ಮಿತ್ರರೇ, ಬಾಲ ಮತ್ತು ಯುವ ಕ್ರಾಂತಿಕಾರರು ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದ್ದಾರೆ. ‘ಭಾರತಮಾತೆಯನ್ನು ಆಂಗ್ಲರಿಂದ ಹೇಗೆ ಸ್ವತಂತ್ರಗೊಳಿಸಬಹುದು’, ‘ದೇಶಕ್ಕಾಗಿ ಪ್ರಾಣವನ್ನೂ ಅರ್ಪಿಸಲು’ ತಯಾರಾಗುವ ಏಕೈಕ ವಿಚಾರದಿಂದ ಅವರು ಇಂದಿಗೂ ದೇಶಭಕ್ತರೆಂದು ಅನಿಸಿಕೊಳ್ಳುತ್ತಾರೆ. ನಾವು ಇಂತಹ ಓರ್ವ ಯುವ ದೇಶಭಕ್ತನ ಬಗ್ಗೆ ನೋಡೋಣ.
ಅವನ ಹೆಸರು ಹೇಮೂ ಕಾಲಾಣಿ ! ಹೇಮೂ ಕಾಲಾಣಿಯು ‘ಸ್ವರಾಜ್ಯ ಸೇನಾ’ ಎಂಬ ಸಂಘಟನೆಯ ಸದಸ್ಯನಾಗಿದ್ದನು. ಆಂಗ್ಲರ ವಿರುದ್ಧ ಕ್ರಾಂತಿಕಾರಿಗಳ ಮನಸ್ಸಿನಲ್ಲಿ ಬಹಳ ಸಿಟ್ಟಿತ್ತು. ಈ ಕ್ರಾಂತಿಕಾರಿಗಳು ಎಲ್ಲ ರೀತಿಯಲ್ಲಿ ಆಂಗ್ಲರಿಗೆ ಹಾನಿ ಮಾಡಲು ತತ್ಪರರಾಗಿದ್ದರು. ಒಂದು ದಿನ ಈ ಕ್ರಾಂತಿಕಾರಿಗಳಿಗೆ ಒಂದು ರೈಲುಗಾಡಿಯಲ್ಲಿ ಆಂಗ್ಲರ ಸೈನ್ಯದ ಒಂದು ತುಕುಡಿಯು ಹೋಗಲಿದೆ ಎಂಬುದು ತಿಳಿಯಿತು. ಕ್ರಾಂತಿಕಾರಿಗಳು ‘ಈ ರೈಲು ಹಾದು ಹೋಗಲಿರುವ ಮಾರ್ಗದ ಹಳಿಯ ಫಿಶಪ್ಲೇಟನ್ನು ತೆಗೆದರೆ ಆ ರೈಲು ಹಳಿ ತಪ್ಪಿ ಬೀಳುವುದು, ಇದರಿಂದ ಆಂಗ್ಲರ ಸೈನ್ಯಕ್ಕೆ ಬಹಳ ಹಾನಿಯಾಗುವುದು’ ಎಂದು ಯೋಜನೆ ಮಾಡಿದರು. ಈ ಕೆಲಸ ಮಾಡುವ ಜವಾಬ್ದಾರಿಯನ್ನು ಹೇಮೂ ಕಾಲಾಣಿಯು ವಹಿಸಿಕೊಂಡಿದ್ದನು. ಆದರೆ ಅವನು ಫಿಶಪ್ಲೇಟನ್ನು ತೆಗೆಯುವಾಗ ಆಂಗ್ಲ ಸೈನಿಕನೊಬ್ಬ ಅದನ್ನು ನೋಡಿದನು ಹಾಗೂ ಹೇಮೂನನ್ನು ಬಂಧಿಸಿದನು. ಹೇಮೂನನ್ನು ಸೈನಿಕರ ನ್ಯಾಯಾಲಯದಲ್ಲಿ ಕಟಕಟೆಯಲ್ಲಿ ತಂದು ನಿಲ್ಲಿಸಲಾಯಿತು ಹಾಗೂ ಆಂಗ್ಲರ ವಿರುದ್ಧ ಪಿತೂರಿಗಾಗಿ ಮರಣದಂಡನೆಯನ್ನು ವಿಧಿಸಲಾಯಿತು. ಅವನನ್ನು ಗಲ್ಲಿಗೇರಿಸಲು ಒಯ್ಯುವಾಗ ಅವನ ವಯಸ್ಸು ಕೇವಲ ೧೮ ವರ್ಷವಾಗಿತ್ತು. ‘ಬ್ರಿಟೀಷ ಸಾಮ್ರಾಜ್ಯದ ನಾಶವಾಗಲಿ, ವಂದೇ ಮಾತರಂ’, ಎಂದು ಘೋಷಣೆ ಕೂಗುತ್ತ ಅವನು ನಗುನಗುತ್ತ ಗಲ್ಲಿಗೇರಿದನು.
ಮಕ್ಕಳೇ, ಆ ಸಮಯದಲ್ಲಿ ಪ್ರತಿಯೊಬ್ಬ ಬಾಲಕ ಹಾಗೂ ಯುವಕನಲ್ಲಿ ತನ್ನ ಮಾತೃಭೂಮಿಗಾಗಿ ತ್ಯಾಗ ಮಾಡುವ ಭಾವನೆ ಇತ್ತು. ಮಿತ್ರರೇ, ಇಷ್ಟು ಕಡಿಮೆ ವಯಸ್ಸಿನಲ್ಲಿ ಇಷ್ಟು ದೊಡ್ಡ ತ್ಯಾಗ ಮಾಡುವ ಇಂತಹ ಕ್ರಾಂತಿಕಾರರು ನಮ್ಮ ಜೀವನದ ಆದರ್ಶರಾಗಬೇಕು. ತಮಗೂ ಹೀಗೆಯೇ ಅನಿಸುತ್ತದೆ ಅಲ್ಲವೇ ? ಇಂದು ನಾವು ಈ ಎಲ್ಲ ರಾಷ್ಟ್ರಭಕ್ತರಿಗೆ ವಂದಿಸೋಣ ಹಾಗೂ ಅವರ ಬಲಿದಾನಕ್ಕಾಗಿ ನಾವು ಸದಾ ಕೃತಜ್ಞರಾಗಿರೋಣ.