ಇದು ಒಂದು ದೊಡ್ಡ ಕಾಡಿನಲ್ಲಿ ನಡೆದ ಘಟನೆ. ಆ ದೊಡ್ಡ ಕಾಡಿನಲ್ಲಿ ಒಂದು ದೊಡ್ಡ ಮರವಿತ್ತು. ಆ ಮರದ ಮೇಲೆ ಬಹಳಷ್ಟು ಹಂಸಗಳು ತಮ್ಮ ಗೂಡನ್ನು ಕಟ್ಟಿದ್ದವು. ಆ ಹಂಸಗಳಲ್ಲಿ ಒಂದು ಮುದಿ ಹಂಸವಿತ್ತು. ಅದು ಬಹಳ ಬುದ್ಧಿವಂತ ಹಾಗೂ ದೂರದೃಷ್ಟಿಯುಳ್ಳದ್ದಾಗಿತ್ತು. ಎಲ್ಲರೂ ಆ ಹಂಸವನ್ನು ಅಜ್ಜ ಎಂದು ಆದರದಿಂದ ಕರೆಯುತ್ತಿದ್ದರು. ಒಂದು ದಿನ ಅಜ್ಜ ಹಂಸನು ಮರದ ಕೆಳಗೆ ಒಂದು ಬಳ್ಳಿ ಬೆಳೆಯುತ್ತಿರುವುದನ್ನು ಕಂಡಿತು. ಅದು ಮರದ ಆಧಾರದಿಂದ ಮರದ ಮೇಲೆ ಹತ್ತಿ ಬರುತ್ತಿದೆ ಎಂಬುದು ತಿಳಿಯಿತು. ಅದನ್ನು ನೋಡಿ ಅಜ್ಜ ಹಂಸನಿಗೆ ಬಹಳ ಚಿಂತೆಯಾಯಿತು. ತನ್ನ ಅನುಭವದಿಂದ ‘ಆ ಬಳ್ಳಿಯು ಹೀಗೇ ಮರದ ಮೇಲೆ ಹತ್ತುತ್ತ ಹೋದರೆ ಭವಿಷ್ಯದಲ್ಲಿ ಅದರಿಂದ ಹಂಸಗಳ ಮೇಲೆ ಬಹಳ ದೊಡ್ಡ ಸಂಕಟ ಬರಬಹುದು’ ಎಂಬುದು ತಿಳಿಯಿತು. ಅದು ಕೆಲವು ಹಂಸಗಳನ್ನು ಕರೆದು ಆ ಬಳ್ಳಿಯು ಒಂದು ದಿನ ನಮಗೆ ಪೇಚಿಗೆ ಸಿಲುಕಿಸಬಹುದು, ಆದುದರಿಂದ ಆ ಬಳ್ಳಿಯನ್ನು ನಾಶಗೊಳಿಸುವಂತೆ ಸಲಹೆ ನೀಡಿತು. ಅವರಲ್ಲಿದ್ದ ಒಂದು ಯುವ ಹಂಸವು ‘ಅಜ್ಜ ಅಷ್ಟು ಚಿಕ್ಕ ಬಳ್ಳಿಯು ನಮನ್ನು ಪೇಚಿಗೆ ಹೇಗೆ ಸಿಲುಕಿಸಬಹುದು?’ ಎಂದು ನಗುತ್ತ ಹೇಳಿತು.
‘ನಿಧಾನವಾಗಿ ಈ ಬಳ್ಳಿಯು ಮರವನ್ನು ಅಪ್ಪಿಕೊಂಡು ಬೆಳೆದು ಸಂಪೂರ್ಣ ಮರವನ್ನೇ ಆವರಿಸುವುದು, ಇದರಿಂದ ಇದು ಕೆಳಗಿನಿಂದ ಮೇಲೆ ಬರಲು ಸುಲಭವಾದ ಏಣಿಯಂತಾಗುವುದು. ಯಾವುದೇ ಬೇಡನು ಮರಕ್ಕೆ ಅಂಟಿಕೊಂಡಿರುವ ಈ ಬಳ್ಳಿಯ ಸಹಾಯದಿಂದ ಮರವನ್ನು ಹತ್ತಿ ನಮ್ಮ ತನಕ ತಲುಪಬಹುದು ಹಾಗೂ ಇದರಿಂದ ಎಲ್ಲರೂ ಕೊಲ್ಲಲ್ಪಡುವೆವು’ ಎಂದು ಹೇಳಿತು. ಅಜ್ಜನ ಈ ಮಾತನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಅವರೆಲ್ಲರಿಗೂ ಒಂದು ಚಿಕ್ಕ ಬಳ್ಳಿಯು ಹೇಗೆ ಏಣಿಯಾಗಬಹುದು ಎಂದು ಅನಿಸಿತು.
ಸಮಯ ಕಳೆಯಿತು. ಅಜ್ಜನು ಹೇಳಿದಂತೆ ಚಿಕ್ಕ ಬಳ್ಳಿಯು ದೊಡ್ಡದಾಯಿತು. ಅದು ಮರದ ಮೇಲಿನ ವರೆಗೆ ತಲುಪಿತು. ಮರವನ್ನು ನಾಲ್ಕೂ ದಿಕ್ಕಿನಿಂದ ಏಣಿಯ ಹಾಗೆ ಆವರಿಸಿತು. ಒಂದು ದಿನ ಎಲ್ಲ ಹಂಸಗಳು ಆಹಾರವನ್ನು ಹುಡುಕುತ್ತ ಕಾಡಿಗೆ ಹೋಗಿದ್ದವು ಆಗ ಓರ್ವ ಬೇಟೆಗಾರನು ಆ ಮರದ ಬಳಿ ಬಂದನು. ಅವನು ಬಳ್ಳಿಯ ಸಹಾಯದಿಂದ ಮರವನ್ನು ಹತ್ತಿದನು ಹಾಗೂ ಪಕ್ಷಿಗಳನ್ನು ಹಿಡಿಯಲು ತನ್ನ ಬಲೆಯನ್ನು ಬೀಸಿದನು. ಸಂಜೆಗೆ ಅಹಾರವನ್ನು ಹುಡುಕಿ ಎಲ್ಲ ಪಕ್ಷಿಗಳು ಮರಕ್ಕೆ ಮರಳಿದವು. ಅವುಗಳೆಲ್ಲವೂ ಬೇಟೆಗಾರನ ಬಲೆಯಲ್ಲಿ ಸಿಲುಕಿದವು. ಆಗ ಅವರಿಗೆ ಅಜ್ಜ ಹಂಸವು ಹೇಳಿದ ಮಾತು ಗಮನಕ್ಕೆ ಬಂದಿತು. ಹಾಗೂ ಆ ಎಲ್ಲ ಹಂಸಗಳಿಗೆ ತಮ್ಮ ತಪ್ಪಿನ ಅರಿವಾಯಿತು.
ಆ ಹಂಸಗಳು ಅಜ್ಜ ಹಂಸನ ಬಳಿ ಕ್ಷಮೆ ಕೇಳಿದವು. ‘ನಮ್ಮಿಂದ ಬಹಳ ದೊಡ್ಡ ತಪ್ಪಾಯಿತು. ನೀವು ಹೇಳಿದ ಮಾತನ್ನು ಕೇಳಿದ್ದರೆ ನಾವು ಈ ರೀತಿ ಬಲೆಯಲ್ಲಿ ಸಿಲುಕುತ್ತಿರಲಿಲ್ಲ. ದಯವಿಟ್ಟು ತಾವೇ ಏನಾದರೂ ಉಪಾಯ ಹೇಳಿ’ ಎಂದು ಹೇಳಿದವು. ಎಲ್ಲ ಹಂಸಗಳು ತಮ್ಮ ತಪ್ಪನ್ನು ಒಪ್ಪಿಕೊಂಡ ನಂತರ ಅಜ್ಜನು ಅವರಿಗೆ ‘ಈಗ ನನ್ನ ಮಾತನ್ನು ಗಮನವಿಟ್ಟು ಕೇಳಿ, ಬೆಳಿಗ್ಗೆ ಬೇಟೆಗಾರನು ಬರುವನು, ಆಗ ಎಲ್ಲ ಹಂಸಗಳು ಸತ್ತಿರುವ ನಾಟಕ ಮಾಡಿ, ಸ್ವಲ್ಪವೂ ಅಲುಗಾಡದೇ ಬಿದ್ದಿರಿ. ಬೇಟೆಗಾರನು ನಾವು ಸತ್ತಿದ್ದೇವೆ ಎಂದು ಒಬ್ಬೊಬ್ಬರನ್ನೇ ಬಲೆಯಿಂದ ತೆಗೆದು ನೆಲದ ಮೇಲೆ ಇಡುತ್ತಾನೆ. ಅವನು ಕೊನೆಯ ಹಂಸವನ್ನು ನೆಲದ ಮೇಲೆ ಇಟ್ಟ ತಕ್ಷಣ ನಾನು ಸೀಟಿ ಊದುತ್ತೇನೆ. ನನ್ನ ಸೀಟಿಯ ಸದ್ದನ್ನು ಕೇಳಿದ ತಕ್ಷಣ ಎಲ್ಲರೂ ಹಾರಿಹೋಗಿ’.
ಹಂಸಗಳು ಅಜ್ಜನು ಹೇಳಿದಂತೆ ಬೆಳಿಗ್ಗೆ ಬೇಟೆಗಾರನು ಬರುವ ಮೊದಲೇ ಸತ್ತಿರುವಂತೆ ನಾಟಕ ಮಾಡಿದವು ಹಾಗೂ ಸ್ವಲ್ಪ ಸಮಯದಲ್ಲಿ ಅಲ್ಲಿ ಬೇಟೆಗಾರನು ಬಂದನು. ಬೇಟೆಗಾರನು ಎಲ್ಲ ಹಂಸಗಳು ಸತ್ತಿವೆ ಎಂದು ತಿಳಿದು ಎಲ್ಲ ಹಂಸಗಳನ್ನು ನೆಲದ ಮೇಲೆ ಇಡತೊಡಗಿದನು. ಬೇಟೆಗಾರನು ಕೊನೆಯ ಹಂಸವನ್ನು ನೆಲದ ಮೇಲೆ ಇಟ್ಟ ತಕ್ಷಣ ಅಜ್ಜನು ಜೋರಾಗಿ ಸೀಟಿ ಊದಿದನು. ಸೀಟಿಯ ಶಬ್ದವನ್ನು ಕೇಳಿ ಹಂಸಗಳು ಹಾರಿ ಹೋದವು. ಬೇಟೆಗಾರನು ಇದನ್ನು ನೋಡಿ ಆಶ್ಚರ್ಯಚಕಿತನಾಗಿ ನೋಡುತ್ತಲೇ ಉಳಿದನು. ಹೀಗೆ ಅಜ್ಜನ ಬುದ್ಧಿವಂತಿಕೆ ಹಾಗೂ ಅನುಭವದಿಂದಾಗಿ ಎಲ್ಲ ಹಂಸಗಳ ಜೀವವು ಉಳಿಯಿತು.
ಮಕ್ಕಳೇ, ಈ ಕಥೆಯಿಂದ ನಮಗೇನು ಕಲಿಯಲು ಸಿಕ್ಕಿತು ? ನಾವು ಯಾವಾಗಲೂ ಹಿರಿಯರು ಹೇಳಿದ್ದನ್ನು ಕೇಳಬೇಕು. ಅವರ ಮಾತುಗಳನ್ನು ನಿರ್ಲಕ್ಷಿಸದೇ ಅವುಗಳನ್ನು ತಕ್ಷಣ ಕೃತಿಯಲ್ಲಿ ತರಬೇಕು. ಹಿರಿಯರ ಮಾತುಗಳನ್ನು ಕೇಳುವುದರಿಂದ ನಮ್ಮ ಒಳಿತೇ ಆಗುತ್ತದೆ. ಹಾಗಿದ್ದರೆ ನಾವೆಲ್ಲರೂ ಇಂದಿನಿಂದ ಹಿರಿಯರ ಮಾತುಗಳನ್ನು ಕೇಳೋಣ ಅಲ್ಲವೇ !