ಸ್ವಭಾವದೋಷ – ನಿರ್ಮೂಲನೆಗಾಗಿ ಸ್ವಯಂಸೂಚನೆ ಪದ್ಧತಿ ೩ : ಪ್ರಸಂಗದ ಅಭ್ಯಾಸವನ್ನು ಮಾಡುವುದು

ಬಾಲಮಿತ್ರರೇ , ಈಗ ನಾವು ಸ್ವಭಾವದೋಷ – ನಿರ್ಮೂಲನೆಗಾಗಿ’ಸ್ವಯಂ ಸೂಚನೆ ಪದ್ಧತಿ – ೩’ ಹೇಗೆ ಸಿದ್ಧಪಡಿಸಬೇಕು, ಎಂಬುದನ್ನು ತಿಳಿಯೋಣ.

ಸ್ವಯಂಸೂಚನೆ ಪದ್ಧತಿ – ೩ : ಪ್ರಸಂಗದ ಅಭ್ಯಾಸವನ್ನು ಮಾಡಬೇಕು

ಅ. ಸ್ವಯಂಸೂಚನೆ ಪದ್ಧತಿಯ ಉಪಯುಕ್ತತೆ : ಈ ಪದ್ಧತಿಯಲ್ಲಿ ಮಕ್ಕಳುಸ್ವಲ್ಪಸಮಯ ನಾಮಜಪ ಮಾಡಿ ಮನಸ್ಸನ್ನು ಏಕಾಗ್ರಗೊಳಿಸಿ, ಸ್ವಯ ಸೂಚನೆ ನೀಡಲು ಸಿದ್ಧಗೊಳಿಸಬೇಕು. ನಂತರ “ಕಠಿಣವೆನಿಸುವ ಪ್ರಸಂಗವನ್ನು ಸ್ವತಃ ನಾವೇ ಯಶಸ್ವಿಯಾಗಿ ಎದುರಿಸುತ್ತಿದ್ದೇವೆ”, ಎಂಬಂತೆ ಕಲ್ಪಿಸಿ ಆ ಪ್ರಸಂಗವನ್ನು ಎದುರಿಸಲು ತನ್ನ ಮನಸ್ಸಿನಲ್ಲಿಯೇ ಅಭ್ಯಾಸ ಮಾಡುವುದು. ಇದರಿಂದ ಮುಂದೆ ಪ್ರತ್ಯಕ್ಷ ಘಟನೆಯ ಸಮಯದಲ್ಲಿ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಬರದೇ, ಆತ್ಮವಿಶ್ವಾಸದಿಂದ ಪ್ರಸಂಗವನ್ನು ಎದುರಿಸಲು ಸಹಾಯವಾಗುತ್ತದೆ. ಈ ಸೂಚನೆಯಲ್ಲಿ ಪ್ರಸಂಗವು ಸಕಾರಾತ್ಮಕವಾಗಿ ಅಥವಾ ನಮ್ಮ ಇಚ್ಚೆಯಂತೆ ನಡೆಯುತ್ತಿದೆ ಎಂಬುದಾಗಿ ಕಲ್ಪನೆ ಮಾಡಬೇಕಾಗುತ್ತದೆ. ಪ್ರತ್ಯಕ್ಷದಲ್ಲಿ, ಸೂಚನೆಯಲ್ಲಿ ಕಲ್ಪನೆ ಮಾಡಿದಂತೆ ನಡೆಯದಿದ್ದರೂ ಕೂಡ, ಸೂಚನೆಯನ್ನು ನೀಡಿರುವುದರಿಂದ ಪ್ರಸಂಗವನ್ನು ಎದುರಿಸುವುದಕ್ಕೆ ಮನಸ್ಸು ಸಕ್ಷಮವಾಗುತ್ತದೆ. ಸೂಚನೆಯ ಕೊನೆಯ ವಾಕ್ಯವು ಸಾಮಾನ್ಯವಾಗಿ ಹೀಗಿರಬೇಕು -‘ನನಗೆ ಯಾವುದರ ಬಗ್ಗೆ ಚಿಂತೆಯಿತ್ತು, ಹಾಗೇನೂ ಆಗಲಿಲ್ಲ; ಆದುದರಿಂದ ನಾನು ಮುಂದಿನ ಬಾರಿ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುವೆನು’. ಒಂದೆರಡು ನಿಮಿಷಕ್ಕಿಂತ ಹೆಚ್ಚು ಸಮಯ ಬೇಕಾಗುವ ಪ್ರಸಂಗದಲ್ಲಿ ಅಯೋಗ್ಯ ಪ್ರತಿಕ್ರಿಯೆಯನ್ನು ತಡೆಯಲಿಕ್ಕೆ ಈ ಪದ್ಧತಿಯನ್ನು ಅನುಸರಿಸುತ್ತಾರೆ.

ಆ. ಸ್ವಯಂಸೂಚನೆ ಪದ್ಧತಿಯಿಂದ ನಿವಾರಿಸಬಹುದಾದ ಸ್ವಭಾವದೋಷಗಳು : ‘ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಉತ್ತರಿಸಲು ಆಗುವುದೇ’ ಎಂಬ ಚಿಂತೆಯಾಗುವುದು; ಮೌಖಿಕ ಪರೀಕ್ಷೆ, ಸಂದರ್ಶನ, ವಕ್ತೃತ್ವಸ್ಪರ್ಧೆ (ವಾಕ್ಪಟುತ್ವ) ಇತ್ಯಾದಿ ಪ್ರಸಂಗದಲ್ಲಿ ಅಂಜಿಕೆ.

ಸ್ವಯಂಸೂಚನೆಯನ್ನು ಸಿದ್ಧಪಡಿಸಲು ಕಲಿಯಲು ನಾವು ಕೆಲವು ಪ್ರಸಂಗಗಳ ಅಧ್ಯಯನ ಮಾಡೋಣ

ಪ್ರಸಂಗ – ಕು. ಸದಾನಂದನಿಗೆ ಮುಂದಿನ ಸೋಮವಾರ ಇರುವ ಇತಿಹಾಸದ ಪರೀಕ್ಷೆಯ ಅಂಜಿಕೆಯಾಗುತ್ತಿದೆ.

ಸ್ವಭಾವದೋಷ – ಅಂಜಿಕೆಯಾಗುವುದು

ಸ್ವಯಂಸೂಚನೆ – ಸದಾನಂದನು ಮುಂದಿನ ಸೂಚನೆಯನ್ನು ಮನಸ್ಸಿನಲ್ಲಿಯೇ ಅಭ್ಯಾಸಮಾಡಬೇಕು

‘ಸೋಮವಾರ ಇತಿಹಾಸದ ಪರೀಕ್ಷೆ ಇದೆ. ಪರೀಕ್ಷೆಯ ಎಲ್ಲ ಸಿದ್ಧತೆ (ತಯಾರಿ) ನನ್ನಿಂದ ಆಗಿದೆ. ನಾನು ಬರೆದಿಟ್ಟ ಟಿಪ್ಪಣಿಯನ್ನು ಶಾಂತವಾಗಿ ಓದುತ್ತಿದ್ದೇನೆ. ಈಗ ‘ಯಾವುದೇ ಪ್ರಶ್ನೆಯ ಉತ್ತರವನ್ನು ಒಳ್ಳೆಯ ರೀತಿಯಲ್ಲಿ ಬರೆಯಬಲ್ಲೆ’ ಎಂದು ನನಗೆ ಅನಿಸುತ್ತಿದೆ. ನಾನು ಪರೀಕ್ಷೆ ಕೊಠಡಿಗೆ ಸರಿಯಾದ ಸಮಯಕ್ಕೆ ತಲುಪುತ್ತಿದ್ದೇನೆ. ಮೊದಲನೆಯ ಘಂಟೆ ಕೇಳಿಸುತ್ತಿದೆ. ನಾನು ಶಾಂತವಾಗಿ ನನ್ನ ಸ್ಥಳದ ಮೇಲೆ ಕಣ್ಣುಮುಚ್ಚಿ ಕುಳಿತಿದ್ದೇನೆ. ಈಗ ಎರಡನೆಯ ಘಂಟೆ ಕೇಳಿಸುತ್ತಿದೆ. ಶಿಕ್ಷಕರು ನನ್ನ ಕೈಯಲ್ಲಿ ಪ್ರಶ್ನೆಪತ್ರಿಕೆಯನ್ನು ಕೊಡುತ್ತಿದ್ದಾರೆ. ಪ್ರತಿಯೊಂದು ಪ್ರಶ್ನೆ ಹಾಗು ಅದಕ್ಕಿರುವ ಅಂಕಗಳನ್ನು ನೋಡಿ ‘ನಾನು ಯಾವ ಪ್ರಶ್ನೆಯನ್ನು ಉತ್ತರಿಸಬೇಕು’, ಎಂಬುದಾಗಿ ವಿಚಾರ ಮಾಡುತ್ತಿದ್ದೇನೆ. ಪ್ರಶ್ನೆ ಪತ್ರಿಕೆಯಲ್ಲಿರುವ ಎಲ್ಲ ಪ್ರಶ್ನೆಗಳು ಸುಲಭವಾಗಿವೆ. ನನ್ನಿಂದ ಪ್ರತಿಯೊಂದು ಪ್ರಶ್ನೆಯ ಉತ್ತರವನ್ನು ಸಮಾಧಾನಕರವಾಗಿ ಬರೆಯಲಾಗುತ್ತಿದೆ.

ಕೊನೆಯ ೧೦ ನಿಮಿಷ ಉಳಿದಿರುವ ಬಗ್ಗೆ ತಿಳಿಸುವ ಘಂಟೆ ಕೇಳಿಸುತ್ತಿದೆ. ನಾನು ಉತ್ತರ ಪತ್ರಿಕೆಯ ಎಲ್ಲ ಪುಟಗಳನ್ನು ತಿರುವಿ ‘ಎಲ್ಲ ಪ್ರಶ್ನೆಗಳ ಉತ್ತರಗಳನ್ನು ಸರಿಯಾಗಿ ಬರೆದಿರುವೆನೋ’, ಎಂಬುದನ್ನು ಖಚಿತಪಡಿಸುತ್ತಿದ್ದೇನೆ. ಕೊನೆಯ ಘಂಟೆ ಬಾರಿಸುತ್ತಿದೆ. ನಾನು ಉತ್ತರ ಪತ್ರಿಕೆಯನ್ನು ಕೊಠಡಿ ವೀಕ್ಷಕರ ಕೈಯಲ್ಲಿ ಕೊಡುತ್ತಿದ್ದೇನೆ. ನಾನು ಈಗ ಮನೆಗೆ ಬಂದಿದ್ದೇನೆ. ಹಾಗು ಮನೆಯಲ್ಲಿ ಎಲ್ಲರಿಗೂ ‘ಇವತ್ತಿನ ಪ್ರಶ್ನೆಪತ್ರಿಕೆ ಸುಲಭವಾಗಿತ್ತು’, ಎಂದು ಹೇಳುತ್ತಿದ್ದೇನೆ. ಇವತ್ತಿನ ಪ್ರಶ್ನೆ ಪತ್ರಿಕೆ ಸುಲಭವಾಗಿ ಉತ್ತರಿಸಿರುವುದರಿಂದ ನನ್ನ ಆತ್ಮವಿಶ್ವಾಸವು ಹೆಚ್ಚಿದೆ. ನಾನು ಈಗ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಹಾಗೂ ಅನಂತರ ನಾಳೆ ಇರುವ ಪರೀಕ್ಷೆಯ ವಿಷಯದ ಅಧ್ಯಯನವನ್ನು ಉತ್ಸಾಹದಿಂದ ಆರಂಭಿಸುತ್ತೇನೆ’, ಎಂಬ ವಿಚಾರ ಮಾಡಿ ನಾನು ಮಂಚದ ಮೇಲೆ ಮಲಗುತ್ತಿದ್ದೇನೆ.

ಮಿತ್ರರೇ, ಕಠಿಣ ಪ್ರಸಂಗದಲ್ಲಿ ಗಾಬರಿಗೊಳ್ಳದೇ ಪದ್ಧತಿ-೩ ರ ಪ್ರಕಾರ ಸ್ವಯಂಸೂಚನೆಯನ್ನು ಕೊಟ್ಟು ದೇವರಿಗೆ ಇಷ್ಟವಾಗುವಂತೆ ಮನಸ್ಸನ್ನುಸಕ್ಷಮಗೊಳಿಸೋಣ!

Leave a Comment