕ್ತಿಯು ಆ ಸುಗಂಧದಿಂದ ಪ್ರಸನ್ನನಾದನು. ವಿವೇಕಾನಂದರು ಈಗಲೂ ಮಂದವಾಗಿ ನಗುತ್ತಿದ್ದರು.
ಆ ವ್ಯಕ್ತಿಗೆ ‘ನಾನು ಇವರ ಬಳಿ ಎಷ್ಟೊಂದು ದೊಡ್ಡ ಸಮಸ್ಯೆಯೊಂದಿಗೆ ಬಂದಿದ್ದೇನೆ, ಇವರೇಕೇ ನಗುತ್ತಿದ್ದಾರೆ ? ಇವರು ನನ್ನನ್ನ ಗೇಲಿ ಮಾಡುತ್ತಿದ್ದಾರೆಯೇ ?’ ಎಂದು ಅನಿಸಿತು. ಅವನು ಕೊನೆಯಲ್ಲಿ ಸ್ವಾಮಿಜೀಗೆ ‘ತಾವು ಏಕೆ ನಗುತ್ತಿದ್ದೀರಿ ? ನನ್ನಿಂದ ಏನಾದರೂ ತಪ್ಪಾಗಿದೆಯೇ ?’ ಎಂದು ಕೇಳಿದನು. ಆಗ ಸ್ವಾಮಿಜಿಯವರು ‘ಈ ಹೂವು-ಗಿಡಗಳನ್ನು ನೋಡಿ. ಇವುಗಳಿಗೆ ಗೊಬ್ಬರವನ್ನು ಹಾಕಲಾಗುತ್ತಿದೆ ಆದರೂ ಅವು ಗೊಬ್ಬರದಿಂದ ಹೊರಹೊಮ್ಮುವ ದುರ್ಗಂಧವನ್ನು ಸುಗಂಧದಲ್ಲಿ ಪರಿವರ್ತಿಸುತ್ತಿವೆ. ಇವುಗಳು ತಮ್ಮ ಸುಗಂಧವನ್ನು ತಮಗಾಗಿ ಮಾತ್ರ ಇಟ್ಟುಕೊಳ್ಳುವುದಿಲ್ಲ, ಬೇರೆಯವರಿಗೂ ಹಂಚುತ್ತವೆ. ಇವುಗಳಿಂದ ನಾವು ಏನು ಕಲಿಯಬಹುದು ? ನಾವು ಕೂಡ ನಮ್ಮ ದುರ್ಗುಣಗಳನ್ನು ತ್ಯಜಿಸಿ ಗುಣಗಳ ರೂಪದಲ್ಲಿರುವ ಸುಗಂಧವನ್ನು ಹಂಚಬೇಕು. ಮನುಷ್ಯನು ಬುದ್ಧಿವಂತನಾಗಿದ್ದರೂ ತನ್ನ ದುರ್ಗುಣಗಳನ್ನು ಗುಣಗಳಲ್ಲಿ ಬದಲಾಯಿಸಲಾರನು. ಚಿಕ್ಕ ಸಂಕಟದಿಂದಲೇ ಮನುಷ್ಯನು ಹೆದರುತ್ತಾನೆ.’ ಎಂದು ಹೇಳಿದರು. ಇದನ್ನು ಕೇಳಿ ಆ ವ್ಯಕ್ತಿಗೆ ಸ್ವಾಮಿ ವಿವೇಕಾನಂದರ ಮಾತಿನ ತಾತ್ಪರ್ಯ ಅರ್ಥವಾಯಿತು ಮತ್ತು ಅವನು ತನ್ನ ಮನೆಗೆ ತೆರಳಿದನು.
ಮಿತ್ರರೇ, ಈ ಕಥೆಯಿಂದ ಏನು ಕಲಿತೆವು ? ಆ ವ್ಯಕ್ತಿಯು ಹೇಗೆ ಮರವನ್ನು ಹಿಡಿದು ಕುಳಿತು ಮರಕ್ಕೆ ತನ್ನನ್ನು ಬಿಡಲು ಹೇಳಿದನೋ, ಅವನು ಮರವನ್ನು ಸ್ವತಃ ಬಿಟ್ಟಿದ್ದರೆ ಅದು ಬಿಟ್ಟು ಹೋಗುತ್ತಿತ್ತು. ಹಾಗೆಯೇ ನಮ್ಮ ಕೆಟ್ಟ ಗುಣಗಳನ್ನು ನಾವು ಹಿಡಿದಿಟ್ಟಿರುತ್ತೇವೆ ಹಾಗೂ ಅವುಗಳನ್ನು ಬಿಡಲು ಇಚ್ಛಿಸುವುದಿಲ್ಲ. ನಾವು ನಮ್ಮ ಕೆಟ್ಟ ರೂಢಿಗಳನ್ನು ಬಿಡಬೇಕಾದರೆ ಅದಕ್ಕಾಗಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಈಶ್ವರನ ನಾಮಸ್ಮರಣೆಯನ್ನು ಮಾಡುವುದರಿಂದ ಮನುಷ್ಯನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಬದಲಾಗುತ್ತಾನೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವೂ ಸುಗಂಧವನ್ನು ಹರಡುವ ಹೂವಿನಂತೆ ನಮ್ಮ ದುರ್ಗುಣಗಳನ್ನು ಸದ್ಗುಣಗಳಾಗಿ ಪರಿವರ್ತಿಸಬಹುದು. ವಿವೇಕಾನಂದರು ಸ್ವತಃ ಸಾಧನೆ ಮಾಡಿದ್ದರು. ಆದುದರಿಂದಲೇ ಅವರಿಗೆ ಆ ದುಃಖಿತ ವ್ಯಕ್ತಿಯ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯವಾಯಿತು.